Saturday, July 4, 2026
Saturday, July 4, 2026

ಮಾವು ಎಂದರೆ ಏನೋ ಹರುಷವೂ.. ಮ್ಯಾಂಗೋ ʼಪಿಕ್‌ʼನಿಕ್‌

ಸಾಮಾನ್ಯವಾಗಿ ಪ್ರವಾಸ ಎಂದರೆ ಬೇರೆ ರಾಜ್ಯಕ್ಕೋ, ದೇಶಕ್ಕೋ ಹೋಗುವುದು ಅನ್ನುವ ತಪ್ಪು ಕಲ್ಪನೆ ಅನೇಕರಲ್ಲಿ ಮನೆ ಮಾಡಿದೆ. ಆದರೆ, ಅದು ನಿಜಕ್ಕೂ ತಪ್ಪು. ನಮ್ಮ ಸುತ್ತ ಮುತ್ತಲಿನ ತೋಟ, ಗದ್ದೆ, ಬೆಟ್ಟ, ಗುಡ್ಡಗಳೂ ಕೂಡ ಒಂದೊಳ್ಳೆ ಪ್ರವಾಸದ ಅನುಭವವನ್ನು ಕೊಡುತ್ತವೆ. ಅಂಥದ್ದೇ ಒಂದು ಲೋಕಲ್‌ ಪ್ರವಾಸಿ ಕಥನವನ್ನು ನಾನಿವತ್ತು ಹೇಳಲು ಹೊರಟಿದ್ದೇನೆ.

  • ಜ್ಯೋತಿ ಶ್ಯಾಮಸುಂದರ್

ಮಾವಿನಹಣ್ಣು ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ? ಹಣ್ಣುಗಳ ರಾಜನಾಗಿರುವ ಮಾವು ಪುಟ್ಟ ಮಗುವಿನಿಂದ ಹಿಡಿದು ವೃದ್ಧರ ತನಕ ಇಷ್ಟ ಪಟ್ಟು ತಿನ್ನುವ ಏಕಮಾತ್ರ ಹಣ್ಣು. ಆದರೀಗ ಮಾರುಕಟ್ಟೆಯಲ್ಲಿ ದೊರೆಯುವ ಎಲ್ಲ ಮಾವಿನಹಣ್ಣುಗಳೂ ರಾಸಾಯನಿಕದಲ್ಲಿ ಮಿಂದೇಳುತ್ತವೆ. ಅದನ್ನು ತಿನ್ನುವುದರಿಂದ ಹಲವಾರು ಕಾಯಿಲೆಗಳು ಬರುತ್ತವೆ. ಆದರೆ, ರಾಸಾಯನಿಕ ರಹಿತ ಮಾವಿನಹಣ್ಣು ಸಿಕ್ಕರೆ, ಅದೂ ನಾವೇ ತೋಟದಿಂದ ಕಿತ್ತು ತಂದರೆ ಹೇಗಿರುತ್ತದೆ ಅಲ್ಲವೇ? ನಾನಂತೂ ಬೆಂಗಳೂರಿನಲ್ಲಿದ್ದರೂ ರಾಸಾಯನಿಕ ಮುಕ್ತ ಮಾವಿನಹಣ್ಣನ್ನು ಮನಸೋ ಇಚ್ಛೆ ಕೊಯ್ದು ತಂದು ಸವಿಯುತ್ತೇನೆ. ಹೇಗೆ ಅನ್ನೋ ಪ್ರಶ್ನೆ ನಿಮ್ಮ ಮನಸಲ್ಲೂ ಮೂಡಿದೆ ಅಂತ ನನಗೆ ಗೊತ್ತು. ಬನ್ನಿ ಹಾಗಾದರೆ ನಿಮ್ಮೆಲ್ಲ ಗೊಂದಲಗಳನ್ನೂ ನಿವಾರಿಸುತ್ತೇನೆ.‌

Untitled design (23)

