ಕುಮಟಾದಲ್ಲೊಂದು ಕೋಟೆ: ಮಿರ್ಜಾನ್ ಫೋರ್ಟ್
ಉತ್ತರ ಕನ್ನಡದ ಹಸಿರು ಪರಿಸರದ ನಡುವೆ, ಅಘನಾಶಿನಿ ನದಿಯ ದಡದಲ್ಲಿ ಇತಿಹಾಸದ ಹಲವು ಪುಟಗಳನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿರುವುದು ಮಿರ್ಜಾನ್ ಕೋಟೆ. ‘ಕಾಳುಮೆಣಸಿನ ರಾಣಿ’ ಚೆನ್ನಭೈರಾದೇವಿಯ ನೆನಪನ್ನು ಹೊತ್ತಿರುವ ಈ ಕೋಟೆಯ ಕೆಂಪುಕಲ್ಲಿನ ಗೋಡೆಗಳು, ಬಾವಿಗಳು, ಗೋಪುರಗಳು ಮತ್ತು ಗುಪ್ತ ದಾರಿಗಳು ಕುತೂಹಲ ಮೂಡಿಸುತ್ತವೆ. ಹಸಿರಿನಿಂದ ಆವೃತವಾಗುವ ಮಳೆಗಾಲದಲ್ಲಿ ಮತ್ತಷ್ಟು ರಮಣೀಯವಾಗಿ ಕಾಣುವ ಈ ಕೋಟೆ, ಇತಿಹಾಸದ ನೈಜ ಮಾಹಿತಿಗಾಗಿ ಇನ್ನಷ್ಟು ಗಮನ ಸೆಳೆಯಬೇಕಾದ ಪ್ರವಾಸಿ ತಾಣವಾಗಿದೆ.
- ರವಿಶಂಕರ ಶಾಸ್ತ್ರಿ, ದಂಬೆ
ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ತಮ್ಮ ನಾಡಿನ ರಕ್ಷಣೆಗಾಗಿ ಕೋಟೆ-ಕೊತ್ತಲಗಳನ್ನು ಕಟ್ಟಿಸುತ್ತಿದ್ದು ಹೊಸತಲ್ಲವಷ್ಟೇ. ಅಂತೆಯೇ, ಉತ್ತರಕನ್ನಡ ಜಿಲ್ಲೆಯ ಕುಮಟಾ ಪಟ್ಟಣದಿಂದ ಸುಮಾರು 10-12ಕಿಮೀ. ದೂರದಲ್ಲಿ ಒಂದು ಸುಂದರವಾದ ಕೋಟೆಯು ಇಂದಿಗೂ ಅಚಲವಾಗಿ ನಿಂತಿದೆ. 'ಕಾಳುಮೆಣಸಿನ ರಾಣಿ' ಎಂದೇ ಹೆಸರಾದ ಚೆನ್ನಭೈರಾದೇವಿಯು ಕಟ್ಟಿಸಿದ ಕೋಟೆ ಎಂದೇ ಜನಜನಿತವಾಗಿರುವ ಇದು 'ಮಿರ್ಜಾನ್' ಎಂಬಲ್ಲಿ, ಹತ್ತು ಎಕರೆಗಿಂತಲೂ ವಿಶಾಲವಾದ ಪ್ರದೇಶದಲ್ಲಿ ಹರಡಿದೆ.
ಇದನ್ನೂ ಓದಿ: ಇದು ಆರುಮುಗಂ ಕೋಟೆ ಕಣೋ…!
ಕಾಳುಮೆಣಸಿನ ರಾಣಿಯ ಕೋಟೆ
ಕೋಟೆಯ ಇತಿಹಾಸದ ಬಗ್ಗೆ ಹಲವು ಬಗೆಯ ಹೇಳಿಕೆಗಳಿದ್ದರೂ, ಚೆನ್ನಭೈರಾದೇವಿಯ ಹೆಸರೇ ಹೆಚ್ಚು ಕೇಳಿಬರುತ್ತದೆ. ಆಗಿನ ಕಾಲದಲ್ಲಿ ಯೂರೋಪಿನ ಪೋರ್ಚುಗಲ್ ಮೊದಲಾದ ದೇಶಗಳಿಗೆ ಇಲ್ಲಿಂದ ಹೇರಳವಾಗಿ ಕಾಳುಮೆಣಸು ಮತ್ತಿತರ ಅಗತ್ಯ ವಸ್ತುಗಳು ರವಾನೆಯಾಗುತ್ತಿದ್ದವು ಎಂದು ಪ್ರತೀತಿ. ಚೆನ್ನಭೈರಾದೇವಿಯು 54 ವರ್ಷಗಳಿಗೂ ಹೆಚ್ಚು ಕಾಲ ರಾಜ್ಯವಾಳಿದ್ದಾಗಿ ಇತಿಹಾಸ ಹೇಳುತ್ತದೆ. ವ್ಯಾಪಾರ ಮತ್ತು ರಕ್ಷಣೆಯ ದೃಷ್ಟಿಯಿಂದ ಈ ಕೋಟೆಯು ಆಯಕಟ್ಟಿನ ಜಾಗದಲ್ಲಿತ್ತು ಎಂದೇ ಹೇಳಬಹುದು. ಸಮುದ್ರಕ್ಕೆ ಹತ್ತಿರದಲ್ಲಿಯೇ, ಅಘನಾಶಿನಿ ನದಿಯ ಬಳಿಯಲ್ಲಿಯೇ ಈ ಕೋಟೆಯಿದೆ.

