ಇಂದಿನ ಮಕ್ಕಳು ದಿನವೂ ಶಾಲೆ, ಪಾಠ, ಮನೆ ಪಾಠ, ಸಮಯ ಸಿಕ್ಕಿದರೆ ಮೊಬೈಲ್‌, ವಿಡಿಯೋ ಗೇಮ್ಸ್‌, ಕಾರ್ಟೂನ್‌ ಅಂತಲೇ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿರುತ್ತಾರೆ. ಒತ್ತಡ, ಪೈಪೋಟಿಗಳ ನಡುವೆಯೇ ವಿದ್ಯಾಭ್ಯಾಸ ಎಂಬಂಥ ಪರಿಸ್ಥಿತಿಯಲ್ಲಿರುತ್ತಾರೆ. ಪರೀಕ್ಷೆಗಳು ಮುಗಿದು ಅದ್ಯಾವಾಗ ಬೇಸಗೆ ರಜೆ ಬಂದುಬಿಡುತ್ತದೋ ಎಂದು ಕಾತುರರಾಗಿ ಕಾಯುತ್ತಿರುತ್ತಾರೆ. ಈ ನಡುವೆ ಮನಸಿದ್ದರೂ, ಇಲ್ಲವಾದರೂ ಹೆತ್ತವರ ಒತ್ತಾಯಕ್ಕೆ ಮಣಿದು ತಿಂಗಳುಗಳ ಕಾಲ ಬೇಸಗೆ ಶಿಬಿರಗಳ ಮೊರೆಹೋಗುತ್ತಾರೆ.

ಪಠ್ಯ ಪುಸ್ತಕಗಳನ್ನು ಬದಿಗಿಟ್ಟು ಕಲೆ, ಸಂಸ್ಕೃತಿ, ಕ್ರೀಡೆಯಂಥ ಅನೇಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾರೆ. ಆದರೆ ಮಕ್ಕಳನ್ನು ಎಂದಾದರೂ ಪ್ರಕೃತಿಯೊಂದಿಗೆ ಮುಕ್ತವಾಗಿ ಬೆಸೆಯುವ ಬಗ್ಗೆ ಯೋಚಿಸಿದ್ದೀರಾ..? ನೆಲ, ಮಣ್ಣು, ಕಾಡು, ಸರೋವರ, ಕಡಲತೀರ ಹೀಗೆ ನಿಸರ್ಗದ ನಡುವೆ ಸ್ವಚ್ಛಂದವಾಗಿ ಕಾಲ ಕಳೆಯುವ ಅವಕಾಶ ನೀಡಿದರೆ ಹೇಗೆ? ಇಂಥದೊಂದು ವಿಶೇಷ ಪರಿಕಲ್ಪನೆಯನ್ನು ಪರಿಚಯಿಸಿದವರು ಮಂಜುನಾಥ್‌ ಅಲಿಯಾಸ್‌ ಮೌಂಟೇನ್‌ ಮಂಜು.

New Project (26)

ಮೂಲತಃ ಶಾಲೆಯೊಂದರಲ್ಲಿ ಔಟ್‌ ಡೋರ್‌ ಇನ್ಸ್ಟ್ರಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಂಜುನಾಥ್‌ ಅವರು, 2011ರಿಂದಲೇ ಕರ್ನಾಟಕದ ಕುದುರೆಮುಖ, ಕುಮಾರ ಪರ್ವತದಂಥ ಅನೇಕ ಕಡೆಗಳಿಗೆ ಚಾರಣ ಮಾಡಿದವರು. ಹಿಮಾಚಲಪ್ರದೇಶ, ಉತ್ತರಾಖಂಡ, ಕೇದಾರನಾಥ ಹೀಗೆ ಸಾಕಷ್ಟು ಟ್ರೆಕ್ಕಿಂಗ್‌ ಏರಿಯಾಗಳಿಗೂ ಒಂಟಿಯಾಗಿಯೇ ಹೋಗಿಬಂದವರು. ಅಲ್ಲದೆ 18 ವರ್ಷಗಳಿಗೆ ಮೇಲ್ಪಟ್ಟವರಿಗಾಗಿಯೇ ಟ್ರೆಕ್ಕಿಂಗ್‌ಗಳನ್ನೂ ಆಯೋಜಿಸಿ ಯಶಸ್ವಿಯಾದವರು. ಆದರೆ ಚಾರಣವೆಂಬುದು ವಯಸ್ಕರಿಗಷ್ಟೇ ಸೀಮಿತವಾಗಿರುವುದು ಯಾಕೆ? ಮಕ್ಕಳನ್ನು ಮಾನಸಿಕವಾಗಿ, ದೈಹಿಕವಾಗಿ ಸುದೃಢರನ್ನಾಗಿಸಿ ಪ್ರಕೃತಿಯೊಂದಿಗೆ ಬೆರೆಯುವಂತೆ ಮಾಡಿದರೆ ಹೇಗೆ ಎಂಬ ಯೋಚನೆಯೊಂದಿಗೆ ಮೊದಲ ಬಾರಿ 2015ರಲ್ಲಿ ಮಕ್ಕಳಿಗಾಗಿ ಹಿಮಾಲಯನ್‌ ಟ್ರೆಕ್ಕಿಂಗ್‌ ಆಯೋಜನೆ ಮಾಡಿದರು.

