- ಯತೀಶ ಎಸ್

ಬೆಂಗಳೂರು ಎಂದರೆ ಪ್ರತಿಯೊಬ್ಬರಿಗೂ ನಂದಿಬೆಟ್ಟ ನೆನಪಾಗುತ್ತದೆ. ಒಂದು ದಿನದ ಪಿಕ್ ನಿಕ್ ಗೂ ಅಲ್ಲಿಗೆ ಹೋಗಿ ಬರುತ್ತಾರೆ. ಆದರೆ ನಂದಿಬೆಟ್ಟಕ್ಕಿಂತಲೂ ಅದ್ಭುತವಾದ ತಾಣವೊಂದು ಬೆಂಗಳೂರಿನಿಂದ ಕೇವಲ 50 ಕಿ.ಮೀ ದೂರದಲ್ಲಿದೆ. ಆ ಸ್ಥಳವನ್ನು ದಕ್ಷಿಣ ಕಾಶಿ ಎನ್ನುತ್ತಾರೆ. ಶಿವನ ಭಕ್ತರ ಪಾಲಿಗೆ ಅದು ದೈವಿಕ ಸ್ಥಳ. ಚಾರಣಪ್ರಿಯರಿಗೆ ಹೇಳಿ ಮಾಡಿಸಿದ ತಾಣ. ಕಡಿದಾದ ಬೆಟ್ಟ ಹತ್ತುತ್ತಾ, ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳುತ್ತಾ, ಕೆನ್ನೆ ಚುಂಬಿಸುವ ತುಂತುರು ಮಳೆ ಹನಿಗಳನ್ನು ಒರೆಸಿಕೊಳ್ಳುತ್ತಾ, ಅಲ್ಲಲ್ಲಿ ಸಿಗುವ ದೇಗುಲಗಳಿಗೆ ಶಿರಬಾಗುತ್ತಾ ನಡೆದರೆ ಭಕ್ತಿಯ ಹಾದಿಯನ್ನು ತಲುಪಬಹುದು. ಅಲ್ಲಿ ಏಕಕಾಲಕ್ಕೆ ಭಕ್ತಿಯ ಪರಾಕಾಷ್ಠೆ ಮತ್ತು ಚಾರಣ ಮುಗಿಸಿದ ಸಂಭ್ರಮವನ್ನು ಮೆರೆಯಬಹುದು.

shivagange betta

ಸಾಹಸಿ ಪ್ರವೃತ್ತಿಯ ನಾನು ಪ್ರತಿ ಬಾರಿಯೂ ಶಿವಗಂಗೆ ಬೆಟ್ಟವನ್ನು ಲೀಲಾಜಾಲವಾಗಿ ಹತ್ತಿ ಇಳಿಯುತ್ತೇನೆ. ನಾನು ಶಿವನ ಅಪ್ಪಟ ಭಕ್ತನೂ ಹೌದು. ಚಾರಣಿಗನೂ ಹೌದು. ಸದಾ ಭಕ್ತಿ ಮತ್ತು ಸಾಹಸಿ ಭಾವದಲ್ಲಿ ಮಿಂದೇಳುತ್ತೇನೆ. ಶಿವರಾತ್ರಿಯಂದು ಅಹೋರಾತ್ರಿ ಜಾಗರಣೆ ಮಾಡುತ್ತಾ ಬೆಟ್ಟವನ್ನು ಹತ್ತುವಾಗ ಉಂಟಾಗುವ ಪುಳಕ ಹೇಳತೀರದ್ದು. ಅಂದು ಎಲ್ಲೆಲ್ಲೂ ಶಿವಮಯ. ಎಲ್ಲರ ಬಾಯಲ್ಲೂ ಶಿವನಾಮ ಸ್ತೋತ್ರ. ಸಣ್ಣ ಲಾಟೀನು ಹಿಡಿದು ಅಥವಾ ಮೊಬೈಲ್‌ ಟಾರ್ಚ್‌ ಆನ್‌ ಮಾಡಿಕೊಂಡು ಆ ದುರ್ಗಮವಾದ ಹಾದಿಯಲ್ಲಿ ಹೆಜ್ಜೆಯಿಡುತ್ತಾ ಸಾಗಬೇಕಾಗುತ್ತದೆ. ಇತ್ತ ಶಿವರಾತ್ರಿಯ ಚಳಿ ಬೇರೆ. ದೇಹ ಥರಥರ ನಡುಗುತ್ತಿರುತ್ತದೆ. ಕುಳಿರ್ಗಾಳಿ ಸೋಕಿ ಬೆಂಡಾಗಿ ಬಿಟ್ಟಿರುತ್ತೇವೆ. ಕೊನೆಗೆ ಬೆಟ್ಟದ ತುದಿಯೇರಿದಾಗ ಸಂತೃಪ್ತ ಭಾವ. ನಾನು ಶಕ್ತಿ ಸ್ವರೂಪಿ ಶಿವನ ಮುಂದೆ ಕೈ ಮುಗಿದು ನಿಂತಾಗಲೆಲ್ಲ ಭಕ್ತಿ ಮತ್ತು ಭಾವ ಪರವಶನಾಗುತ್ತೇನೆ. ಶಿವಗಂಗೆ ನನ್ನ ಪಾಲಿಗೆ ಸದಾ ವಿಸ್ಮಯದ ತಾಣ. ಅಲ್ಲಿನ ಪವಾಡ ಕತೆಗಳನ್ನು ಕೇಳುವಾಗಲೆಲ್ಲ ಬೆರಗಾಗುತ್ತೇನೆ. ಶಿವಗಂಗೆಯೊಂದಿಗೆ ನನ್ನ ಬಾಲ್ಯದ ನಂಟೂ ಇದೆ. ಅದು ನನ್ನ ಊರು ಎಂಬ ಆಪ್ತಭಾವ ನನಗೆ ಸದಾ ಇದ್ದೇ ಇದೆ.

