ಭಂಡಾರದ ಒಡೆಯ... ಭಕ್ತರ ಕಾಯುವ ಗುಡದಯ್ಯ
ಮಾಲತೇಶ ದೇವರ ಕಾರ್ಣಿಕವಾಣಿ ಪ್ರತಿವರ್ಷ ಆಯುಧ ಪೂಜೆ ಸಮಯದಲ್ಲಿ ನಡೆಯುತ್ತದೆ. ಈ ವೇಳೆ ದೇವಸ್ಥಾನದ ಗೊರವಯ್ಯನವರು ಬಿಲ್ಲನ್ನೇರಿ ಮೇಲೆ ನಿಂತು ನಾಡಿನ ಭವಿಷ್ಯವನ್ನು ಭಕ್ತರಿಗೆ ಹೇಳುತ್ತಾರೆ. ಈ ಕಾರ್ಣಿಕವಾಣಿ ನಾಡಿನ ಭವಿಷ್ಯವಾಣಿ ಎಂಬುದು ಜನರ ನಂಬಿಕೆ. ರೈತರಿಗೆ ಮಳೆ- ಬೆಳೆಯ ಮುನ್ಸೂಚನೆ.
- ಪರಶುರಾಮ ಎಸ್ ಡಿ. ಹಾವೇರಿ
ಏಳು ಕೋಟಿ, ಏಳು ಕೋಟಿ ಎಂದಾಕ್ಷಣ ನಮಗೆಲ್ಲ ಥಟ್ಟನೆ ನೆನಪಿಗೆ ಬರುವುದು ಉತ್ತರ ಕರ್ನಾಟಕದ ಸುಪ್ರಸಿದ್ಧ ಐತಿಹಾಸಿಕ ಧಾರ್ಮಿಕ ಸುಕ್ಷೇತ್ರ ಹಾವೇರಿ ಜಿಲ್ಲೆಯ ದೇವಗುಡ್ಡದ ಶ್ರೀ ಮಾಲತೇಶ ದೇವಸ್ಥಾನ.
ದೇವರಗುಡ್ಡದ ಮಾಲತೇಶ ದೇವಸ್ಥಾನವು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಐತಿಹಾಸಿಕ ದೇವಾಲಯವಾಗಿದೆ. ಇದು ನಿರಂತರವಾಗಿ ಭಕ್ತರ ಶ್ರದ್ಧಾ, ಭಕ್ತಿಯ ಪೂಜಾ ಕೇಂದ್ರವಾಗಿದೆ. ಈ ದೇವರಿಗೆ ಮಾಲಕಾಂಶ, ಮೈಲಾರಲಿಂಗೇಶ, ಗುಡದಯ್ಯ ಹೀಗೆ ವಿವಿಧ ನಾಮಗಳಿವೆ. ಲಕ್ಷಾಂತರ ಭಕ್ತರು ಕರ್ನಾಟಕ ಮತ್ತು ಬೇರೆ ರಾಜ್ಯಗಳಿಂದ ಬಂದು ಪೂಜೆ ಸಲ್ಲಿಸುತ್ತಾರೆ. ವಿಶೇಷವಾಗಿ ಹುಣ್ಣಿಮೆ, ಭಾನುವಾರ ಮತ್ತು ಆಯುಧ ಪೂಜೆ ದಿನಗಳಲ್ಲಿ ಇಲ್ಲಿ ಭಕ್ತರ ದಂಡೇ ಆಗಮಿಸುತ್ತದೆ. ಮಾಲತೇಶ ದೇವರ ಕಾರ್ಣಿಕವಾಣಿ ಪ್ರತಿವರ್ಷ ಆಯುಧ ಪೂಜೆ ಸಮಯದಲ್ಲಿ ನಡೆಯುತ್ತದೆ. ಈ ವೇಳೆ ದೇವಸ್ಥಾನದ ಗೊರವಯ್ಯನವರು ಬಿಲ್ಲನ್ನೇರಿ ಮೇಲೆ ನಿಂತು ನಾಡಿನ ಭವಿಷ್ಯವನ್ನು ಭಕ್ತರಿಗೆ ಹೇಳುತ್ತಾರೆ. ಈ ಕಾರ್ಣಿಕವಾಣಿ ನಾಡಿನ ಭವಿಷ್ಯವಾಣಿ ಎಂಬುದು ಜನರ ನಂಬಿಕೆ. ರೈತರಿಗೆ ಮಳೆ- ಬೆಳೆಯ ಮುನ್ಸೂಚನೆ ನೀಡುವುದರಿಂದ ಮತ್ತು ಇದು ಧಾರ್ಮಿಕ ಕಾರ್ಯಕ್ರಮವಾಗಿರುವುದರಿಂದ ಲಕ್ಷಾಂತರ ಜನರು ಇಲ್ಲಿ ಸೇರುತ್ತಾರೆ. ಕಾರ್ಣಿಕೋತ್ಸವದಲ್ಲಿ ಬಾರುಕೋಲು ಸೇವೆ, ಪಡ್ಡಲಗಿ ಸೇವೆ, ಸರಪಳಿ ಪವಾಡ ಮತ್ತು ಇಷ್ಟಾರ್ಥ ಹರಕೆಯ ಕೈಂಕರ್ಯಗಳು ನಡೆಯುತ್ತವೆ.

