• ರಮಣ್ ಶೆಟ್ಟಿ ರೆಂಜಾಳ

ಭಾರತದ ಪ್ರಸಿದ್ಧ ಪವಿತ್ರ ಕ್ಷೇತ್ರಗಳಲ್ಲೊಂದು ತಿರುಪತಿ ತಿಮ್ಮಪ್ಪ ದೇವಾಲಯ. ಸುಮಾರು ಇಪ್ಪತ್ನಾಲ್ಕು ವರ್ಷಗಳ ಬಳಿಕ ಇತ್ತೀಚೆಗೆ ಅಲ್ಲಿಗೆ ಭೇಟಿ ನೀಡುವ ಯೋಗ ನನಗೆ ಸಿಕ್ಕಿತ್ತು.

ಜುಲೈ 12ರ ಸಂಜೆ ತಿರುಪತಿ ತಲುಪಿದ ನಮಗೆ. ಮರುದಿನ ನಮ್ಮ ದರ್ಶನದ ಸಮಯ ಮಧ್ಯಾಹ್ನ 1 ಗಂಟೆಗೆ ಇತ್ತು. ಬೆಳಗ್ಗೆ ತಿರುಪತಿಯಿಂದ ತಿರುಮಲಕ್ಕೆ ಪ್ರಯಾಣ ಬೆಳೆಸಿದೆವು. ತಿರುಪತಿಯಿಂದ ತಿರುಮಲಕ್ಕೆ 18 ಕಿಮೀ ದೂರವಿದೆ. ತಿರುಮಲ ಬೆಟ್ಟದ ರಸ್ತೆ ಅಚ್ಚುಕಟ್ಟಾಗಿದೆ. ಬೆಟ್ಟದ ಮೇಲೇರುವಾಗ ರಸ್ತೆಯಿಂದ/ ರಸ್ತೆಬದಿಯ ವ್ಯೂ ಪಾಯಿಂಟ್‌ನಿಂದ ತಿರುಪತಿ ಪಟ್ಟಣದ ನೋಟ ಮನಸೂರೆಗೊಳಿಸುತ್ತದೆ. ಹೆಬ್ಬಾವಿನಂತೆ ಸಾಗುವ ಮಾರ್ಗವು ರಾಷ್ಟ್ರೀಯ ಸಂರಕ್ಷಿತ ಅಭಯಾರಣ್ಯದ ಮಧ್ಯದಲ್ಲಿದೆ. ಹಾಗಾಗಿ ವಾನರ ಸಂಕುಲ, ಹುಲಿ, ಆನೆಗಳಂಥ ವನ್ಯ ಮೃಗಗಳನ್ನೂ ವೀಕ್ಷಿಸಬಹುದು.

ಇದನ್ನೂ ಓದಿ: ಗುಮ್ಮಟಗಳ ನಗರಿಯಲ್ಲಿ ಒಂದು ಸುತ್ತು

ವ್ಯೂ ಪಾಯಿಂಟ್‌ನಿಂದ ಕೊಂಚ ಮುಂದಕ್ಕೆ ತಿರುವೊಂದರಲ್ಲಿ ಡ್ರೈವರ್ ಕಾರು ನಿಲ್ಲಿಸಿ ಎಡಗಡೆಗೆ ಎತ್ತರಕ್ಕೆ ನಿಂತಿದ್ದ ಕಡಿದಾದ ಬಂಡೆಯೊಂದನ್ನು ತೋರಿಸಿ ಅದನ್ನು ಸೂಕ್ಷ್ಮವಾಗಿ ಗಮನಿಸುವಂತೆ ತಿಳಿಸಿದ. ಫೊಟೋ ಕ್ಲಿಕ್ಕಿಸುವಂತೆಯೂ ಹೇಳಿದ. ನಾವು ಹಾಗೇ ಮಾಡಿದ ನಂತರ ಮೊಬೈಲ್‌ನಲ್ಲಿ ಫೊಟೋ ತೆಗೆದು ನೋಡಿದರೆ ಆ ಬಂಡೆಯಲ್ಲಿ ತಿರುಪತಿ ಶ್ರೀನಿವಾಸನ ಮುಖದ ಒಂದು ಪಾರ್ಶ್ವ ಗೋಚರವಾಗುವುದನ್ನು ತೋರಿಸಿದ.

