ನೆದರ್‌ಲ್ಯಾಂಡ್‌ನಲ್ಲಿ ಮದರ್!
ಭಾರತದಲ್ಲಿ ಸಿಗುವ ಎಲ್ಲಾ ವಸ್ತುಗಳೂ ಇಲ್ಲಿ ಸಿಗುತ್ತವೆ. ಆದರೆ ಭಾರತದ ರುಪಾಯಿಗೆ ಹೋಲಿಸಿದರೆ ಬೆಲೆಯು ತುಂಬಾ ದುಬಾರಿ. ಇಲ್ಲಿ ದುಡಿದದ್ದರಲ್ಲಿ ಶೇಕಡಾ 50ರಷ್ಟು ಇನ್ಸೂರೆನ್ಸ್, ಟ್ಯಾಕ್ಸ್ ಇತ್ಯಾದಿಗಳಿಗೆ ತೆರಬೇಕು. ಆದರೆ ಸ್ವಚ್ಛ ಪರಿಸರ, ಪ್ರಶಾಂತ ದೇಶ. ಹಾಗಾಗಿ ಇಲ್ಲಿ ವಲಸೆ ಬಂದವರಿಗೆ ತಮ್ಮ ದೇಶಗಳಿಗೆ ವಾಪಸ್ ಹೋಗಲು ಇಷ್ಟವಾಗುವುದಿಲ್ಲ.
- ರೂಪ ಹೊಡಬಟ್ಟೆ
ಇದು ನನ್ನ ಮೊದಲ ವಿದೇಶ ಪ್ರಯಾಣ ಜತೆಗೆ ಮೊದಲ ವಿಮಾನ ಪ್ರಯಾಣ. ಮಗ - ಸೊಸೆ ನೆದರ್‌ಲ್ಯಾಂಡ್‌ನಲ್ಲಿ ವಾಸಿಸುತ್ತಿದ್ದು, ಸೊಸೆಯ ಹೆರಿಗೆ ಸಮಯದಲ್ಲಿ ನಾನು ಹಾಗೂ ಸೊಸೆಯ ತಾಯಿ ಅಲ್ಲಿಗೆ ಹೋಗುವುದು ಎಂದು ತೀರ್ಮಾನವಾಯಿತು. ಮೂರು ತಿಂಗಳು ಮೊದಲಿನಿಂದಲೇ ವೀಸಾ, ಪಾಸ್‌ಪೋರ್ಟ್ ಅಲ್ಲಿಗೆ ತೆಗೆದುಕೊಂಡು ಹೋಗಬೇಕಾದ ವಸ್ತುಗಳನ್ನು ಒಟ್ಟು ಮಾಡಲು ಆರಂಭಿಸಿದೆವು.
ಇಂಗ್ಲಿಷ್ ಅರ್ಥವಾದರೂ ಮಾತಾಡಲು ಬರದೇ ಇರುವ ನಾನು ಹೇಗೆ ಆ ದೇಶ ತಲುಪುತ್ತೇನೋ ಎಂದು ನನಗೂ, ಮನೆಯವರಿಗೂ ಸ್ವಲ್ಪ ಭಯವಿತ್ತು. ದೇವರ ದಯೆಯಿಂದ ಎಲ್ಲ ಪ್ರಕ್ರಿಯೆಗಳೂ ಸರಾಗವಾಗಿ ನಡೆದು ವಿಮಾನ ಹತ್ತಲು ಸಿದ್ಧರಾದೆವು.
ವಿಮಾನ ಹತ್ತಿ, ಸೀಟ್ ಹುಡುಕಿ, ಸೀಟ್ ಬೆಲ್ಟ್ ಹಾಕಿಕೊಂಡು ಕುಳಿತು ವಿಮಾನ ಟೇಕ್ ಆಫ್ ಆದಾಗ ಭಯವಾಗುತ್ತದೆಯೇನೋ ಅನಿಸಿ ಕಣ್ಣು ಮುಚ್ಚಿ ಕುಳಿತೆ. ಆದರೆ ಏನೂ ಗೊತ್ತಾಗಲಿಲ್ಲ. ಕಿಟಕಿಗಳು ಮುಚ್ಚಿತ್ತು, ತೆರೆದಾಗ ಮೋಡಗಳ ಮದ್ಯೆ ನಾವು. ನಮ್ಮದು ಬೆಂಗಳೂರಿನಿಂದ 9 ಗಂಟೆ ಪ್ರಯಾಣಿಸಿ, ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿ ಇಳಿದು ಅಲ್ಲಿಂದ ಬೇರೆ ವಿಮಾನದಲ್ಲಿ ನೆದರ್‌ಲ್ಯಾಂಡ್‌ನ ಆಮ್ಸ್ಟರ್‌ಡ್ಯಾಂಗೆ 50 ನಿಮಿಷಗಳ ಪ್ರಯಾಣ. ನಮ್ಮ ಬ್ಯಾಗ್ ನೇರ ಆಮ್ಸ್ಟರ್‌ಡ್ಯಾಂನಲ್ಲಿ ತೆಗೆದುಕೊಂಡೆವು. ಬ್ಯಾಗ್‌ನೊಂದಿಗೆ ಹೊರಬಂದಾಗ ನಮ್ಮನ್ನು ಕರೆದುಕೊಂಡು ಹೋಗಲು ಮಗ ಬಂದು ನಿಂತಿದ್ದ.

