ಶೋಲಾ ಕಾಡಿನ ನಡುವೆ
ಖುಷಿಯ ವಿಷಯವೆಂದರೆ ಯಾವುದೇ ರೀತಿಯ ಪ್ಲಾಸ್ಟಿಕ್ ವಸ್ತುಗಳನ್ನು ಅಲ್ಲಿ ಒಳಗೆ ಬಿಡುವುದಿಲ್ಲ. ಸ್ವಂತ ಗಾಡಿಯಲ್ಲಿ ಹೋದರೆ ಗೇಟ್‌ನಿಂದ 1 ಕಿಮೀ ಕೆಳಗೆ ಕಾರ್ ಪಾರ್ಕ್ ಮಾಡಬೇಕಾಗುತ್ತದೆ. ಸುಂದರ ಚಿತ್ರಗಳನ್ನು ಸೆರೆ ಹಿಡಿದು, ಕೊಂಚ ಹೊತ್ತು ಕಾಡಿನ ಮದ್ಯೆ ಕುಳಿತು ಆನಂದಿಸಲು, ಸಾಹಸ ಚಟುವಟಿಕೆಗಳಿಗೂ ತಡಿಯಂಡಮೋಳ್ ಉತ್ತಮ ಜಾಗ.
ಕೆಲವು ಚಾರಣಗಳು ಕಷ್ಟವಾಗಿರುತ್ತವೆ, ಕೆಲವು ಸುಸ್ತಾಗಿಸುತ್ತವೆ, ಕೆಲವು ಸುಲಭವಾಗಿದ್ದರೂ ಸಾಕಪ್ಪಾ ಸಾಕು ಅನಿಸುವಂತೆ ಮಾಡುತ್ತವೆ, ಕೆಲವು ಸಮಾಧಾನ ನೀಡುತ್ತವೆ. ಆದರೆ, ಯಾವುದೇ ಚಾರಣವಾದರೂ ಹಿಂದಿರುಗಿ ಮನೆಗೆ ಬಂದಾಗ ಹಾಯಾಗಿ ನಿದ್ರೆ ಮಾಡುವಂತೆ ಮಾಡುವುದಂತೂ ಹೌದು. ಒಂದು ಬೆಟ್ಟ ಹತ್ತಿ ಇಳಿದಾಗ ಆಗುವ ನಿರಾಳತೆ, ಏನೋ ಸಾಧನೆ ಮಾಡಿದ್ದೇನೆ ಎಂಬ ಭಾವ, ಪರವಾಗಿಲ್ಲ ನಾನೂ ಬೆಟ್ಟ ಹತ್ತಬಲ್ಲೆ ಎಂಬ ಆತ್ಮವಿಶ್ವಾಸ, ಇನ್ನೂ ವಯಸ್ಸಾಗಿಲ್ಲ ಎಂಬ ಖುಷಿ ಎಲ್ಲವೂ ಒಟ್ಟಿಗೆ ಆಗುತ್ತವೆ. ಚಾರಣಮಾಡಿ ಬೆಟ್ಟದ ಮಡಿಲಲ್ಲಿ ಕೆಲ ಹೊತ್ತು ಕಳೆದಾಗ ತಾರುಣ್ಯ ಮರಳಿ ಬರುತ್ತದೆ. ಕಳೆದು ಹೋದ ಮುಖದ ನಗು ಬೆಟ್ಟದ ನಡುವೆ ಎಲ್ಲೋ ಪುನಃ ಸಿಗುತ್ತದೆ. ಅಂಥದ್ದೊಂದು ಚಾರಣ ಇತ್ತೀಚೆಗೆ ಹೋದ ʼತಡಿಯಂಡಮೋಳ್ʼ. ಹತ್ತಿರ ಇದ್ದಂತೆ ಕಾಣುವ ಎತ್ತರದ ಶಿಖರ, ಮುಗಿಯಿತು ಎಂಬ ಆಸೆ ತೋರುತ್ತಲೇ ಹೊಸ ಅಚ್ಚರಿ ನೀಡುವ ದಾರಿ, ಚೂರು ಹಸಿರು ಚೂರು ಕಂದು