ದೇವಸ್ಥಾನವನ್ನು ತಲುಪಿದ ಮೇಲೆ ಸುರಕ್ಷತಾ ತಪಾಸಣೆ ಮುಗಿಸಿ ನಿರೀಕ್ಷಣಾ ಕೊಠಡಿಗಳ ಮೂಲಕ ಹಾದು ಹೋಗಬೇಕು. ಯಾತ್ರಾರ್ಥಿಗಳ ನಿಬಿಡತೆ ನೋಡಿ ನಿರ್ದಿಷ್ಟ ಸಂಖ್ಯೆಯ ಕೊಠಡಿಗಳ ಬಳಿಕ ವಿಶೇಷ ದರ್ಶನದ ಯಾತ್ರಾರ್ಥಿಗಳನ್ನೂ ಸಾಮಾನ್ಯ ಸರದಿಯಲ್ಲಿ ಸೇರಿಸುತ್ತಾರೆ. ನಂತರ 10 - 15 ನಿಮಿಷಗಳಲ್ಲಿ ದೇವರ ದರ್ಶನ ಪಡೆಯಬಹುದು. ದೇವರ ಕುರಿತು ಸಾಮೂಹಿಕ ಘೋಷಣೆಗಳೊಂದಿಗೆ ತಿಮ್ಮಪ್ಪನ ದರ್ಶನ ಪಡೆದಾಗ ಭಾವಪರವಶತೆಯಿಂದ ಮನ ಪುನೀತವಾಗುತ್ತದೆ. ಕಲಿಯುಗದಲ್ಲಿ ಮಾನವನನ್ನು ತೊಂದರೆಗಳಿಂದ ರಕ್ಷಿಸಲು ಮಹಾವಿಷ್ಣು ವೆಂಕಟೇಶ್ವರನಾಗಿ ಇಲ್ಲಿ ನೆಲೆ ನಿಂತಿದ್ದಾನೆ ಎಂಬುದ ಇಲ್ಲಿನ ನಂಬಿಕೆ.

'ಏಳು ಕೊಂಡಲ ವಾಡಾ' ಅಥವಾ 'ಸಪ್ತ ಗಿರಿ ವಾಸಾ' ಎಂದೆಲ್ಲಾ ಕರೆಯಿಸಿಕೊಳ್ಳುವ ತಿರುಪತಿ ತಿಮ್ಮಪ್ಪ ನೆಲೆಸಿರುವುದು ತಿರುಮಲದ ಏಳು ಬೆಟ್ಟಗಳ ಮೇಲೆ! ತೆಲುಗಿನಲ್ಲಿ ಏಳು ಕೊಂಡಲ ಎಂದರೆ ಏಳು ಬೆಟ್ಟಗಳು. ಈ ಸಪ್ತ ಗಿರಿಗಳಲ್ಲಿ ಪ್ರತಿಯೊಂದಕ್ಕೂ ಮೈರೋಮಾಂಚನಗೊಳ್ಳುವ ಪುರಾಣ ಕಥೆಗಳಿವೆ. 'ವೃಷಭಾದ್ರಿ ಬೆಟ್ಟ' ಸಪ್ತ ಗಿರಿಗಳಲ್ಲಿ ಮೊದಲನೆಯದಾಗಿದೆ. ವೃಷಭ ಅಂದರೆ ಶಿವನ ವಾಹನ ನಂದಿ. ಪರಮಾತ್ಮನಿಗೆ ತನ್ನ ಹೆಗಲ ಮೇಲೆ ಸ್ಥಾನ ಕೊಟ್ಟ ಕಾರಣ ಈ ಬೆಟ್ಟಕ್ಕೆ ವೃಷಾಭಾದ್ರಿ ಎಂಬ ಹೆಸರು ಬಂದಿದೆ. ನಾಮಕ್ಕೆ ಅನ್ವರ್ಥವೆಂಬಂತೆ ಗಿರಿಯು ನಂದಿ ರೂಪದಲ್ಲಿದ್ದು, ಸಾಕ್ಷಾತ್ ನಂದಿಯೇ ಮಲಗಿರುವಂತೆ ಗೋಚರಿಸುತ್ತದೆ!

