ಕ್ಯಾಟ್‌ಗಳಿಗೆ ಖ್ಯಾತ ಈ ದ್ವೀಪ. ಇಲ್ಲಿ ಮನುಷ್ಯರಿಗಿಂತ ಹೆಚ್ಚು ಬೆಕ್ಕುಗಳಿವೆ!
ಅಯೋಶಿಮಾ ದ್ವೀಪದಲ್ಲಿ ಇಷ್ಟೊಂದು ಬೆಕ್ಕುಗಳ ಉಪಸ್ಥಿತಿಯ ಕಥೆ ಆಸಕ್ತಿದಾಯಕವಾಗಿದೆ. ಇಲ್ಲಿನ ಜನರ ಮುಖ್ಯ ಕಸುಬು ಮೀನುಗಾರಿಕೆ. ಎರಡನೆಯ ಮಹಾಯುದ್ಧದ ನಂತರ, ಹೆಚ್ಚುತ್ತಿರುವ ಇಲಿಗಳ ಸಂಖ್ಯೆಯನ್ನು ನಿಭಾಯಿಸಲು ನಾವಿಕರು ಇಲ್ಲಿಗೆ ಕೆಲವು ಬೆಕ್ಕುಗಳನ್ನು ತಂದರು. ಆದಾದ ಬಳಿಕ ಇಲ್ಲಿನ ಜನರು ಇಲಿಗಳ ಕಾಟದಿಂದ ಮುಕ್ತಿ ಪಡೆದರಾದರೂ ಈ ದ್ವೀಪವು ಬೆಕ್ಕುಗಳ ತಾಣವಾಗಿ ಬಿಟ್ಟಿತು.
- ಶಶಿಶೇಖರ
ದಕ್ಷಿಣ ಜಪಾನ್‌ನ ಎಹೈಮ್ ಪ್ರಿಫೆಕ್ಚರ್‌ನಲ್ಲಿರುವ ಅಯೋಶಿಮಾ ದ್ವೀಪ ಬೆಕ್ಕು ಪ್ರಿಯರಿಗೆ ಸ್ವರ್ಗ ಎಂದು ಹೇಳಿದರೆ ತಪ್ಪಾಗಲಾರದು. ಈ ಸಣ್ಣ ದ್ವೀಪದಲ್ಲಿ ಮನುಷ್ಯರಿಗಿಂತ ಹೆಚ್ಚು ಬೆಕ್ಕುಗಳು ವಾಸಿಸುತ್ತಿದ್ದು, "ಕ್ಯಾಟ್ ಐಲ್ಯಾಂಡ್" ಎಂದೇ ಖ್ಯಾತಿಯನ್ನು ಪಡೆದುಕೊಂಡಿದೆ. ಇಲ್ಲಿಗೆ ಪ್ರತಿದಿನ ಸಾಕಷ್ಟು ಪ್ರವಾಸಿಗರು ಬೆಕ್ಕುಗಳನ್ನು ನೋಡಲೆಂದೇ ಬರುತ್ತಾರೆ. 1.60 ಕಿ.ಮೀ. ವ್ಯಾಪಿಸಿಕೊಂಡಿರುವ ಈ ದ್ವೀಪದಲ್ಲಿ ಹೊಟೇಲ್‌ಗಳು ಅಥವಾ ರೆಸ್ಟೋರೆಂಟ್‌ಗಳೂ ಸಹ ಕಾಣಸಿಗುವುದಿಲ್ಲ. ಆದರೂ ಪ್ರವಾಸಿಗರು ದ್ವೀಪದ ಸೌಂದರ್ಯ ಮತ್ತು ಬೆಕ್ಕುಗಳನ್ನು ನೋಡಲು ಇಲ್ಲಿಗೆ ಬರುತ್ತಾರೆ.