ಮಾವು-ನಾವು

ನಮ್ಮದೊಂದು ʼಮ್ಯಾಂಗೋ ಪಿಕ್‌ʼ ಅನ್ನುವ ವಾಟ್ಸ್‌ಆಪ್‌ ಗ್ರೂಪ್‌ ಇದೆ. ಶ್ಯಾಮಸುಂದರ್‌ ಹೆಗಡೆ ಅನ್ನುವವರು ಅದರ ಅಡ್ಮಿನ್.‌ ಅವರೇ ಪ್ರತಿ ವರ್ಷ ಮಾವಿನ ಹಣ್ಣಿನ ತೋಟಕ್ಕೆ ಸಮಾನ ಮನಸ್ಕರನ್ನು ಕರೆದುಕೊಂಡು ಹೋಗುತ್ತಾರೆ. ಪ್ರತಿ ವರ್ಷವೂ ಮೂರರಿಂದ ನಾಲ್ಕು ಸಲ ಮ್ಯಾಂಗೋ ಪಿಕ್‌ ನಡೆಯುತ್ತದೆ. ಪ್ರತಿ ಪಿಕ್‌ನಲ್ಲೂ ನೂರಾರು ಕುಟುಂಬಗಳು ಬಂದು ಮನ ಬಂದಷ್ಟು ಮಾವಿನಕಾಯಿಗಳನ್ನು ಗಿಡದಿಂದ ನೇರವಾಗಿ ಕಿತ್ತುಕೊಂಡು ಹೋಗುತ್ತಾರೆ. ಮ್ಯಾಂಗೋ ಪಿಕ್‌ನ ಮುಖ್ಯ ಉದ್ದೇಶ ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗಲಿ ಎನ್ನುವ ಕಳಕಳಿ. ಸಾಮಾನ್ಯವಾಗಿ ರೈತರು ಎಲ್ಲ ಬೆಳೆಗಳನ್ನೂ ಕಷ್ಟಪಟ್ಟು ಬೆಳೆದಿರುತ್ತಾರೆ. ಅದು ಅವರಿಗೆ ವರ್ಷದ ಕೂಳು. ಅಂಥ ಬೆವರಿನ ಬೆಳೆಗೆ ಸರಿಯಾದ ಬೆಲೆ ಸಿಗದೇ ಹೋದಲ್ಲಿ ರೈತರು ತತ್ತರಿಸಿ ಹೋಗುತ್ತಾರೆ. ಮಧ್ಯವರ್ತಿಗಳ ಹಾವಳಿಯಂತೂ ಹೇಳತೀರದು. ರೈತರ ಹಾಗೂ ಗ್ರಾಹಕರ ಹಿತದೃಷ್ಟಿಯಿಂದ ಶ್ಯಾಮಸುಂದರ್‌ ಹೆಗಡೆ ಈ ಮ್ಯಾಂಗೋ ಪಿಕ್‌ ಎಂಬ ಪರಿಕಲ್ಪನೆಯನ್ನು ಹುಟ್ಟುಹಾಕಿದರು.

ಮುಕ್ಕಾಲು ಪ್ರತಿಶತ ಭಾರತೀಯರು ಕೃಷಿ ಮೂಲದವರು. ಆದರೀಗ ಐಟಿ ಯುಗದಲ್ಲಿ ಮೂಲ ಕಸುಬಾದ ಕೃಷಿಯನ್ನು ಮರೆಯುತ್ತಿದ್ದೇವೆ. ಹಾಗಂತ ಎಲ್ಲರೂ ಕೆಲಸಬಿಟ್ಟು ತೋಟ ಮಾಡಬೇಕು ಎಂದು ಹೇಳುತ್ತಿಲ್ಲ. ನಮ್ಮ ಮುಂದಿನ ಪೀಳಿಗೆಗೆ ಕೃಷಿ ಬಗ್ಗೆ ತಿಳಿವಳಿಕೆ ಮೂಡಿಸಿದರೆ ಸಾಕು. ಆ ನಿಟ್ಟಿನಲ್ಲಿ ಇಡುತ್ತಿರುವ ಒಂದು ಪುಟ್ಟ ಹೆಜ್ಜೆಯೇ ಈ ಮ್ಯಾಂಗೋ ಪಿಕ್‌. ಇದನ್ನು ಪಿಕ್‌ ಅನ್ನುವುದಕಿಂತ ಪಿಕ್‌ನಿಕ್‌ ಎಂದರೆ ಹೆಚ್ಚು ಸೂಕ್ತ.