Untitled design

ಎರಡನೆಯ ಬೆಟ್ಟ ಅಂಜನಾದ್ರಿ. ಪರಮಾತ್ಮನ ಪರಮ ಭಕ್ತ ಆಂಜನೇಯನ ಬೆಟ್ಟ. ರಾಮನೆಲ್ಲೋ ಅಲ್ಲಿ ಹನುಮನೂ ಇರುವುದರಿಂದ ಸಪ್ತಗಿರಿಯಲ್ಲಿ ಅಂಜನಾದ್ರಿ ಬೆಟ್ಟಕ್ಕೆ ಪೂಜ್ಯ ಸ್ಥಾನವಿದೆ. 'ನೀಲಾದ್ರಿ' ನಾಮಾಂಕಿತ ಮೂರನೆಯ ಬೆಟ್ಟವು ನೀಲಾದೇವಿಯ ರೂಪವಾಗಿದೆ. ತಿರುಪತಿ ತಿಮ್ಮಪ್ಪನ ಪರಮ ಭಕ್ತೆಯಾಗಿರುವ ನೀಲಾದೇವಿಯು ಸದಾ ಪರಮಾತ್ಮನ ಸೇವೆ ಮಾಡುತ್ತಾ ಆತನ ಪದತಳದಲ್ಲೇ ನೆಲೆಸುವ ಸಲುವಾಗಿ ತಪಸ್ಸು ಮಾಡಿದಾಗ ಭಕ್ತಿಗೆ ಮೆಚ್ಚಿ ದೇವರು ದರ್ಶನ ನೀಡಿ ನೀಲಾದ್ರಿ ಬೆಟ್ಟದ ರೂಪದಲ್ಲಿರಲು ಅವಕಾಶ ಮಾಡಿಕೊಟ್ಟರು ಎಂಬುದು ಪುರಾಣ ಐತಿಹ್ಯವಾಗಿದೆ.

'ಗರುಡಾದ್ರಿ' ಅಥವಾ ಗರುಡಾಚಲಂ ವಿಷ್ಣುವಿನ ವಾಹನ ಗರುಡನ ಬೆಟ್ಟ. ನಾಲ್ಕನೆಯದಾಗಿದೆ. ಭಗವಂತನ ಸಂಪೂರ್ಣ ಆವಾಸಸ್ಥಾನವನ್ನು ಹೆಗಲ ಮೇಲೆ ಕೂರಿಸಿಕೊಂಡಿರುವ ಸಾಕ್ಷಾತ್ ಗರುಡನ ಮೂರ್ತಿದರ್ಶನ, ತಿರುಮಲದಿಂದ ಕೆಳಗಿಳಿಯುವಾಗ ಗರುಡಾದ್ರಿ ಬೆಟ್ಟದಲ್ಲಿ ಭಕ್ತರಿಗಾಗುತ್ತದೆ. ತನ್ನ ದೇಹವನ್ನೇ ವಿಷ್ಣುವಿನ ಹಾಸಿಗೆಯನ್ನಾಗಿಸಿರುವ ಆದಿಶೇಷನ ಬೆಟ್ಟವೇ ಐದನೆಯ 'ಶೇಷಾದ್ರಿ' ಅಥವಾ ಶೇಷಾಚಲಂ ಬೆಟ್ಟವಾಗಿದೆ. ಆರನೇ ಬೆಟ್ಟವಾಗಿರುವ 'ನಾರಾಯಣಾದ್ರಿ'ಯು ಸಾಕ್ಷಾತ್ ಪರಮಾತ್ಮನ ಸ್ವರೂಪವಾಗಿದೆ. ಇಲ್ಲೇ ತಿರುಪತಿ ತಿಮ್ಮಪ್ಪನ ಪಾದವಿದೆ ಎಂದು ಪುರಾಣಗಳು ಹೇಳುತ್ತವೆ.