ಬಣ್ಣದಲ್ಲಿ ತುಂಬಿದ ಸುತ್ತಲಿನ ಬೆಟ್ಟಗಳು, ಮರಗಳು ನೆರಳು ನೀಡುವ ಪ್ರಯತ್ನ ಮಾಡುತ್ತಿದ್ದರೂ ತಲೆ ಮೇಲೆ ಬೀಳುತ್ತಿದ್ದ ಸೂರ್ಯನ ಪ್ರಖರ ಕಿರಣಗಳು, ಜಾರುವ ಮಣ್ಣಿನ ಜತೆ ಗೆಳೆತನ ಮಾಡಿರುವ ಕಲ್ಲು ರಾಶಿಗಳು, ಆಗಷ್ಟೇ ಆನೆ ಅಲ್ಲೆಲ್ಲೋ ಹೋಗಿದೆ ಎಂದು ಎಚ್ಚರಿಕೆ ಮೂಡಿಸುವಂತೆ ಬಿದ್ದಿದ್ದ ಆನೆಯ ಲದ್ದಿಗಳು, ಕಾದ ಕಲ್ಲು ಬಂಡೆಯನ್ನು ತಣಿಸುವ ತಣ್ಣನೆಯ ಗಾಳಿ ಎಲ್ಲವೂ ಹಿತವಾದ ಅನುಭವ ನೀಡುತ್ತಿದ್ದವು. ಬೆಂಗಳೂರಿನ ಬಿಲ್ಡಿಂಗ್‌ಗಳ ಮಧ್ಯೆ ಕಳೆದು ಹೋದ ಸಮಯ ಮತ್ತೆ ಸಿಕ್ಕಿದ್ದು ಅದೇ ಬೆಟ್ಟದ ಒಂದು ಮರದ ಬುಡದಲ್ಲಿ ಇದ್ದ ಬಂಡೆಯ ಮೇಲೆ ಕುಳಿತು ನೀರು ಕುಡಿದು ನಿಟ್ಟುಸಿರು ಬಿಟ್ಟು ಸುಧಾರಿಸಿಕೊಳ್ಳುತ್ತಿದ್ದಾಗ.
ಇದನ್ನೂ ಓದಿ: ಕವಳಾ ಕೇವ್ಸ್‌ನಲ್ಲಿ ಸ್ವಯಂಭೂ ಶಿವ ಸನ್ನಿಧಿ
ಪಶ್ಚಿಮ ಘಟ್ಟಗಳ ಹಚ್ಚ ಹಸಿರಿನ ನಡುವೆ ತಡಿಯಂಡಮೋಳ್ ಬೆಟ್ಟ ಇದೆ. ಇದು ಕರ್ನಾಟಕದ ಕೊಡಗು ಜಿಲ್ಲೆಯ ಅತ್ಯಂತ ಎತ್ತರದ ಶಿಖರ. ಮಡಿಕೇರಿಯ ಸಮೀಪವಿರುವ ಈ ಭವ್ಯ ಬೆಟ್ಟವು ಸಮುದ್ರಮಟ್ಟದಿಂದ ಸುಮಾರು 1,748 ಮೀಟರ್ ಎತ್ತರದಲ್ಲಿದೆ. ದಕ್ಷಿಣ ಭಾರತದ ಅತ್ಯಂತ ಆಕರ್ಷಣೀಯ ಚಾರಣ ತಾಣಗಳಲ್ಲಿ ಇದೂ ಒಂದು. ತಡಿಯಂಡಮೋಳ್ ಎಂದರೆ ಕೊಡವ ಭಾಷೆಯಲ್ಲಿ ʼಎತ್ತರದ ಬೆಟ್ಟʼ ಎಂದರ್ಥ. ತಡಿ ಎಂದರೆ ಎತ್ತರ ಅಥವಾ ದೊಡ್ಡ ʼಮೋಳ್ʼ ಎಂದರೆ ಪರ್ವತ ಎಂದರ್ಥ. ಮಲಯಾಳಂನಲ್ಲಿ ತಡಿಯಂಡಮೋಳ್‌ಗೆ ʼದಪ್ಪ ವ್ಯಕ್ತಿಯ ಮಗಳುʼ ಎಂಬ ಅರ್ಥವಿದೆ.
