ಗುಮ್ಮಟಗಳ ನಗರಿಯಲ್ಲಿ ಒಂದು ಸುತ್ತು
ಇಬ್ರಾಹಿಂ ರೋಜಾವನ್ನು ದಕ್ಷಿಣದ ತಾಜ್ ಮಹಲ್ ಎಂದೇ ಕರೆಯುತ್ತಾರೆ. ಇದರ ವಿನ್ಯಾಸ ತಾಜ್ ಮಹಲ್ ವಿನ್ಯಾಸಕ್ಕೆ ಸ್ಫೂರ್ತಿಯಾಗಿತ್ತು ಎನ್ನಲಾಗಿದೆ. 2ನೇ ಇಬ್ರಾಹಿಂ ಆದಿಲ್ ಶಾ ಸಮಾಧಿ ಮತ್ತು ಮಸೀದಿಗಳಿರುವ ಈ ಅದ್ಭುತ ಕಟ್ಟಡಗಳು ವಿಜಯಪುರ ನಗರದ ಪಶ್ಚಿಮ ಹೊರವಲಯದಲ್ಲಿವೆ. ಮಿನಾರ್‌ಗಳಿಂದ ಆವೃತವಾಗಿದ್ದು, ಒಂದೇ ಹಾಸುಕಲ್ಲಿನಲ್ಲಿ ನಿರ್ಮಿತ ಈ ಕಟ್ಟಡಗಳ ಸೌಂದರ್ಯ ವರ್ಣನಾತೀತವಾಗಿದೆ. ದೇಶದಲ್ಲೇ ಪ್ರಮಾಣ ಬದ್ಧ ಇಸ್ಲಾಂ ಸ್ಮಾರಕವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ!
- ರಮಣ್ ಶೆಟ್ಟಿ ರೆಂಜಾಳ
ವಿಜಯಪುರ ನಗರವನ್ನು 'ಸ್ಮಾರಕಗಳ ನಗರ'ವೆಂದು ಕರ್ನಾಟಕ ಪ್ರವಾಸೋದ್ಯಮ ನಿಗಮ ಗುರುತಿಸಿದೆ. ಇತ್ತೀಚೆಗೆ ಆ ಐತಿಹಾಸಿಕ ನಗರವನ್ನು ವೀಕ್ಷಿಸಿ ಬಂದ ನನಗೆ ಈ ಹೆಸರು ಅನ್ವರ್ಥಕವೆಂದು ಅನಿಸಿದೆ. ಆದಿಲ್ ಶಾಹಿ ಮನೆತನದ ಆಳ್ವಿಕೆಯ ಕಾಲದಲ್ಲಿ ಅಲ್ಲಿ ಅಷ್ಟೊಂದು ಗುಂಬಜ ಸಹಿತ ಸ್ಮಾರಕಗಳನ್ನು ನಿರ್ಮಿಸಲಾಗಿದೆ!
