Tuesday, April 21, 2026
Tuesday, April 21, 2026

ಸ್ಥಳೀಯರ ಭಾವನೆಗಳನ್ನು ಗೌರವಿಸಿ.. ಹುಚ್ಚಾಟಕ್ಕಿಂತ ಸಭ್ಯತೆ ಮುಖ್ಯ

ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಪ್ರವಾಸಿಗರು ಕಂಡಕಂಡಲ್ಲಿ ತ್ಯಾಜ್ಯ ಎಸೆದು, ಕಸ ಹಾಕಿ ಗಬ್ಬೆಬ್ಬಿಸುವ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಹೀಗಾಗಿಯೇ ಪ್ರವಾಸಿಗರು ಬಂದರೆ ತಮ್ಮ ಊರು ಕಸದಿಂದ ಮಾಲಿನ್ಯವಾಗುತ್ತದೆ. ರಾತ್ರಿಯಲ್ಲಿ ಪ್ರವಾಸಿಗರು ತಂಗಿರುವ ತಾಣಗಳಲ್ಲಿ ಮ್ಯೂಸಿಕ್ ಅಬ್ಬರದಿಂದ ಶಬ್ದ ಮಾಲಿನ್ಯವೂ ಹೆಚ್ಚಾಗುತ್ತದೆ ಎಂಬ ಆಕ್ರೋಶ ಸ್ಥಳೀಯ ನಿವಾಸಿಗಳಲ್ಲಿ ವ್ಯಾಪಕವಾಗಿದೆ.

  • ಅನಿಲ್ ಹೆಚ್.ಟಿ.

ಪ್ರವಾಸಿ ತಾಣಗಳಲ್ಲಿ ಸ್ಥಳೀಯರು ಮತ್ತು ಪ್ರವಾಸಿಗರ ನಡುವೆ ಗಲಾಟೆ, ವಿವಾದಗಳಾಗುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಮುಖ್ಯವಾಗಿ ದೇವಾಲಯದಂಥ ಧಾರ್ಮಿಕ ಕೇಂದ್ರಗಳಲ್ಲಿ ಪ್ರವಾಸಿಗರ ಅಸಭ್ಯ ನಡವಳಿಕೆಗಳು ಭಕ್ತರು ಮತ್ತು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗುತ್ತಿದೆ.

ನಿಮ್ಮ ಹುಚ್ಚಾಟಗಳಿಗೆ ಇದು ಸೂಕ್ತ ಜಾಗವಲ್ಲ ಎಂಬ ಎಚ್ಚರಿಕೆ ಸ್ಥಳೀಯರಿಂದ ಕೇಳಿಬರುತ್ತಲೇ ಇದೆ. ಪ್ರವಾಸಿಗರ ಸಂಖ್ಯೆ ಯಾವುದೇ ಒಂದು ಪ್ರದೇಶದಲ್ಲಿ ಹೆಚ್ಚಾಗುತ್ತಿರುವಂತೆಯೇ ಅಂಥ ಪ್ರದೇಶಗಳಲ್ಲಿ ಸ್ಥಳೀಯರಿಗೆ ಪ್ರವಾಸಿಗರ ಕೆಲವೊಂದು ವರ್ತನೆ ಅಸಮಾಧಾನ ತರುವುದು ಸಹಜ ಕೂಡ.

ಹಲವು ವರ್ಷಗಳಿಂದ ತಮ್ಮದೇ ಪ್ರದೇಶ ಅಥವಾ ಆ ಪ್ರದೇಶ ತಮ್ಮ ಉಸ್ತುವಾರಿಯಲ್ಲಿದೆ ಎಂದು ಭಾವಿಸಿಕೊಂಡಿರುವ ಗ್ರಾಮಸ್ಥರಿಗೆ, ಪ್ರವಾಸಿಗರು ಬಂದು ತಮ್ಮ ನೆಲದಲ್ಲಿ ಪುಂಡಾಟಿಕೆ ಮಾಡುವುದು, ಅನುಚಿತವಾಗಿ ವರ್ತಿಸುವುದನ್ನು ಸಹಿಸಲು ಸಾಧ್ಯವಿಲ್ಲ. ಹೀಗಾಗಿಯೇ ನಿಧಾನವಾಗಿ ಗ್ರಾಮಸ್ಥರ (ಸ್ಥಳೀಯರ) ಮನದಲ್ಲಿ ಪ್ರವಾಸಿಗರು ಎಂದರೆ, ಎಲ್ಲವನ್ನೂ ಹಾಳು ಮಾಡಲು ನಾವಿರುವ ಸ್ಥಳಕ್ಕೆ ಬರುವವರು ಎಂಬ ಭಾವನೆಯಿದೆ.

