- ಅನಂತ್ ಹರಿತ್ಸ

ಕವಲೇ ದುರ್ಗ ಒಂದು ದುರ್ಗಮ ಕೋಟೆಯಾಗಿತ್ತು. ತೀರ್ಥಹಳ್ಳಿಯಿಂದ ಸಾಗರ ಮಾರ್ಗದಲ್ಲಿ, ಬೊಬ್ಬಿ ಗ್ರಾಮದ (ಯಡೂರು ರಸ್ತೆ) ರಸ್ತೆಯಲ್ಲಿ ಸುಮಾರು 18 ಕಿಮೀ ಸಾಗಿದರೆ ಕವಲೇ ದುರ್ಗ ಸೇರಬಹುದು.

ಕವಲೇ ದುರ್ಗ ಮೂರು ಸುತ್ತಿನ ಕೋಟೆಯಾಗಿದ್ದು ಈ ಹಿಂದೆ ಭುವನಗಿರಿ ಎಂದು ಕರೆಯಲ್ಪಡುತ್ತಿತ್ತು. ಕಣಶಿಲೆಗಳಿಂದ ಇದನ್ನು ಕಟ್ಟಲಾಗಿದೆ. ಹಿಂದೆ ವಿಜಯ ನಗರ ಸಂಸ್ಥಾನದ ಸಾಮಂತರಾಗಿ ನಂತರ ಸ್ವತಂತ್ರ ರಾಜರಾಗಿ ಆಳಿದ ಕೆಳದಿ ಸಂಸ್ಥಾನದ ವೆಂಕಟಪ್ಪ ನಾಯಕ ಅವರು 1580ರಲ್ಲಿ ಇದನ್ನು ಕಟ್ಟಿದ್ದು, ಅತ್ಯಂತ ಶ್ರೇಷ್ಠ ವಾಸ್ತು ಶಿಲ್ಪದಿಂದ ಕೂಡಿದ ಮೂರು ಸುತ್ತಿನ ಕೋಟೆ ಇದಾಗಿದೆ.

ಕೋಟೆಯ ವಾಸ್ತುಶಿಲ್ಪ ನಿಜಕ್ಕೂ ಬೆರಗು ಹುಟ್ಟಿಸುವಂಥದ್ದು. ಕೋಟೆಯ ಆವರಣದಲ್ಲಿ ಅರಮನೆ, ಮಹತ್ತಿನ ಮಠ, ಶೃಂಗೇರಿ ಮಠ, ಟಂಕಸಾಲೆ, ಕುದುರೆಲಾಯ, ಆನೆಲಾಯಗಳು ಇಲ್ಲಿದ್ದು ಕೊಳಗಳನ್ನು ನಿರ್ಮಿಸಿ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ. ಒಟ್ಟಾರೆ ಇಂಥ ಮೂಲ ಸೌಕರ್ಯಗಳೊಂದಿಗೆ ಸುಸಜ್ಜಿತ ಅಗ್ರಹಾರವನ್ನಾಗಿ ಇದನ್ನು ನಿರ್ಮಾಣ ಮಾಡಲಾಗಿತ್ತು.

ಕೋಟೆಯ ಇಕ್ಕೆಲಗಳಲ್ಲಿ ಪ್ರತಿಯೊಂದು ಸುತ್ತಿನ ಪ್ರವೇಶ ದ್ವಾರದಲ್ಲೂ ಕಾವಲು ಗೋಪುರವನ್ನು ನಿರ್ಮಿಸಲಾಗಿದೆ. ಮಧ್ಯದಲ್ಲಿ ದೇವಸ್ಥಾನಗಳನ್ನು ನಿರ್ಮಿಸಲಾಗಿತ್ತು. ಅರಮನೆ ನಿವೇಶನಗಳು, ಕಟ್ಟಡದ ಅವಶೇಷಗಳನ್ನು ಈಗಲೂ ಅಲ್ಲಿ ಕಾಣಬಹುದಾಗಿದೆ.

Kavaledurga Fort

ಕೋಟೆಯ ಮಧ್ಯದಲ್ಲಿ ಶಿಖರೇಶ್ವರ ಅಥವಾ ಶ್ರೀಕಂಠೇಶ್ವರ ದೇವಸ್ಥಾನವಿದೆ. ನಂದಿ ಮಂಟಪ, ಮುಖ ಮಂಟಪ, ಧ್ವಜ ಸ್ಥಂಭಗಳೂ ಇವೆ. ಸೂರ್ಯಾಸ್ತಮಾನವನ್ನು ಇಲ್ಲಿ ನೋಡಲು ಅನುಪಮವಾಗಿರುತ್ತದೆ. ಗಗನವೇ ಬಾಗಿದಂತೆ ಭಾಸವಾಗುತ್ತದೆ. ತೇಲು ಮೋಡಗಳು ಮನಕ್ಕೆ ಮುದ ನೀಡುತ್ತವೆ.