ಪ್ರತಿ ವರ್ಷದ ಹಬ್ಬ

ನಾನು ಪ್ರತಿ ವರ್ಷ ತಪ್ಪದೇ ನನ್ನ ಕುಟುಂಬದೊಂದಿಗೆ ಈ ಮ್ಯಾಂಗೋ ಪಿಕ್‌ಗೆ ಹೋಗುತ್ತೇನೆ. ಈಗಿನ ಮಕ್ಕಳಿಗೆ ತೋಟ‌, ಗದ್ದೆ, ಕೃಷಿ ಎಂದರೆ ಜಾಸ್ತಿ ತಿಳಿದಿರಲಿಕ್ಕಿಲ್ಲ. ಕೆಲವು ಪೋಷಕರು ಅದಕ್ಕೆ ಅವಕಾಶವನ್ನೂ ಮಾಡಿ ಕೊಟ್ಟಿರುವುದಿಲ್ಲ. ಕೆಲವರು ತಮ್ಮ ಮಕ್ಕಳಿಗೆ ತೋಟ, ಕೃಷಿ, ರೈತರ ಬಗ್ಗೆ ತಿಳಿಸುವ, ಪರಿಚಯಿಸುವ ಕನಿಷ್ಠ ಪ್ರಯತ್ನವನ್ನೂ ಮಾಡುವುದಿಲ್ಲ. ನೇರವಾಗಿ ರೈತರ ತೋಟಕ್ಕೆ ಹೋಗುವುದರಿಂದ ಮಕ್ಕಳಿಗೂ ಕೃಷಿ ಬಗ್ಗೆ ಆಸಕ್ತಿ ಮೂಡುತ್ತದೆ. ರೈತರ ಜತೆ ಒಡನಾಡಿ ಕೃಷಿಯ ಬಗ್ಗೆಯೂ ಅರಿವು ಮೂಡುತ್ತದೆ. ನನ್ನ ಮಗಳಿಗಂತೂ ಮ್ಯಾಂಗೋ ಪಿಕ್‌ ಅಂದರೆ ತುಂಬಾ ಇಷ್ಟ. ಮೇ ತಿಂಗಳು ಬಂತೆಂದರೆ ಸಾಕು, ಯಾವಾಗ ಮಾವಿನ ತೋಟಕ್ಕೆ ಹೋಗೋಣ ಅಂತ ದಂಬಾಲು ಬೀಳಲು ಶುರು ಮಾಡುತ್ತಾಳೆ.

Untitled design (24)

ಈ ವರ್ಷದ ಮೊದಲ ಮ್ಯಾಂಗೋ ಪಿಕ್‌ ಮೇ ತಿಂಗಳ ಹದಿನೇಳರಂದು ನಡೆದಿತ್ತು. ಕಾರಣಾಂತರದಿಂದ ನಮಗೆ ಆಗ ಹೋಗಲು ಸಾಧ್ಯವಾಗಿರಲಿಲ್ಲ. ಅದೃಷ್ಟವಶಾತ್ ಕಳೆದ ಭಾನುವಾರ ಅಂದರೆ ಮೇ 31ಕ್ಕೆ ಮತ್ತೆ ಮ್ಯಾಂಗೋ ಪಿಕ್‌ ಇದೆ ಎನ್ನುವ ವಿಷಯ ತಿಳಿಯುತ್ತಿದ್ದಂತೆ ನಾನು, ಮಗಳು, ಪತಿ, ನನ್ನ ತಂಗಿ ಒಟ್ಟಾರೆ ನಮ್ಮ ಕುಟುಂಬದವರೆಲ್ಲ ಕುಣಿದಾಡಿಬಿಟ್ಟೆವು. ನಮ್ಮ ಜತೆ ಹಲವು ಸ್ನೇಹಿತರೂ ಬರುವುದೆಂದು ನಿರ್ಧಾರವಾಯಿತು. ಮಗಳಂತೂ ಯಾವಾಗ ಭಾನುವಾರ ಬರುತ್ತದೆ ಎಂದು ಎಣಿಸಲು ಶುರು ಮಾಡಿದ್ದಳು.

ಇದನ್ನೂ ಓದಿ: ಕುಂತ್ರು ನಿಂತ್ರು ಕುಂತಿಬೆಟ್ಟದ್ದೇ ಧ್ಯಾನ!

ಆ ದಿನದ ಸಂಭ್ರಮ

ಬಹುನಿರೀಕ್ಷಿತ ಮ್ಯಾಂಗೋ ಪಿಕ್‌ ದಿನ ಬಂದೇ ಬಿಟ್ಟಿತು. ಮಧ್ಯಾಹ್ನ ಎರಡೂ ವರೆಗೆ ಅಂತ ಸಮಯ ನಿಗದಿಯಾಗಿತ್ತು. ಆದರೆ ನಾವು ಸ್ವಲ್ಪ ಮೊದಲೇ ತಲುಪಿದ್ದೆವು. ಅಲ್ಲಿಗೆ ಹೋಗುತ್ತಿದ್ದಂತೆ ಮ್ಯಾಂಗೋ ಪಿಕ್ ಗ್ರೂಪಿನ ಇತರ ಸದಸ್ಯರೂ ಸಿಕ್ಕರು. ಶ್ಯಾಮಸುಂದರ್‌ ಹೆಗಡೆ ನಮ್ಮನ್ಲೆಲ್ಲ ಆತ್ಮೀಯವಾಗಿ ಸ್ವಾಗತಿಸಿದರು. ಅಲ್ಲಿರುವ ನುಗ್ಗೆ, ದಂಟು, ಕರಿಬೇವು, ನೆಲನೆಲ್ಲಿ ಹೀಗೆ ತರೇಹವಾರಿ ಸೊಪ್ಪುಗಳನ್ನು ಹೆಂಗಸರೆಲ್ಲ ಕಿತ್ತುಕೊಂಡರು. ಸರಿಯಾಗಿ ಮೂರು ಗಂಟೆಗೆ ಗ್ರೂಪಿನ ಅಡ್ಮಿನ್‌ ಶ್ಯಾಮಸುಂದರ್‌ ಹೆಗಡೆ ಅವರಿಂದ ಚಿಕ್ಕ ಭಾಷಣವೂ ಇತ್ತು. ಮ್ಯಾಂಗೋ ಪಿಕ್‌ ಎನ್ನುವ ಪರಿಕಲ್ಪನೆ ಹೇಗೆ ಹುಟ್ಟಿದೆ? ಅದರ ಉದ್ದೇಶ ಏನು? ಎನ್ನುವುದನ್ನು ಶ್ಯಾಮಸುಂದರ್‌ ತುಂಬಾ ಚೆನ್ನಾಗಿ ವಿವರಿಸಿದರು. ಆ ಕಾರ್ಯಕ್ರಮಕ್ಕೆ ಮುಂದಿನವಾರ ತೆರೆ ಕಾಣಲಿರುವ ಸಿನಿಮಾ ಒಂದರ ಹೀರೋ ಕೂಡ ಬಂದಿದ್ದರು. ಎಲ್ಲರೂ ಅವರೊಟ್ಟಿಗೆ ಸೆಲ್ಫೀ ತೆಗೆದುಕೊಂಡು ಖುಷಿಪಟ್ಟೆವು.