ಇದನ್ನೂ ಓದಿ: ಮೈಸೂರಿನ ಬೀದಿಗಳಲ್ಲಿ ಕೆಫೆಗಳ ದರ್ಬಾರ್‌

ಉದಾಹರಣೆ ನೀಡುವುದಾದಲ್ಲಿ.. ಕಾವೇರಿ ನದಿಯ ಉಗಮ ತಾಣ ಕೊಡಗು ಜಿಲ್ಲೆಯ ತಲಕಾವೇರಿ ಕೆಲವು ವರ್ಷಗಳ ಹಿಂದೆ ಜೀರ್ಣೋದ್ಧಾರಗೊಂಡು ಸಾಕಷ್ಟು ಪ್ರಗತಿಯನ್ನು ಕಂಡಿತ್ತು. ಆ ಬಳಿಕ ತಲಕಾವೇರಿಗೆ ಬರುವ ಸಂದರ್ಶಕರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಈ ಪೈಕಿ ಭಕ್ತರ ಸಂಖ್ಯೆಗಿಂತ ಪ್ರವಾಸಿಗರಾಗಿ ಕ್ಷೇತ್ರಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿತ್ತು. ಆದರೆ ತಲಕಾವೇರಿಯಂಥ ಕ್ಷೇತ್ರದಲ್ಲಿಯೂ ಫೊಟೋಶೂಟ್ ಮಾಡುವುದು, ಅತಿರೇಕದಿಂದ ವರ್ತಿಸುವುದು, ಅಸಭ್ಯ ರೀತಿಯಲ್ಲಿ ಉಡುಗೆ ಧರಿಸಿ ಪವಿತ್ರ ಕ್ಷೇತ್ರಕ್ಕೆ ಭೇಟಿ ನೀಡುವವರ ಸಂಖ್ಯೆಯೂ ಹೆಚ್ಚಾಗತೊಡಗಿತ್ತು. ಈ ಸಂದರ್ಭ ಕಾವೇರಿ ಮಾತೆಯ ಕ್ಷೇತ್ರದಲ್ಲಿ ಇಂಥ ನಡವಳಿಕೆ ತಡೆಗಟ್ಟಲು ತಲಕಾವೇರಿ ಕ್ಷೇತ್ರ ಪ್ರವಾಸಿ ತಾಣವಲ್ಲ. ಇದೊಂದು ಧಾರ್ಮಿಕ ಕ್ಷೇತ್ರ ಎಂದು ಪರಿಗಣಿಸಬೇಕು. ಪ್ರವಾಸಿಗರಿಗಿಂತ ಕ್ಷೇತ್ರದ ಭಕ್ತರು ಮಾತ್ರ ಇಲ್ಲಿಗೆ ಬಂದರೆ ಸಾಕು ಎಂಬ ಒಕ್ಕೊರಲಿನ ಕೂಗು ಕೊಡಗಿನಲ್ಲಿ ಕೇಳಿಬಂದಿತ್ತು.

