ಹಾಲಿನಂಥ ಬಿಳಿ ಮೋಡಗಳು ಹಸಿರು ಬೆಟ್ಟಗಳನ್ನು ಅಪ್ಪಿಕೊಂಡು ಈ ಸ್ಥಳವನ್ನು ಭೂಮಿಯ ಮೇಲಿನ ಸ್ವರ್ಗವನ್ನಾಗಿ ಮಾಡಿದೆ. ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ, ಹೆತ್ತೂರು ಹೋಬಳಿಯ ಪಶ್ಚಿಮಘಟ್ಟದ ಕೊನೆಯ ಅಂಚಿನಲ್ಲಿರುವ ಗ್ರಾಮ "ಕಾಗಿನಹರೆ". ಹಾಗೆಯೇ ಇದು ಹಾಸನ ಜಿಲ್ಲೆಯ ಕೊನೆಯ ಗ್ರಾಮವಾಗಿದೆ. ಇದೊಂದು ಬ್ಯೂಟಿ ಸ್ಪಾಟ್. ಟ್ರೆಕ್ಕಿಂಗ್ ಎಲ್ಲ ಬೇಡ. ಸುಮ್ಮನೆ ತಣ್ಣನೆಯ ಅದ್ಭುತ ಪ್ರಕೃತಿ ಸೌಂದರ್ಯ ಸವಿಯಬೇಕು.ದೇಹಕ್ಕೆ ದಣಿವಾಗಬಾರದು. ಒಂದೊಳ್ಳೆ ಡ್ರೈವ್ ಹೋಗಿ ಎಂಜಾಯ್ ಮಾಡಿ ಬರಬೇಕು ಎನ್ನುವವರಿಗೆ ಇದು ಹೇಳಿ ಮಾಡಿಸಿದ ಜಾಗ.

kaginahare 1

ಹಸಿರಿನಿಂದ ಕಂಗೊಳಿಸುವ ಇಲ್ಲಿಯ ಬೆಟ್ಟ, ಗುಡ್ಡ, ದಿಣ್ಣೆ ಕಾಡುಗಳ ನಡುವೆ ಆಗಸದಲ್ಲಿ ವಿವಿಧ ಭಂಗಿಗಳಲ್ಲಿ ನರ್ತಿಸಿದಂತೆ ಚಲಿಸುವ ಮೋಡಗಳ ಪ್ರಕೃತಿಯ ಮನಮೋಹಕ ದೃಶ್ಯ ಕಾಗಿನಹರೆಯಲ್ಲಿ ಕಣ್ಣಿಗೆ ಹಬ್ಬವನ್ನು ಉಂಟುಮಾಡುತ್ತದೆ. ಹಸಿರಿನ ಸೀರೆಗೆ ಮೋಡವನ್ನು ನೇಯ್ಗೆ ಹಾಕಿದಂತೆ ಪ್ರಕೃತಿಮಾತೆ ಇಲ್ಲಿ ಕಂಗೊಳಿಸುತ್ತಾಳೆ. ನೈಸರ್ಗಿಕ ಸೌಂದರ್ಯವನ್ನು ಕಣ್ತುಂಬಿಕೊಳ್ಳುವಂತೆ ಇಲ್ಲಿನ ಸೌಂದರ್ಯ ಕೈ ಬೀಸಿ ಕರೆಯುತ್ತದೆ.

"ಆಹಾ! ನಾಕವೆ ನಮ್ಮ ಲೋಕಕೆ ಕಳಚಿ ಬಿದ್ದಿದೆ ಬನ್ನಿರಿ! ತುಂಬಿಕೊಳ್ಳಲು ನಿಮ್ಮ ಹೃದಯದ ಹೊನ್ನ ಬಟ್ಟಲ ತನ್ನಿರಿ!" ಎನ್ನುವ ಸಾಲಿಗೆ ಕಾಗಿನಹರೆ ಉಪಮಾನವಾಗಿದೆ!

