ಮಂದರಗಿರಿಯ ಅಂದವ ಬಲ್ಲೆಯ
ಮಂದರಗಿರಿ ದೇವಾಲಯ ಸಂಕೀರ್ಣವು ಮಲ್ಲಿನಾಥ ಹೆಸರಿನ ಪ್ರಮುಖ ಜೈನ ಯಾತ್ರಾ ಕೇಂದ್ರವಾಗಿದೆ. ಬೆಟ್ಟದ ತುದಿಯಲ್ಲಿ ಹನ್ನೆರಡನೇ ಶತಮಾನದ ನಾಲ್ಕು ದೇವಾಲಯಗಳು ಇವೆ. ತೀರ್ಥಂಕರರ ವರ್ಣಚಿತ್ರಗಳನ್ನು ಹೊಂದಿರುವ ಬೃಹತ್ ಕಲ್ಲಿನ ಗೋಡೆಯಲ್ಲಿ ಸುತ್ತುವರೆದಿರುವ ಒಂದು ಸ್ತೂಪವಿದೆ. ಬೆಟ್ಟದ ಮೇಲಿನ ದೇವಾಲಯಗಳು ಪಾರ್ಶ್ವನಾಥ, ಸುಪಾರ್ಶ್ವನಾಥ ಮತ್ತು ಇತರ ತೀರ್ಥಂಕರರಿಗೆ ಸಮರ್ಪಿತವಾಗಿವೆ. ಈ ಬಸದಿ ಇರುವ ಜಾಗವೆ ಅಧ್ಭುತವಾಗಿದೆ
- ಕೆ.ಸಿ.ಶ್ರೀನಾಥ್
ಬೆಂಗಳೂರಿನಿಂದ ಶಿವಮೊಗ್ಗ, ಹರಿಹರದ ಕಡೆ ಹೋಗುವಾಗ ತುಮಕೂರು ಬಳಿಯ ಶ್ರೀ ನಂಜುಂಡೇಶ್ವರ ಹೊಟೇಲ್‌ನಲ್ಲಿ ತಟ್ಟೆ ಇಡ್ಲಿ, ಬಿಸಿ ಕಾಫಿ ಸವಿದು ಪ್ರಯಾಣ ಮುಂದುವರೆಸಿದ್ದೇನೆ. ಹೆದ್ದಾರಿಯಲ್ಲಿ ಹೆಚ್ಚಿನ ವಾಹನಗಳ ಸಂಚಾರದಿಂದ ನಾನು ಸುಂದರ ಪರಿಸರವನ್ನು ಗಮನವಿಟ್ಟು ನೋಡಿದ್ದು ಕಮ್ಮಿ. ಆದರೆ, ಇತ್ತೀಚೆಗೆ ಯೂಟ್ಯುಬ್‌ನಲ್ಲಿ ನೋಡಿದ ಸ್ಥಳ ಇದೇ ದಾರಿಯಲ್ಲಿ ಹೋಗುವಾಗ ಕಣ್ಣಿಗೆ ಬಿತ್ತು. ಅದು ಶ್ರೀ ನಂಜುಂಡೇಶ್ವರ ಹೊಟೇಲ್ ಆದರ ನಂತರ ದೂರದಲ್ಲಿ ಒಂದು ಬೋಳುಬೆಟ್ಟದ ಮೇಲೆ ಶ್ರವಣ ಬೆಳಗೊಳದ ಬಾಹುಬಲಿ ಹೋಲುವ ಶಿಲಾಮೂರ್ತಿ. ಹೆದ್ದಾರಿ ಪಕ್ಕದಲ್ಲೆ ಮಹಾದ್ವಾರ, ಅದರ ನಂತರ ಪಂಡಿತನಹಳ್ಳಿ ಇದೆ. ಇಲ್ಲಿನ ಬಸದಿಗೆ ಹೋಗಲು ಟಿಕೆಟ್ ಪಡೆದುಕೊಳ್ಳಬೇಕು. ನಂತರ ಕಾಣುವುದೆ ಬಸದಿಬೆಟ್ಟ. ಬೆಟ್ಟಕ್ಕೆ ಹೋಗಲು 430 ಮೆಟ್ಟಿಲುಗಳನ್ನು ಹತ್ತಿ ಹೋಗಬಹುದು. ಇದೇ ಒಂದು ಚಿಕ್ಕ ಚಾರಣವಾಗುತ್ತದೆ. ನಡೆಯಲಾಗದಿದ್ದರೆ, ವಾಹನಗಳು ಹೋಗಲು ಸುಗಮವಾದ ರಸ್ತೆ ಸಹ ಇದೆ.