ಅಯಾನಾ ಔಟ್‌ ಡೋರ್‌ ಎಂಬ ಟ್ರಾವೆಲ್‌ ಸಂಸ್ಥೆ

ಮಕ್ಕಳಲ್ಲಿ ಪ್ರಯಾಣ, ಚಾರಣ ಹಾಗೂ ಸಾಹಸದ ಬಗೆಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ಅಯಾನಾ ಔಟ್‌ ಡೋರ್‌ ಎಂಬ ಟ್ರಾವೆಲ್‌ ಸಂಸ್ಥೆಯನ್ನೂ ಹುಟ್ಟುಹಾಕಿ ಸಾವಿರಾರು ಮಕ್ಕಳಲ್ಲಿ ಚಾರಣದ ಪ್ರೀತಿಯನ್ನು ಬೆಳೆಸಿದರು. 2015ರಿಂದ ಇಂದಿನವರೆಗೂ ಸಾವಿರಾರು ಮಕ್ಕಳನ್ನು ಚಾರಣಕ್ಕೆ ಕರೆದುಕೊಂಡುಕೊಂಡು ಹೋಗಿ, ಮಕ್ಕಳಲ್ಲಿರುವ ಚಾರಣದ ಭಯವನ್ನು ಹೋಗಲಾಡಿಸಿ, ಒಬ್ಬಂಟಿಯಾಗಿ ಪ್ರಯಾಣಿಸುವ ಧೈರ್ಯವನ್ನು ತುಂಬಿದರು. ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿ ಮಕ್ಕಳನ್ನು ಗಟ್ಟಿಗೊಳಿಸಿ, ಬದುಕಿನತ್ತ ಮುಖ ಮಾಡುವಂತಾಗಿಸುವಲ್ಲಿ ಅಯಾನಾ ಜತೆಗಿನ ಪ್ರಯಾಣ ಶ್ಲಾಘನೀಯ.

ಚಾರಣಕ್ಕೂ ಮುನ್ನ

ಹಿಮಾಲಯದ ಚಾರಣಕ್ಕೆ ಹೊರಡುವ ಮುನ್ನ…

ಯಾವುದೇ ಮಗುವನ್ನು ಏಕಾಏಕಿ ಚಾರಣಕ್ಕೆ ಕರೆದೊಯ್ಯುವುದಿಲ್ಲ. ಬದಲಾಗಿ ಟ್ರೆಕ್ಕಿಂಗ್‌ಗೆ ನೊಂದಾಯಿಸಿಕೊಳ್ಳುವ ಮುನ್ನ ತಂಡ ಮಗು ಹಾಗೂ ಹೆತ್ತವರೊಂದಿಗೆ ಮುಕ್ತವಾಗಿ ಮಾತುಕತೆ ನಡೆಸುತ್ತದೆ. ಚಾರಣದ ಬಗೆಗೆ ಮಗುವಿಗಿರುವ ಆಸಕ್ತಿ, ಆರೋಗ್ಯ ಸ್ಥಿತಿ, ಕ್ರೀಡಾಸಕ್ತಿ, ಮಾನಸಿಕವಾಗಿ ಎಷ್ಟು ಸುದೃಢವಾಗಿದೆ ಎಂಬೆಲ್ಲ ಮಾಹಿತಿಯನ್ನು ಕಲೆಹಾಕಲಾಗುತ್ತದೆ. ಅಲ್ಲದೆ ಮೊದಲ ಪ್ರಯತ್ನವೆಂಬಂತೆ ಹೆತ್ತವರಿಲ್ಲದೆ ತಂಡದೊಂದಿಗೆ ಬೆರೆಯುವುದಕ್ಕಾಗಿ ಒಂದು ದಿನದ ಚಾರಣಕ್ಕೂ ಅವಕಾಶ ಒದಗಿಸಿಕೊಡುತ್ತದೆ. ಚಾರಣದ ಬಗೆಗೆ ಒಲವು ಪ್ರಾರಂಭವಾಗುತ್ತಲೇ ಹಿಮಾಲಯನ್‌ ಟ್ರೆಕ್ಕಿಂಗ್‌ಗೆ ರಿಜಿಸ್ಟರ್ ಮಾಡಿಸಿಕೊಳ್ಳುವ ಅವಕಾಶ ಕಲ್ಪಿಸಿಕೊಡಲಾಗುತ್ತದೆ.