ಅದಷ್ಟೇ ಅಲ್ಲದೆ ಇಲ್ಲಿ ದಕ್ಷಿಣ ಭಾರತದ ಮೈಸೂರು ರಾಜ್ಯವನ್ನು ಆಳಿದ ಟಿಪ್ಪು ಸುಲ್ತಾನ್ ನಿರ್ಮಿಸಿದ ಕೋಟೆಯ ಅವಶೇಷಗಳು ಪಶ್ಚಿಮ ಘಟ್ಟಗಳ ಸುಂದರವಾದ ಪರ್ವತ ಶ್ರೇಣಿಯೊಂದಿಗೆ ಕಂಡುಬರುತ್ತವೆ. ಶಿಥಿಲಗೊಂಡ ಈ ಕೋಟೆಯು 80 ಅಡಿ ಉದ್ದ 60 ಅಡಿ ಅಗಲವಾಗಿದ್ದು, ಸ್ಥಳೀಯ ಕಲ್ಲುಗಳಿಂದ, ಮಣ್ಣನ್ನು ಹಾಕಿ ಕಟ್ಟಿಸಲಾಗಿದೆ. ಇದನ್ನು ಸೈನಿಕರ ತಂಗುವಿಕೆಗಾಗಿಯೂ, ಮದ್ದುಗುಂಡುಗಳನ್ನು ಸಂಗ್ರಹಸಿ ಇಡಲಿಕ್ಕಾಗಿ ಮಾಡಲಾಗಿತ್ತು. ಅಂದಿನ ದಿನಗಳಲ್ಲಿ ಮಂಗಳೂರು ಕಡೆಯಿಂದ ಹಡಗಿನಲ್ಲಿ ಬಂದು ಮೈಸೂರು ಕಡೆಗೆ ಬರುವ ಬ್ರಿಟಿಷರನ್ನು ಸದೆ ಬಡಿಯಲು ಈ ಕೋಟೆ ನಿರ್ಮಾಣವಾಗಿದೆ ಎಂದು ಹೇಳಲಾಗಿದೆ.

ಇದರ ಜತೆಗೆ ಅಲ್ಲಿನ ಗ್ರಾಮದೇವತೆ ತಾಯಿ ಚಾಮುಂಡೇಶ್ವರಿಯ ದೇವಾಲಯವಿದ್ದು, ಯಾವುದೇ ಸಾಲದ ಅಂದರೆ ದುಡ್ಡಿನ ಸಮಸ್ಯೆಗಳಿದ್ದರೆ, ಹಣಕ್ಕೆ ಸಂಬಂಧಪಟ್ಟ ವ್ಯಾಜ್ಯಗಳು ಕೋರ್ಟಿನಲ್ಲಿದ್ದರೆ ಇಲ್ಲಿಗೆ ಬಂದು ಹರಕೆ ಕಟ್ಟಿಕೊಂಡರೆ ಆ ಸಮಸ್ಯೆಗಳು ಬಗೆಹರಿಯುತ್ತದೆ ಎಂಬುದು ಇಲ್ಲಿನ ಸ್ಥಳೀಯರ ನಂಬಿಕೆ.

kaginahare new

ಸಕಲೇಶಪುರದಿಂದ 42 ಕಿ. ಮೀ ದೂರದಲ್ಲಿರುವ ಈ ಸ್ಥಳಕ್ಕೆ ಹೆತ್ತೂರಿನ ಮೂಲಕ ತಲುಪಬಹುದು. ಹಾಗೆಯೇ ಉಳಿದುಕೊಳ್ಳಲು ಹತ್ತಿರದಲ್ಲಿ ರೆಸಾರ್ಟ್, ಹೋಂ ಸ್ಟೇಗಳು ಲಭ್ಯವಿದೆ. ಸ್ವಂತ ವಾಹನಗಳಲ್ಲಿ ಹೋಗುವುದು ಉತ್ತಮ.

ಪ್ರಕೃತಿಪ್ರಿಯರಿಗೆ ಕಾಗಿನಹರೆ ರಮ್ಯ ರಮಣೀಯ ಸ್ಥಳ. ಹಸಿರಿನಿಂದ ಕಂಗೊಳಿಸುವ ಭುವಿಗೆ ಬಿಳಿ ಮೋಡ ಬಂದು ಚುಂಬಿಸುವ ಮನಮೋಹಕ ದೃಶ್ಯವನ್ನು ನಿಮ್ಮ ಕಣ್ಣಿನಿಂದ ಕ್ಲಿಕ್ಕಿಸಿಕೊಂಡು ಎದೆಗಿಳಿಸಿಕೊಳ್ಳುವ, ಹೃದಯದುಂಬಿಸಿ ಕಳುಹಿಸುವ ಕಾಗಿನಹರೆಗೆ ಒಮ್ಮೆ ಹೋಗಿ ಬನ್ನಿ.