ನಮ್ಮದು ಸುಮಾರು 20 ಜನರ ಗುಂಪು. ಬಹುತೇಕ ಕಾಲೇಜು ಓದುತ್ತಿದ್ದ ವಿದ್ಯಾರ್ಥಿಗಳಿದ್ದರು. ಕೆಲವರು ಹಿರಿಯ ವಯಸ್ಕರು. ನಮ್ಮ ಚಾರಣ ಆರಂಭವಾಗಿದ್ದು ಬೆಳಗ್ಗೆ ಸುಮಾರು 8 ಗಂಟೆ ವೇಳೆಗೆ. ಅಲ್ಲಿ ಆನೆಯ ಕಾಟ ಇರುವುದರಿಂದ ಬೆಳಗ್ಗೆ ಬೇಗ ಹೋಗಲು ಒಮ್ಮೊಮ್ಮೆ ಅರಣ್ಯ ಇಲಾಖೆಯವರು ಬಿಡುವುದಿಲ್ಲ. ನಾಲ್ಕು ಕಿಮೀ ಚಾರಣ ಇದಾಗಿತ್ತು. ಅತಿ ಸುಲಭದ ಹಾದಿಯಾದ್ದರಿಂದ ಚಾರಣ ಸುಲಭವಾಗುತ್ತದೆ. ಅನುಭವಿಗಳಿಗೆ ಎಲ್ಲ ಕಷ್ಟದ ಬೆಟ್ಟ ಹತ್ತಿ ಬೇಸರ ಬಂದಾಗ ಒಂದು ಸಣ್ಣ ವಿರಾಮದಂತೆ ಈ ಬೆಟ್ಟವನ್ನು ಹತ್ತಬಹುದು.
ದಟ್ಟವಾದ ಶೋಲಾ ಅರಣ್ಯಗಳ ನಡುವೆ ಸಾಗುವ ಹಾದಿಯು ಮುಂದೆ ವಿಶಾಲವಾದ ಹುಲ್ಲುಗಾವಲಿಗೆ ತೆರೆದುಕೊಳ್ಳುತ್ತದೆ. ಮಳೆಗಾಲ ಮತ್ತು ಅದರ ನಂತರದ ದಿನಗಳಲ್ಲಿ ಈ ಬೆಟ್ಟಗಳು ಹಸಿರು ಹೊದಿಕೆಯನ್ನು ಹೊದ್ದು, ಮಂಜಿನ ಮುಸುಕಿನಲ್ಲಿ ಕಂಗೊಳಿಸುತ್ತವೆ. ಆದರೆ, ಈಗ ಬೇಸಗೆ ಶುರುವಾಗಿದ್ದರಿಂದ ಹಸಿರು ಚೂರು ಮಾಸಿತ್ತು ಹಾಗೂ ಕಂದು ಬಣ್ಣ ಸೂರ್ಯನ ಬಿಸಿಲಿಗೆ ಎದ್ದು ಕಾಣಿಸುತ್ತಿತ್ತು. ಬೆಟ್ಟದ ಶಿಖರ ತಲುಪಿದಾಗ ಕಾಣಿಸುವ ಶುಭ್ರವಾದ ಆಕಾಶ, ಸುತ್ತಲಿನ ಕಣಿವೆಗಳ ವಿಹಂಗಮ ನೋಟ, ಬೀಸುವ ತಂಗಾಳಿ, ಕಣ್ಣೆದುರೇ ತೇಲುವ ಮೋಡಗಳು ಮತ್ತು ದಿಗಂತದವರೆಗೆ ಹರಡಿರುವ ಪಶ್ಚಿಮ ಘಟ್ಟಗಳ ಸಾಲು ಮನಸಿಗೆ ಮುದ ನೀಡುತ್ತವೆ. ಇಲ್ಲಿನ ಜೀವವೈವಿಧ್ಯ, ಬಣ್ಣಬಣ್ಣದ ಚಿಟ್ಟೆಗಳು ಮತ್ತು ವಿವಿಧ ಹಕ್ಕಿಗಳು ಪ್ರಕೃತಿ ಪ್ರೇಮಿಗಳ ಪಾಲಿಗೆ ಹಬ್ಬವನ್ನೇ ಉಣಬಡಿಸುತ್ತವೆ.

