ಡೆಸರ್ಟ್ ತುಂಬ ಉಪ್ಪುಪ್ಪು! ಇದೆಂಥ ಉಪ್ಪಿನ ರಣ?
ಭಾರತದಲ್ಲೊಂದು ಮರುಭೂಮಿ ಇದೆ. ನೀವು ನೆಲಕ್ಕೆ ಕೈ ತಿಕ್ಕಿ ಅದನ್ನು ನಾಲಗೆಗೆ ಇಟ್ಟರೆ ಉಪ್ಪಾಗುತ್ತದೆ. ಏಕೆಂದರೆ ಇದು ಉಪ್ಪಿನ ಮರುಭೂಮಿ! ಇದು ಇರೋದು ಗುಜರಾತ್‌ನ ಕಛ್‌ನಲ್ಲಿ. ರಣ್ ಆಫ್ ಕಛ್ ಎಂದು ಇದನ್ನು ಕರೆಯುತ್ತಾರೆ. ವಿಶ್ವದ ಅತ್ಯಂತ ದೊಡ್ಡ ಉಪ್ಪಿನ ಮರುಭೂಮಿಯಲ್ಲಿ ಇದು ಕೂಡ ಒಂದು. ಇಲ್ಲಿ ಕಣ್ಣು ಹಾಯಿಸಿದಷ್ಟೂ ದೂರ ಉಪ್ಪೇ ಕಾಣಿಸುತ್ತದೆ.
- ಶ್ರವಣ್ ರಾಮಯ್ಯ
ಮರುಭೂಮಿಯಲ್ಲಿನ ಮರಳಿನ ರುಚಿ ನೋಡಿದ್ದೀರಾ? ಈ ಪ್ರಶ್ನೆಯನ್ನು ಯಾರಿಗಾದರೂ ಕೇಳಿದರೆ ನಗೋದು ಗ್ಯಾರಂಟಿ. ಏಕೆಂದರೆ ಮರಳು ಹೇಗೆ ತಾನೇ ಟೇಸ್ಟ್ ಇರೋಕೆ ಸಾಧ್ಯ? ಆದರೆ, ಭಾರತದಲ್ಲೊಂದು ಮರುಭೂಮಿ ಇದೆ. ನೀವು ನೆಲಕ್ಕೆ ಕೈ ತಿಕ್ಕಿ ಅದನ್ನು ನಾಲಗೆಗೆ ಇಟ್ಟರೆ ಉಪ್ಪಾಗುತ್ತದೆ. ಏಕೆಂದರೆ ಇದು ಉಪ್ಪಿನ ಮರುಭೂಮಿ! ಇದು ಇರೋದು ಗುಜರಾತ್‌ನ ಕಛ್‌ನಲ್ಲಿ. ರಣ್ ಆಫ್ ಕಛ್ ಎಂದು ಇದನ್ನು ಕರೆಯುತ್ತಾರೆ. ವಿಶ್ವದ ಅತ್ಯಂತ ದೊಡ್ಡ ಉಪ್ಪಿನ ಮರುಭೂಮಿಯಲ್ಲಿ ಇದು ಕೂಡ ಒಂದು. ಇಲ್ಲಿ ಕಣ್ಣು ಹಾಯಿಸಿದಷ್ಟೂ ದೂರ ಉಪ್ಪೇ ಕಾಣಿಸುತ್ತದೆ.