ವಿಮಾನ ನಿಲ್ದಾಣದಿಂದ ಮಗನ ಮನೆಗೆ ಹತ್ತು ನಿಮಿಷಗಳ ಪ್ರಯಾಣ. ಕಾರಿನಲ್ಲಿ ಮನೆ ತಲುಪುವವರೆಗೂ ಸ್ವಚ್ಛ, ಅಗಲವಾದ ರಸ್ತೆಗಳು, ಒಂದರ ಹಿಂದೆ ಒಂದು ಶಾಂತವಾಗಿ ಸಾಗುವ ವಾಹನಗಳು, ಇಕ್ಕೆಲಗಳಲ್ಲಿ ಕಾಲುವೆಗಳಲ್ಲಿ ಹರಿಯುತ್ತಿದ್ದ ನೀರನ್ನು ಅಚ್ಚರಿಯಿಂದ ನೋಡುತ್ತಲೇ ಇದ್ದೆ. ನಮ್ಮ ಮೂರು ತಿಂಗಳ ನೆದರ್‌ಲ್ಯಾಂಡ್ ಪ್ರವಾಸದಲ್ಲಿ ಒಂದು ಬಾರಿಯೂ ಯಾವುದೇ ವಾಹನ ಹಾರ್ನ್ ಮಾಡಿದ್ದು ನಮ್ಮ ಕಿವಿಗೆ ಬೀಳಲೇ ಇಲ್ಲ. ಟ್ರಾಫಿಕ್ ಗಲಾಟೆಗಳನ್ನೂ ನೋಡಲಿಲ್ಲ. ಇಲ್ಲಿನ ಜನರು ಶಾಂತಿಪ್ರಿಯರು ಹಾಗೂ ರಸ್ತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವವರು.
ನೆದರ್‌ಲ್ಯಾಂಡ್‌ನಲ್ಲಿ ಜನರಿಗಿಂತ ಸೈಕಲ್‌ಗಳೇ ಜಾಸ್ತಿ ಎಂದು ಓದಿದ್ದೆ. ಇಲ್ಲಿ ಬಂದ ಮೇಲೆ ಕಣ್ಣಾರೆ ನೋಡಿದೆ. ಎಲ್ಲಾ ಕಡೆ ಸೈಕಲ್‌ಗಳಿಗಾಗಿಯೇ ಪ್ರತ್ಯೇಕ ರಸ್ತೆ ಇದೆ. ಸೈಕಲ್‌ಗಳಿಗೆ ಫ್ರೀ ಪಾರ್ಕಿಂಗ್ ವ್ಯವಸ್ಥೆ ಇದೆ. ಹೆಚ್ಚಿನ ಕಡೆ ಕಾರುಗಳನ್ನು ನಿಲ್ಲಿಸಿ ಪಾದಚಾರಿಗಳಿಗೆ, ಸೈಕಲ್ ಸವಾರರಿಗೆ ಅವಕಾಶ ಕೊಡಬೇಕು. ಇಲ್ಲಿ ಯಾವುದೂ ಉಚಿತವಾಗಿ ಸಿಗುವುದಿಲ್ಲ. ಪಾರ್ಕಿಂಗ್, ವೈದ್ಯಕೀಯ ಸೇವೆ, ಶಿಕ್ಷಣ, ದೇಶದ ಸ್ವಚ್ಛತೆಗೆ, ಕಸಗಳನ್ನು ಹಾಕಲು, ಶೌಚಾಲಯಗಳಿಗೆ, ಅಷ್ಟೇ ಏಕೆ ನಾಯಿಗಳಿಗೂ ಶುಲ್ಕ ಪಾವತಿಸಬೇಕು.
