ಭುವನಗಿರಿಯಲ್ಲಿ ಭುವನೇಶ್ವರಿ
ಈ ದೇವಾಲಯವು ಮೂರು ಶತಮಾನಗಳಷ್ಟು ಹಳೆಯದು ಎನ್ನಲಾಗಿದೆ. ಈ ಗಿರಿಗೆ 250 ಮೆಟ್ಟಿಲುಗಳಿದ್ದು, ಹತ್ತಿ ನಿಂತರೆ ದಿವ್ಯ ದೇವಾಲಯ ಅನಾವರಣಗೊಳ್ಳುತ್ತದೆ. ತೆಂಗು ಕಂಗು ತೋಟಗಳು, ನಿತ್ಯ ಹರಿದ್ವರ್ಣ ಕಾಡು ಮರಗಳಿಂದ ಕೂಡಿರುವ ರಮ್ಯ ತಾಣದ ಮಧ್ಯೆ ಈ ದೇಗುಲವು ಸ್ವರ್ಗದಂಥ ಸುಂದರ ತಾಣವಾಗಿದೆ. ಇಂಥ ಕಣ್ಮನ ತಣಿಸುವ ಮಲೆನಾಡಿನ ಸೊಬಗಿನ ಮಧ್ಯೆ, ಕನ್ನಡಿಗರ ಆರಾಧ್ಯ ದೈವ ಭುವನೇಶ್ವರಿ ದೇವಿಯು ಮೂರ್ತಿ ರೂಪದಲ್ಲಿ ವೀರಾಜಮಾನಳಾಗಿದ್ದಾಳೆ.
- ವಿದ್ಯಾ ವಿ. ಹಾಲಭಾವಿ
ಉತ್ತರ ಕನ್ನಡ ಜಿಲ್ಲೆಯನ್ನು ಕನ್ನಡಿಗರ ಕಾಶಿ ಎಂದೇ ಬಣ್ಣಿಸಲಾಗಿದೆ. ಇದು ಪ್ರಾಕೃತಿಕ ಸೌಂದರ್ಯದ ಬೀಡು. ಈ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಕುಮಟಾ ರಸ್ತೆಯಲ್ಲಿ ಸುಮಾರು ಎಂಟು ಕಿಮೀ ದೂರ ಸಾಗಿದರೆ ಮಲೆನಾಡಿನ ಹಸಿರು ವನರಾಶಿಯ ಮಧ್ಯೆ ಮೈದಳೆದ ಬೆಟ್ಟವೊಂದು ಕಾಣುತ್ತದೆ. ಇದರ ಶಿರದಲ್ಲಿ ಕನ್ನಡಿಗರೆಲ್ಲರ ಆರಾಧ್ಯ ದೈವ, ನಾಡ ದೇವತೆ ಭುವನೇಶ್ವರಿ ದೇವಿಯ ದೇವಾಲಯವಿದೆ.
ಈ ದೇವಾಲಯವು ಮೂರು ಶತಮಾನಗಳಷ್ಟು ಹಳೆಯದು ಎನ್ನಲಾಗಿದೆ. ಈ ಗಿರಿಗೆ 250 ಮೆಟ್ಟಿಲುಗಳಿದ್ದು, ಹತ್ತಿ ನಿಂತರೆ ದಿವ್ಯ ದೇವಾಲಯ ಅನಾವರಣಗೊಳ್ಳುತ್ತದೆ. ತೆಂಗು ಕಂಗು ತೋಟಗಳು, ನಿತ್ಯ ಹರಿದ್ವರ್ಣ ಕಾಡು ಮರಗಳಿಂದ ಕೂಡಿರುವ ರಮ್ಯ ತಾಣದ ಮಧ್ಯೆ ಈ ದೇಗುಲವು ಸ್ವರ್ಗದಂಥ ಸುಂದರ ತಾಣವಾಗಿದೆ. ಇಂಥ ಕಣ್ಮನ ತಣಿಸುವ ಮಲೆನಾಡಿನ ಸೊಬಗಿನ ಮಧ್ಯೆ, ಕನ್ನಡಿಗರ ಆರಾಧ್ಯ ದೈವ ಭುವನೇಶ್ವರಿ ದೇವಿಯು ಮೂರ್ತಿ ರೂಪದಲ್ಲಿ ವೀರಾಜಮಾನಳಾಗಿದ್ದಾಳೆ. ಹಚ್ಚ ಹಸಿರು ಬೆಟ್ಟ ಭುವನಗಿರಿಯ ಮೇಲೆ ಕುಳಿತು ಕನ್ನಡಿಗರನ್ನೆಲ್ಲಾ ಮನಸಾರೆ ಹರಸುತ್ತಿದ್ದಾಳೆ.