Untitled design - 2026-04-21T191303.975

ಅಂತೆಯೇ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಪ್ರವಾಸಿಗರು ಕಂಡಕಂಡಲ್ಲಿ ತ್ಯಾಜ್ಯ ಎಸೆದು, ಕಸ ಹಾಕಿ ಗಬ್ಬೆಬ್ಬಿಸುವ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಹೀಗಾಗಿಯೇ ಪ್ರವಾಸಿಗರು ಬಂದರೆ ತಮ್ಮ ಊರು ಕಸದಿಂದ ಮಾಲಿನ್ಯವಾಗುತ್ತದೆ. ರಾತ್ರಿಯಲ್ಲಿ ಪ್ರವಾಸಿಗರು ತಂಗಿರುವ ತಾಣಗಳಲ್ಲಿ ಮ್ಯೂಸಿಕ್ ಅಬ್ಬರದಿಂದ ಶಬ್ದ ಮಾಲಿನ್ಯವೂ ಹೆಚ್ಚಾಗುತ್ತದೆ ಎಂಬ ಆಕ್ರೋಶ ಸ್ಥಳೀಯ ನಿವಾಸಿಗಳಲ್ಲಿ ವ್ಯಾಪಕವಾಗಿದೆ. ಪ್ರವಾಸಿ ತಾಣಗಳಿಗೆ ಬರುವ ಸಂದರ್ಶಕರು, ಅಲ್ಲಿ ಶುಚಿತ್ವ ಕಾಪಾಡದೇ ಸ್ಥಳವನ್ನು ಮಾಲಿನ್ಯ ಮಾಡುವುದು, ಕಿರುಚುವುದು, ಫೊಟೋ ಕ್ಲಿಕ್ಕಿಸುವ ನೆಪದಲ್ಲಿ ಬೇರೆಯವರ ಖಾಸಗಿತನಕ್ಕೆ ತೊಂದರೆಯುಂಟು ಮಾಡುವುದು, ರೀಲ್ಸ್ ಚಿತ್ರಿಸುವ ಸಂದರ್ಭ ಹುಚ್ಚುಹುಚ್ಚಾಗಿ ವರ್ತಿಸುವುದು.. ಹೀಗೆ ಒಂದೇ ಎರಡೇ..! ಸ್ಥಳೀಯರಿಗೆ ಇವರ ವರ್ತನೆ ಕಿರಿಕಿರಿ ಉಂಟು ಮಾಡುವುದು ಮಾತ್ರವಲ್ಲ. ಸಹ ಪ್ರವಾಸಿಗರಿಗೂ ಕೆಲವರ ವರ್ತನೆ ಬೇಸರ ತರುವಂಥ ಘಟನೆಗಳು ಹೆಚ್ಚುತ್ತಿವೆ.

ಇದರಿಂದಾಗಿ ಸ್ಥಳೀಯರು ಬೇಸತ್ತು ಪ್ರವಾಸಿಗರ ಜತೆ ವಾಗ್ವಾದಕ್ಕಿಳಿಯುವ ಪ್ರಕರಣಗಳು ಹೆಚ್ಚಾಗುತ್ತಾ ಹೋದದ್ದು, ಪ್ರವಾಸಿಗರು ನಮ್ಮೂರಿನ ಪ್ರವಾಸಿ ತಾಣಗಳಿಗೆ ಬರುವುದೇ ಬೇಡ ಎಂಬ ಭಾವನೆ ಸ್ಥಳೀಯರಲ್ಲಿ ಹೆಚ್ಚತೊಡಗಿದ್ದು ಕೂಡ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗತೊಡಗಿದೆ.

Untitled design - 2026-04-21T191248.437

ಗೋವಾ ಮಾಡೆಲ್ !

ಕರ್ನಾಟಕಕ್ಕೆ ಹೊಂದಿಕೊಂಡಂತಿರುವ ಗೋವಾ ರಾಜ್ಯದಲ್ಲಿಯೂ ಇದೇ ಸಮಸ್ಯೆ ತಲೆದೋರಿತ್ತು. ಕಡಲಕಿನಾರೆಗಳಲ್ಲಿ ಪ್ರವಾಸಿಗರ ಪುಂಡಾಟ, ಅಸಭ್ಯ ವರ್ತನೆಗಳು ಗೋವಾದ ಜನತೆಯ ಕಿರಿಕಿರಿಗೆ ಕಾರಣವಾದವು. ಕೂಡಲೇ ಎಚ್ಚೆತ್ತುಕೊಂಡ ಗೋವಾ ಪ್ರವಾಸೋದ್ಯಮ ಇಲಾಖೆ ಪ್ರತೀ ಪ್ರವಾಸಿ ತಾಣದಲ್ಲಿಯೂ ಗಮನ ಸೆಳೆಯುವಂಥ ಮಾಹಿತಿ ಫಲಕ ಅಳವಡಿಸಲು ಮುಂದಾಯಿತು.