ಬೀಚ್‌ ಸೈಡ್‌ ಸಮ್ಮರ್‌ ಕ್ಯಾಂಪ್

New Project (25)

ಪ್ರಕೃತಿಯೆಂದರೆ ಬರಿಯ ಚಾರಣವಷ್ಟೇ ಅಲ್ಲ, ಕಾಡು, ಜಲಪಾತ, ಕಡಲತೀರಗಳು, ಹಿನ್ನೀರು ಹೀಗೆ ಎಲ್ಲವನ್ನೂ ಮಕ್ಕಳಿಗೆ ಪರಿಚಯಿಸುವ ಮೂಲಕ ನಿಸರ್ಗದೊಂದಿಗೆ ನೇರ ಸಂಪರ್ಕವನ್ನು ಕಲ್ಪಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಅಯಾನಾ ಔಟ್‌ ಡೋರ್ಸ್‌ ಸಂಸ್ಥೆ ಇದೇ ಏಪ್ರಿಲ್‌ 22ರಿಂದ 26ವರೆಗೂ ಬೀಚ್‌ ಸೈಡ್‌ ಸಮ್ಮರ್‌ ಕ್ಯಾಂಪ್‌ ಆಯೋಜನೆ ಮಾಡಲಾಗಿದ್ದು, ಕುಮಟಾ, ಗೋಕರ್ಣ, ವಿಭೂತಿ ಫಾಲ್ಸ್‌, ಹೊನ್ನಾವರ ಹಿನ್ನೀರನ್ನು ಮಕ್ಕಳಿಗೆ ಪರಿಚಯಿಸಲಾಗುತ್ತದೆ. ಕಡಲ ತೀರದ ಟೆಂಟ್‌ ವಾಸ್ತವ್ಯ, ಕ್ಯಾಂಪ್‌ ಫೈರ್‌, ಸ್ಕೈ ಲ್ಯಾಂಟರ್ನ್ ನೈಟ್‌, ಕೋಸ್ಟಲ್‌ ಫುಡ್‌ ಹಾಗೂ ಬಾರ್ಬಿಕ್ಯೂ ಅನುಭವ ಮಕ್ಕಳಿಗೆ ಲಭ್ಯವಾಗಲಿದೆ. ಅಲ್ಲದೆ ಕಯಾಕಿಂಗ್‌ ಟ್ರೈನಿಂಗ್‌, ಸ್ವಿಮ್ಮಿಂಗ್‌, ಬೋಟ್‌ ರೈಡ್‌ ಮುಂತಾದ ಜಲಕ್ರೀಡೆಗಳ ತರಬೇತಿ, ಸ್ಯಾಂಡ್‌ ಆರ್ಟ್‌, ಶರಾವತಿ ಹಿನ್ನೀರಿನ ಅನುಭವವನ್ನೂ ಈ ಕ್ಯಾಂಪ್‌ನ ಮೂಲಕ ಮಕ್ಕಳು ತಮ್ಮದಾಗಿಸಿಕೊಳ್ಳಬಹುದು.

ಮಕ್ಕಳು ಹಿಮಾಲಯವನ್ನೇರುತ್ತಾರಾ ಅಂತ ಬೆರಗಾಗಬೇಕಿಲ್ಲ. ಹೆತ್ತವರು ಜತೆಗಿಲ್ಲದೆ ಮಕ್ಕಳನ್ನು ಅಂಥ ಜಾಗಗಳಿಗೆ ಕಳುಹಿಸುವುದು ಹೇಗೆ ಎಂಬ ಚಿಂತೆಯೂ ಬೇಕಿಲ್ಲ. ಇಲ್ಲಿ ವೈದ್ಯರೂ ಸೇರಿದಂತೆ ನುರಿತ ತಂಡ ಪ್ರತಿ ಹೆಜ್ಜೆಯಲ್ಲೂ ಮಕ್ಕಳ ಜತೆಗಿರುತ್ತಾರೆ. ಮಕ್ಕಳ ಆಹಾರ, ವಸತಿ ಸೇರಿದಂತೆ ಎಲ್ಲದರ ಬಗೆಗೂ ಪ್ರತ್ಯೇಕ ಕಾಳಜಿ ವಹಿಸಲಾಗುತ್ತದೆ.