ಭಾರತದ ಅತಿ ಪ್ರಮುಖ ಪ್ರವಾಸಿ ತಾಣಗಳಲ್ಲಿ ವಿಜಯಪುರ ಜಿಲ್ಲೆಯೂ ಒಂದು. ಉತ್ತರದಲ್ಲಿ ಭೀಮಾ ಮತ್ತು ದಕ್ಷಿಣದಲ್ಲಿ ಕೃಷ್ಣಾ ನದಿಗಳಿಂದ ಆವೃತವಾಗಿದ್ದು, ಒಣಹವೆಯನ್ನು ಹೊಂದಿದೆ. ಜಿಲ್ಲಾಕೇಂದ್ರ ವಿಜಯಪುರ ನಗರ 15-16ನೇ ಶತಮಾನದ ಇಂಡೋ ಸಾರ್ಸೆನಿಕ್ ಶಿಲ್ಪ ಕಲೆಯ ವೈಭವದ ಸ್ಮಾರಕಗಳಿಂದ ಜಗತ್ಪ್ರಸಿದ್ಧವಾಗಿದೆ. ಕಲ್ಯಾಣದ ಚಾಲುಕ್ಯರಿಂದ ಸ್ಥಾಪಿಸಲ್ಪಟ್ಟ ವಿಜಯಪುರವು ಕ್ರಮೇಣ ದೆಹಲಿಯ ಅಲ್ಲಾವುದ್ದೀನ್ ಖಿಲ್ಜಿಯ ನಿಯಂತ್ರಣದಲ್ಲಿತ್ತು. ನಂತರ ಬೀದರ್‌ನ ಬಹಮನಿ ಸುಲ್ತಾನರ ಆಡಳಿತಾವಧಿಯಲ್ಲಿ ವಿಜಯಪುರದ ರಾಜ್ಯಪಾಲನಾಗಿದ್ದ ಯೂಸುಫ್ ಆದಿಲ್ ಖಾನ್ 1489ನೇ ಇಸವಿಯಲ್ಲಿ ತಾನು ಸ್ವತಂತ್ರ ಎಂದು ಘೋಷಿಸಿಕೊಂಡ. ಆದಿಲ್ ಶಾಹಿ ವಂಶದ ಆಡಳಿತಕ್ಕೆ ಚಾಲನೆ ನೀಡಿದ. ಆದಿಲ್ ಶಾಹಿ ಸುಲ್ತಾನರಿಂದ ವಿಜಯಪುರದಲ್ಲಿ ನಿರ್ಮಾಣವಾದ ವಿವಿಧ ಗಾತ್ರದ ಗುಮ್ಮಟಗಳ ಅನೇಕ ಕಟ್ಟಡ, ಮಸೀದಿ, ಅರಮನೆ, ಕೋಟೆ-ಕೊತ್ತಲಗಳು ವಿಜಯಪುರಕ್ಕೆ ಅಪೂರ್ವ ರಾಜ ವೈಭವವನ್ನು ತಂದುಕೊಟ್ಟವು.
ಮಳೆಗಾಲ ಆರಂಭದ ಸಮಯ, ಒಂದು ರಾತ್ರಿ ಗದಗ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಮುಂಬಯಿಯಿಂದ 456 ಕಿಮೀ ದೂರದ ವಿಜಯಪುರದ ಕಡೆಗೆ ಮೊಟ್ಟಮೊದಲ ಬಾರಿಗೆ ಕುತೂಹಲದೊಂದಿಗೆ ಪಯಣ ಆರಂಭಿಸಿದೆ. ಏಳೂವರೆಗೆ ರೈಲು ವಿಜಯಪುರ ನಿಲ್ದಾಣ ತಲುಪಿತು. ಮುಂಗಡ ಕಾಯ್ದಿರಿಸಿದ್ದ ಕೆಎಸ್‌ಟಿಡಿಸಿಯ ವಸತಿಗೃಹದಲ್ಲಿ ಮಧ್ಯಾಹ್ನ ಚೆಕ್‌ಇನ್ ಇತ್ತು. ಹಾಗಾಗಿ ನಿಲ್ದಾಣದಿಂದ ಸನಿಹವೇ ಇರುವ ಇತಿಹಾಸ ಪ್ರಸಿದ್ಧ ಗೋಲಗುಂಬಜ್ ನೋಡಲು ಹೊರಟೆ. ಅಲ್ಲಿ ತಲುಪುತ್ತಲೇ ಒಬ್ಬ ಟಾಂಗಾವಾಲಾ ʻಇಲ್ಲಿ ಮ್ಯೂಸಿಯಂ 9ರ ನಂತರ ಆರಂಭವಾಗುತ್ತದೆ. ಆದ್ದರಿಂದ ನೀವೀಗ ಇಲ್ಲಿನ ಇತರ ಪ್ರೇಕ್ಷಣೀಯ ಸ್ಮಾರಕಗಳನ್ನು ಸಂದರ್ಶಿಸಿ ನಂತರ ಗೋಲಗುಂಬಜ್‌ಗೆ ಬನ್ನಿʼ ಎಂದ. ಸರಿಯೆಂದು 300 ರುಪಾಯಿಗೆ ನಿಗದಿಗೊಳಿಸಿ ಟಾಂಗಾ ಏರಿ ಒಂದೊಂದಾಗಿ ಸ್ಮಾರಕಗಳನ್ನು ವೀಕ್ಷಿಸಿದೆ.