ಅರಮನೆಯ ಉತ್ಖನನದ ಸಂದರ್ಭದಲ್ಲಿ ಒಳಾಂಗಣ ವಿನ್ಯಾಸದಲ್ಲಿ ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ಸಂಪರ್ಕವಿತ್ತು ಎನ್ನುವುದು ತಿಳಿದು ಬಂದಿದೆ. ಪಾಕಶಾಲೆ, ಪೂಜಾಗೃಹ, ಸ್ನಾನದ ಕೋಣೆ, ಅದಕ್ಕೆ ಪೂರಕವಾದ ನೀರಿನ ವ್ಯವಸ್ಥೆ ಎಲ್ಲವೂ ಇಲ್ಲಿ ಇತ್ತು.

ಸುತ್ತಲು ಹಸಿರು ಪರಿಸರ, ಕೋಟೆಯ ಅವಶೇಷಗಳು, ದೇವಸ್ಥಾನ, ಮಧ್ಯೆ ಇರುವ ಕೊಳಗಳು, ಪುಷ್ಕರಣಿಗಳು, ಕೆರೆಗಳು ಇಲ್ಲಿ ಕಾಣಲು ಸಿಗುತ್ತವೆ. ಕೋಟೆಯ ಮೇಲಿನಿಂದ ಶರಾವತಿ ನದಿಗೆ ನಿರ್ಮಿಸಲಾಗಿರುವ ಲಿಂಗನಮಕ್ಕಿ ಅಣೆಕಟ್ಟಿನ ಹಿನ್ನೀರನ್ನು ನೋಡಬಹುದಾಗಿದೆ. ಚಾರಣ ಪ್ರಿಯರಿಗೆ ಇದು ಹೇಳಿಮಾಡಿಸಿದ ಜಾಗ.

Kavale durga

ಸಂಪೂರ್ಣ ಕೋಟೆಯನ್ನು ನೋಡಲು ಸುಮಾರು ಮೂರು ಕಿಮೀ ನೆಡೆಯಬೇಕು. ನಿಮ್ಮ ಯಾವ ವಾಹನಗಳನ್ನು ತಂದರೂ ಕವಲೇ ದುರ್ಗ ಗ್ರಾಮದಲ್ಲಿ ನಿಲ್ಲಿಸಿ ಕಾಲ್ನಡಿಗೆಯ ಮೂಲಕವೇ ಇಲ್ಲಿಗೆ ಬರಬೇಕು.

ಹೋಗುವಾಗ ಹಣ್ಣು ಮತ್ತು ನೀರನ್ನು ಮರೆಯದೇ ಜತೆಗೆ ತೆಗೆದುಕೊಂಡು ಹೋಗಿ. ಬೆಳಗ್ಗೆ ಆರೂವರೆ - ಏಳರ ಸುಮಾರಿಗೆ ಹೊರಟರೆ ಸೂಕ್ತ. ನಡೆಯಲು ಸೂಕ್ತ. ವಯಸ್ಸಾದವರೂ ಕೂಡ ಹೋಗಬಹುದು. ಪರಿಸರ ಪ್ರೇಮಿಗಳಿಗೆ ಅತ್ಯಂತ ಪ್ರಿಯವಾಗುವ ಸ್ಥಳ ಇದಾಗಿದೆ. ನಡೆಯುವ ಹಾದಿಯು ಚೆನ್ನಾಗಿದೆ. ತಿಂಡಿ ಊಟದ ವ್ಯವಸ್ಥೆಯನ್ನು ತೀರ್ಥಹಳ್ಳಿಯಿಂದಲೇ ಮಾಡಿಕೊಳ್ಳುವುದು ಸೂಕ್ತ. ಅರ್ಕಿಯಾಲಜಿಕಲ್‌ ಸರ್ವೆ ಆಫ್ ಇಂಡಿಯಾದ ಸುಪರ್ದಿನಲ್ಲಿರುವ ಸ್ಮಾರಕ ಇದಾಗಿದ್ದು, ವೀಡಿಯೋ ಚಿತ್ರೀಕರಣವನ್ನು ಮಾಡಲು ಪರವಾನಿಗೆಯ ಅವಶ್ಯಕತೆ ಇದೆ. ಮಳೆಗಾಲದಲ್ಲಿ ಪರಿಸರ ಹಚ್ಚ ಹಸಿರಿನಿಂದ ಕಂಗೊಳಿಸುವುದನ್ನು ನೋಡುವುದೇ ಆನಂದ.