ವರ್ಕ್ ಫ್ರಮ್ ರೆಸಾರ್ಟ್ @ ದ್ವಾರ ಸಮುದ್ರ
ಹಾಸನ ಜಿಲ್ಲೆಯ, ಬೇಲೂರು ತಾಲೂಕಿನ, ಬಿಕ್ಕೋಡು ಹೋಬಳಿಯ ಹಸಿರಿನ ಮಡಿಲಿನಲ್ಲಿ ಸುಂದರವಾಗಿ ನಿರ್ಮಿಸಲಾಗಿರುವ ರೆಸಾರ್ಟ್ ಈ ದ್ವಾರಸಮುದ್ರ. ವೀಕೆಂಡ್, ಹಾಲಿಡೇಸ್, ಫ್ಯಾಮಿಲಿ ಗೆಟ್ ಟುಗೆದರ್ ಅಥವಾ ಬ್ಯಾಚಲರ್‌ಗಳು ಎಂಜಾಯ್ ಮಾಡಲು ಒಂದು ಅದ್ಭುತವಾದ ಜಾಗ. ಪ್ರಕೃತಿ ಪ್ರಿಯರಿಗಂತೂ ಹೇಳಿಮಾಡಿಸಿದಂತಿದೆ.
- ನಂಜನಗೂಡು ಪ್ರದ್ಯುಮ್ನ
ಇತ್ತೀಚಿನ ದಿನಗಳಲ್ಲಿ ವೀಕೆಂಡ್ ಟ್ರಿಪ್, ಲಾಂಗ್ ಡ್ರೈವ್, ಎಲ್ಲಕ್ಕಿಂತ ಹೆಚ್ಚಾಗಿ ರಜೆ ಸಿಕ್ಕರೆ ಸಾಕು ಲಿವಿಂಗ್ ಇನ್ ರೆಸಾರ್ಟ್ ಪರಂಪರೆ ಹೆಚ್ಚಾಗುತ್ತಿದೆ. ಕೆಲವರಿಗಂತೂ ವಾರಕ್ಕೊಮ್ಮೆ ಯಾವುದಾದರೂ ರೆಸಾರ್ಟ್‌ಗೆ ಹೋಗದಿದ್ದರೆ ಜೀವನದಲ್ಲಿ ಏನೋ ಕಳೆದುಕೊಂಡವರಂತೆ ಆಡುತ್ತಿರುತ್ತಾರೆ. ಅದಕ್ಕೆ ತಕ್ಕಂತೆ ರೆಸಾರ್ಟ್‌ಗಳ ಸಂಖ್ಯೆ ಏನು ಕಮ್ಮಿ ಇಲ್ಲ. ಪ್ರದೇಶಕ್ಕೆ ತಕ್ಕಂತೆ, ಬರುವ ಜನರಿಗೆ ಹೋಲುವಂಥ ರೆಸಾರ್ಟ್‌ಗಳು ತಲೆ ಎತ್ತಿ ನಿಂತು ರೆಸಾರ್ಟ್ ಪ್ರಿಯರನ್ನು ಕೈ ಬೀಸಿ ಕರೆಯುತ್ತಿವೆ.
ಚುಮುಚುಮು ಚಳಿ, ಜಿಟಿಜಿಟಿ ಮಳೆ, ಕಣ್ಣು ಹಾಸಿದಲೆಲ್ಲಾ ಹಸಿರು. ಸೂರ್ಯನಿಗಂತೂ ಮೋಡಗಳ ಅಷ್ಟದಿಗ್ಭಂಧನ. ಹೀಗಾಗಿ ಆಗೊಮ್ಮೆ ಈಗೊಮ್ಮೆ ಆಗಸದಲ್ಲಿ ಸೂರ್ಯನ ದರ್ಶನ. ವಾಹನಗಳ ದಟ್ಟಣೆ ಇಲ್ಲ, ಹಾರ್ನ್ ಶಬ್ದವಿಲ್ಲ. ಒತ್ತಡದ ಜೀವನದಿಂದ ಕೊಂಚ ರಿಲೀಫ್ ಬಯಸಿ ಎರಡು ದಿನ ನೆಮ್ಮದಿ ಜೀವನ ಕಳೆಯಬೇಕು ಎಂದು ಯಾರಿಗೆ ತಾನೆ ಅನ್ನಿಸೋದಿಲ್ಲ ಹೇಳಿ? ಹಾಗಾದರೆ ಒಮ್ಮೆ ಈ ಜಾಗಕ್ಕೆ ಹೋಗಿಬನ್ನಿ. ಹಸಿರು ಹಾಸಿನ ಮಧ್ಯೆ ಇರುವ ʼದ್ವಾರ ಸಮುದ್ರದʼ ಕಡೆ ಸುತ್ತಾಡಿ ಬನ್ನಿ.