ದೇವರಗುಡ್ಡದ ಇತಿಹಾಸ
ಈ ಸ್ಥಳವು ʻಕೃಷ್ಣಗೊಲ್ಲʼರ ಪವಿತ್ರ ಸ್ಥಳವಾಗಿದೆ. ಪ್ರಾಚೀನಕಾಲದಿಂದ ಈ ಜನರು ತುಂಬಾ ಗೌರವಯುತರಾಗಿದ್ದಾರೆ. ದೇವರಗುಡ್ಡದಲ್ಲಿ ಹಿರೇ ಮೈಲಾರ ಕ್ಷೇತ್ರದ ಮಹಾಸ್ವಾಮಿಗಳು ಉಳಿದಿದ್ದ ಕೋಟೆಯಿದೆ. ಈ ಕೋಟೆಯಲ್ಲಿ ಆದಿವಾಸಿ ಬುಡಕಟ್ಟಿನ ಸಂಪ್ರದಾಯದಂತೆ, ಮಹಾಸ್ವಾಮಿಗಳ ಕೌಟುಂಬಿಕ ಐಕ್ಯ ಸ್ಥಳಗಳು, ವೀರಗಲ್ಲುಗಳು ಮತ್ತು ಶಾಸನಗಳು ಕಾಣಿಸಿಕೊಳ್ಳುತ್ತವೆ. ಮಾಲತೇಶ ದೇವಸ್ಥಾನವು ದಸರಾ ಹಬ್ಬಕ್ಕೆ ಪ್ರಸಿದ್ಧವಾಗಿದ್ದು, 9 ದಿನಗಳ ಉಪವಾಸ ವ್ರತ ಮಾಡಿದ ಗೊರವಪ್ಪನವರು ಕಾರ್ಣಿಕ ನುಡಿಯುತ್ತಾರೆ. ದೇವರಗುಡ್ಡದ ಕೋಟೆ ಅವಶೇಷಗಳು, ಶಾಸನ ಮತ್ತು ವೀರಗಲ್ಲುಗಳು ಇದ್ದು, ಇದು ಆದಿವಾಸಿ ಸಂಸ್ಕೃತಿ ಮತ್ತು ಐತಿಹ್ಯದ ಕುರುಹುಗಳಾಗಿ ಉಳಿದಿವೆ.
ದಾರಿ ಹೇಗೆ
ಪುಣೆ- ಬೆಂಗಳೂರು ರಸ್ತೆ (NH-48) ಮಾರ್ಗವಾಗಿ ಹೊರಟರೆ ರಾಣೆಬೆನ್ನೂರು ತಲುಪಿ, ಇಲ್ಲಿಂದ 11 ಕಿಮೀ ದೂರದಲ್ಲಿ ಸಾರ್ವಜನಿಕ ಸಾರಿಗೆ ಅಥವಾ ಖಾಸಗಿ ವಾಹನಗಳ ಮೂಲಕ ದೇವರಗುಡ್ಡವನ್ನು ತಲುಪಬಹುದು. ಇಲ್ಲಿನ ಬಸ್ ನಿಲ್ದಾಣದಿಂದ ಸ್ಥಳೀಯ ರಸ್ತೆ ಸಂಪರ್ಕವು ಸುಗಮವಾಗಿದೆ. ಸಂಚಾರ ಸಮಯ ಸಾಮಾನ್ಯವಾಗಿ ಪ್ರತಿ ದಿನದಲ್ಲಿ ಬೆಳಗ್ಗೆ 6 ಗಂಟೆಯಿಂದ ಸಾಯಂಕಾಲ 6-7 ಗಂಟೆಗಳವರೆಗೆ ಸಾರ್ವಜನಿಕ ಬಸ್ ಮತ್ತು ವಾಹನ ಸಂಚಾರ ಸುಗಮವಾಗಿರುತ್ತದೆ. ವಿಶೇಷ ದಿನಗಳಲ್ಲಿ ಸಂಚಾರ ವ್ಯವಸ್ಥೆಗಳಲ್ಲಿ ವ್ಯತ್ಯಯಗಳಾಗಬಹುದು. ಹೀಗಾಗಿ ಪ್ರಸಿದ್ಧ ಕಾರ್ಣಿಕೋತ್ಸವ ಮತ್ತು ಜಾತ್ರೆಯ ವೇಳೆ ಸಂಚಾರ ವ್ಯವಸ್ಥೆಯ ಬದಲಾಣೆಗಳನ್ನು ಪರಿಶೀಲಿಸುವುದು ಉತ್ತಮ.