ಜಾಮೀಯಾ ಮಸೀದಿ
ವಿಸ್ತೀರ್ಣದಲ್ಲಿ ದೇಶದ ಎರಡನೆಯ ದೊಡ್ಡ ಮಸೀದಿ. ಒಂದನೇ ಅಲಿ ಆದಿಲ್ ಶಾ ಇದನ್ನು ಕಟ್ಟಿಸಿದ. ಚೌಕಾಕಾರದ ಕಟ್ಟಡ, ತನ್ನ ಅದ್ಭುತ ವಾಸ್ತು ವಿನ್ಯಾಸದಿಂದ ಗಮನ ಸೆಳೆಯುತ್ತದೆ. ಒಂಬತ್ತು ದ್ವಾರಗಳನ್ನು ಹೊಂದಿದ್ದು, ಅರ್ಧ ಚಂದ್ರಾಕೃತಿಯ ಕಮಾನುಗಳು ಮತ್ತು ಮಧ್ಯೆದಲ್ಲಿ ಗೋಪುರ ಇದೆ. ಕಲ್ಲು ಚಪ್ಪಡಿಗಳ ನೆಲಹಾಸಿನ ಪ್ರಾರ್ಥನಾ ಮಂದಿರವು ಒಮ್ಮೆಗೆ 2250 ಭಕ್ತರಿಗೆ ಅವಕಾಶ ಕಲ್ಪಿಸಬಲ್ಲದು. ಮಸೀದಿಯ ಒಳಾಂಗಣದ ಗೋಡೆಯ ಕಮಾನು ಮೆಹ್ರಾಬ್‌ನ ಕೈಬರವಣಿಗೆಯಲ್ಲಿ ಕೆತ್ತಿದ ಕುರಾನ್ ಸಾಲುಗಳನ್ನು ಬಂಗಾರದ ನೀರಿನಿಂದ ಅಲಂಕರಿಸಲಾಗಿದೆ! ಇರಾನ್ ಎಂಜಿನಿಯರ್ ಮಲಿಕ್ ಯಾಕೂದ್ ಇದರ ವಾಸ್ತುಶಿಲ್ಪಿ.
ಜೋಡು ಗುಮ್ಮಟ
ಇಲ್ಲಿರುವ ಜೋಡು ಗುಮ್ಮಟಗಳಲ್ಲಿ ಒಂದು 1680ರಲ್ಲಿ ನಿರ್ಮಿಸಲ್ಪಟ್ಟ ಧಾರ್ಮಿಕ ಗುರು ಹಜ್ರತ್ ಅಬ್ದುಲ್ ರಜಾಕ್ ಖಾದ್ರಿಯವರ ಗೋರಿ, ಇನ್ನೊಂದು 1686ರಲ್ಲಿ ನಿರ್ಮಾಣವಾದ ವಝೀರ್ ಖಾವಸ್ ಖಾನ್‌ರ ಗೋರಿ. ಇಲ್ಲಿಗೆ ಭಕ್ತಾದಿಗಳು ಹರಕೆ ಹೊತ್ತು ಬರುತ್ತಾರೆ; ಹತ್ತಿಪ್ಪತ್ತು ದಿನ ವಾಸ್ತವ್ಯ ಹೂಡುತ್ತಾರೆ; ತೆಂಗಿನ ಕಾಯಿ, ಹೂವು ಅರ್ಪಿಸಿ ಅತ್ತರ್ ಚಿಮುಕಿಸಿ ಪ್ರಾರ್ಥಿಸುತ್ತಾರೆ. ಅಕ್ಟೋಬರ್‌ನಲ್ಲಿ 4 ದಿನಗಳ ಉರೂಸ್ ಆಚರಿಸಲ್ಪಡುತ್ತದೆ.

