- ಅನಿಲ್ ಹೆಚ್.ಟಿ.

ಕುಶಾಲನಗರದಿಂದ ಮಡಿಕೇರಿಗೆ ತೆರಳುವ ಹೆದ್ದಾರಿಯಲ್ಲಿ 1 ಕಿಮೀ ಸಾಗಿದರೆ ರಸ್ತೆ ಪಕ್ಕದಲ್ಲಿನ ವಿಶಾಲವಾದ ಕೆರೆಯಲ್ಲಿ ನಯನ ಮನೋಹರವಾದ ಪುಪ್ಪರಾಶಿ ಕಂಗೊಳಿಸುತ್ತಿರುವುದು ಕಂಡು ಬರುತ್ತದೆ.

ಈ ಕೆರೆಯಲ್ಲಿ ಅರಳಿ ನಿಂತ ಸಾವಿರಾರು ಪುಪ್ಪರಾಶಿಯನ್ನು ಕಣ್ತುಂಬಿಕೊಳ್ಳಲು ಈಗ ಪ್ರವಾಸಿಗರು, ಸ್ಥಳೀಯರು ರಸ್ತೆ ಬದಿಯಲ್ಲಿ ಕಿಕ್ಕಿರಿದು ಸೇರುತ್ತಿದ್ದು, ಫೊಟೋಗಳ ಸುರಿಮಳೆಯಾಗುತ್ತಿದೆ.

lotus pond kushalnagar 3

ಕುಶಾಲನಗರದ ತಾವರೆಕೆರೆ ಎಂದೇ ಖ್ಯಾತವಾದ ಈ ಕೆರೆಯಲ್ಲಿ ಅರಳಿ ನಿಂತ ಹೂಗಳು ತಾವರೆ ಅಲ್ಲವೇ ಅಲ್ಲ. ತಾವರೆಕೆರೆ ಎಂಬುದು ಹೆಸರಿಗೆ ಮಾತ್ರ ಸೀಮಿತವಾದಂತಿದೆ. ತಾವರೆಕೆರೆಯಲ್ಲಿಯೇ ತಾವರೆಗಳು ಮಾಯವಾಗಿವೆ. ಕೆರೆತುಂಬಾ ಕಲುಷಿತ ನೀರು ತುಂಬಿಕೊಂಡಿದ್ದು, ನೀರಿನ ಪದರದಲ್ಲಿ ಪಾಚಿ ಉತ್ಪತ್ತಿಯಾಗಿ ಪಾಚಿಯಿಂದ ಸೖಷ್ಟಿಯಾದ ನೀಲಿವರ್ಣದ ಹೂಗಳ ರಾಶಿ ಕಂಗೊಳಿಸುವಂತಾಗಿದೆ.

ಸುಮಾರು ಮೂರು ಎಕರೆಗಿಂತಲೂ ಹೆಚ್ಚು ವಿಸ್ತಾರವುಳ್ಳ ತಾವರೆಕೆರೆಗೆ ಕಳೆದ ಹಲವು ವರ್ಷಗಳಿಂದ ಸಮೀಪದ ವಾಣಿಜ್ಯ ಕಟ್ಟಡಗಳಿಂದ ಹೊರ ಸೂಸುವ ಶೌಚ ಸೇರಿದಂತೆ ಕಲುಷಿತ ತ್ಯಾಜ್ಯ ಸೇರಿ ತಾವರೆ ಗಿಡಗಳು ಮಾಯವಾಗಿ ಪಾಚಿ ಬೆಳೆದಿದ್ದು ಅವುಗಳಲ್ಲಿ ನೀಲಿ ಬಣ್ಣದ ಹೂಗಳು ಅರಳಿ ನಿಂತಿರುವುದು ದಾರಿ ಹೋಕರ ಆಕರ್ಷಣೆಗೆ ಕಾರಣವಾಗಿದೆ. ಪ್ರವಾಸಿಗರಂತೂ ಕೆರೆಯ ಹೂವುಗಳನ್ನು ಇದು ಪ್ರವಾಸಿ ತಾಣವೇನೋ ಎಂಬಂತೆ ನೋಡುತ್ತಾ ಆನಂದಿಸುತ್ತಿದ್ದಾರೆ.