ಎಲ್ಲರೂ ಬೇಕಾದ ಮಾವಿನ ಮರವನ್ನು ಆಯ್ಕೆ ಮಾಡಿಕೊಂಡು ಬೇಕಾದಷ್ಟು ದೊಡ್ಡ ಮಲ್ಲಿಕಾ ಮಾವಿನಕಾಯಿಯನ್ನು ಕೊಯ್ದೆವು. ಕೊಯ್ಯುತ್ತಾ ಕೊಯ್ಯುತ್ತಾ ಅದೆಷ್ಟು ಮಾವಿನಕಾಯಿ ಚೀಲ ತುಂಬಿತ್ತು ಅನ್ನುವುದೇ ಗೊತ್ತಾಗಲಿಲ್ಲ. ಮಗಳಂತೂ ಮರ ಹತ್ತಿ ಮಾವಿನಕಾಯಿ ಕೈಯಾರೆ ಕೊಯ್ದು ತುಂಬಾ ಖುಷಿಪಟ್ಟಳು. ಅಲ್ಲೇ ನಮಗೆ ಪಕ್ಕದ ತೋಟದ ರೈತರಿಂದ ಹಲಸಿನ ಹಣ್ಣು ಸಹ ಸಿಕ್ಕಿತು. ಅದನ್ನೂ ಆಸೆ ಇಂದ ಕೊಂಡುಕೊಂಡೆವು. ಆ ಮಾವಿನ ತೋಟದ ಮಾಲಿಕರು ಕೂಡ ಪ್ರೀತಿಯಿಂದ ಎಲ್ಲರನ್ನೂ ಮಾತನಾಡಿಸಿದರು. ಜ್ಯೂಸ್ ಮತ್ತು ನೀರಿನ ವ್ಯವಸ್ಥೆಯೂ ಅಲ್ಲಿತ್ತು. ‌ಈ ಮ್ಯಾಂಗೋ ಪಿಕ್‌ ಕೇವಲ ಮಾವಿನಕಾಯಿ ಕೊಯ್ಯುವುದಷ್ಟೇ ಅಲ್ಲದೆ ಒಂದೊಳ್ಳೆ ಪಿಕ್‌ನಿಕ್‌ ಕೂಡ ಆಯಿತು. ಒಟ್ಟಾರೆ ಹೇಳುವುದಾದರೆ ಮ್ಯಾಂಗೋ ಪಿಕ್‌ ಪ್ರವಾಸಕ್ಕೊಂದು ಹೊಸ ಆಯಾಮವನ್ನೇ ಸೃಷ್ಟಿ ಮಾಡಿದೆ.

ಮಾಹಿತಿ ಪೆಟ್ಟಿಗೆ:

  • ಪ್ರತಿ ವರ್ಷವೂ ಈ ಹಬ್ಬ ನಡೆಯುತ್ತದೆ.
  • ಬೇಕಾದ ಮಾವಿನ ಹಣ್ಣುಗಳನ್ನು ಕೈಯಾರೆ ಕಿತ್ತು ತರಬಹುದು.
  • ಮ್ಯಾಂಗೋ ಪಿಕ್‌ ಪ್ರವಾಸಕ್ಕೊಂದು ಹೊಸ ಆಯಾಮವನ್ನೇ ಸೃಷ್ಟಿ ಮಾಡಿದೆ.

ಲೇಖಕರು: ಹವ್ಯಾಸಿ ಬರಹಗಾರರು

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Next

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..