ತಾಜ್ ಬಾವಡಿ
2ನೇ ಇಬ್ರಾಹಿಂ ಆದಿಲ್ ಶಾ ಇದನ್ನು ತನ್ನ ಪತ್ನಿ ರಾಣಿ ತಾಜ್ ಸುಲ್ತಾನ್ ನೆನಪಿಗೆ ಕಟ್ಟಿಸಿದ. ಇದು 52ಅಡಿ ಆಳವಿರುವ ಕೊಳವಾಗಿದೆ. ಈವರೆಗೆ ಇಲ್ಲಿನ ನೀರು ಕಡಿಮೆಯಾಗಿಲ್ಲ. ಅಂದು ಇಲ್ಲಿಂದಲೇ ವಿಜಯಪುರಕ್ಕೆ ತುರ್ತು ನೀರಿನ ಸರಬರಾಜಾಗುತ್ತಿತ್ತು ಎನ್ನಲಾಗಿದೆ. ಈ ಕೊಳದ ಪ್ರವೇಶಕ್ಕೆ ಸಾರ್ವಜನಿಕರಿಗೆ ನಿಷೇಧವಿದೆ.

ಮಾಲಿಕ್-ಎ-ಮೈದಾನ್
ಇದೊಂದು ಬೃಹತ್ ಫಿರಂಗಿ. ಶೇರ್-ಎ-ಬುರ್ಜ್ ಎಂದು ಕರೆಯಬಹುದು. ಸಿಂಹ ಗೋಪುರ ವೇದಿಕಯಲ್ಲಿ ಇಡಲಾಗಿದೆ. 1549ರಲ್ಲಿ ಅಹ್ಮದ್ ನಗರದಲ್ಲಿ ಎರಕಹೊಯ್ದು ತಯಾರಿಸಲಾದ ಈ ಫಿರಂಗಿಯನ್ನು ಟರ್ಕಿಯ ಮಾಲಿಕ್ ಹಸನ್ ಎಂಬಾತನಿಂದ ಮಾಡಿಸಿದವನು ಮೊದಲನೆಯ ಬುರ್ ಹನ್ ನಿಜಾಂ ಶಾ. ಪಂಚಲೋಹ ನಿರ್ಮಿತ ಈ ತೋಪು ಸುಮಾರು 5 ಅಡಿ ಹೊರವ್ಯಾಸ, 3 ಅಡಿ ಒಳವ್ಯಾಸ, ನಾಲ್ಕೂವರೆ ಮೀಟರ್ ಉದ್ದವಿದೆ. 55ಟನ್ ತೂಕವಿದೆ ಎನ್ನಲಾಗಿದೆ. ಫಿರಂಗಿಯ ಹೊರಮೈ ಮೇಲೆ ಅರೇಬಿಕ್ ಮತ್ತು ಪರ್ಷಿಯನ್ ಭಾಷೆಗಳ ಕೆತ್ತನೆಗಳಿವೆ.