ಸ್ಥಳೀಯರ ಭಾವನೆಗಳನ್ನು ಗೌರವಿಸಿ ಎಂದು ಈ ಫಲಕದಲ್ಲಿ ಬರಹವಿದ್ದರೆ, ಅದೇ ಫಲಕದಲ್ಲಿ ಈ ಪ್ರವಾಸಿ ತಾಣಕ್ಕೆ ಸ್ಥಳೀಯರಿಗೆ ಅಂದರೆ ಗೋವಾ ನಾಗರಿಕರಿಗೆ ಪ್ರವೇಶ ಉಚಿತ, ಗೋವಾದವರು ಅಲ್ಲದವರು ಶುಲ್ಕ ಪಾವತಿಸಿ ಎಂಬ ಬರಹವಿತ್ತು.

ಇದು ಏನನ್ನು ಸೂಚಿಸುತ್ತದೆ?

ಸ್ಥಳೀಯರ ಭಾವನೆಗಳಿಗೆ ಗೌರವ ನೀಡಿ. ಸ್ಥಳೀಯರನ್ನು ಗೌರವದಿಂದ ಕಾಣಿ. ನೀವು ಪ್ರವಾಸಿಗರು ಮಾತ್ರವಷ್ಟೇ. ಇವತ್ತು ಇಲ್ಲಿಗೆ ಬರುತ್ತೀರಿ, ನಾಳೆ ಇಲ್ಲಿಂದ ತೆರಳುತ್ತೀರಿ. ಎಷ್ಟಾದರೂ ನೀವೆಲ್ಲಾ ಪ್ರವಾಸಿಗರು ಮಾತ್ರ. ಸ್ಥಳೀಯರೇ ಗೋವಾದ ನಿಜವಾದ ಆಸ್ತಿ. ಹೀಗಾಗಿ ಸ್ಥಳೀಯರ ಖಾಸಗಿತನಕ್ಕೆ ಧಕ್ಕೆ ತಾರದೇ ಸ್ಥಳೀಯರ ಭಾವನೆಗಳನ್ನು ಗೌರವಿಸಿ ಎಂದು ಸೂಚ್ಯವಾಗಿ ತಿಳಿಸುವ ಪ್ರಯತ್ನ ಕೈಗೊಂಡಿತು.

ಪ್ರವಾಸಿ ತಾಣಗಳಲ್ಲಿ ಮೋಜು ಮಸ್ತಿ ಹೆಸರಲ್ಲಿ ತಂಟೆ ತಕರಾರು ಮಾಡುವ ಕಿಡಿಗೇಡಿ ಪ್ರವಾಸಿಗರಿಗೂ ಈ ಫಲಕ ಎಚ್ಚರಿಕೆ ನೀಡಿದಂತಿದೆ. ನೀವು ಸ್ಥಳೀಯರ ಭಾವನೆ ಗೌರವಿಸದೇ ಹೋದಲ್ಲಿ, ಯಾವುದೇ ಸಮಸ್ಯೆಯಾದರೂ ನೀವೇ ಜವಾಬ್ದಾರರು ಎಂಬ ಸೂಕ್ಷ್ಮ ಎಚ್ಚರಿಕೆ ಇದಾಗಿದೆ. ಅಂತೆಯೇ ಮತ್ತೊಂದು ಅಂಶ ಗಮನಿಸಿ. ಗೋವಾದ ಪ್ರವಾಸಿ ತಾಣಗಳಿಗೆ ಸ್ಥಳೀಯರಿಗೆ ಪ್ರವೇಶ ಉಚಿತವಾಗಿದೆ. ಇದೇಕೆ ಹೀಗೆ? ಏಕೆಂದರೆ, ಈ ತಾಣಗಳು ಪ್ರವಾಸಿಗರಿಗೆ ಮಾತ್ರ ಶುಲ್ಕ ನೀಡಿ ಸಂದರ್ಶನಕ್ಕೆ ಅವಕಾಶ ಕಲ್ಪಿಸಿದೆ. ಈ ತಾಣದ ವ್ಯಾಪ್ತಿಯ ಹೊರಗಿನವರು ಶುಲ್ಕ ನೀಡಿ ಪ್ರವೇಶ ಪಡೆಯಬೇಕು. ಇದರಿಂದ ಏನು ಉಪಯೋಗ ಎಂದರೆ, ಸ್ಥಳೀಯರಿಗೆ ಈ ಪ್ರವಾಸಿ ತಾಣ ನಮ್ಮದು. ಇದರ ಸಂರಕ್ಷಣೆ ನಮ್ಮದೇ ಎಂಬ ಭಾವನೆ ಬಂದಿದೆ. ಈ ತಾಣಗಳಿಗೆ ಸ್ಥಳೀಯರೂ ಪ್ರವೇಶಕ್ಕೆ ಶುಲ್ಕ ನೀಡಿ ಬರಬೇಕು ಎಂದಾದಾಗ ಸ್ಥಳೀಯರಿಗೆ ಬೇಕಿದ್ದರೆ ಇದರ ಸಂರಕ್ಷಣೆಯನ್ನು ಪ್ರವಾಸೋದ್ಯಮ ಇಲಾಖೆ, ಸರಕಾರ ಮಾಡಿಕೊಳ್ಳಲಿ ಎಂದು ಅನಿಸುವುದು ಸಹಜವಾಗಿತ್ತು. ಆದರೆ ಈಗ ಉಚಿತ ಪ್ರವೇಶ ಇರುವುದರಿಂದಾಗಿ ಸ್ಥಳೀಯರ ಪಾಲಿಗೆ ಗೋವಾದ ಪ್ರವಾಸಿ ತಾಣಗಳು ತಮ್ಮದೇ ತಾಣ ಎಂಬ ಭಾವನೆ ಸೖಷ್ಟಿಸಿ ಎಲ್ಲಾ ತಾಣಗಳನ್ನೂ ಕಾಳಜಿಯಿಂದ ನೋಡಿಕೊಳ್ಳಲು ಸಾಧ್ಯವಾಗಿದೆ.