ಸಪ್ತಗಿರಿಗಳಲ್ಲಿ ಏಳನೆಯದಾಗಿರುವ 'ವೆಂಕಟಾದ್ರಿ' ವಿಷ್ಣು ಪರಮಾತ್ಮನ ಪ್ರತಿರೂಪವಾಗಿದೆ!

ಮುಖ್ಯಮಂದಿರದ ಉತ್ತರಕ್ಕೆ1.5 ಎಕರೆ ವಿಸ್ತೀರ್ಣದ ಸ್ವಾಮಿ ಪುಷ್ಕರಣಿಯು ಗಮನ ಸೆಳೆಯುತ್ತದೆ. ಅಲ್ಲಿ ವರ್ಷಕ್ಕೊಮ್ಮೆ ತೆಪ್ಪೋತ್ಸವ ನೆರವೇರುತ್ತದೆ. ಎಲ್ಲವನ್ನೂ ನೋಡಿ ಅಂದು ನಮ್ಮ ಹೊಟೇಲ್‌ಗೆ ಮರಳಿದೆವು.

ಮರುದಿನ ಸಂಜೆ 5 ಗಂಟೆಗೆ ನಮ್ಮ ವಿಮಾನ ನಿಗದಿಯಾಗಿತ್ತು. ಹೊಟೇಲಿನ ಚೆಕ್‌ ಔಟ್ ಮಧ್ಯಾಹ್ನ 12 ಗಂಟೆಗೆ ಮಾಡಬೇಕಿತ್ತು. ಹಾಗಾಗಿ ನಡುವಿನ ಮೂರು ಗಂಟೆ ಸಮಯ ಉಪಯೋಗಿಸಿಕೊಳ್ಳಲು ಕಪಿಲತೀರ್ಥಂ ಮತ್ತು ಹರೇ ರಾಮ ಹರೇ ಕೃಷ್ಣ ಮಂದಿರಗಳಿಗೆ ಭೇಟಿ ನೀಡಿದೆವು.

ಕಪಿಲತೀರ್ಥಂ:

ಕಪಿಲತೀರ್ಥಂನಲ್ಲಿ ಕಪಿಲೇಶ್ವರ ದೇವಸ್ಥಾನ ಹಾಗೂ ಕಪಿಲತೀರ್ಥ ಕೆರೆಗಳಿವೆ. ಇದು ತಿರುಮಲ ತಿರುಪತಿ ದೇವಳದ ಅಧೀನದಲ್ಲಿರುವ ಏಕೈಕ ಶೈವ ಕ್ಷೇತ್ರವಾಗಿದೆ. ಕಪಿಲತೀರ್ಥ ಕೆರೆಯು ಮೂರು ದಿಕ್ಕುಗಳಲ್ಲಿ ಶೇಷಾಚಲಂ ಬೆಟ್ಟದ ದುರ್ಗಮ ಕೋಟೆಯಂಥ ಅಂಚುಗಳಿಂದ ಸುತ್ತುವರಿಯಲ್ಪಟ್ಟಿದೆ. ಬೆಟ್ಟದಿಂದ ಧುಮುಕುವ ಜಲಪಾತದಿಂದ ಇದು ಸೃಷ್ಟಿಯಾಗಿದೆ. ಇದರ ವಿಹಂಗಮ ನೋಟವು ಮನಸಿನಲ್ಲಿ ಭಕ್ತಿ, ಪ್ರಸನ್ನತೆ ಹಾಗೂ ಏಕಾಗ್ರತೆ ಮೂಡಿಸುತ್ತದೆ. ಪೂರ್ವ ದಿಕ್ಕಿನ ಗುಹೆಯಲ್ಲಿ ಶ್ರೀ ಕಪಿಲೇಶ್ವರ ಮಹಾ ಶಿವಲಿಂಗಂ ಇದೆ.