ಟೋಕಿಯೊದಿಂದ ಸಾಕಷ್ಟು ದೂರದಲ್ಲಿರುವ ಅಯೋಶಿಮಾ ದ್ವೀಪಕ್ಕೆ ಪ್ರತೀ ದಿನ ಸಾವಿರಾರು ಪ್ರವಾಸಿಗರು ದೋಣಿಯ ಮೂಲಕ ಬರುತ್ತಾರೆ. ಈ ದ್ವೀಪದಲ್ಲಿ ಇಷ್ಟೊಂದು ಬೆಕ್ಕುಗಳ ಉಪಸ್ಥಿತಿಯ ಕಥೆಯೂ ಆಸಕ್ತಿದಾಯಕವಾಗಿದೆ. ಇಲ್ಲಿನ ಜನರ ಮುಖ್ಯ ಕಸುಬು ಮೀನುಗಾರಿಕೆ. ಎರಡನೆಯ ಮಹಾಯುದ್ಧದ ನಂತರ, ಹೆಚ್ಚುತ್ತಿರುವ ಇಲಿಗಳ ಸಂಖ್ಯೆಯನ್ನು ನಿಭಾಯಿಸಲು ನಾವಿಕರು ಇಲ್ಲಿಗೆ ಕೆಲವು ಬೆಕ್ಕುಗಳನ್ನು ತಂದರು. ಆದಾದ ಬಳಿಕ ಇಲ್ಲಿನ ಜನರು ಇಲಿಗಳ ಕಾಟದಿಂದ ಮುಕ್ತಿ ಪಡೆದರಾದರೂ ಈ ದ್ವೀಪವು ಬೆಕ್ಕುಗಳ ತಾಣವಾಗಿ ಬಿಟ್ಟಿತು. ದ್ವೀಪದಲ್ಲಿ ಬೆಕ್ಕುಗಳ ನೈಸರ್ಗಿಕ ಪರಭಕ್ಷಕಗಳಿಲ್ಲದ ಕಾರಣ ಅವುಗಳ ಜನಸಂಖ್ಯೆಯು ವೇಗವಾಗಿ ಹೆಚ್ಚುತ್ತಲೇ ಹೋಯಿತು.

ಎರಡನೇ ಮಹಾಯುದ್ಧದ ನಂತರ ಈ ದ್ವೀಪದಲ್ಲಿದ್ದ ನಿವಾಸಿಗಳಲ್ಲಿ ಹೆಚ್ಚಿನವರು ಉದ್ಯೋಗ ಹುಡುಕುತ್ತ ಜಪಾನ್‌ನ ನಗರ ಪ್ರದೇಶಗಳಿಗೆ ಹೊರಟು ಬಿಟ್ಟರು. ಆಗ ಬೆಕ್ಕುಗಳು ಇಲ್ಲಿ ಬಾಕಿಯಾಗಿದ್ದು ಅವುಗಳ ಸಂತತಿ ಹೆಚ್ಚುತ್ತಾ ಹೋಯಿತು. ಫೆಬ್ರವರಿ 2018 ರಲ್ಲಿ, ದ್ವೀಪದಲ್ಲಿರುವ ಎಲ್ಲಾ ಬೆಕ್ಕುಗಳ ಸಂತತಿಯನ್ನು ನಿಯಂತ್ರಿಸಲು ಸಂತಾನಹರಣ ಚಿಕಿತ್ಸೆಯನ್ನು ಮಾಡಬೇಕೆಂದು ನಿರ್ಧರಿಸಲಾಯಿತು. ಕೊನೆಗೆ ಸರಿಸುಮಾರು 219 ಬೆಕ್ಕುಗಳಿಗೆ ಸಂತಾನಹರಣವನ್ನು ಮಾಡಲಾಯಿತು.

ಭೇಟಿ ನೀಡುವುದು ಹೇಗೆ?