ಇಲ್ಲಿನ ಜನ ಆಲೂಗಡ್ಡೆ, ಹಾಲು, ಮೊಸರು, ಚೀಸ್, ಬ್ರೆಡ್, ಮಾಂಸ ಪ್ರಿಯರು. ದನಕರುಗಳನ್ನು ಸಾಕಿ, ಹಾಲಿನ ಉತ್ಪನ್ನಗಳನ್ನು ತಯಾರಿಸುತ್ತಾರೆ. ಭಾರತದಲ್ಲಿ ಸಿಗುವ ಎಲ್ಲಾ ವಸ್ತುಗಳೂ ಇಲ್ಲಿ ಸಿಗುತ್ತವೆ. ಆದರೆ ಭಾರತದ ರುಪಾಯಿಗೆ ಹೋಲಿಸಿದರೆ ಬೆಲೆಯು ತುಂಬಾ ದುಬಾರಿ. ಇಲ್ಲಿ ದುಡಿದದ್ದರಲ್ಲಿ ಶೇಕಡಾ 50ರಷ್ಟು ಇನ್ಸೂರೆನ್ಸ್, ಟ್ಯಾಕ್ಸ್ ಇತ್ಯಾದಿಗಳಿಗೇ ತೆರಬೇಕು. ಆದರೆ ಸ್ವಚ್ಛ ಪರಿಸರ, ಪ್ರಶಾಂತ ದೇಶ. ಹಾಗಾಗಿ ಇಲ್ಲಿ ವಲಸೆ ಬಂದವರಿಗೆ ತಮ್ಮ ದೇಶಗಳಿಗೆ ವಾಪಸ್ ಹೋಗಲು ಇಷ್ಟವಾಗುವುದಿಲ್ಲ. ಇಲ್ಲಿ ಸ್ವಂತ ಮನೆಗಳನ್ನು ಬಿಡ್ ಮಾಡಿ ಖರೀದಿಸಬೇಕು. ಮನೆಗಳಲ್ಲಿ ಹೀಟರ್ ವ್ಯವಸ್ಥೆ, ಬಿಸಿ ನೀರಿನ ನಲ್ಲಿಗಳು ಸಾಮಾನ್ಯ.
ಎಲ್ಲಾ ಕಡೆ ವಿದ್ಯುತ್, ಫೋನ್ ಎಲ್ಲ ವೈರಿಂಗ್ ವ್ಯವಸ್ಥೆಯೂ ಅಂಡರ್‌ಗ್ರೌಂಡ್ ಆಗಿರುತ್ತದೆ. ಯಾವ ಕೇಬಲ್‌ಗಳು, ತಂತಿಗಳು, ವಾಲಿದ ಕಂಬಗಳು ಇಲ್ಲಿ ಕಾಣಸಿಗುವುದಿಲ್ಲ. ದೇಶದ 50 ಶೇಕಡ ಪ್ರದೇಶ ಕೃಷಿಗಾಗಿ ಬಳಸುತ್ತಾರೆ. ರಸ್ತೆಗಳ ಇಕ್ಕೆಲಗಳಲ್ಲಿ ಮರಗಳನ್ನು 8-10 ಅಡಿ ದೂರದಲ್ಲಿ ನೆಡುತ್ತಾರೆ, ಇದರಿಂದ ಮಳೆ ನೀರು ಬಿದ್ದು ರಸ್ತೆ ಹಾಳಾಗದಂತೆ ತಡೆಯಬಹುದು. ಗಿಡಗಳು ಚಿಕ್ಕದಿರುವಾಗಲೇ ಸಾಲಾಗಿ, ನೇರವಾಗಿ ಬೆಳೆಯುವಂತೆ ಮೂರು ದಿಕ್ಕಿನಲ್ಲಿ ಹಗ್ಗಗಳಿಂದ ಬಂಧಿಸಿ ಬೆಳೆಸುತ್ತಾರೆ.

