ಪಟಪಟನೆ ಕನ್ನಡ ಮಾತನಾಡುವ ಬಿಹಾರಿ ಅಧಿಕಾರಿ 'ಪ್ರಶಾಂತ್ ಕುಮಾರ್ ಮಿಶ್ರಾ'
ಬಿಹಾರ ಮೂಲದ ಮಿಶ್ರಾ ಅವರು ಕಳೆದ ಹಲವು ವರ್ಷಗಳಿಂದ ಕರ್ನಾಟಕದ ವಿವಿಧ ಭಾಗಗಳಲ್ಲಿ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸಿದ್ದು, ಸುಲಲಿತವಾಗಿ ಕನ್ನಡ ಮಾತನಾಡಬಲ್ಲರು. 2014ರ ಕರ್ನಾಟಕ ಕೇಡರ್ ನ ಐಎಎಸ್ ಅಧಿಕಾರಿ ಮಿಶ್ರಾ ಈ ಹಿಂದೆ ಕೆಎಸ್‌ಟಿಡಿಸಿ ಯ ನಿರ್ದೇಶಕರಾಗಿ ತಮ್ಮ ದಕ್ಷತೆ ಮೆರೆದಿದ್ದರು.
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ(ಕೆಎಸ್‌ಟಿಡಿಸಿ) ನೂತನ ವ್ಯವಸ್ಥಾಪಕ ನಿರ್ದೇಶಕರ ನೇಮಕವಾಗಿದೆ. ನಿರ್ಗಮಿತ ಅಧಿಕಾರಿ ರಾಜೇಂದ್ರ ಕೆ.ವಿ ಅವರ ಸ್ಥಾನವನ್ನು ಮತ್ತೊಬ್ಬ ಐಎಎಸ್ ಅಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತುಂಬಿದ್ದಾರೆ. ದಕ್ಷ ಆಡಳಿತ ಮತ್ತು ಕರ್ತವ್ಯಪಾಲನೆಯಿಂದ ಹೆಸರಾಗಿರುವ ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನು ಸೆಪ್ಟೆಂಬರ್ 12ರಂದು ಕೆಎಸ್‌ಟಿಡಿಸಿ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಧಿಸೂಚನೆ ಹೊರಡಿಸಿತ್ತು. ಆದರೆ ವೈಯಕ್ತಿಕ ಕಾರ್ಯಕ್ರಮಗಳಿದ್ದ ಹಿನ್ನೆಲೆಯಲ್ಲಿ ಅವರು ತಮ್ಮ ಹುಟ್ಟೂರಿಗೆ ತೆರಳಿದ್ದರು. ವಾಪಸ್ ಬಂದ ಕೂಡಲೇ ಮಿಶ್ರಾ ಅವರು ಹೊಸ ಜವಾಬ್ದಾರಿ ಹೊರಲು ಕರ್ತವ್ಯಕ್ಕೆ ಹಾಜರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ನಿರ್ಗಮಿತ ಅಧಿಕಾರಿ ಕೆ ವಿ ರಾಜೇಂದ್ರ ಅವರೂ ಈ ಮೊದಲು ಅತ್ಯಂತ ಉತ್ಸಾಹದಿಂದ ಹಾಗೂ ದೂರದರ್ಶಿ ಆಲೋಚನೆಗಳಿಂದ ಕೆಎಸ್‌ಟಿಡಿಸಿ ಯಲ್ಲಿ ಚುರುಕುತನ ತಂದಿದ್ದರು. ಕಿರು ಅವಧಿಯಲ್ಲೇ ಹಲವಾರು ಉತ್ತಮ ಕೆಲಸಗಳಿಗೆ ಅಡಿಪಾಯ ಹಾಕಿದ್ದರು. ಆದರೆ ಅವರೀಗ ಮತ್ತೊಂದು ಮಹತ್ವದ ಜವಾಬ್ದಾರಿ ನಿಮಿತ್ತ ವರ್ಗಾವಣೆಗೊಂಡಿದ್ದಾರೆ. ಕೆಎಸ್‌ಟಿಡಿಸಿ ಮತ್ತು ಪ್ರವಾಸಿಪ್ರಿಯ ಜನತೆ ನೂತನವಾಗಿ ನೇಮಕಗೊಂಡಿರುವ ಪ್ರಶಾಂತ್ ಕುಮಾರ್ ಮಿಶ್ರಾ ಅವರ ಬಗ್ಗೆ ಭರವಸೆಯಿಂದ ನೋಡುತ್ತಿದೆ.
