ನೀವೊಮ್ಮೆ ನಮ್ಮೂರಿಗೆ ಬಂದ್ರೆ ಉಂಟಲ್ಲಾ.. ಬಿಸಿಲ ನಾಡು ಬಳ್ಳಾರಿ ಎನ್ನುವುದನ್ನು ಮರೆತು ಬಿಡುತ್ತೀರಿ. ಹಾಗಾಗಲು ಇಲ್ಲಿರುವ ಈ ಮಿಂಚಿನಂಥ ಬೆಡಗಿಯನ್ನು ನೀವೊಮ್ಮೆ ನೋಡಲೇಬೇಕು, ಮುಗಿಲಿನಿಂದ ಮೋಡಗಳು ದೂರ ಸರಿಯುವ ಈ ಹೊತ್ತಿಗೆ, ಬಿಸಿಲಿನ ಕಿರಣಗಳು ಬಳ್ಳಾರಿ ವ್ಯಾಪ್ತಿಯಲ್ಲಿ ಎಷ್ಟು ಹೆಚ್ಚು ಇರುತ್ತವೆಯೋ ಅಷ್ಟೇ ಅಲ್ಲಲ್ಲ ಅದಕ್ಕಿಂತ ಒಂದು ಕೈ ಹೆಚ್ಚೇ ಈ ಬ್ಯೂಟಿ ಮಿಂಚೇರಿ ನಿಲ್ಲುತ್ತಾಳೆ. ಇದೇ ಕಾರಣಕ್ಕೆ ಈ ಸುಂದರಿಯ ಹೆಸರು ʻಮಿಂಚೇರಿʼ. ನಾನೀಗ ಹೇಳಿದ್ದು ಬಳ್ಳಾರಿ ಜಿಲ್ಲಾ, ತಾಲೂಕು ಕೇಂದ್ರದಿಂದ ಕೇವಲ 15 ಕಿಮೀ ಅಂತರದಲ್ಲಿರುವ ಮಿಂಚೇರಿ ಎಂಬ ಒಂದು ಸುಂದರ ಗುಡ್ಡಗಾಡು, ಹಳ್ಳಿಯ ಕುರಿತು.

ಬ್ರಿಟಿಷ್‌ ಕಾಲದಲ್ಲಿ ಈ ಪ್ರದೇಶವನ್ನು ಬೇಸಿಗೆ ಸಮಯದಲ್ಲಿ ವಾಸ್ತವ್ಯ ಹೂಡಲು ಗಿರಿಧಾಮವಾಗಿ ಬಳಸುತ್ತಿದ್ದರು ಎನ್ನಲಾಗಿದೆ. ಈ ಕುರಿತು ತಿಳಿಸಲು ಗುಡ್ಡ ಹತ್ತಿ ನಿಂತವರನ್ನು ಬರಮಾಡಿಕೊಳ್ಳುವ ಮುರಿದು ಮರು ನಿರ್ಮಾಣವಾದ ಕಟ್ಟಡ ಇಲ್ಲಿದೆ. ಕಲ್ಲಿನ ಕಟ್ಟಡ ಆಗಿದ್ದರಿಂದಲೇ ಗಾಳಿ-ಮಳೆ, ಬಿಸಿಲು ಚಳಿಗೆ ಇನ್ನೂ ನಾಮಾವಶೇಷವಾಗದೇ ಗಟ್ಟಿಯಾಗಿ ಮತ್ತೆ ಕಟ್ಟುವ ಹಾಗೆ ಉಳಿದಿತ್ತೋ ಏನೋ? ಇರಲಿ. ಅಂದ ಹಾಗೆ, ಬಳ್ಳಾರಿ ಜನರಲ್ಲಿ ಆಗಸ್ಟ್‌ 15ರ ಸ್ವಾತಂತ್ರ್ಯ ದಿನೋತ್ಸವ ಆಚರಣೆಗೆ, ಹುರುಪು ತುಂಬುವ ಇಲ್ಲಿನ ಧ್ವಜಾರೋಹಣ ಆಕರ್ಷಣೀಯವಾಗಿದೆ. ಸ್ವಚ್ಛಂದದ ಪರಿಸರ, ತಂಗಾಳಿ, ಮಳೆಗಾಲದ ಯಾವ ಗುಡುಗುಡು-ಗಡಗಡ ಸದ್ದುಗಳಿಲ್ಲದ ಈ ಕಾಲಾದಲ್ಲಿ, ನೀಲಿ-ಬಿಳಿ ಮೋಡಗಳ ಮಧ್ಯೆ ಹುಲ್ಲಿನ ಗಾದಿ ಹೊದ್ದು, ಜುಂ.. ಎಂದು ಮಲಗಿದ ಮಲೆನಾಡಿನ ಮಲೆಗಳಂತೆ ಈ ಮಿಂಚೇರಿ ಕಾಣುತ್ತಾಳೆ. ವೀಕ್ಷಿಸಲು ಹೊರಟಾಗ ದಾರಿಯಲ್ಲಿ ಸಿಗುವ ಚಹಾ-ಚೂಡಗಳನ್ನು ಮರೆಯದೇ ಸೇವಿಸಿ. ವಾಹನಗಳ ಸದ್ದಿಲ್ಲದೆ ಒಂದಷ್ಟು ದೂರ ಚಾರಣ ಮಾಡಿ. ನೀರಿನ ವ್ಯವಸ್ಥೆ ಜತೆಗಿದ್ದರೆ ಉತ್ತಮ. ಪರಿವಾರ ಜತೆಗಿದ್ದರೆ ಒಂದಷ್ಟು ಸಮಯ ಅಲ್ಲಿ ಕಳೆಯಬಹುದು. ಕಳೆದು ಹೋಗಬಹುದಾದ ಭೀತಿ ಏನು ಇಲ್ಲ, ಹಾಂ...ಮಿಂಚೇರಿಯ ಸೊಬಗು ಕಂಡು ಮನಸು ಕಳೆದು ಹೋದರೆ ಜವಾಬುದಾರ ನಾನಲ್ಲ…