ನೀವೂ ಕೂಡ ಬೆಕ್ಕು ಪ್ರಿಯರಾಗಿದ್ದರೆ ಇಲ್ಲಿಗೆ ಭೇಟಿ ನೀಡುವುದು ಹೇಗೆ ಎಂದು ಖಂಡಿತಾ ಯೋಚಿಸುತ್ತೀರಿ. ಆದರೆ ಇಲ್ಲಿಗೆ ಭೇಟಿ ನೀಡುವ ಮೊದಲು ಅಲ್ಲಿನ ಕೆಲವು ನಿಯಮಗಳನ್ನು ತಿಳಿದುಕೊಳ್ಳುವುದು ಅವಶ್ಯಕ. ನಾಗಹಾಮಾ ಬಂದರಿನಿಂದ ಈ ಕ್ಯಾಟ್ ಐಲ್ಯಾಂಡ್‌ಗೆ ಹೋಗಬಹುದು. ಮೊದಲಿಗೆ ಐಯೋ- ನಾಗಹಾಮಾ ರೈಲು ನಿಲ್ದಾಣಕ್ಕೆ ಹೋಗಿ ಅಲ್ಲಿಂದ ಐದು ನಿಮಿಷಗಳ ಕಾಲ ನಡೆದುಕೊಂಡು ಹೋದರೆ ನಾಗಹಾಮಾ ಬಂದರು ಸಿಗುತ್ತದೆ. ಬಂದರಿನಿಂದ ಈ ದ್ವೀಪವನ್ನು ತಲುಪಲು 35 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಈ ದ್ವೀಪದಲ್ಲಿ ಯಾವುದೇ ಹೆಚ್ಚು ಹೊಟೇಲ್, ರೆಸ್ಟೋರೆಂಟ್‌ಗಳು ಅಥವಾ ಶಾಪಿಂಗ್ ಸ್ಥಳಗಳಿಲ್ಲ. ಬೆಕ್ಕುಗಳನ್ನು ಪ್ರೀತಿಸುವವರು ಮತ್ತು ಶಾಂತಿಯಿಂದ ಸಮಯ ಕಳೆಯಲು ಬಯಸುವವರು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಆದರೆ ಇಲ್ಲಿ ದಿನಕ್ಕೆ ಎರಡು ಬಾರಿ ಮಾತ್ರ ದೋಣಿ ಸೇವೆ ನೀಡಲಾಗುತ್ತದೆ. ದ್ವೀಪಕ್ಕೆ ಭೇಟಿ ನೀಡುವಾಗ, ನೀವು ಬೆಕ್ಕುಗಳಿಗೆ ಆಹಾರವನ್ನು ನೀಡಬಹುದು, ಅವುಗಳೊಂದಿಗೆ ಸಮಯ ಕಳೆಯಬಹುದು, ಆದರೆ ಇದು ಅವುಗಳ ಮನೆ ಎಂಬುದನ್ನು ನೆನಪಿಡಿ. ಆದ್ದರಿಂದ ಅವುಗಳಿಗೆ ತೊಂದರೆ ಕೊಡಬೇಡಿ.

ಬಿಲ್ಲೀ ಜಾಸ್ತಿ ಇಲ್ಲಿ!
ಅಯೋಶಿಮಾ ದ್ವೀಪದ ಅತ್ಯಂತ ವಿಶೇಷವಾದ ವಿಷಯವೆಂದರೆ ಇಲ್ಲಿ ಬೆಕ್ಕುಗಳ ಸಂಖ್ಯೆ ಮನುಷ್ಯರಿಗಿಂತ ಆರು ಪಟ್ಟು ಹೆಚ್ಚು. ಇಲ್ಲಿ ವಾಸಿಸುವ ವೃದ್ಧರು ತಮ್ಮ ದಿನಗಳನ್ನು ಬೆಕ್ಕುಗಳೊಂದಿಗೆ ಕಳೆಯುತ್ತಾರೆ. ಅವರು ಅವುಗಳನ್ನು ವಿವಿಧ ಹೆಸರುಗಳಿಂದ ಕರೆಯುತ್ತಾರೆ, ಅವುಗಳಿಗೆ ಆಹಾರ ನೀಡುತ್ತಾರೆ ಮತ್ತು ಪ್ರವಾಸಿಗರಿಗೆ ಬೆಕ್ಕುಗಳನ್ನು ಪ್ರೀತಿ ಮತ್ತು ಗೌರವದಿಂದ ಹೇಗೆ ನಡೆಸಿಕೊಳ್ಳಬೇಕೆಂದು ಕಲಿಸುತ್ತಾರೆ. ಅವರಿಗೆ, ಈ ಬೆಕ್ಕುಗಳು ಕೇವಲ ಸಾಕುಪ್ರಾಣಿಗಳಲ್ಲ, ಬದಲಾಗಿ ಕುಟುಂಬದ ಒಂದು ಭಾಗವಾಗಿವೆ.