ಬಾರಾ ಕಮಾನ್
ಬಾದ್ ಶಾ, ಸರದಾರರು, ಸಾಧು-ಸಂತರು ಇತ್ಯಾದಿ ಜನರ ಅಭಿರುಚಿಗೆ ತಕ್ಕಂತೆ ನಿರ್ಮಿಸಿಕೊಂಡ ಸಮಾಧಿಗಳಲ್ಲಿ ಇದೂ ಒಂದು. ಇದರ ಮೂಲ ಹೆಸರು 'ಅಲಿ ರೋಜಾ'. ದಂತಕಥೆ ಪ್ರಕಾರ ಎರಡನೇ ಅಲಿ ಆದಿಲ್ ಶಾ ತನ್ನ ಅಪ್ಪ ಮತ್ತು ತಾತನನ್ನು ಮೀರಿಸಲು ವೈಭವೋಪೇತ 'ಅಲಿ ರೋಜಾ'ವನ್ನು ಕಟ್ಟಿಸಲಾರಂಭಿಸಿದ. ಆದರೆ ಅದು ಪೂರ್ತಿಯಾಗಲಿಲ್ಲ. ಅರೆ ಕೆಲಸಕ್ಕೆ ಪರ್ಯಾಯ ಶಬ್ದವಾಗಿ ʻಬಾರಾ ಕಮಾನ್ʼ ಎಂದಾಯಿತು.
ಗೋಳಗುಮ್ಮಟ
ಗೋಳಗುಮ್ಮಟ ಭಾರತೀಯ ಕಟ್ಟಡ ನಿರ್ಮಾಣ ಶೈಲಿಯ ಅತ್ಯುತ್ತಮ ಉದಾಹರಣೆ. ಮೊಹಮ್ಮದ್ ಆದಿಲ್ ಶಾ ತನಗೆಂದೇ ರಚಿಸಿದ ಸಮಾಧಿ ಇದು. ಇದರ ಗುಮ್ಮಟ ರೋಮ್‌ನ ಸೈಂಟ್ ಪೀಟರ್ಸ್ ಚರ್ಚ್ ಗುಮ್ಮಟದ ನಂತರ ವಿಶ್ವದ ಅತಿದೊಡ್ಡ ಗುಮ್ಮಟ! ಸುತ್ತ ಸುಂದರ ಕೊಳ, ಉದ್ಯಾನಗಳಿಂದ ಕೂಡಿದೆ. ಮಧ್ಯೆ 205 ಅಡಿಗಳ ಚೌಕಾಕಾರದ ಪ್ರಾಂಗಣವನ್ನು ಆವರಿಸಿ, 100ಅಡಿಗೂ ಎತ್ತರದ 4 ಗೋಡೆಗಳು, ಮೇಲೆ ಕಮಲದ ದಳಗಳ ವಿನ್ಯಾಸ ಎಲ್ಲ ಅಗಾದತೆಗಳು ಕಣ್ಸೆಳೆಯುತ್ತವೆ.
ಪಾದರಕ್ಷೆ ಕಳಚಿ ಎದುರಿನ ಬಾಗಿಲಿನ ಮೂಲಕ ಒಳಹೊಕ್ಕು ಬಲಗಡೆ ಓಣಿಯ ಮೂಲಕ ಸಾಗಿ, 15ಮೆಟ್ಡಿಲುಗಳ ಏಳು ಅಂತಸ್ತುಗಳನ್ನೇರಿ, ಗುಮ್ಮಟಕ್ಕೆ ಇರುವ ಎಂಟು ದ್ವಾರಗಳಲ್ಲಿ ಯಾವುದರ ಮೂಲಕವೂ ಪ್ರವೇಶಿಸಬಹುದು. 38 ಮೀಟರುಗಳ ವ್ಯಾಸವಿರುವ ಈ ಗುಮ್ಮಟದ ಒಳ ಸುತ್ತಲ್ಲಿ ಹನ್ನೊಂದೂವರೆ ಅಡಿ ಅಗಲದ 'ವಿಸ್ಪರಿಂಗ್ ಗ್ಯಾಲರಿ' ಹೆಸರಿನ ಒಳಾಂಗಣವಿದೆ. ಇಲ್ಲಿ ಒಂದು ಪಿಸುಮಾತೂ ಸುಮಾರು ಹತ್ತು ಬಾರಿ ಅನುರಣಿಸುತ್ತದೆ.