ದ್ವಾರಸಮುದ್ರ ಎಂದಾಕ್ಷಣ ಕೆಲವರಿಗೆ ಇದೇನಿದು ಹಳೇಬೀಡಿನ ಕಥೆ ಹೇಳುತ್ತಿದ್ದಾನಲ್ಲ ಎಂದು ಅನಿಸಿರಬಹುದು. ಅನಿಸಿದರೂ ತಪ್ಪಿಲ್ಲ ಬಿಡಿ. ಯಾಕೆಂದರೆ ಹಳೆಬೀಡಿನ ಐತಿಹಾಸಿಕ ಹೆಸರು ದ್ವಾರಸಮುದ್ರ. ಆದರೆ ನಾನು ಹೇಳಲು ಹೊರಟಿರುವ ಜಾಗ ಅದಲ್ಲ !
ಹಾಸನ ಜಿಲ್ಲೆಯ, ಬೇಲೂರು ತಾಲೂಕಿನ, ಬಿಕ್ಕೋಡು ಹೋಬಳಿಯ ಹಸಿರಿನ ಮಡಿಲಿನಲ್ಲಿ ಸುಂದರವಾಗಿ ನಿರ್ಮಿಸಲಾಗಿರುವ ರೆಸಾರ್ಟ್ ಈ ದ್ವಾರಸಮುದ್ರ. ವೀಕೆಂಡ್, ಹಾಲಿಡೇಸ್, ಫ್ಯಾಮಿಲಿ ಗೆಟ್ ಟುಗೆದರ್ ಅಥವಾ ಬ್ಯಾಚಲರ್‌ಗಳು ಎಂಜಾಯ್ ಮಾಡಲು ಒಂದು ಅದ್ಭುತವಾದ ಜಾಗ. ಪ್ರಕೃತಿ ಪ್ರಿಯರಿಗಂತೂ ಹೇಳಿಮಾಡಿಸಿದಂತಿದೆ. ಮಳೆಗಾಲದಲ್ಲಿ ಹೋದರಂತೂ ಅದರ ಅನುಭವವೇ ಬೇರೆ ಬಿಡಿ.
ವಿನೂತನವಾಗಿ ನಿರ್ಮಾಣ ಮಾಡಿರುವ ಈ ರೆಸಾರ್ಟ್‌ನ ಒಳ ವಿನ್ಯಾಸವೇ ಆಕರ್ಷಣೀಯ. ಜೋಧ್ ಪುರ್ ಶೈಲಿ ಅಳವಡಿಸಿ ನಿರ್ಮಾಣ ಮಾಡಿರುವ ಸುಂದರವಾದ ಸಿಂಗಲ್ ರೂಂ ಅಥವ ಪ್ರತ್ಯೇಕ ವಿಲ್ಲಾಗಳು ಎಂಥವರನ್ನಾದರೂ ಆಕರ್ಷಿಸುತ್ತವೆ. ಅದರಲ್ಲೂ ಪ್ರತ್ಯೇಕ ವಿಲ್ಲಾಗಳು ಮತ್ತು ಮಿನಿ ತೊಟ್ಟಿಮನೆ. ಐತಿಹಾಸಿಕ ಹಾಗೂ ಸಾಂಪ್ರದಾಯಿಕ ಹಿನ್ನೆಲೆಯಲ್ಲಿ ನಿರ್ಮಾಣಮಾಡಿರುವ ಕಟ್ಟಡ ಹಾಗೂ ಒಳ ವಿನ್ಯಾಸ ಒಂದು ರೀತಿಯ ಹಳ್ಳಿ ವಾತಾವರಣದ ಫೀಲ್ ನೀಡುವುದಂತೂ ಸುಳ್ಳಲ್ಲ.
ರಭಸವಾಗಿ ಬೀಸುವ ಗಾಳಿ, ಸುತ್ತಲು ಹಚ್ಚಹಸಿರಿನ ಕಾಫಿ ತೋಟ, ಹಗಲು-ರಾತ್ರಿ ಹಕ್ಕಿಗಳ ಚಿಲಿಪಿಲಿ ಸದ್ದು, ಆಗಾಗ ಕಾಡು ಪ್ರಾಣಿಗಳ ಕೂಗಾಟ. ಒತ್ತಡದ ಜೀವನದ ಮಧ್ಯೆ ಎರಡು ದಿನ ರಿಲ್ಯಾಕ್ಸ್ ಮಾಡಲು ಉತ್ತಮವಾದ ಸ್ಥಳ.