ಹಿಮಾಲಯನ್‌ ಸಮ್ಮರ್‌ ಅಡ್ವೆಂಚರ್‌ ಕ್ಯಾಂಪ್‌

New Project (28)

ಈ ಬಾರಿಯ ಬೇಸಗೆಯಲ್ಲಿ ಅಯಾನಾ ಔಟ್‌ ಡೋರ್ಸ್‌ ಮಕ್ಕಳಿಗಾಗಿ ಹಿಮಾಲಯನ್‌ ಅಡ್ವೆಂಚರ್‌ ಕ್ಯಾಂಪ್‌ ಯೋಜನೆ ಸಿದ್ಧಗೊಳಿಸಿದೆ. 8-20 ವರ್ಷ ವಯಸ್ಸಿನ ಮಕ್ಕಳಿಗಾಗಿ ಇದೇ ಬರುವ ಏಪ್ರಿಲ್‌ 13ರಿಂದ 19ರ ವರೆಗೆ ಒಂದು ವಾರದ ಕಾಲ ಕ್ಯಾಂಪ್‌ ಇರಲಿದೆ. ದೆಹಲಿ ಹೃಷಿಕೇಶದಲ್ಲಿ ಪ್ರಕೃತಿ ವೀಕ್ಷಣೆ, ವಿಮಾನ ನಿಲ್ದಾಣ ಹಾಗೂ ವಿಮಾನದ ಅನುಭವ, ಸಾಹಸ ಹಾಗೂ ಪರ್ವತಾರೋಹಣದ ಅನುಭವ, ಕ್ಯಾಂಪಿಂಗ್‌ ಅನುಭವ, ಲೀಡರ್‌ ಶಿಪ್‌ ಹಾಗೂ ಟೀಮ್‌ ವರ್ಕ್‌, ಡಿಜಿಟಲ್‌ ಡಿಟಾಕ್ಸ್‌ ಮೂಲಕ ಮಕ್ಕಳಿಗೆ ನೈಜ ಜಗತ್ತಿನ ಪರಿಚಯ ಮಾಡಲಾಗುತ್ತದೆ.

ಉತ್ತರಭಾರತದಲ್ಲಿ ಸಾಕಷ್ಟು ಬೇಡಿಕೆ ಹೊಂದಿರುವ ಮೌಂಟನೇರಿಂಗ್‌ ಸ್ಕಿಲ್ಸ್‌ಗಳನ್ನೂ ಇಲ್ಲಿ ಹಂತ ಹಂತವಾಗಿ ಹೇಳಿಕೊಡಲಾಗುತ್ತದೆ. ಟ್ರೆಕ್ಕಿಂಗ್, ರಾಕ್‌ ಕ್ಲೈಂಬಿಂಗ್‌, ರಾಪ್ಲಿಂಗ್‌, ಜುಮಾರಿಂಗ್‌, ಜಿಪ್‌ ಲೈನ್‌ ಸೇರಿದಂತೆ ಮೌಂಟನೇರಿಂಗ್‌ಗೆ ಸಂಬಂಧಿಸಿದ ಅನೇಕ ಚಟುವಟಿಕೆಗಳಿಗೆ ಬುನಾದಿ ಹಾಕಿಕೊಡಲಾಗುತ್ತದೆ.

New Project (30)

ಒಂದು ದಿನದ ಚಾರಣ - 1000-1500 ರು.

ಬೀಚ್‌ ಸೈಡ್‌ ಕ್ಯಾಂಪ್‌ - 5000 ರು.

ಹಿಮಾಲಯ ಟ್ರೆಕ್ಕಿಂಗ್‌ ವಿತ್ ಔಟ್ ಫ್ಲೈಟ್‌ ಚಾರ್ಚ್‌ 20,000 ರು.