ಇಲ್ಲಿನ ಜನರು ಸ್ವಚ್ಛತೆಗೆ ಆದ್ಯತೆ ಕೊಡುತ್ತಾರೆ. ಎಲ್ಲಾ ಕಡೆ ಹಸಿ ಕಸ, ಒಣ ಕಸ, ಗ್ಲಾಸ್‌ಗಳಿಗೆ, ಪ್ಲಾಸ್ಟಿಕ್‌ಗಳಿಗೆ ಬೇರೆ ಬೇರೆ ಡಸ್ಟ್‌ಬಿನ್‌ಗಳಿರುತ್ತವೆ. ಅದರ ಜತೆ ನಾಯಿಗಳ ಮಲ ಸಂಗ್ರಹದ ಬಿನ್‌ಗಳೂ ಇರುತ್ತವೆ. ವಾಕಿಂಗ್ ಮಾಡುವವರು ನಾಯಿಗಳನ್ನೂ, ನಾಯಿಗಳ ಜತೆ ಪೂಪ್ ಬ್ಯಾಗ್‌ಗಳನ್ನೂ ತೆಗೆದುಕೊಂಡು ಹೋಗುತ್ತಾರೆ. ವಾಕಿಂಗ್‌ಗೆ ಹೋದಾಗ ಎದುರಿಗೆ ಯಾರೇ ಕಂಡರೂ ಮುಗುಳು ನಗೆ ಬೀರಿ ಹಲೋ ಎಂದು ಹೇಳಿ ಕೈಬೀಸಿ ಮುಂದೆ ಸಾಗುತ್ತಾರೆ. ಇಡೀ ದೇಶವನ್ನು ಯೋಜನಾಬದ್ಧವಾಗಿ ನಿರ್ಮಿಸಿದ್ದಾರೆ. ರಸ್ತೆಗಳಲ್ಲಂತೂ ಎಲ್ಲೂ ಗುಂಡಿಗಳಿಲ್ಲ, ನೀರು ನಿಲ್ಲುವುದೂ ಇಲ್ಲ. ಯಾವ ಆಸ್ಪತ್ರೆ, ಕಚೇರಿ, ಅಷ್ಟೇ ಏಕೆ ಯಾರ ಮನೆಗಳಿಗೆ ಹೋಗುವುದಾದರೂ ಅಪಾಯಿಂಟ್‌ಮೆಂಟ್ ತೆಗೆದುಕೊಂಡೇ ಹೋಗಬೇಕು. ಆಸ್ಪತ್ರೆಗಳಲ್ಲಿ ರೋಗಿಗಳೂ ಕಡಿಮೆ, ಸಿಬ್ಬಂದಿಯೂ ಕಡಿಮೆ. ಸಹಜ ಹೆರಿಗೆಗಳೇ ಹೆಚ್ಚು. ಅದರಲ್ಲೂ ಹೆಚ್ಚಿನ ಜನರಿಗೆ ಮನೆಯಲ್ಲೇ ಹೆರಿಗೆ ಮಾಡಿಸುತ್ತಾರೆ. ಹೆರಿಗೆಯಾದ ಮೇಲೂ ಆಸ್ಪತ್ರೆಯಲ್ಲಿ ಒಂದು ದಿನಕ್ಕಿಂತ ಜಾಸ್ತಿ ಇರಿಸಿಕೊಳ್ಳುವುದಿಲ್ಲ.
ನಮ್ಮ ಮೂರು ತಿಂಗಳ ವೀಸಾ ಅವಧಿ ಮುಗಿದು ಬೆಂಗಳೂರಿಗೆ ಮರಳಿದೆವು. ಆ ಮೂರು ತಿಂಗಳು ಅದು ಹೇಗೆ ಕಳೆದುಹೋಯಿತೆಂಬುದೇ ಗೊತ್ತಾಗಲಿಲ್ಲ. ಇಲ್ಲಿಯ ಜನರ ಶಿಸ್ತು, ಆರೋಗ್ಯದ ಕಾಳಜಿ, ಸ್ನೇಹಪರತೆ ಎಲ್ಲವನ್ನೂ ನಾವು ಕಲಿಯಬೇಕಿದೆ. ಸೈಕಲ್ ಬಳಕೆ, ಪರಿಸರ ಕಾಳಜಿಯನ್ನು ನಾವು ಯೋಚಿಸಬೇಕಿದೆ. ಪೂರ್ವ ಯೋಜನೆಗಳಿಲ್ಲದೆ ನಗರಗಳನ್ನು ನಿರ್ಮಿಸುತ್ತಾರೆ. ನಾವು ಇವರಂತೆ ಬದಲಾಗುವುದು ತುಂಬಾ ಕಷ್ಟಸಾಧ್ಯ ಎಂದು ಅನಿಸಿದ್ದು ಸುಳ್ಳಲ್ಲ.