ವರ್ಕ್ ಫ್ರಂ ರೆಸಾರ್ಟ್ :
ಕೋವಿಡ್ ಆಡಳಿತದಿಂದ ಅನೇಕರಿಗೆ ವರ್ಕ್ ಫ್ರಂ ಹೋಮ್ ಭಾಗ್ಯ ಸಿಕ್ಕಿದೆ. ಕೆಲವರು ವಾರಕ್ಕೆ ಒಮ್ಮೆ ಆಫೀಸಿಗೆ ಹೋದರೆ ಇನ್ನು ಕೆಲವರಂತೂ ಆಫೀಸ್‌ನ ಮುಖವೇ ನೋಡುವ ಹಾಗಿಲ್ಲ. ಪರ್ಮನೆಂಟ್ ವರ್ಕ್‌ಫ್ರಂ ಹೋಮ್. ಅಂಥವರು ಮನೆಯಲ್ಲಿ ಕೂತು ಕೆಲಸ ಮಾಡಿದರೇನು ಹೊರಗಿಂದ ಮಾಡಿದರೇನು! ಮನೇಲೇ ಕೂತು ಕೆಲಸ ಮಾಡಿ ಮಾಡಿ ಬೋರ್ ಆಗಿದೆ. ಸ್ವಾಮಿ ಕಾರ್ಯ ಸ್ವ ಕಾರ್ಯ (ಕೆಲಸದ ಜೊತೆ ಒಂದಿಷ್ಟು ಮಸ್ತಿ ಕೂಡ ಮಾಡೋಣ. ಆದರೆ ಹೋದ ಕಡೆ ಕೆಲಸಕ್ಕೆ ಬೇಕಾದ ವ್ಯವಸ್ಥೆ ಇರೋದಿಲ್ಲ ಎಂದು ಯೋಚಿಸುವವರಿಗೆ ಇದೊಂದು ಒಳ್ಳೆ ಆಪ್ಷನ್. ಆಫೀಸ್ ವರ್ಕ್‌ಗೆ ಬೇಕಾದ ಎಲ್ಲಾ ವ್ಯವಸ್ಥೆ ಈ ರೆಸಾರ್ಟ್‌ನಲ್ಲಿ ಇದೆ. ಪ್ರತ್ಯೇಕ ರೂಂ, ಹೈಸ್ಪೀಡ್ ವೈಫೈ ವ್ಯವಸ್ಥೆ ಕಲ್ಪಿಸಲಾಗಿದೆ. ಯಾರಾದರೂ ವರ್ಕ್ ಫ್ರಂ ರೆಸಾರ್ಟ್ ಮಾಡುವ ಪ್ಲ್ಯಾನ್ ಇದ್ದರೆ ಈ ಸ್ಥಳ ನಿಮ್ಮ ಲಿಸ್ಟ್‌ನಲ್ಲಿ ಇರಲಿ.
ಆಕ್ಟಿವಿಟೀಸ್ :
ಮಡ್ ವಾಲೀಬಾಲ್, ಸ್ವಿಮಿಂಗ್ ಪೂಲ್, ಸೈಕ್ಲಿಂಗ್, ರೋಪ್ ವಾಕ್, ಕ್ಯಾಂಪ್ ಫೈರ್, ಕರೋಕೆ, ಮಕ್ಕಳ ಆಟದ ಮೈದಾನ, ವಾಕಿಂಗ್ ಏರಿಯಾ, ಆಯಿಲ್ ಮಸಾಜ್ ಸೇರಿದಂತೆ ಮನರಂಜನೆಗಾಗಿ ಹಲವಾರು ಆಕರ್ಷಣೀಯ ಆಕ್ಟಿವಿಟಿಗಳ ವ್ಯವಸ್ಥೆ ಮಾಡಲಾಗಿದೆ.