ಧಾರ್ಮಿಕ ಕ್ಷೇತ್ರ

ಸಮುದ್ರ ಮಟ್ಟದಿಂದ ಸರಿ ಸುಮಾರು 1380 ಅಡಿ ಎತ್ತರದಲ್ಲಿರುವ ಈ ಬೆಟ್ಟವನ್ನು ಬಹಳ ಆರಾಮವಾಗಿ ಹತ್ತಿ ಇಳಿಯಬಹುದು. ಆದರೆ ಒಂದಿಷ್ಟು ಮುನ್ನೆಚ್ಚರಿಕೆ ಕ್ರಮಗಳಿರಬೇಕು. ಸಾಹಸಿ ಗುಣವನ್ನೂ ಮೈಗೂಡಿಸಿಕೊಂಡವರಾಗಿರಬೇಕು. ಶಿವಗಂಗೆ ತಲುಪುತ್ತಿದ್ದಂತೆ ನಮಗೆ ಕಾಣಸಿಗುವ ದೇವರೇ ಶ್ರೀ ಗಂಗಾಧರೇಶ್ವರ. ಅಲ್ಲಿನ ಶಿವಲಿಂಗದ ವಿಗ್ರಹದ ಮೇಲೆ ತುಪ್ಪವನ್ನು ಹಚ್ಚಿದರೆ ಸ್ವಲ್ಪ ಸಮಯದ ನಂತರ ಅದು ಬೆಣ್ಣೆಯಾಗಿ ಬದಲಾಗುತ್ತದೆ. ಇದು ಶತಮಾನಗಳಿಂದಲೂ ಎಷ್ಟೋ ಜನರನ್ನು ಆಶ್ಚರ್ಯ ಚಕಿತರನ್ನಾಗಿ ಮಾಡಿದೆ. ಬೆಟ್ಟ ಹತ್ತಿದ ಸುಸ್ತಿನಲ್ಲಿ ಏದುಸಿರು ಬಿಡುತ್ತಾ ಮೆಟ್ಟಿಲನ್ನೇರಿ ಮುಂದೆ ನಡೆದರೆ ʼಒಳಕಲ್ಲು ತೀರ್ಥʼ ಎನ್ನುವ ಮತ್ತೊಂದು ಸ್ಥಳವಿದೆ. ಇಲ್ಲಿ ವರ್ಷದ ಅಷ್ಟು ದಿನವೂ ನೀರು ಸಿಗುತ್ತದೆ ಎನ್ನುವ ಪ್ರತೀತಿಯಿದೆ. ಆ ಒಳಕಲ್ಲಿನಲ್ಲಿ ಕೈ ಹಾಕಿದರೆ ಕೇವಲ ಅದೃಷ್ಟವಂತರಿಗೆ ಅಥವಾ ದೇವರ ಅನುಗ್ರಹ ಇರುವವರಿಗೆ ಮಾತ್ರ ನೀರು ಸಿಗುತ್ತದೆ ಎನ್ನುವುದು ಎಲ್ಲರ ನಂಬಿಕೆ. ನಸೀಬು ಇದ್ದವನಿಗೆ ನೀರು ಸಿಗುತ್ತದೆ ಎನ್ನುತ್ತಾರೆ ಅಲ್ಲಿನ ಸ್ಥಳೀಯರು. ವಿಜ್ಞಾನಕ್ಕೂ ಸವಾಲೊಡ್ಡುವ ಅನೇಕ ಕೌತುಕತೆಗಳನ್ನು ಶಿವಗಂಗೆ ತನ್ನ ಒಡಲಿನಲ್ಲಿರಿಸಿಕೊಂಡಿದೆ. ಇನ್ನು ಇಲ್ಲಿನ ಒಂದು ಸುರಂಗವು ಸೀದಾ ಶ್ರೀರಂಗಪಟ್ಟಣಕ್ಕೆ ಸೇರುತ್ತದೆ ಎಂದೂ ಹೇಳಲಾಗುತ್ತದೆ.

