ಕರಿಘಟ್ಟ ಗಿರಿವಾಸ ಶ್ರೀ ವೆಂಕಟೇಶ
ಕಾವೇರಿ ಮತ್ತು ಲೋಕಪಾವನಿ ನದಿಗಳ ಸಂಗಮವನ್ನೂ ಇಲ್ಲಿಂದ ಕಣ್ತುಂಬಿಕೊಳ್ಳಬಹುದು. ಈ ವಿಹಂಗಮ ನೋಟವೇ ಅದ್ಭುತವಾಗಿದ್ದು, ಕಣ್ಣುಗಳಿಗೆ ಹೊಸ ಚೈತ್ಯನ್ಯದ ಹುರುಪು ನೀಡುತ್ತದೆ. ಈ ಸುಂದರ ಪ್ರಕೃತಿಯ ನಡುವೆ ಬೆಟ್ಟದ ಮೇಲಿನ ವೆಂಕಟರಮಣನ ದರ್ಶನ ಪಡೆದರೆ ಜೀವನ ಪಾವನ ಅನಿಸಿಬಿಡುತ್ತದೆ.
- ವಾಣಿ ಮೈಸೂರು
ಶ್ರೀರಂಗಪಟ್ಟಣ ಮತ್ತು ಮೈಸೂರಿಗೂ ಹತ್ತಿರವಿರುವ ಪ್ರಸಿದ್ಧ ಬೆಟ್ಟವೆಂದರೆ ಕರಿಘಟ್ಟ. 'ಕರಿ' ಎಂದರೆ ಆನೆ 'ಘಟ್ಟ' ಎಂದರೆ ಬೆಟ್ಟ ಅಂದರೆ ಆನೆಯ ಆಕಾರದ ಬೆಟ್ಟ ಎಂದು ಅರ್ಥ. ಈ ಬೆಟ್ಟದಲ್ಲಿ ಬೈರಾಗಿ ವೆಂಕಟರಮಣ ಹಾಗೂ ಕರಿಗಿರಿವಾಸ ನೆಲೆಸಿದ್ದಾನೆ. ಈ ಪುರಾತನ ದೇವಾಲಯವೂ ಕಪ್ಪು ಕಲ್ಲಿನಿಂದ ನಿರ್ಮಾಣವಾಗಿದ್ದು, ಭೃಗು ಮಹರ್ಷಿಗಳು ಈ ದೇವಾಲಯದಲ್ಲಿ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಿದರು ಎಂದು ನಂಬಲಾಗಿದೆ. ಕರಿಘಟ್ಟವು ಸಮುದ್ರ ಮಟ್ಟದಿಂದ 2697 ಅಡಿ ಎತ್ತರದಲ್ಲಿದೆ. ಇಲ್ಲಿ ಗರುಡನ ಪ್ರತಿಮೆ ಮತ್ತು ಸ್ಥಂಬವನ್ನು ನಾವು ಕಾಣಬಹುದು. ಈ ಕರಿಘಟ್ಟಕ್ಕೆ ವರಾಹ ಪುರಾಣದಲ್ಲಿ ನೀಲಾಚಲ ಪರ್ವತ ಎಂದು ಕರೆಯಲಾಗಿದೆ ಎನ್ನಲಾಗಿದೆ.
ರಾಯರಿಂದಲೇ ಪ್ರತಿಷ್ಠಾಪನೆಗೊಂಡ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ
ಕಾವೇರಿ ಲೋಕ ಪಾವನಿ ಸಂಗಮವನ್ನೂ ಕಾಣಿ
ಬೆಟ್ಟದ ತುದಿಯಲ್ಲಿ ನಿಂತು ನೋಡಿದರೆ ಕಾವೇರಿ ಮತ್ತು ಅದರ ಉಪನದಿ ಲೋಕಪಾವನಿ ನದಿಗಳ ಸಂಗಮವನ್ನೂ ಕಣ್ತುಂಬಿಕೊಳ್ಳಬಹುದು. ಈ ವಿಹಂಗಮ ನೋಟ ಅದ್ಭುತವಾಗಿದ್ದು ಪ್ರಕೃತಿ ಪ್ರಿಯರ ಆಕರ್ಷಣೆಗಳಲ್ಲಿ ಒಂದಾಗಿದೆ. ಕಣ್ಣುಗಳಿಗೆ ಹೊಸ ಚೈತ್ಯನ್ಯದ ಹುರುಪನ್ನು ನೀಡುತ್ತದೆ. ಈ ಸುಂದರ ಪ್ರಕೃತಿಯ ನಡುವೆ ವೆಂಕಟರಮಣನ ದರ್ಶನ ಪಡೆದರೆ ಜೀವನ ಪಾವನ ಅನಿಸಿಬಿಡುತ್ತದೆ. ಇತಿಹಾಸ, ಚಾರಣ, ಪ್ರಕೃತಿಯ ಸಾಂಗತ್ಯ, ಧಾರ್ಮಿಕ ನಂಬಿಕೆಗಳ ಕಾರಣದಿಂದಾಗಿ ಈ ಸ್ಥಳ ಸಾಕಷ್ಟು ಪ್ರವಾಸಿ ಬಳಗವನ್ನು ತನ್ನತ್ತ ಸೆಳೆಯುತ್ತಿದೆ.

ಕರಿಘಟ್ಟದ ಪ್ರಮುಖ ವಿಶೇಷತೆಗಳು
ಕರಿಘಟ್ಟ ಕಲ್ಲಿನ ಮೆಟ್ಟಿಲುಗಳು ಮತ್ತು ಸುಗಮವಾಗಿ ಸಾಗುವ ಅಂಕುಡೊಂಕು ರಸ್ತೆ ದಾರಿ ಎರಡನ್ನೂ ಹೊಂದಿದೆ. ಪ್ರಕೃತಿ ಪ್ರಿಯರಿಗೆ ಇದೊಂದು ಸುಂದರ ತಾಣ ಮತ್ತು ಟ್ರೆಕ್ಕಿಂಗ್ ಪ್ರಿಯರಿಗೂ ಇಷ್ಟವಾಗುತ್ತದೆ. ವಿಶೇಷವೆಂದರೆ ಹಸೆಮಣೆ ಏರಲು ಸಜ್ಜಾಗುತ್ತಿರುವ ನವ ಜೋಡಿಗಳಿಗೆ ಮದುವೆ ಫೊಟೋಶೂಟ್ ಮಾಡಿಸಲೂ ಇಲ್ಲಿಗೆ ಬರುವುದಿದೆ.
ದಾರಿ ಹೇಗೆ?
ಶ್ರೀರಂಗಪಟ್ಟಣದಿಂದ ಕರಿಘಟ್ಟ ಕೇವಲ ಮೂರು ಕಿಮೀ ಮತ್ತು ಮೈಸೂರಿನಿಂದ 21-22 ಕಿಮೀ ದೂರದಲ್ಲಿದೆ. ಬಿಡುವಿನ ಸಮಯದಲ್ಲಿ ಭೇಟಿ ನೀಡಿದರೆ ಕರಿಘಟ್ಟದ ಸಮೀಪದಲ್ಲೇ ಇರುವ ನಿಮಿಷಾಂಬ ದೇವಸ್ಥಾನ, ಶ್ರೀರಂಗಪಟ್ಟಣ, ಪಕ್ಷಿಧಾಮ ಮತ್ತು ಮೈಸೂರು ಇನ್ನಿತರ ಸ್ಥಳಗಳಿಗೆ ಒಂದು ರೌಂಡ್ ಟ್ರಿಪ್ ಹೋಗಿ ಬರಬಹುದು.