ಕೆರೆ ಬಳಿ ವಾಹನಗಳನ್ನು ನಿಲ್ಲಿಸಿ ಸೆಲ್ಫಿ ತೆಗೆದುಕೊಳ್ಳುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಲೇ ಇರುವುದರಿಂದಾಗಿ ಪೊಲೀಸರು ವಾಹನ ಸಂಚಾರಕ್ಕೆ ಕ್ರಮಕೈಗೊಳ್ಳುವಂತಾಗಿದೆ.

ಕೊಡಗಿನಲ್ಲಿ ಹೊಸ ಪ್ರವಾಸೀ ತಾಣದ ಅಗತ್ಯಕ್ಕೆ ಎಲ್ಲಾ ರೀತಿಯಲ್ಲಿಯೂ ತಾವರೆಕೆರೆ ಪೂರಕವಾಗಿದೆ. ಪ್ರವಾಸೋದ್ಯಮ ಇಲಾಖೆ ಈ ನಿಟ್ಟಿನಲ್ಲಿ ಗಮನ ನೀಡಿದ್ದೇ ಆದಲ್ಲಿ ತಾವರೆಕೆರೆ ಕೊಡಗಿನ ಹೊಸ ಪ್ರವಾಸೀ ತಾಣವಾದೀತು. ಸದ್ಯಕ್ಕೆ, ಕೊಳಚೆ ನೀರಿನಲ್ಲಿ ಅರಳಿದರೂ ಮನಸೆಳೆಯುತ್ತಿರುವ ಪುಪ್ಪ ಬೆಡಗಿಯರನ್ನು ಕಣ್ತುಂಬಿಕೊಳ್ಳುವುದೇ ಸೂಕ್ತ.

lotus pond kushalnagar 2

ಹನಿಟ್ರ್ಯಾಪ್ ಹೂವು!

ಸೌಂದರ್ಯದಿಂದ ಈ ಪುಪ್ಪಸಾಗರ ಮನಸೆಳೆಯುತ್ತಿದ್ದರೂ ಇವು ಅಪಾಯಕಾರಿ ಹೂವುಗಳಾಗಿದೆ. ಟೆರರ್ ಆಫ್ ಬೆಂಗಾಲ್ ಎಂಬ ವೈಜ್ಞಾನಿಕ ಹೆಸರಿರುವ ಈ ಹೂವುಗಳು ತ್ಯಾಜ್ಯದಲ್ಲಿಯೇ ಅರಳಿ ನಳನಳಿಸುತ್ತವೆ. ದಕ್ಷಿಣ ಅಮೆರಿಕ ಮೂಲದ ಈ ಜಲಸಸ್ಯ ವಿಶ್ವವ್ಯಾಪಿ ಅಪಾಯಕಾರಿಯಾಗಿ ಬೆಳೆಯುತ್ತಿವೆ. ಈ ಹೂವು ಬೆಳೆದ ಪ್ರದೇಶದಲ್ಲಿ ಜಲಚರಗಳು ನಾಶವಾಗುತ್ತವೆ. ಕೆರೆಯಲ್ಲಿದ್ದ ತಾವರೆಗಳು ಈಗಾಗಲೇ ನಾಶವಾಗಿರುವುದೂ ಇದಕ್ಕೆ ಉದಾಹರಣೆಯಾಗಿರುವಂತಿದೆ. ನೋಡಲು ಅಂದವಾಗಿದ್ದರೂ ಈ ಪುಪ್ಪಬೆಡಗಿಯರು ಹನಿಟ್ರ್ಯಾಪ್ ನಂತೆ ಅಪಾಯಕಾರಿ!