shivagange betta (1)

ಶಾಂತಲಾ ಡ್ರಾಪ್

ಶಿವಗಂಗೆಯಲ್ಲಿ ಶಿವಪಾರ್ವತಿಯರ ಮೂರ್ತಿ ಮತ್ತು ದ್ವಾದಶ ಜ್ಯೋತಿರ್ಲಿಂಗವೂ ಇದೆ. ಕಡಿದಾದ ಬೆಟ್ಟವನ್ನು ಏರುವಾಗ ಎತ್ತರವಾದ ಬಂಡೆಯ ಮೇಲೆ ನಂದಿ ವಿಗ್ರಹವಿದೆ. ಅದೇ ಚಾರಣ ಪ್ರೇಮಿಗಳ ವ್ಯೂ ಪಾಯಿಂಟ್.‌ ಅಲ್ಲಿ ಕಾಲಿಡಲು ಜಾಗವಿಲ್ಲದೆ ಜನರು ನಂದಿಯನ್ನು ಸುತ್ತಲೂ ಪರದಾಡುತ್ತಾರೆ. ಆದರೂ ಛಲ ಬಿಡದೆ ಒಂದು ರೌಂಡ್ ಹಾಕಿ ಆ ಚಿಕ್ಕ ಕಬ್ಬಿಣದ ಮೆಟ್ಟಿಲುಗಳನ್ನು ಇಳಿದು ಮುಂದೆ ನಡೆದರೆ "ಶಾಂತಲಾ ಡ್ರಾಪ್" ಸಿಗುತ್ತದೆ. ಶಾಂತಲಾ ಹೊಯ್ಸಳ ಸಾಮ್ರಾಜ್ಯದ ರಾಜ ವಿಷ್ಣುವರ್ಧನನ ಮುಖ್ಯ ರಾಣಿ. ಮದುವೆಯಾಗಿ ಹಲವು ವರ್ಷಗಳಾದರೂ ಶಾಂತಲೆ ವಿಷ್ಣುವರ್ಧನರಿಗೆ ಮಕ್ಕಳಿರಲಿಲ್ಲ , ಸಿಂಹಾಸನದ ವಿಷಯಕ್ಕೆ ಕಲಹಗಳಾಗಬಾರದು ಎಂಬ ಕಾರಣಕ್ಕೆ ಬೇರೊಬ್ಬ ರಾಣಿಗೆ ಪಟ್ಟಮಹಿಷಿಯ ಸ್ಥಾನವನ್ನು ನೀಡಬೇಕೆಂದು ರಾಜ ವಿಷ್ಣುವರ್ಧನನಲ್ಲಿ ಶಾಂತಲೆ ಹಲವಾರು ಬಾರಿ ಬೇಡಿದರೂ ಆತ ಅದಕ್ಕೆ ಒಪ್ಪಲಿಲ್ಲ. ಈ ಎಲ್ಲಾ ಕಾರಣಗಳಿಂದ ದುಃಖಿತಳಾಗಿ, ಜೀವನದಿಂದ ಬಿಡುಗಡೆ ಹೊಂದಲು ಶಾಂತಲೆಯು ಶಿವಗಂಗೆ ಬೆಟ್ಟದ ಮೇಲಿನಿಂದ ಕೆಳಬಿದ್ದು ಪ್ರಾಣ ಬಿಟ್ಟಳು ಎಂದು ಹೇಳಲಾಗುತ್ತದೆ. ಶಾಂತಲೆ ಪ್ರಾಣಬಿಟ್ಟ ಜಾಗವನ್ನು ಶಾಂತಲಾ ಡ್ರಾಪ್‌ ಎಂದು ಕರೆಯಲಾಗುತ್ತಿದೆ.

