ನೋಡಬನ್ನಿ ಜ್ಯೋತಿರ್ಲಿಂಗ-ವಾರಕ್ಕೊಮ್ಮೆ ಶಿವ ದರ್ಶನ-3
ಕಳೆದ ವಾರದ ಸಂಚಿಕೆಯಲ್ಲಿ ಗುಜರಾತ್ನ ಕಾಠಿಯಾವಾಡದಲ್ಲಿರುವ ಸೋಮನಾಥ ದೇವಾಲಯದಲ್ಲಿನ ಜ್ಯೋತಿರ್ಲಿಂಗ ದರ್ಶನ ಮಾಡಿಸಿದ್ದೆವು. ಈ ವಾರ ಮಹಾರಾಷ್ಟ್ರದ ನಾಸಿಕ್ನ ತ್ರಯಂಬಕೇಶ್ವರನ ದರ್ಶನ ಮಾಡಿಸಲಿದ್ದೇವೆ. ಇದು ʼನೋಡಬನ್ನಿ ಜ್ಯೋತಿರ್ಲಿಂಗ-ವಾರಕ್ಕೊಮ್ಮೆ ಶಿವ ದರ್ಶನʼದ ಮೂರನೇ ಜ್ಯೋತಿರ್ಲಿಂಗ.
ಭಾರತದಲ್ಲಿ ಹನ್ನೆರಡು ಶಿವಸ್ಥಾನಗಳಿವೆ. ಅದನ್ನು ಹನ್ನೆರಡು ಜ್ಯೋತಿರ್ಲಿಂಗಗಳು ಎಂದು ಕರೆಯಲಾಗುತ್ತದೆ. ಉತ್ತರ ಭಾರತದಿಂದ ದಕ್ಷಿಣ ಭಾರತದವರೆಗೂ ಸಾಕಷ್ಟು ಶಿವನ ದೇವಾಲಯಗಳಿವೆ. ಆದರೆ ಈ ಹನ್ನೆರಡು ಜ್ಯೋತಿರ್ಲಿಂಗಗಳಿಗೆ ಅದರದ್ದೇ ಆದ ಮಹತ್ವ ಮತ್ತು ವಿಶೇಷತೆಯಿದೆ. ಶೈವ ಭಕ್ತರ ಪಾಲಿಗೆ ಅದು ಪವಿತ್ರ ಕ್ಷೇತ್ರ. ಜ್ಯೋತಿರ್ಲಿಂಗದಲ್ಲಿ ನೆಲೆಸಿರುವ ಶಿವನು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎಂಬ ನಂಬಿಕೆಯಿದೆ. ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಶಿವನು ಜ್ಯೋತಿಯ ರೂಪದಲ್ಲಿ ಇರುತ್ತಾನೆ ಎಂದು ಹೇಳಲಾಗುತ್ತದೆ. ಜ್ಯೋತಿರ್ಲಿಂಗವು ಮಹಾದೇವನ ಸ್ವಯಂಭೂ ಅವತಾರವಾಗಿದ್ದು, ಭಗವಾನ್ ಶಿವನ ಜ್ಯೋತಿ ಗೋಚರಿಸುವಲ್ಲೆಲ್ಲಾ ಜ್ಯೋತಿರ್ಲಿಂಗವನ್ನು ಸ್ಥಾಪಿಸಲಾಗಿದೆ.

ನಾಸಿಕ್‌ನ ತ್ರ್ಯಂಬಕೇಶ್ವರ
ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ತ್ರಿಂಬಕ್ ಪಟ್ಟಣದಲ್ಲಿರುವ ಪವಿತ್ರ ತ್ರಯಂಬಕೇಶ್ವರವು ದೇವಾಲಯ 12 ಜ್ಯೋತಿರ್ಲಿಂಗಗಳಲ್ಲಿ ಒಂದು. ಇದು ನಾಸಿಕ್ ನಗರದಿಂದ ಸರಿ ಸುಮಾರು 28 ಕಿ.ಮೀ. ದೂರದಲ್ಲಿ ಗೋದಾವರಿ ನದಿಯ ಉಗಮಸ್ಥಾನದ ಬಳಿಯಿದೆ. ಶಿವ ದೇವಾಲಯವಿರುವ ಈ ಕ್ಷೇತ್ರವು ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದು ಎನ್ನಲಾಗುತ್ತದೆ. ಸಮೀಪದಲ್ಲಿನ ಬ್ರಹ್ಮಗಿರಿ ಬೆಟ್ಟಸಾಲಿನಲ್ಲಿ ಉಗಮಿಸುವ ಗೋದಾವರಿ ನದಿಯು ಭಾರತ ಜಂಬೂದ್ವೀಪದ ಅತ್ಯಂತ ಉದ್ದವಾದ ನದಿಯಾಗಿದೆ. ತ್ರಯಂಬಕೇಶ್ವರದ ಕುಶಾವರ್ತ ಎಂಬ ಕುಂಡದಿಂದ ಮುಂದೆ ಗೋದಾವರಿಯ ಹರಿವು ಸ್ಪಷ್ಟವಾಗುವುದರಿಂದ ಈ ಸ್ಥಾನವನ್ನು ಹಿಂದೂ ಭಕ್ತರು ಪವಿತ್ರವೆಂದು ಭಾವಿಸಿ ಪುಣ್ಯಸ್ನಾನ ಮಾಡುತ್ತಾರೆ. ತ್ರಯಂಬಕೇಶ್ವರದ ವಿಶೇಷತೆ ಎಂದರೆ ಇಲ್ಲಿನ ಜ್ಯೋತಿರ್ಲಿಂಗವು ಮೂರು ಮುಖಗಳನ್ನು ಹೊಂದಿದ್ದು ಈ ಮುಖಗಳು ಬ್ರಹ್ಮ, ವಿಷ್ಣು ಮತ್ತು ಶಿವನ ಪ್ರತೀಕವಾಗಿವೆ.ಇಡೀ ದೇವಾಲಯವು ಕಪ್ಪು ಕಲ್ಲಿನಿಂದ ನಿರ್ಮಿತವಾಗಿದ್ದು, ಸುಂದರವಾದ ವಾಸ್ತುಶಿಲ್ಪವನ್ನು ಹೊಂದಿದೆ. ಈ ದೇವಾಲಯವನ್ನು ಮೊಘಲ್ ದೊರೆ ಔರಂಗಜೇಬ್ ನಾಶಪಡಿಸಿದ ನಂತರ, ಪೇಶ್ವಾ ಬಾಲಾಜಿ ಬಾಜಿ ರಾವ್ ಅವರು ಪುನರ್ನಿರ್ಮಾಣ ಮಾಡಿದರು ಎನ್ನಲಾಗಿದೆ.