ಬಿಹಾರ ಮೂಲದ ಮಿಶ್ರಾ ಅವರು ಕಳೆದ ಹಲವು ವರ್ಷಗಳಿಂದ ಕರ್ನಾಟಕದ ವಿವಿಧ ಭಾಗಗಳಲ್ಲಿ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸಿದ್ದು, ಸುಲಲಿತವಾಗಿ ಕನ್ನಡ ಮಾತನಾಡಬಲ್ಲರು. 2014ರ ಕರ್ನಾಟಕ ಕೇಡರ್ ನ ಐಎಎಸ್ ಅಧಿಕಾರಿ ಮಿಶ್ರಾ ಈ ಹಿಂದೆ ಕೆಎಸ್‌ಟಿಡಿಸಿ ಯ ನಿರ್ದೇಶಕರಾಗಿ ತಮ್ಮ ದಕ್ಷತೆ ಮೆರೆದಿದ್ದರು. ಆ ನಂತರ ಅವರು ಬಳ್ಳಾರಿ ಜಿಲ್ಲೆಗೆ ಡಿಸಿಯಾಗಿ ನೇಮಕಗೊಂಡು ಅಲ್ಲಿಯೂ ಜನಪ್ರಿಯತೆ ಗಳಿಸಿದ್ದರು. ಸರಕಾರದಿಂದಲೂ ಮೆಚ್ಚುಗೆ ಗಳಿಸಿದ್ದರು. ಬಳ್ಳಾರಿಯಲ್ಲಿದ್ದಾಗ ರೂಮ್ ಟು ರೀಡ್ ಅಭಿಯಾನಕ್ಕೆ ಬೆಂಬಲ ನೀಡಿ ವಿದ್ಯಾರ್ಥಿಗಳ ಹಿತಾಸಕ್ತಿಗಾಗಿ ಕೈಜೋಡಿಸಿದ್ದರು. ಅದೇ ರೀತಿ ಬಳ್ಳಾರಿಯಲ್ಲಿ ಫಿಟ್ನೆಸ್ ಅಭಿಯಾನಕ್ಕೆ ಬೆಂಬಲ ನೀಡಿ ಸ್ಟೀಲ್ ಸಿಟಿ ರನ್ ನಲ್ಲಿ ಭಾಗವಹಿಸಿ ಜನರ ಪ್ರೀತಿಗೆ ಭಾಜನರಾಗಿದ್ದರು.ಬಳ್ಳಾರಿಯ ಅಭಿವೃದ್ಧಿಯ ಹಿಂದೆ ಪ್ರಶಾಂತ್ ಕುಮಾರ್ ಮಿಶ್ರಾ ಶ್ರಮವಿದೆ ಎಂದು ಅಲ್ಲಿನ ಜನತೆ ಉತ್ತಮ ಮಾತುಗಳನ್ನಾಡಿದ್ದಾರೆ.
ಇದೀಗ ಕೆಎಸ್‌ಟಿಡಿಸಿ ಗೆ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡು ಒಂದೇ ವಾರದಲ್ಲಿ ನಿಗಮದ ಈ ಮೊದಲ ಕೆಲಸಗಳ ಬಗ್ಗೆ, ಮುಂದಿನ ಯೋಜನೆಗಳ ಬಗ್ಗೆ, ಪ್ರವಾಸೋದ್ಯಮ ನೀತಿಯ ಬಗ್ಗೆ, ಪ್ರವಾಸಿಗರ ದೃಷ್ಟಿಕೋನದಲ್ಲಿ ಏನೇನು ಬೇಕಾಗಿದೆ ಎಂಬ ಬಗ್ಗೆ ಹಲವಾರು ವಿಚಾರಗಳನ್ನು ಅಧ್ಯಯನ ಮಾಡಿರುವ ಮಿಶ್ರಾ ಅವರು, ಮುಂದಿನ ದಿನಗಳಲ್ಲಿ ಸವಾಲುಗಳನ್ನು ಮೆಟ್ಟಿನಿಂತು ಸಾಧಿಸುವ ಆತ್ಮವಿಶ್ವಾಸ ತೋರಿದ್ದಾರೆ. ಅವರು ನೇಮಕವಾದ ವಾರದಲ್ಲಿಯೇ ವಿಶ್ವ ಪ್ರವಾಸೋದ್ಯಮ ದಿನ ಮತ್ತು ಮೈಸೂರು ದಸರಾ ಇರುವುದು ಅವರನ್ನು ತಕ್ಷಣದಿಂದಲೇ ಬ್ಯುಸಿಯಾಗುವಂತೆ ಮಾಡಿದೆ. ನೂತನ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರಾ ಅವರ ನೇಮಕವನ್ನು ಸ್ವಾಗತಿಸುತ್ತಾ, ಪ್ರವಾಸಿ ಪ್ರಪಂಚ ಪತ್ರಿಕೆ ಅವರಿಂದ ಉತ್ತಮ ಆಡಳಿತ ನಿರೀಕ್ಷಿಸಿ ಶುಭಹಾರೈಸುತ್ತದೆ.