ಬೆಟ್ಟ ಹತ್ತುವಾಗ ಎರಡು ಬಾಟಲಿ ನೀರು ಇಟ್ಟುಕೊಂಡರೆ ಒಳ್ಳೆಯದು ಎಂದು ಹಿರಿಯರೊಬ್ಬರು ಹೇಳಿದ್ದರು. ಅದನ್ನು ಲೆಕ್ಕಿಸದೆ ಒಂದೇ ಬಾಟಲಿ ನೀರು ಇಟ್ಟುಕೊಂಡ ಪರಿಣಾಮ ವಾಪಸ್ ಬಿಸಿಲಿನಲ್ಲಿ ಇಳಿಯುವಾಗ ಒಂದು ತೊಟ್ಟು ನೀರಿಗೆ ನಾವು ಸುಮಾರು 10 ಜನ ಒದ್ದಾಡಬೇಕಾಯಿತು. ಜತೆಗಿದ್ದ ಒಬ್ಬನಂತೂ ಸುಸ್ತಾಗಿ ʼನಾನು ಮನೆಗೆ ಹೋಗ್ತೀನಿʼ ಎಂದು ಕೂಗಲು ಶುರು ಮಾಡಿದ್ದ. ಒಂದು ಖುಷಿಯ ವಿಷಯವೆಂದರೆ ಯಾವುದೇ ರೀತಿಯ ಪ್ಲಾಸ್ಟಿಕ್ ವಸ್ತುಗಳನ್ನು ಅಲ್ಲಿ ಒಳಗೆ ಬಿಡುವುದಿಲ್ಲ. ಸ್ವಂತ ಗಾಡಿಯಲ್ಲಿ ಹೋದರೆ ಗೇಟ್‌ನಿಂದ 1 ಕಿಮೀ ಕೆಳಗೆ ಕಾರ್ ಪಾರ್ಕ್ ಮಾಡಬೇಕಾಗುತ್ತದೆ. ಒಂದಷ್ಟು ಸುಂದರ ಚಿತ್ರಗಳನ್ನು ಸೆರೆ ಹಿಡಿದು, ಸ್ವಲ್ಪ ಹೊತ್ತು ಕಾಡಿನ ಮದ್ಯೆ ಕುಳಿತು ಆನಂದಿಸಲು, ಚಾರಣ ಮಾಡಲು ತಡಿಯಂಡಮೋಳ್ ಉತ್ತಮ ಜಾಗ.
ಇರುಪ್ಪು ಜಲಪಾತ
ಬೆಟ್ಟದ ಸಾಹಸಕ್ಕೆ ಪೂರಕವಾಗಿ ನಿಲ್ಲುವುದು ಕೊಡಗಿನ ಮನಮೋಹಕ ಇರುಪ್ಪು ಜಲಪಾತ. ಮಡಿಕೇರಿಯಿಂದ ಸುಮಾರು 75 ಕಿಮೀ ದೂರದಲ್ಲಿರುವ ಈ ಜಲಪಾತ ಸುಮಾರು 170 ಅಡಿ ಎತ್ತರದಿಂದ ಧುಮುಕುತ್ತದೆ. ಲಕ್ಷ್ಮಣ ತೀರ್ಥ ನದಿಯಿಂದ ಉಗಮಿಸುವ ಈ ಜಲಪಾತ ದಟ್ಟ ಕಾಡಿನ ನಡುವೆ ತಂಪು ನೀಡುತ್ತ ಸುಂದರವಾಗಿ ಕಾಣಿಸುತ್ತದೆ. ನೀರಿಗೆ ಕಾಲಿಡುತ್ತಿದ್ದಾಗ ಆ ತಣ್ಣನೆಯ ನೀರು ನೀಡುವ ಹಿತವಾದ ಆನಂದ ದೇಹದ ನೋವುಗಳನ್ನು ದೂರ ಮಾಡುವ ಶಕ್ತಿ ಹೊಂದಿದೆಯೇನೋ ಅನಿಸುತ್ತದೆ. ನೀರಿನಲ್ಲಿ ಆಟವಾಡುತ್ತ, ಜಲಪಾತದ ಕೆಳಗೆ ನಿಂತು ಒಂದು ಕ್ಷಣ ಪ್ರಪಂಚವನ್ನು ಮರೆಯುತ್ತ, ನೀರಿನಲ್ಲಿ ಮುಳುಗಿ ಎದ್ದು ಒಳ್ಳೊಳ್ಳೆ ಫೊಟೋ ವಿಡಿಯೋ ತೆಗೆದುಕೊಂಡು ಆರಾಮಾಗಿ ಗಂಟೆಗಟ್ಟಲೆ ಕಳೆಯಬಹುದು.
ಪುರಾಣಗಳ ಪ್ರಕಾರ, ರಾಮ-ಲಕ್ಷ್ಮಣರು ವನವಾಸದಲ್ಲಿದ್ದಾಗ ರಾಮನ ದಾಹವನ್ನು ತಣಿಸಲು ಲಕ್ಷ್ಮಣನು ಬ್ರಹ್ಮಗಿರಿ ಬೆಟ್ಟಕ್ಕೆ ಬಾಣ ಬಿಟ್ಟಾಗ ಈ ನದಿ ಉಗಮಿಸಿತು ಎಂಬ ನಂಬಿಕೆಯಿದೆ. ಈ ಕಾರಣದಿಂದಾಗಿ ಇಲ್ಲಿನ ರಾಮೇಶ್ವರ ದೇವಸ್ಥಾನಕ್ಕೆ ಅನೇಕರು ಭೇಟಿ ನೀಡುತ್ತಾರೆ. ಜಲಪಾತದ ಸೌಂದರ್ಯವನ್ನು ಸವಿಯಲು ಸುಸಜ್ಜಿತವಾದ ಮೆಟ್ಟಿಲುಗಳ ಹಾದಿಯಿದೆ, ಆದರೆ ಮಳೆಗಾಲದಲ್ಲಿ ಕಲ್ಲುಗಳು ಜಾರುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅಗತ್ಯ.