ಮಂದರಗಿರಿ ದೇವಾಲಯ ಸಂಕೀರ್ಣವು ಮಲ್ಲಿನಾಥ ಹೆಸರಿನ ಪ್ರಮುಖ ಜೈನ ಯಾತ್ರಾ ಕೇಂದ್ರವಾಗಿದೆ. ಬೆಟ್ಟದ ತುದಿಯಲ್ಲಿ ಹನ್ನೆರಡನೇ ಶತಮಾನದ ನಾಲ್ಕು ದೇವಾಲಯಗಳು ಇವೆ. ತೀರ್ಥಂಕರರ ವರ್ಣಚಿತ್ರಗಳನ್ನು ಹೊಂದಿರುವ ಬೃಹತ್ ಕಲ್ಲಿನ ಗೋಡೆಯಲ್ಲಿ ಸುತ್ತುವರೆದಿರುವ ಒಂದು ಸ್ತೂಪವಿದೆ. ಬೆಟ್ಟದ ಮೇಲಿನ ದೇವಾಲಯಗಳು ಪಾರ್ಶ್ವನಾಥ, ಸುಪಾರ್ಶ್ವನಾಥ ಮತ್ತು ಇತರ ತೀರ್ಥಂಕರರಿಗೆ ಸಮರ್ಪಿತವಾಗಿವೆ. ಈ ಬಸದಿ ಇರುವ ಜಾಗವೆ ಅಧ್ಭುತವಾಗಿದೆ. ಮುಂಜಾನೆಯಲ್ಲಿ ತಂಪಾದ ಗಾಳಿ, ಸುತ್ತಲೂ ನೀರವತೆಯ ಗದ್ದೆ ತೋಟಗಳು, ಬೆಟ್ಟಗುಡ್ಡಗಳು, ಮೈದಾಲ ಕೆರೆ ಬೇರೆ ಲೋಕಕ್ಕೆ ಕರೆದೊಯ್ಯುತ್ತವೆ.
ಈ ಸ್ಥಳವು ಪ್ರಾಚೀನ ಜೈನ ದೇವಾಲಯಗಳು, ಹತ್ತಿರದ ಮೈದಾಲ ಸರೋವರವನ್ನು ಒಳಗೊಂಡಿದೆ. ಈ ಮೈದಾಲ ಸರೋವರ ಪ್ರಶಾಂತೆತೆಯ ಪ್ರತೀಕವಾಗಿದೆ. ಈ ವಿಶಾಲವಾದ ಸರೋವರದ ಪಕ್ಕದಲ್ಲೆ ಬಸದಿಗೆ ರಸ್ತೆ ಹಾದುಹೋಗುತ್ತದೆ. ಇಲ್ಲಿಯ ಭೂದೃಶ್ಯಗಳ ಸೌಂದರ್ಯವನ್ನು ನಾವು ಅನುಭವಿಸಲೇಬೇಕು.

ಮಂದರಗಿರಿ ಸಂಕೀರ್ಣವು ಬೆಟ್ಟದ ಬುಡದಲ್ಲಿ ಚಂದ್ರನಾಥ ಪ್ರತಿಮೆ ಮತ್ತು ಗುರು ಮಂದಿರವನ್ನು ಒಳಗೊಂಡಿದೆ. ಇದು ಧ್ಯಾನಕ್ಕೆ ಸೂಕ್ತವಾದ ಸ್ಥಳ. ಗುರು ಮಂದಿರ ಎಂದು ಕರೆಯಲ್ಪಡುವ 81 ಅಡಿ ಎತ್ತರದ ನವಿಲು ದೇವಾಲಯ ಆರಂಭದಲ್ಲಿ ಜೈನ ಧರ್ಮದ ದಿಗಂಬರ ಪಂಥದವರು ಬಳಸುವ ಪಿಂಚಿ ಅಥವಾ ಕೈ ಬೀಸಣಿಗೆಯನ್ನು ಹೋಲುವಂತೆ ನಿರ್ಮಿಸಲಾಗಿತ್ತು ಎಂದು ಹೇಳಲಾಗುತ್ತದೆ. ಇದರ ಬದಿಯಲ್ಲಿ ಮುಖ ಮಂಟಪ (ಎತ್ತರದ ವೇದಿಕೆ)ದ ಮೇಲೆ ನಿಂತಿರುವ 8ನೆಯ ತೀರ್ಥಂಕರ ಚಂದ್ರನಾಥ (ಚಂದ್ರಪ್ರಭು) ಅವರ 21 ಅಡಿ ಎತ್ತರದ ಪ್ರತಿಮೆಯು ಪ್ರವೇಶದ್ವಾರದ ಬಳಿ ಇದೆ.
ಜೈನ ತೀರ್ಥಂಕರ ಎಂದರೆ ಜ್ಞಾನೋದಯವನ್ನು ಪಡೆದ ದೈವಿಕ ಗುರು, ರಕ್ಷಕ ಅಥವಾ ಸಂತ. ಜೈನ ಧರ್ಮವು 24 ತೀರ್ಥಂಕರರನ್ನು ಹೊಂದಿದ್ದು, ಅದರಲ್ಲಿ ಭಗವಾನ್ ಮಹಾವೀರರು ಕೊನೆಯವರು. ಈ ಪ್ರಶಾಂತ ವಾತವರಣ ಹೊಂದಿರುವ ಬಸದಿಯಲ್ಲಿ ಎಕಾಗ್ರತೆ ತಾನಾಗಿಯೆ ಮೂಡಿಬರುತ್ತೆದೆ. ಮನಸಿಗೆ ಮುದನೀಡುವ ಸ್ಥಳ. ರಜಾ ದಿನಗಳಲ್ಲಿ ಒಂದು ದಿನ ನೀವೂ ಹೋಗಿಬನ್ನಿ. ಖಂಡಿತ ಮೈ ಮನಸು ಪ್ರಫುಲ್ಲವಾಗುತ್ತವೆ.