ಒಟ್ಟಿನಲ್ಲಿ ಮಕ್ಕಳಲ್ಲಿ ಚಾರಣದ ಆಸಕ್ತಿಯನ್ನು ಬಿತ್ತಬೇಕಿದೆ. ಆ ಮೂಲಕ ನಮ್ಮ ಕರಾವಳಿ, ಪಶ್ಚಿಮ ಘಟ್ಟಗಳು, ಹಿಮಾಲಯ ಸೇರಿದಂತೆ ನಮ್ಮ ದೇಶ ಭೌಗೋಳಿಕವಾಗಿ ಎಷ್ಟು ಸುಂದರ ಹಾಗೂ ಸಮೃದ್ಧವಾಗಿದೆ ಎಂಬುದನ್ನು ಇಂದಿನ ತಲೆಮಾರಿಗೆ ತಿಳಿಹೇಳುವ ಪ್ರಯತ್ನವನ್ನು ಅಯಾನಾ ಔಟ್‌ ಡೋರ್‌ ಎಂಬ ಟ್ರಾವೆಲ್‌ ಸಂಸ್ಥೆಯ ಮೂಲಕ ಮೌಂಟೇನ್‌ ಮಂಜು ಮಾಡುತ್ತಿದ್ದಾರೆ. ಬೇಸಗೆ ರಜೆಯಲ್ಲಿ 7-8 ದಿನಗಳ ಕಾಲ ಮಕ್ಕಳು ಎಲ್ಲದರಿಂದಲೂ ಬ್ರೇಕ್‌ ತೆಗೆದುಗೊಂಡು ಪ್ರಕೃತಿಯಲ್ಲಿ ಕಾಲ ಕಳೆದರೆ ಅವರ ಸರ್ವತೋಮುಖ ಬೆಳವಣಿಗೆಗೂ ದಾರಿಯಾಗುತ್ತದೆ

ಮೊದಲೆಲ್ಲಾ ಪ್ರವಾಸಕ್ಕೆ ಒಬ್ಬನೇ ಹೋಗುತ್ತಿದ್ದೆ. ನಂತರ ಚಾರಣಪ್ರಿಯರನ್ನು ಜತೆಗೆ ಕರೆದುಕೊಂಡು ಹೋಗಲಾರಂಭಿಸಿದೆ. ಈ ನಡುವೆ ಬೆಂಗಳೂರಿನ ವ್ಯಾಲಿ ಸ್ಕೂಲ್‌ ಸುಮಾರು ವರ್ಷಗಳಿಂದ ಪ್ರತಿ ಅಕ್ಟೋಬರ್‌ ನಲ್ಲಿ ಪೋಷಕರು ಹಾಗೂ ಬೇಸಗೆಯಲ್ಲಿ ಅಧ್ಯಾಪಕ ವೃಂದ ಹಾಗೂ ಮಕ್ಕಳ ಟ್ರೆಕ್ಕಿಂಗ್‌ ಆಯೋಜಿಸುತ್ತಿದ್ದರು. ಅವರ ಜತೆಗೆ ಕೈಜೋಡಿಸುವ ಅವಕಾಶ ನನಗೂ ಒದಗಿಬಂತು. ಅದರಿಂದ ನಾನೂ ಉತ್ಸುಕನಾಗಿ 2015ರಿಂದಲೂ ಮಕ್ಕಳ ಟ್ರೆಕ್ಕಿಂಗ್‌ ಬ್ಯಾಚ್‌ ಪ್ರಾರಂಭಿಸಿದೆ. ಪೂರ್ಣಚಂದ್ರ ತೇಜಸ್ವಿಯವರ ಪುಸ್ತಕಗಳನ್ನು ಓದಿದಾಗ ಅವರು ಮೊಮ್ಮಕ್ಕಳಿಗೆ ಕುರಿ ಮೇಕೆಗಳನ್ನು ಆಡಲು ಕೊಡುತ್ತಿದ್ದುದು ತಿಳಿಯಿತು. ಅವರಂತೆಯೇ ಮಕ್ಕಳನ್ನು ಪ್ರಕೃತಿಗೆ ಹತ್ತಿರವಾಗಿಸುವ ಉದ್ದೇಶದಿಂದ ಈ ಯೋಜನೆಗೆ ಚಾಲನೆ ಕೊಟ್ಟೆ. ಇದರಿಂದ ಮಕ್ಕಳಲ್ಲಿ ಸರ್ವತೋಮುಖ ಬೆಳವಣಿಗೆಯೂ ಸಾಧ್ಯವಾಗುತ್ತದೆ.
- ಮೌಂಟೇನ್‌ ಮಂಜು