ನೆಟ್ಟಗೋಡಿದರೆ ಸಿಗುವಷ್ಟು ಸಲೀಸಲ್ಲ ನೆಟ್ಗೋಡ್ ಫಾಲ್ಸ್!
ಜಲಪಾತದ ಎತ್ತರ ಸುಮಾರು 750 ಅಡಿ ಆದರೂ, ಬೇಸಗೆಯಲ್ಲಿ ನೀರು ಕಡಿಮೆಯೇ. ಆದರೆ ಜುಲೈಯಿಂದ ಸೆಪ್ಟೆಂಬರ್ ತನಕದ ಉತ್ತರಕನ್ನಡದ ಜಡಿಮಳೆಯಲ್ಲಿ ಹೋಗುವುದು ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆ. ತೆಗೆದಷ್ಟು ಕಾಲಿಗೆ ಹತ್ತುವ ಉಂಬಳಗಳು, ಕಾಲಿಟ್ಟಲ್ಲೇ ಜಾರುವ ದಾರಿ, ರಸ್ತೆಗೆ ಅಡ್ಡವಾಗಿ ಬಿದ್ದಿರುವ ಮರಗಳು ನಮ್ಮ ಪ್ರವಾಸವನ್ನು ಹೈರಾಣಾಗಿಸುತ್ತವೆ. ಆದರೆ ಅಕ್ಟೋಬರ್‌ನಿಂದ ಡಿಸೆಂಬರ್ ತನಕ ಸಾಕಷ್ಟು ನೀರಿರುವುದರಿಂದ ಕಣ್ಣಿಗೆ ಮುದವನ್ನೂ ಕೊಡುತ್ತದೆ.
- ಮೇಘಾ ಭಟ್
ಸುಮಾರು 80 ಪ್ರತಿಶತ ಅರಣ್ಯವೇ ತುಂಬಿರುವ ಜಿಲ್ಲೆ, ಉತ್ತರ ಕನ್ನಡ. ಅಷ್ಟೊಂದು ಕಾಡಿರುವ ಕಾರಣಕ್ಕೆ ಅಲ್ಲಿ ನೂರಾರು ಸಣ್ಣ ದೊಡ್ಡ ಜಲಪಾತಗಳೂ ಇವೆ. ಅವುಗಳಲ್ಲಿ ಕೆಲವು ಸಾಕಷ್ಟು ಪರಿಚಿತ, ಕೆಲವು ಎಲೆ ಮರೆಯ ಕಾಯಿಗಳು. ಇನ್ನು ಕೆಲವು ಈಗೀಗ ಪ್ರಚಾರಕ್ಕೆ ಬರುತ್ತಿರುವ ಜಲಪಾತಗಳು. ಹಾಗೆ ಜನಜಂಗುಳಿಯಿಂದ ದೂರವೇ ಉಳಿದು ತನ್ನ ಮೂಲ ಸ್ವರೂಪವನ್ನು ಹಾಗೆ ಉಳಿಸಿಕೊಂಡಿರುವ ಒಂದು ರುದ್ರ ರಮಣೀಯ ಜಲಪಾತವೇ ನೆಟ್ಗೋಡ್ ಫಾಲ್ಸ್ ಅಥವಾ ನೆಟ್ಗೋಡ್ ಜಲಪಾತ. ಹೆಚ್ಚಿನ ಪ್ರವಾಸ ಪ್ರಿಯರು ಸಾಹಸ ಪ್ರಿಯರೂ ಆಗಿರುವುದರಿಂದ ಅಂಥವರಿಗೆ ದೇವರೇ ಸೃಷ್ಟಿಸಿದ ಅಪರೂಪದ ಜಲಪಾತವಿದು.
ಇದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಅಂಚಿನಲ್ಲಿ ಇರುವ ಜಲಪಾತ. ಸಿದ್ದಾಪುರದಿಂದ ಕುಮಟಾ ಮಾರ್ಗದಲ್ಲಿ ಹೋದರೆ, ರಾಜ್ಯ ಕಂಡ ಧೀಮಂತ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ತವರೂರು ದೊಡ್ಮನೆ ಸಿಗುತ್ತದೆ. ಅಲ್ಲಿಂದ ಒಂದು ಕಿಮೀ ದೂರದಲ್ಲಿ ಸಿಗುವ ಬೀರಲಮಕ್ಕಿ ಎಂಬ ಊರಿನಿಂದ ಎಡಕ್ಕೆ ಮೂರು ಕಿಮೀ ಹೋದರೆ ನೆಟ್ಗೋಡ್ ಫಾಲ್ಸ್‌ನ ದಾರಿ ಸಿಗುತ್ತದೆ. ಈ ರಸ್ತೆ ಮುಂದೆ ಹೊನ್ನಾವರಕ್ಕೆ ಹೋಗುವುದಾದರೂ ಮುಂದೆ ದಾರಿ ಸರಿ ಇಲ್ಲದ ಕಾರಣ ಸಿದ್ದಾಪುರ ತಾಲೂಕಿನ ಕೊನೆಯ ಹಳ್ಳಿಗೆ ಹೋಗುವ ಡೆಡ್ ಎಂಡ್ ರಸ್ತೆ. ಮುಖ್ಯ ರಸ್ತೆಯಿಂದ ಸುಮಾರು 2 ಕಿಮೀ ಮಣ್ಣಿನ ರಸ್ತೆಯಲ್ಲಿ ಹೋದರೆ ಸಿಗುವುದೇ ಈ ನೆಟ್ಗೋಡ್ ಫಾಲ್ಸ್. ಹೋಗುವ ದಾರಿ ನಿರ್ಜನವು ಎರಡೂ ಕಡೆ ಬೈನೆ, ಹೊನ್ನೆ, ಹಲಸು, ಮಾವು ಮುಂತಾದ ಗಗನ ಚುಂಬಿ ಮರಗಳಿಂದ ಆವೃತವಾದ, ನಾಡು ಮಧ್ಯಾಹ್ನವೂ ಸೂರ್ಯನ ಬಿಸಿಲು ನೆಲಕ್ಕೆ ಬೀಳದಷ್ಟು ದಟ್ಟ ಅರಣ್ಯ. ಆದರೂ, ವಾಹನ ಓಡಾಟವಿದೆ. ಜಲಪಾತದ ಬಳಿಗೆ ಹೋಗಲು ವಾಹನ ನಿಲುಗಡೆಯಿಂದ ಸುಮಾರು 300 ಮೀಟರ್‌ನಷ್ಟು ದೂರ ಭತ್ತದ ಗದ್ದೆಯ ಬದುವಿನ ಮೇಲೆ ನಡೆಯಬೇಕು.

ಇಷ್ಟೆಲ್ಲ ಕಷ್ಟ ಪಟ್ಟು ಜಲಪಾತದ ನೆತ್ತಿಗೆ ತಲುಪಿದರೂ ಜಲಪಾತದ ಸುಳಿವೇ ಇರುವುದಿಲ್ಲ. ಯಾಕೆಂದರೆ ಎರಡು ಹಂತಗಳಲ್ಲಿ ಬೀಳುವ ಜಲಪಾತದ ಬುಡಕ್ಕೆ ಹೋಗಲು ಸಾಕಷ್ಟು ಹೈಕಿಂಗ್‌ನ ಅವಶ್ಯಕತೆಯೂ ಇದೆ. ಮೇಲಿನಿಂದ ನೋಡಲು ಮರಗಳು ಸಹ ಅಡ್ಡಿಯಾಗುತ್ತವೆ. ಆದರೆ ಸುಮಾರು ಅರ್ಧದಷ್ಟು ಇಳಿದಾಗ ಕಾಣುವ ನಿಸರ್ಗ ಸೌಂದರ್ಯ ಮಾತ್ರ ನಮ್ಮನ್ನು ಮಂತ್ರ ಮುಗ್ಧಗೊಳಿಸುವುದು ಖಚಿತ. ಅಲ್ಲಿಯ ತನಕ ಪಟ್ಟ ಕಷ್ಟಗಳೆಲ್ಲ ಜಲಪಾತದ ಮೊದಲ ನೋಟದಲ್ಲೇ ಕಳೆದು ಹೋಗುತ್ತದೆ. ಇಲ್ಲಿ ಕೆಳಗೆ ಇಳಿಯಲು ಸರಿಯಾದ ಮೆಟ್ಟಿಲು ಕೂಡ ಇಲ್ಲ, ತುಂಬಾ ಕಡಿದಾದ ಇಳಿಜಾರಿನ ದಾರಿಯಾದ್ದರಿಂದ ಎಚ್ಚರಿಕೆ ಬಹಳ ಮುಖ್ಯ. ಇಲ್ಲಿ ಜಲಪಾತವನ್ನೊಂದೇ ಅಲ್ಲದೆ ಇಳಿಯುವ ದಾರಿಯಲಿ ಥರಥರದ ಗಿಡ ಬಳ್ಳಿಗಳು, ಬಂಡೆಗಳು ಬಣ್ಣ ಬಣ್ಣದ ಹಕ್ಕಿ ಪಕ್ಷಿಗಳೂ, ಹೋಗುವ ದಾರಿ ಕೂಡ ಆಕರ್ಷಕವೇ. ಎಲ್ಲಕ್ಕಿಂತ ಮುಖ್ಯವಾಗಿ ಅಷ್ಟೆಲ್ಲ ಕಷ್ಟಪಟ್ಟು ಹೋದ ಮೇಲೆ ಸಿಗುವ ನಿಸರ್ಗ ಸೌಂದರ್ಯ ನಮ್ಮ ಮೊಗದಲ್ಲೊಂದು ಗೆಲುವಿನ ನಗು ಮೂಡಿಸುವುದಂತೂ ನಿಜ.