ಒಟ್ಟಾರೆಯಾಗಿ, ತಡಿಯಂಡಮೋಳ್ ಮತ್ತು ಇರುಪ್ಪು ಜಲಪಾತಗಳು ಕೊಡಗಿನ ವೈವಿಧ್ಯಮಯ ಪ್ರಕೃತಿಯ ಸಂಕೇತಗಳು. ಒಂದು ಕಡೆ ಬೆಟ್ಟದ ಚಾರಣದ ಸಾಹಸವಿದ್ದರೆ, ಮತ್ತೊಂದೆಡೆ ಜಲಪಾತದ ಸಮಾಧಾನವಿದೆ. ಕೊಡಗಿನ ಈ ತಾಣಗಳು ಪ್ರಕೃತಿಯ ವೈಭವವನ್ನು ಕಣ್ತುಂಬಿಕೊಳ್ಳಲು ಬಯಸುವ ಪ್ರತಿಯೊಬ್ಬರಿಗೂ ಮರೆಯಲಾಗದ ನೆನಪುಗಳನ್ನು ನೀಡುತ್ತವೆ.
ದಾರಿ ಹೇಗೆ?
ತಡಿಯಂಡಮೋಳ್ ಬೆಂಗಳೂರಿನಿಂದ ಸುಮಾರು 270 ಕಿಮೀ ದೂರದಲ್ಲಿದೆ. ತಡಿಯಂಡಮೋಳ್‌ಗೆ ನೇರ ಬಸ್ ಸೌಲಭ್ಯ ಇಲ್ಲ. ಆದರೆ, ಹತ್ತಿರದ ಕಕ್ಕಬೆಗೆ ಬೆಂಗಳೂರಿನಿಂದ ಖಾಸಗಿ ಟ್ರಾವೆಲ್ಸ್ ಬಸ್‌ಗಳ ಮೂಲಕ ತಲುಪಬಹುದು. ಅಲ್ಲಿಂದ ಸ್ಥಳೀಯ ವಾಹನಗಳ ಮೂಲಕ ನಾಲ್ಕನಾಡ್ ಪ್ಯಾಲೆಸ್ ಮಾರ್ಗವಾಗಿ ಹೊರಟು ಫಾರೆಸ್ಟ್ ಚೆಕ್‌ಪೋಸ್ಟ್‌ಗೆ ಭೇಟಿನೀಡಿ ಚಾರಣ ಆರಂಭಿಸಬಹುದು.
ಕಕ್ಕಬೆಯಿಂದ ಇರುಪ್ಪು ಜಲಪಾತಕ್ಕೆ ಸುಮಾರು 70 ಕಿಮೀ ದೂರವಿದ್ದು, ಸ್ಥಳೀಯ ವಾಹನಗಳ ಮೂಲಕ ತಲುಪಬಹುದು.
ಮಾಹಿತಿ ಪೆಟ್ಟಿಗೆ
- ತಡಿಯಂಡಮೋಳ್, ಕೊಡಗಿನ ಎತ್ತರದ ಬೆಟ್ಟ.
- ಪ್ಲಾಸ್ಟಿಕ್ ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ.
- ಪಶ್ಚಿಮ ಘಟ್ಟಗಳ ಹಚ್ಚಹಸುರಿನ ನಡುವೆ ತಡಿಯಂಡಮೋಳ್ ಬೆಟ್ಟವಿದೆ.
- ದಟ್ಟವಾದ ಶೋಲಾ ಅರಣ್ಯಗಳ ನಡುವೆ ಸಾಗುವ ಹಾದಿ
- ಇರುಪ್ಪು, ಲಕ್ಷ್ಮಣ ತೀರ್ಥ ನದಿಯಿಂದ ಉಗಮಿಸುವ ಜಲಪಾತ
- ಮಳೆಗಾಲದಲ್ಲಿ ಕಲ್ಲುಗಳು ಜಾರುವ ಸಾಧ್ಯತೆ ಹೆಚ್ಚಾಗಿರುವುದರಿಂದ ಎಚ್ಚರಿಕೆ ಅಗತ್ಯ