ಈ ಬೆಟ್ಟದ ಮತ್ತೊಂದು ವಿಶೇಷವೆಂದರೆ ಒಂದು ದಿಕ್ಕಿನಿಂದ ಬೆಟ್ಟವನ್ನು ನೋಡಿದರೆ ಶಿವಲಿಂಗದಂತೆ, ಇನ್ನೊಂದು ದಿಕ್ಕಿನಿಂದ ಶಿವ ನಂದಿ, ಪಶ್ಚಿಮದಿಂದ ಗಣಪತಿ ಮತ್ತು ಉತ್ತರದಿಂದ ಒಂದು ದೊಡ್ಡ ಸರ್ಪದಂತೆ ಕಾಣುತ್ತದೆ. ಹೀಗೆ ಹೇಳುತ್ತಾ ಹೋದರೆ ಸಾಕಷ್ಟು ವಿಷಯಗಳಿವೆ. ಶಿವಗಂಗೆಯದ್ದು ಎಂದೂ ಮುಗಿಯದ ಅಧ್ಯಾಯ. ಅದರ ಸುತ್ತ ನೂರಾರು ಕತೆಗಳನ್ನು ಹೆಣೆಯಲಾಗಿದೆ. ಆ ಕತೆಗಳನ್ನು ಕೇಳುತ್ತಾ ಬೆರಗಾಗುವ ಸೌಭಾಗ್ಯ ನಮ್ಮದಾಗಲಿ ಅಷ್ಟೇ.

ಒಂದು ದಿನದ ಟ್ರೆಕ್ಕಿಂಗ್‌ಗಾಗಿ ನೂರಾರು ಕಿಲೋಮೀಟರ್ ಗಟ್ಟಲೆ ಹೋಗುವ ಜನರು ಇಲ್ಲೇ ಇರುವ ಶಿವಗಂಗೆಯನ್ನು ಮರೆತಿರೇಕೆ? ಜಗದ ಸೌಂದರ್ಯ ಅಂಗೈನಲ್ಲಿಯೇ ಇದೆ. ಈ ವಾರದ ರಜೆಯಲ್ಲಿ ನೀವು ಶಿವಗಂಗೆ ಬೆಟ್ಟವನ್ನು ಏರಿ.

shivagange betta 1

ಹೋಗುವ ದಾರಿ:

  • ಬೆಂಗಳೂರಿನಿಂದ ತುಮಕೂರು ರಸ್ತೆ ಮಾರ್ಗದಲ್ಲಿ ನೆಲಮಂಗಲ ತಲುಪಬೇಕು.
  • ಅಲ್ಲಿಂದ ಹಾಸನ ರಸ್ತೆಗೆ ತಿರುಗಿದರೆ ಸೋಲೂರ ಬಳಿಕ ಶಿವಗಂಗೆ ಸಿಗುತ್ತದೆ.
  • ಬೆಂಗಳೂರಿನಿಂದ 60 ಕಿ.ಮೀ
  • ಬೈಕು ಮತ್ತು ಕಾರುಗಳ ಮೂಲಕ ತಲುಪಬಹುದು.
  • ವಾಹನಗಳ ನಿಲುಗಡೆಗೆ ಪಾರ್ಕಿಂಗ್‌ ವ್ಯವಸ್ಥೆಯಿದೆ
  • ಚಾರಣ: ಬೆಟ್ಟದ ಬುಡದಿಂದ 2 ಕಿ.ಮೀ