ಭುವನೇಶ್ವರಿ ಇಲ್ಲಿ ನೆಲೆ ನಿಂತಿರುವ ಕಾರಣಕ್ಕೆ ಈ ಬೆಟ್ಟವು ಭುವನಗಿರಿ ಎನ್ನುವ ಹೆಸರನ್ನು ಪಡೆದುಕೊಂಡಿದೆ. ಭುವನೇಶ್ವರಿ ಹೆಸರು ದೇವಿಯನ್ನು ಒಂದು ರಾಜ್ಯ ಅಥವಾ ರಾಷ್ಟ್ರಕ್ಕೆ ಸೀಮಿತಗೊಳಿಸಿಲ್ಲ, ಬದಲಿಗೆ ಭುವನ ಅಂದರೆ ಭೂಮಿಗೆ, ಈಶ್ವರಿ ಎಂದರೆ ಒಡತಿ ಎಂದರ್ಥ. ಹಾಗಾಗಿ ಭುವನೇಶ್ವರಿ ಭೂಮಿಗೆ ಒಡತಿಯಾಗಿದ್ದಾಳೆ.
ಇಲ್ಲಿನ ದೇವಾಲಯವೂ ಪ್ರಕೃತಿ ಪ್ರಿಯರಿಗೆ ಹಾಗೂ ಆಧ್ಯಾತ್ಮಿಕತೆಯ ಆರಾಧಕರಿಗೆ ಅತ್ಯಂತ ಹೇಳಿ ಮಾಡಿಸಿದ ಸ್ಥಳವಾಗಿದೆ. ಇಲ್ಲಿ ದೇವಿಯನ್ನು ವರ್ಷದ ಎಲ್ಲ ದಿನಗಳಲ್ಲೂ ಅಭಿಷೇಕ, ಆರತಿ, ನೈವೇದ್ಯ, ಮೊದಲಾದ ಧಾರ್ಮಿಕ ವಿಧಿವಿಧಾನಗಳಿಂದ ಪೂಜಿಸಲಾಗುತ್ತದೆ. ಇಲ್ಲಿ ಗಣಪತಿ, ಗೋಪಾಲಕೃಷ್ಣ, ನಂದಿಕೇಶ್ವರ, ನಾಗದೇವತೆಗಳ ದೇವಸ್ಥಾನಗಳೂ ಇವೆ.
ದೇವಾಲಯಕ್ಕಿದೆ ದಿವ್ಯ ಇತಿಹಾಸ
ದೇವಾಲಯದ ಇತಿಹಾಸವು ಕನ್ನಡದ ಮೊದಲ ರಾಜವಂಶವಾದ ಕದಂಬರ ಕಾಲಕ್ಕೆ ಕರೆದೊಯ್ಯುತ್ತದೆ. ಹೌದು, ಕದಂಬರ ಕಾಲದಲ್ಲಿ ಈ ದೇವಾಲಯದ ನಿರ್ಮಾಣ ಕಾರ್ಯು ಆರಂಭವಾಗಿತ್ತು. ಆದರೆ ಪೂರ್ಣವಾಗಲಿಲ್ಲ. ಬದಲಿಗೆ ಬಿಳಗಿ ಸಾಮ್ರಾಜ್ಯದ ಕೊನೆಯ ಅರಸ ಬಸವೇಂದ್ರರು ಈ ದೇವಾಲಯಕ್ಕೆ ಕಾಯಕಲ್ಪ ನೀಡಿ ಪರಿಪೂರ್ಣಗೊಳಿಸಿದರು ಎಂದು ಹೇಳಲಾಗಿದೆ. ಇದಕ್ಕೆ ಸಾಕಷ್ಟು ಪುರಾವೆಗಳೂ ದೊರೆತಿವೆ. ಈ ದೇವಾಲಯದ ಹತ್ತಿರದಲ್ಲಿ ತಿಳಿ ನೀರಿನ ಕೊಳ ಇದೆ. ಈ ನೀರನ್ನು ದೇವಸ್ಥಾನದ ಪೂಜಾ ಕೈಂಕರ್ಯಗಳಿಗೆ ಮಾತ್ರ ಬಳಸಿಕೊಳ್ಳಲಾಗುತ್ತದೆ. ಇದರ ಹೊರತಾಗಿ ಅನ್ಯ ಕರ್ಮಗಳಿಗೆ ಇಲ್ಲಿನ ನೀರನ್ನು ಬಳಸಲಾಗುವುದಿಲ್ಲ.
ಕರ್ನಾಟಕದ ನಾಡ ಅದಿದೇವತೆ ಭುವನೇಶ್ವರಿಗೆಂದೇ ಮೀಸಲಾಗಿರುವ ದೇವಾಲಯಗಳು ರಾಜಯದಲ್ಲಿ ಸಿಗುವುದು ಬೆರಳೆಣಿಕೆಯಷ್ಟು ಮಾತ್ರ. ಅಂಥವುಗಳ ಸಾಲಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭುವನಗಿರಿಯ ಭುವನೇಶ್ವರಿ ದೇವಾಲಯವು ಅಗ್ರಮಾನ್ಯವಾಗಿದೆ. ನಿಸರ್ಗ ಸೌಂದರ್ಯದ ಜತೆಗೆ ದೇವಿಯ ದರ್ಶನಕ್ಕೆ ಇದೊಂದು ಸುಂದರ ಸ್ಥಳವಾಗಿದೆ…