ಜಲಪಾತದ ಎತ್ತರ ಸುಮಾರು 750 ಅಡಿ ಆದರೂ, ಬೇಸಗೆಯಲ್ಲಿ ನೀರು ಕಡಿಮೆಯೇ. ಆದರೆ ಜುಲೈಯಿಂದ ಸೆಪ್ಟೆಂಬರ್ ತನಕದ ಉತ್ತರಕನ್ನಡದ ಜಡಿಮಳೆಯಲ್ಲಿ ಹೋಗುವುದು ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆ. ತೆಗೆದಷ್ಟು ಕಾಲಿಗೆ ಹತ್ತುವ ಉಂಬಳಗಳು, ಕಾಲಿಟ್ಟಲ್ಲೇ ಜಾರುವ ದಾರಿ, ರಸ್ತೆಗೆ ಅಡ್ಡವಾಗಿ ಬಿದ್ದಿರುವ ಮರಗಳು ನಮ್ಮ ಪ್ರವಾಸವನ್ನು ಹೈರಾಣಾಗಿಸುತ್ತವೆ. ಆದರೆ ಅಕ್ಟೋಬರ್‌ನಿಂದ ಡಿಸೆಂಬರ್ ತನಕ ಸಾಕಷ್ಟು ನೀರಿರುವುದರಿಂದ ಕಣ್ಣಿಗೆ ಮುದವನ್ನೂ ಕೊಡುತ್ತದೆ ಮತ್ತು ನೀರಿಗೆ ಮೈಯೊಡ್ಡಿ ಜಲಕ್ರೀಡೆಯನ್ನೂ ಆಡಬಹುದು. ನೀವು ಕಾಡು ಪ್ರಿಯರೂ, ಸಾಹಸ ಪ್ರಿಯರೂ ಆಗಿದ್ದರೆ ಖಂಡಿತ ಒಮ್ಮೆ ಭೇಟಿ ಕೊಡಿ. ಇಲ್ಲಿನ ದಟ್ಟ ಕಾಡಿಗೆ ಈಗ ಜಲ ಕಂಟಕ ಬಂದಿದೆ. ಬೇಡ್ತಿ ಮತ್ತು ಅಘನಾಶಿನಿ ನದಿ ತಿರುವು ಯೋಜನೆಗಳು ಜನರ, ಅರಣ್ಯದ ದಿಕ್ಕು ದೆಸೆಯನ್ನು ಬದಲಿಸುವುದಂತೂ ಸತ್ಯ. ಅಷ್ಟರ ಒಳಗೆ ಈ ನಿಸರ್ಗ ಸೌಂದರ್ಯವನ್ನು ಸವಿದು ಬಿಡಿ.
ದಾರಿ ಹೇಗೆ?
ಬೆಂಗಳೂರಿನಿಂದ ಯಲ್ಲಾಪುರಕ್ಕೆ 460–480 ಕಿ.ಮೀ
ಪ್ರಯಾಣ ಸಮಯ: 8–9 ಗಂಟೆ (ರಸ್ತೆ ಮೂಲಕ)
ಹುಬ್ಬಳ್ಳಿಯಿಂದ 70–80 ಕಿ.ಮೀ
ಪ್ರಯಾಣಸಮಯ 1.5–2 ಗಂಟೆ
ಯಲ್ಲಾಪುರ ತಲುಪಿ, ಅಲ್ಲಿಂದ ಸ್ಥಳೀಯರ ಸಹಾಯದಿಂದ ನೆಟ್ಗೋಡ್ ಫಾಲ್ಸ್ ಕಡೆ ಹೋಗಬಹುದು.
ವಾಹನವನ್ನು ಪಾರ್ಕ್ ಮಾಡಿದ ನಂತರ ಸುಮಾರು 1–1.5 ಕಿ.ಮೀ ಟ್ರೆಕ್ ಮಾಡಬೇಕು.