Untitled design (13)

ಕಪಿಲೇಶ್ವರ ಸ್ವಾಮಿಯು ಶ್ರೀನಿವಾಸ ಮತ್ತು ಪದ್ಮಾವತಿಯ ವಿವಾಹ ನೆರವೇರಿಸಿದರು ಎಂದು ಪೌರಾಣಿಕ ಕಥೆ ಇದೆ. ಹಾಗಾಗಿ ಯಾತ್ರಿಕರು ಮೊದಲು ಇಲ್ಲಿ ತೀರ್ಥಸ್ನಾನ ಪೂಜೆ ಮಾಡಿ ನಂತರ ತಿರುಮಲ ವೆಂಕಟೇಶ್ವರನ ದರ್ಶನ ಮಾಡಬೇಕೆಂದು ಸ್ಥಳಪುರಾಣ ಹೇಳುತ್ತದೆ. ಈ ಪವಿತ್ರ ಕ್ಷೇತ್ರವನ್ನು ಸಂದರ್ಶಿಸಿದ ಬಳಿಕವೇ ಭಕ್ತಾದಿಗಳ ತಿರುಪತಿ ಯಾತ್ರೆ ಪೂರ್ಣಗೊಳ್ಳುತ್ತದೆಯೆಂಬ ಪ್ರತೀತಿಯಿದೆ.

ಹರೇ ರಾಮ ಹರೇ ಕೃಷ್ಣ‌ ಮಂದಿರ:

ಹರೇ ರಾಮ ಹರೇ ಕೃಷ್ಣ‌ ಮಂದಿರಕ್ಕೆ ನಾವು ಮಧ್ಯಾಹ್ನ 1ಗಂಟೆಯ ಭಜನೆ ಮತ್ತು ಪೂಜೆಯ ಸಮಯಕ್ಕೆ ಸರಿಯಾಗಿ ತಲುಪಿದೆವು. ಎತ್ತರ ಪ್ರದೇಶದಲ್ಲಿ ತಲೆಯೆತ್ತಿ ನಿಂತಿರುವ ಈ ಸ್ಫಟಿಕ ಶುಭ್ರ ಮಂದಿರದೊಳಗೆ ಗೋಪಿಕೆಯರ ಸಹಿತ ಶ್ರೀ ಕೃಷ್ಣನ ವಿಗ್ರಹವಿದೆ. ಇಲ್ಲೂ ಲಡ್ಡು ಪ್ರಸಾದವಿದೆ. ವಿವಿಧ ಭಾಷೆಗಳ ಪುಸ್ತಕ ಪ್ರದರ್ಶನ ಮತ್ತು ಮಾರಾಟವಿದೆ. ನಾವೂ ಇಲ್ಲಿ ಕನ್ನಡ ಭಗವದ್ಗೀತೆಯ ಪುಸ್ತಕ ಖರೀದಿಸಿದೆವು. ಹೊರಗಿನ ಆವರಣದಲ್ಲಿ ತುಳಸೀವನವಿದೆ, ಗೋಪೂಜೆಗಾಗಿ ಗೋವೂ ಇದೆ!

ಭಕ್ತಿ ವೇದಾಂತ ಸ್ವಾಮಿ ಪ್ರತಿಪಾದರಿಂದ ಈ ಸುಂದರ ಮಂದಿರ ಸ್ಥಾಪಿಸಲ್ಪಟ್ಟಿದೆ. ಎಲ್ಲವನ್ನು ನೋಡಿ ನೇರ ವಿಮಾನ ನಿಲ್ದಾಣ ತಲುಪಿ ಮರಳಿ ಹೈದರಾಬಾದ್ ಮುಖಾಂತರ ಮುಂಬೈಗೆ ಹಿಂತಿರುಗಿದೆವು.