ಗೋವಾದ ಪ್ರವಾಸಿ ನೀತಿ ಕರ್ನಾಟಕದ ಪ್ರವಾಸಿ ತಾಣಗಳಿಗೂ ಅನ್ವಯವಾದರೆ?

ಸ್ಥಳೀಯರ ಭಾವನೆ ಗೌರವಿಸಿ ಎಂದಾಗ ಪ್ರವಾಸಿಗರು ಕರ್ನಾಟಕದ ಸಂಸ್ಕೃತಿ, ಆಚಾರ, ವಿಚಾರಗಳನ್ನು ಖಂಡಿತಾ ಗೌರವಿಸಲು ಈ ಬರಹ ಪ್ರೇರಣೆಯಾಗುತ್ತದೆ. ಸ್ಥಳೀಯವಾಗಿ ಸ್ವಚ್ಛತೆ ಕಾಪಾಡಿಕೊಂಡು, ಸ್ಥಳೀಯರ ಹಕ್ಕಾಗಿರುವ ಸಂಸ್ಕೃತಿ ಸಂರಕ್ಷಣೆಯಲ್ಲಿ ಪ್ರವಾಸಿಗರೂ ಪಾಲುದಾರರಾಗಿ ಎಂಬ ಪ್ರಬಲ ಸಂದೇಶ ರವಾನೆಯಾದಂತಾಗುತ್ತದೆ. ದೇವರಕಾಡು, ಸ್ಥಳೀಯ ದೇವಾಲಯಗಳೂ ಸೇರಿದಂತೆ ಪ್ರವಾಸಿಗರು ಸಿಕ್ಕಸಿಕ್ಕಲ್ಲಿ ನುಗ್ಗಿ ಮಾಲಿನ್ಯ ಮಾಡುವುದಕ್ಕೆ ಕೊಂಚ ಮಟ್ಟಿಗಾದರೂ ಈ ಎಚ್ಚರಿಕೆಯ ಬರಹ ಕಾರಣವಾಗಬಹುದು. ಫಲಕದಲ್ಲಿಯೇ ಈ ಅಂಶ ಇರುವುದರಿಂದಾಗಿ ಪ್ರವಾಸಿಗರಲ್ಲಿಯೂ ಸ್ಥಳೀಯರ ಕಾಳಜಿಯ ಹೊಣೆಗಾರಿಕೆ ನಮ್ಮದು ಎಂಬ ಭಾವನೆ ಬರಲು ಸಾಧ್ಯವಿದೆ. ಸ್ಥಳೀಯರ ಭಾವನೆಯನ್ನು ಗೌರವಿಸುವ ಮೂಲಕ ನಿಮ್ಮನ್ನು ನೀವು ಗೌರವಿಸಿ ಎಂಬ ಸಂದೇಶಕ್ಕೂ ಈ ಬರಹ ಕಾರಣವಾಗುವ ಸಾಧ್ಯತೆಯಿದೆ.