ಆಲಮಟ್ಟಿ ಅಣೆಕಟ್ಟು

ಕೃಷ್ಣಾ ನದಿಗೆ ಈ ಅಣೆಕಟ್ಟು ನಿರ್ಮಿಸಲಾಗಿದೆ. ಕೃಷ್ಣಾ ಭಾಗ್ಯ ಜಲ ನಿಗಮದ ಸುಪರ್ದಿಯಲ್ಲಿನ ಜಲ ವಿದ್ಯುತ್ ಯೋಜನೆಯಾಗಿದ್ದು, 'ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ'ವೆಂದು ಹೆಸರಿಸಲಾಗಿದೆ. 123 ಟಿಎಮ್‌ಸಿ ನೀರು ಶೇಖರಣಾ ಸಾಮರ್ಥ್ಯ ಹೊಂದಿದೆ. ಅಣೆಕಟ್ಟು ವಿಜಯಪುರ ಜಿಲ್ಲೆಯಲ್ಲಿದ್ದರೂ ಜಲಾಶಯಕ್ಕಾಗಿ ಬಾಗಲಕೋಟೆಯ ಕೆಲವು ಪ್ರದೇಶಗಳು ಮುಳುಗಡೆಯಾಗಿವೆ. ಅಣೆಕಟ್ಟಿಗೆ ಹೊಂದಿಕೊಂಡಂತೆ ಏಳು ಸ್ತರಗಳಲ್ಲಿ ಮೊಘಲ್ ಗಾರ್ಡನ್, ರೋಸ್ ಗಾರ್ಡನ್, ಫ್ರೆಂಚ್/ಇಟಾಲಿಯನ್ ಗಾರ್ಡನ್, ರಾಕ್ ಗಾರ್ಡನ್, ಸಿಲ್ವರ್ ಲೇಕ್ ಇತ್ಯಾದಿ ಆಕರ್ಷಣೀಯ ಸ್ಥಳಗಳಿವೆ. ಮಕ್ಕಳ ಆಟಿಕೆಗಳ ಜತೆಗೆ ಬೋಟಿಂಗ್ ವ್ಯವಸ್ಥೆಯೂ ಇಲ್ಲಿದೆ. ಸಂಗೀತ ನೃತ್ಯ ಕಾರಂಜಿಯ ವೈಭವ ರಾತ್ರಿ ಏಳು ಗಂಟೆಗೆ ಮನಸೂರೆಗೊಳಿಸುತ್ತದೆ!
ಇವುಗಳ ಜತೆಗೆ ನಗರದ ಹೊರವಲಯದಲ್ಲಿ ಸಹಸ್ರಫಣಿ ಪಾರ್ಶ್ವನಾಥ ಬಸದಿ, ತೊರವಿ ನರಸಿಂಹ ದೇವಾಲಯ, ಶ್ರೀ ಸಿದ್ದೇಶ್ವರ ದೇವಾಲಯ, 770 ಲಿಂಗಗಳ ಗುಡಿ, ಶಿವಗಿರಿ, ತೊರವಿ ಲಕ್ಷ್ಮಿ ನರಸಿಂಹ ದೇವಾಲಯಗಳಿವೆ. ವಿಜಯಪುರದಿಂದ ಕೆಲವೇ ಕಿಮೀಗಳ ದೂರದಲ್ಲಿ ಬಸವಣ್ಣನವರ ಹುಟ್ಟೂರು ಬಸವನ ಬಾಗೇವಾಡಿ, ಭಾರತದ ಮೂರನೆಯ ಅತಿ ಎತ್ತರದ ಶಿವನ ಪ್ರತಿಮೆ ಇರುವ ' ಶಿವಗಿರಿ' ಇತ್ಯಾದಿ ಪ್ರೇಕ್ಷಣೀಯ ತಾಣಗಳು ವಿಜಯಪುರದ ಮೆರುಗನ್ನು ಹೆಚ್ಚಿಸುತ್ತಿವೆ.