ರಣ್ ಆಫ್ ಕಛ್ ಇರೋದು ಭಾರತದ ಗುಜರಾತ್‌ನ ಕಛ್ ಜಿಲ್ಲೆಯಲ್ಲಿ. ರಣ್ ಎಂದರೆ ಮರುಭೂಮಿ ಹಾಗೂ ಕಛ್ (ಕಛುವಾ) ಎಂದರೆ ಆಮೆ. ಈ ನಕ್ಷೆ ಆಮೆಯನ್ನು ಹೋಲುತ್ತದೆ. ಈ ಕಾರಣದಿಂದ ಇದಕ್ಕೆ ಈ ಹೆಸರು ಬಂದಿದೆ. ಕಛ್ ಜಿಲ್ಲೆಯ ಸುತ್ತಳತೆ 45 ಸಾವಿರ ಚದರ ಕಿಮೀ. ಇದು ದೇಶದ ಅತ್ಯಂತ ದೊಡ್ಡ ಜಿಲ್ಲೆ ಕೂಡ ಹೌದು. ಉಪ್ಪಿನ ಮರುಭೂಮಿಯ ಹೆಚ್ಚಿನ ಪ್ರದೇಶ ಗುಜರಾತ್ನಲ್ಲಿದ್ದರೆ, ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಒಂದು ಸಣ್ಣ ಭಾಗವಿದೆ. ಈ ಉಪ್ಪಿನ ಮರುಭೂಮಿ 23 ಸಾವಿರ ಚದರ ಕಿಮೀ ವಿಸ್ತೀರ್ಣ ಹೊಂದಿದೆ.
ಇಷ್ಟೆಲ್ಲ ಉಪ್ಪು ಹೇಗೆ ಬಂತು?
ಏಕಾಏಕಿ ಈ ಭಾಗದಲ್ಲಿ ಇಷ್ಟೊಂದು ಉಪ್ಪು ಹೇಗೆ ಬರಲು ಸಾಧ್ಯ ಎಂಬ ಪ್ರಶ್ನೆ ನಿಮ್ಮ ತಲೆಯಲ್ಲಿ ಮೂಡಿರಬಹುದು. ಅದಕ್ಕೂ ಉತ್ತರ ಇದೆ. ಒಂದು ಕಾಲದಲ್ಲಿ ರಣ್ ಆಫ್ ಕಛ್ ಸಮುದ್ರದ ಅಡಿಯಲ್ಲಿ ಇತ್ತು ಎನ್ನಲಾಗಿದೆ. ಆದರೆ, ಒಮ್ಮೆ ಈ ಭಾಗದಲ್ಲಿ ಭಾರೀ ಭೂಕಂಪ ಸಂಭವಿಸಿತು. ಈ ವೇಳೆ ಈ ಭಾಗ ಮೇಲಕ್ಕೆ ಬಂತು ಎನ್ನಲಾಗಿದೆ. ಆ ಬಳಿಕ ಈ ಭಾಗದ ನೀರೆಲ್ಲ ಒಣಗಿ ಉಪ್ಪಿನ ಮರುಭೂಮಿ ಆಯಿತು.
ಮಳೆಗಾಲದಲ್ಲಿ ಮುಳುಗಡೆ
ಈ ಭಾಗವು ಮಳೆಗಾಲದಲ್ಲಿ ನೀರಿನಿಂದ ತುಂಬಿ ಹೋಗುತ್ತದೆ. ಹಾಗಾಗಿ ಆ ಸಂದರ್ಭದಲ್ಲಿ ಇಲ್ಲಿಗೆ ಭೇಟಿ ಅಷ್ಟೊಂದು ಒಳ್ಳೆಯ ಆಯ್ಕೆಯಲ್ಲ. ಯಾವಾಗ ಚಳಿಗಾಲ ಆರಂಭ ಆಗುತ್ತದೆಯೋ ಆಗ ಬಿಸಿಲಿಗೆ ನೀರೆಲ್ಲ ಆವಿಯಾಗಿ ಕಣ್ಣು ಹಾಯಿಸಿದಷ್ಟೂ ದೂರ ಉಪ್ಪೇ ಕಾಣುತ್ತದೆ. ಎಲ್ಲ ಕಡೆಗಳಲ್ಲಿ ಹಿಮ ಹಾಸಿ ಹೋಗಿದೆಯೇನೋ ಎಂಬಷ್ಟು ಬಿಳಿ ಬಣ್ಣ. ಅಕ್ಟೋಬರ್ನಿಂದ ಫೆಬ್ರವರಿವರೆಗೆ ಇಲ್ಲಿ ಉತ್ಸವ ನಡೆಯುತ್ತದೆ.