Untitled design - 2026-04-21T191241.386

ಸ್ಥಳೀಯರಿಗೆ ಉಚಿತ ಪ್ರವೇಶದ ನಿಯಮ ಜಾರಿಗೊಳಿಸಿದಾಗ, ಆಯಾ ಊರಿನ ಜನರು ತಮ್ಮ ವ್ಯಾಪ್ತಿಯ ಪ್ರವಾಸಿ ತಾಣಗಳಿಗೆ ಉಚಿತ ಪ್ರವೇಶ ಪಡೆಯಬಹುದು. ಆಧಾರ್ ಕಾರ್ಡ್ ತೋರಿಸಿ ಪ್ರವೇಶದ್ವಾರದಲ್ಲಿಯೇ ಉಚಿತ ಪ್ರವೇಶ ಪಡೆಯಲು ಸಾಧ್ಯವಿದೆ.

ನಮ್ಮೂರಿನ ಪ್ರವಾಸಿ ತಾಣಕ್ಕೆ ನಾವೇ ಟಿಕೆಟ್ ಕೊಟ್ಟು ಪ್ರವೇಶಿಸಬೇಕೇ ಎಂಬ ಸ್ಥಳೀಯರ ಮನದಲ್ಲಿರುವ ಸುಪ್ತ ಅಸಮಾಧಾನದ ನಿವಾರಣೆಗೂ ಇದು ಕಾರಣವಾಗಬಲ್ಲದು. ಆಯಾಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಪ್ರವಾಸಿ ತಾಣಗಳಿಗೆ ಆಯಾ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರಿಗೆ ಉಚಿತ ಪ್ರವೇಶಾವಕಾಶ ಕಲ್ಪಿಸುವ ನಿಟ್ಟಿನಲ್ಲಿಯೂ ಚಿಂತನೆಗೆ ಸೂಕ್ತ ಕಾಲವಿದು.

ಹೀಗಾದಾಗ, ಪ್ರವಾಸಿ ತಾಣಗಳ ಸಂರಕ್ಷಣೆ ಕೂಡ ನಮ್ಮದು ಎಂಬ ಭಾವನೆ ಸ್ಥಳೀಯರಲ್ಲಿ ಉಂಟಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಈ ತಾಣ, ಈ ನೆಲ, ಈ ಪರಿಸರ ನಮ್ಮದು, ನಮಗೆ ಸೇರಿದ್ದು ಎಂಬ ಮನಪೂರ್ವಕ ಭಾವನೆ ಬರುತ್ತದೆ.

ಭವಿಷ್ಯದಲ್ಲಿ ಸ್ಥಳೀಯರು ಮತ್ತು ಪ್ರವಾಸಿಗರ ನಡುವಿನ ಅಸಮಾಧಾನಗಳ ಕಂದಕವನ್ನು ಮುಚ್ಚಲು ಇಂಥ ದಿಟ್ಟ ನಿರ್ಧಾರಗಳ ಅಗತ್ಯ ಪ್ರಸ್ತುತ ಕಾಲಘಟ್ಟದಲ್ಲಿದೆ.

ಒಂದು ಬರಹ ಸಾಕಷ್ಟು ಪರಿಣಾಮ ಬೀರಬಲ್ಲದು. ಹೀಗಾಗಿ ಕರ್ನಾಟಕದ ಪ್ರವಾಸಿ ತಾಣಗಳಿಗೂ ಇಂಥ ಜಾಗೃತಿಯುಳ್ಳ ಬರಹಗಳ ಫಲಕ ಅತ್ಯಗತ್ಯ .

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Next

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..