ಮಲೆನಾಡ ಫುಡ್ :
ಬೆಳಿಗ್ಗೆ ಚಳಿ ಉಪಹಾರಕ್ಕೆ ಬಿಸಿಬಿಸಿ ಪೂರಿ-ಸಾಗು, ಮೆಣಸುಭರಿತ ಖಾರ ಪೊಂಗಲ್, ವಿವಿಧ ಹಣ್ಣು ಮಿಶ್ರಿತವಾದ ಫ್ರೂಟ್ ಸಲಾಡ್. ಇನ್ನು ಮಧ್ಯಾಹ್ನದ ಮೆಣಸಿನ ಸಾರು (ರಸಂ), ಕರಿದ ಹಪ್ಪಳ, ತರಕಾರಿ ಪಲಾವ್, ಜಾಮೂನು, ಫುಲ್ಕಾ ವಿಥ್ ಸಬ್ಜಿ, ವಿವಿಧ ರೀತಿಯ ಮಲೆನಾಡಿನ ಶೈಲಿಯ ಊಟ. ಸಂಜೆ ಕಾಫಿ-ಟೀ ವಿಥ್ ಸ್ನ್ಯಾಕ್ಸ್( ಮೆಣಸಿನಕಾಯಿ ಬಜ್ಜಿ, ಈರುಳ್ಳಿ ಬಜ್ಜಿ ಇತ್ಯಾದಿ…). ಇನ್ನು ರಾತ್ರಿ ಚಪಾತಿ-ಪಲ್ಯ, ಅನ್ನ-ರಸಂ, ಹಪ್ಪಳ, ಬಿಸಿಬಿಸಿ ಗಸಗಸೆ ಪಾಯಸ, ಮೊಸರನ್ನ. ಹೀಗೆ ಹೊಟ್ಟೆಗೂ ಯಾವುದೇ ಮೋಸ ಇಲ್ಲ.
ಪ್ರೇಕ್ಷಣೀಯ ಸ್ಥಳಗಳು :
ರೆಸಾರ್ಟ್‌ನ ಸುತ್ತಮುತ್ತ ಐತಿಹಾಸಿಕ, ಧಾರ್ಮಿಕ ಹಾಗೂ ಪ್ರಾಕೃತಿಕ ಸೌಂದರ್ಯದಿಂದ ತುಂಬಿದ ಹಲವು ಪ್ರಮುಖ ಪ್ರೇಕ್ಷಣೀಯ ಸ್ಥಳಗಳೂ ಇವೆ. ಅವುಗಳಲ್ಲಿ ಪ್ರಮುಖವಾದವು:
ಬೇಲೂರು (8km) : ಹೊಯ್ಸಳರ ಕಾಲದಲ್ಲಿ ನಿರ್ಮಾಣವಾದ ಸುಪ್ರಸಿದ್ಧ ಚೆನ್ನಕೇಶ್ವರ ದೇವಾಲಯ ಮತ್ತು ದೇವಾಲಯದ ಶಿಲ್ಪಕಲೆಗಳನ್ನು ವೀಕ್ಷಿಸಬಹುದು.
ಹಳೇಬೀಡು (18.20km) : ಹೊಯ್ಸಳರ ರಾಜಧಾನಿಯಾಗಿದ್ದ ಪಟ್ಟಣ. ಇಲ್ಲಿ ಪ್ರಸಿದ್ಧ ಹೊಯ್ಸಳೇಶ್ವರ ಮತ್ತು ಶಾಂತಲೇಶ್ವರ ದೇವಾಲಯಗಳಿದ್ದು, ಅದರ ಶಿಲ್ಪಕಲೆಗಳನ್ನು ಕಣ್ತುಂಬಿಕೊಳ್ಳಬಹುದು.
ಚಿಕ್ಕಮಗಳೂರು (45.50km) : ಇಲ್ಲಿಯ ಕಾಫಿ ಎಸ್ಟೇಟ್‌ಗಳು, ಮಳ್ಳಯ್ಯನಗಿರಿ, ಸೇರಿದಂತೆ ಅನೇಕ ಪ್ರೇಕ್ಷಣೀಯ ಸ್ಥಳಗಳು ಕಾಣಸಿಗುತ್ತವೆ. ಇಷ್ಟೇ ಅಲ್ಲದೇ ಸಕಲೇಶಪುರ 35.40km, ಶ್ರವಣಬೆಳಗೊಳ 65.70km, ಹೀಗೆ ರೆಸಾರ್ಟ್‌ನ ಸುತ್ತ ಮುತ್ತ ಅನೇಕ ಸ್ಥಳಗಳನ್ನು ವೀಕ್ಷಣೆ ಮಾಡಿ ಬರಬಹುದು.
ಎಲ್ಲಿಂದ ಎಷ್ಟು ದೂರ ?
ಬೆಂಗಳೂರಿನಿಂದ – 219.5km (4.27 ಗಂಟೆ ಪ್ರಯಾಣ)
ಮೈಸೂರಿನಿಂದ – 147.5km (3.36 ಗಂಟೆ ಪ್ರಯಾಣ)
ಹಾಸನದಿಂದ – 38.1km (1.1 ಗಂಟೆ ಪ್ರಯಾಣ)