ಬೇಸಿಗೆ ಸಖತ್ ಹಾಟ್
ಎಷ್ಟೆಂದರೂ ಇದು ಉಪ್ಪಿನ ಮರುಭೂಮಿ. ಮರುಭೂಮಿ ಎಂದರೆ ಬೇಸಿಗೆಯಲ್ಲಿ ಅದೆಷ್ಟು ಬಿಸಿ ಇರಬಹುದು ಎಂಬುದನ್ನು ನೀವೇ ಆಲೋಚಿಸಿ. ಬೇಸಿಗೆಯಲ್ಲಿ ಇಲ್ಲಿನ ತಾಪಮಾನ 50 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಚಳಿಗಾಲದಲ್ಲಿ 25 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ರಾತ್ರಿ ವೇಳೆ ಇಲ್ಲಿನ ತಾಪಮಾನ ಜೀರೋಗಿಂತಲೂ ಕೆಳಕ್ಕೆ ಹೋಗುತ್ತದೆ. ಹೀಗಾಗಿ, ಈ ಭಾಗದಲ್ಲಿ ಹವಾಮಾನದಲ್ಲಿ ಸಾಕಷ್ಟು ಬದಲಾವಣೆ ಆಗುತ್ತಲೇ ಇರುತ್ತದೆ.

ದೇಶಕ್ಕೆ ಉಪ್ಪು ರಫ್ತು
ಇಲ್ಲಿ ಪ್ರತಿ ವರ್ಷ ಸಾಕಷ್ಟು ಟನ್ ಉಪ್ಪು ಸಿದ್ಧವಾಗುತ್ತದೆ. ಅಕ್ಟೋಬರ್ನಲ್ಲಿ ಉಪ್ಪು ತೆಗೆಯುವ ಕೆಲಸ ಆಗುತ್ತದೆ. ಈ ಭಾಗದ ಜನರು 40 ಅಡಿಯಷ್ಟು ಆಳದ ಹೊಂಡವನ್ನು ತೆಗೆಯುತ್ತಾರೆ. ಅಲ್ಲಿನ ನೀರನ್ನು ಹೊರಕ್ಕೆ ತೆಗೆದು ಒಣಗಿಸಿ ಉಪ್ಪನ್ನು ಸಿದ್ಧಪಡಿಸುತ್ತಾರೆ. ವಿಶೇಷ ಎಂದರೆ ಈ ಉಪ್ಪು ಸಮುದ್ರ ಉಪ್ಪಿಗಿಂತ 10 ಪಟ್ಟು ಹೆಚ್ಚು ಉಪ್ಪಾಗಿರುತ್ತದೆ! ಪ್ರತಿ 15 ದಿನಗಳಿಗೊಮ್ಮೆ 15 ಟನ್‌ಗಳಷ್ಟು ಉಪ್ಪು ಇಲ್ಲಿ ತಯಾರಾಗುತ್ತದೆ. ಭಾರತದ ಒಟ್ಟೂ ಉಪ್ಪು ತಯಾರಿಕೆಯಲ್ಲಿ ಶೇ.75 ಕೊಡುಗೆ ಈ ಭಾಗದ್ದು.
ತಲುಪೋದು ಹೇಗೆ?
ರಣ್ ಆಫ್ ಕಛ್ಗೆ ಸಮೀಪದ ಪ್ರದೇಶ ಎಂದರೆ ಭುಜ್ ವಿಮಾನ ನಿಲ್ದಾಣ. ವಿಮಾನ ನಿಲ್ದಾಣದಿಂದ ಟ್ಯಾಕ್ಸಿ ಅಥವಾ ಬಸ್ ಮೂಲಕ ಈ ಮರಭೂಮಿ ತಲುಪಬಹುದು. ಅದೇ ರೀತಿ ಬುಜ್ನಲ್ಲಿ ರೈಲ್ವೆ ನಿಲ್ದಾಣ ಕೂಡ ಇದೆ. ಇನ್ನು, ಅಹಮದಾಬಾದ್ ನೋಡಿ ಇಲ್ಲಿಗೆ ತಲುಪುತ್ತೀರಿ ಎಂದರೆ ಸುಮಾರು 400 ಕಿ.ಮೀ ಡ್ರೈವ್ ಮಾಡಬೇಕಾಗುತ್ತದೆ.