ಕೆಂಪುಕಲ್ಲಿನ ಕೋಟೆ ವೈಭವ
ಸ್ಥಳೀಯವಾಗಿ ಸಿಗುವ ಕೆಂಪು ಕಲ್ಲಿನಿಂದ ಇದನ್ನು ಕಟ್ಟಲಾಗಿದೆ. ಈ ಕೋಟೆಗೆ ನಾಲ್ಕು ದ್ವಾರಗಳಿದ್ದರೂ, ಈಗ ಮುಖ್ಯವಾದ ಒಂದು ದ್ವಾರದಿಂದ ಮಾತ್ರ ಪ್ರವಾಸಿಗರಿಗೆ ಹೋಗಬಹುದು. ವಿಶಾಲವಾದ ಮೆಟ್ಟಿಲುಗಳನ್ನು ಏರುತ್ತಾ ಹೋದರೆ ನಮಗೆ ಕೋಟೆಯ ಸುಂದರ ದೃಶ್ಯಗಳು ಕಾಣುತ್ತಾ ಹೋಗುತ್ತವೆ. ಕೋಟೆಯ ರಕ್ಷಣೆಗಾಗಿ ನಿರ್ಮಿಸಿದ ವೀಕ್ಷಣಾ ಗೋಪುರಗಳು ಈಗಲೂ ಸುಸ್ಥಿತಿಯಲ್ಲಿವೆ. ಒಳಗಡೆ ವಿಶಾಲವಾದ ಬಾವಿಗಳಿದ್ದು, ಅವುಗಳಿಗೆ ಇಳಿದು ಹೋಗಲು ವಿಸ್ತಾರವಾದ ಮೆಟ್ಟಿಲುಗಳಿವೆ. ಒಳಗಿರುವ ಬಾವಿಗಳು ಒಂದಕ್ಕೊಂದು ಸಂಪರ್ಕ ಹೊಂದಿರಬೇಕು ಅನಿಸುತ್ತದೆ. ಕೋಟೆಯ ಮಧ್ಯಭಾಗದಲ್ಲಿ ವಿಶಾಲವಾದ ಸಭಾಂಗಣದಂತೆ ಕಾಣುವ ರಚನೆಯಿದೆ. ಅಲ್ಲಿಯೇ ಸಂತೆಯೂ ನಡೆಯುತ್ತಿದ್ದಿರಬೇಕು. ಆಗಿನ ಕಾಲಕ್ಕೆ ಅಗತ್ಯವಾಗಿದ್ದ ಗುಪ್ತ ದಾರಿಗಳು ಈ ಕೋಟೆಯೊಳಗೆ ಇರಬೇಕು. ಕೋಟೆಯ ಮೇಲುಗಡೆಯಿಂದ ಅಘನಾಶಿನಿ ನದಿಯ ಕಡೆಗಿನ ನೋಟವು ಮನ ತಣಿಸುವಂತೆ ಇದೆ, ನದಿ ಮತ್ತು ಕೋಟೆಯ ನಡುವೆ ಹಸಿರು ಗದ್ದೆಗಳನ್ನು ಕಾಣಬಹುದು.
ಇತಿಹಾಸಕ್ಕೆ ಫಲಕವಿಲ್ಲ
ಹೋಗಿರುವ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ, ಕೋಟೆಯ ನಿರ್ಮಾಣಕ್ಕೆ ಉಪಯೋಗಿಸಿದ್ದೇ ಮಾದರಿಯ ಕಲ್ಲುಗಳಿಂದ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಕುಳಿತು ದಣಿವಾರಿಸಿಕೊಳ್ಳಬಹುದು, ಇಲ್ಲವೇ ಸಂಜೆಯ ತಣ್ಣಗಿನ ಗಾಳಿಯನ್ನು ಆಸ್ವಾದಿಸಬಹುದು. ಆದರೆ, ಕೋಟೆಯ ಇತಿಹಾಸದ ಬಗ್ಗೆ ಮಾಹಿತಿ ನೀಡುವ ಯಾವುದೇ ಫಲಕಗಳು ಅಲ್ಲಿಲ್ಲ. ಅದರ ಭವ್ಯವಾದ ಇತಿಹಾಸ ಹೇಳಲು ಅಲ್ಲಿ ಯಾರೂ ಜನರಿಲ್ಲ. ಹಾಗಾಗಿ, ಅಲ್ಲಿಗೆ ಬಂದ ಪ್ರವಾಸಿಗರು ತಮಗೆ ತೋಚಿದಂತೆ ಕೋಟೆಯ ಬಗ್ಗೆ ಮತ್ತು ಅದರ ಹಿಂದಿರಬಹುದಾದ ಕಥೆಯ ಬಗ್ಗೆ ವಿಶ್ಲೇಷಿಸುತ್ತಾ ಹೋಗುವುದನ್ನು ಕಂಡೆವು. ಹಳೆಯ ಕಾಲದ ಕೋಟೆಯಾದರೂ, ಇಂದಿಗೂ ಅದು ಸದೃಢವಾಗಿಯೇ ಕಾಣುತ್ತಿದೆ. ಬರುವ ಪ್ರವಾಸಿಗರಿಗೆ ಹೆಚ್ಚಿನ ಮತ್ತು ನೈಜವಾದ ಮಾಹಿತಿ ನೀಡುವ ಪ್ರಯತ್ನಕ್ಕೆ ಯಾರೂ ಕೈಹಾಕದಿರುವುದು ದುರದೃಷ್ಟವೇ ಸರಿ.

ಮಳೆಗಾಲದ ಹಸಿರು ಸೊಬಗು
ಮಳೆಗಾಲದಲ್ಲಿ ಇಲ್ಲಿಗೆ ಭೇಟಿ ನೀಡಿದರೆ, ಇಡೀ ಕೋಟೆಯು ಹಸಿರಿನಿಂದ ಆವರಿಸಿದಂತೆ ಕಾಣುತ್ತದೆ. ಫೊಟೋ ತೆಗೆಯುವವರಿಗೆ ಉತ್ತಮವಾದ ದೃಶ್ಯ ವೈಭವವನ್ನು ಈ ಕೋಟೆಯು ನೀಡುತ್ತದೆ. ಕಾಲದ ಮಹಿಮೆ ಎಂಬಂತೆ, ನಾವು ಹೋಗಿದ್ದಾಗ ಅನೇಕರು ಬಗೆ ಬಗೆಯ ಫೋಸ್ ನೀಡುತ್ತಾ ಫೊಟೋ, ವಿಡಿಯೋ ತೆಗೆಯುತ್ತಿದ್ದರು. ಕೋಟೆಯ ಹೊರಗಡೆ ಶೌಚಾಲಯ ವ್ಯವಸ್ಥೆ ಇದೆ. ಪ್ರವಾಸಿಗರು ವಾಹನ ಪಾರ್ಕಿಂಗ್ ಗೆ ನಿಗದಿತ ಶುಲ್ಕ ನೀಡಬೇಕಾಗುತ್ತದೆ, ಪ್ರತ್ಯೇಕವಾದ ಪ್ರವೇಶ ಶುಲ್ಕ ಇರುವುದಿಲ್ಲ. ತಿಂಡಿ ತಿನಿಸುಗಳಿಗಾಗಿ ಸಣ್ಣ ಪುಟ್ಟ ಅಂಗಡಿಗಳು ಕೋಟೆಯ ಹೊರಗಡೆ ಇವೆ.
ಒಟ್ಟಾರೆಯಾಗಿ ಕೋಟೆಯೊಂದನ್ನು ಕಣ್ತುಂಬಿಕೊಂಡು ಖುಷಿಯಾದರೂ, ಅದರ ಇತಿಹಾಸದ ಹಾಗೂ ವಿಶೇಷತೆಯ ಬಗ್ಗೆ ಐತಿಹಾಸಿಕವಾಗಿ ದೃಢಪಡಿಸಿದ ಸಂಗತಿಗಳನ್ನು ಸಂಬಂಧಿಸಿದ ಇಲಾಖೆಯು ಪ್ರವಾಸಿಗರಿಗೆ ಅಲ್ಲಿ ಒದಗಿಸಿದರೆ ಇನ್ನಷ್ಟು ಅರ್ಥಪೂರ್ಣವಾದೀತು.