ಬೋಳಾಗಿದ್ದ ಮಿಂಚೇರಿ ಬದಲಾಗಿದೆ

2017 ರ ಹೊತ್ತಿಗೆ ಬಕ್ಕ ಬೋಳಾಗಿದ್ದ ಈ ಮಿಂಚುಳ್ಳಿ, ಅರಣ್ಯ ಇಲಾಖೆಯ ಮನ-ಗಮನ ಸೆಳೆದು, ಮರ-ಗಿಡಗಳ ಸಹಾಯವನ ಪಡೆದಿದೆ. ಈಗ ಬಳ್ಳಾರಿಯ ಜನರಿಗೆ ಆಕ್ಸಿಜನ್‌ ಮೂಲಕ ಬಡ್ಡಿ ಪಾವತಿಸುತ್ತಿದೆ. ಹೆಚ್ಚೇನು ಜನ ಸಂದಣಿ ಈ ಪ್ರದೇಶದಲ್ಲಿ ಇಲ್ಲ. ಸಾಲು, ತಪ್ಪಿದ ಸಾಲಾಗಿ ಶಾಲೆಗೆ ಹೊರಟ ಮಕ್ಕಳಂತೆ ಮರ-ಗಿಡಗಳು ಇಲ್ಲಿದ್ದು, ಬೆಟ್ಟಕ್ಕೆ ಮತ್ತೆ ಕಳೆಯನ್ನು ನೀಡಿವೆ. ಇದರಿಂದಲೇ ನೇರವಾಗಿ ಟಾರು ನೋಡುತ್ತಲೇ ದಾರಿ ದೂಡುತಿದ್ದ ವಾಹನ ಸವಾರರು ಸಾಲು ಮರ-ಗಿಡ, ಸಾವಿಲ್ಲದ ಹುಲ್ಲುಗಾವಲನ್ನು ನೋಡಿ ಸ್ವಲ್ಪ ಗಾಡಿ ಸೈಡಿಗೆ ಹಾಕಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಂತೆ ಮಾಡಿದೆ.

New mincheri

ಆಗ ಬ್ರಿಟೀಷ್‌ ಕಲೆಕ್ಟರ್‌ ಬಂಗಲೆಯಾಗಿದ್ದ ಇಲ್ಲಿನ ಕಟ್ಟಡ, ಲೇಖನದ ಆದಿಯಲ್ಲಿ ತಿಳಿಸಿದ್ದ ಮುರಿದಿದ್ದ ಕಟ್ಟಡ, ಈಗ ಪ್ರವಾಸಕ್ಕೆ ಬಂದವರ ಪ್ರಯಾಸ ಕಳೆಯಲು ಯಾತ್ರಿನಿವಾಸವಾಗಿ ಮಾರ್ಪಟ್ಟಿದೆ. ಇಲ್ಲಿಗೆ ಅರಣ್ಯ ಇಲಾಖೆ ವಾಸ್ತವ್ಯ ಹೂಡಿದ್ದು, ತೋಟಗಾರಿಕೆ ಎಗ್ಗಿಲ್ಲದೇ ನಡೆಯುತ್ತಿದೆ. ಆಗಾಗ ಭೇಟಿ ಕೊಡುವ ಶಾಲಾ ವಿದ್ಯಾರ್ಥಿಗಳನ್ನು ವನಸಂಚಾರಕ್ಕೆ ಕರೆದುಕೊಂಡು ಹೋಗುವುದು, ಅರಣ್ಯದ ಕುರಿತು ಮಾಹಿತಿ, ಗಿಡ ನೆಡುವುದರ ತರಬೇತಿ ಇಲ್ಲಿ ನೀಡುವ ಕೆಲಸಗಳಾಗುತ್ತಿವೆ. ಭವಿಷ್ಯದ ಪರಿಸರ ಕಾಳಜಿಗೆ ಉತ್ತಮ ಆಲೋಚನೆ ಏನಂತೀರಾ?

ದಾರಿ ಹೇಗೆ?

ಬಳ್ಳಾರಿಯಿಂದ ನೇರವಾಗಿ ಬಸ್‌ ವ್ಯವಸ್ಥೆ ಇಲ್ಲವಾದರೂ ಓಬಳಾಪುರಂಗೆ ಹೊಗುವ ಬಸ್‌ ಹತ್ತಿ, ಹಲಕುಂದಿ ಎಂಬ ಊರಿನಲ್ಲಿ ಇಳಿದು ಅಲ್ಲಿಂದ ಸ್ಥಳೀಯ ಆಟೋಗಳ ಮೂಲಕ ಮಿಂಚೇರಿ ಹಳ್ಳಿಗೆ ನೀವು ಬರಬಹುದು, ಅಲ್ಲಿಂದ ಹಾಯಾಗಿ ಓಡಾಡುತ್ತ ಗುಡ್ಡ ಹತ್ತಿದರೆ ಈ ಮಿಂಚುವಾಕೆಯ ಜತೆಗೆ ಕೊಂಚ ಕಾಲ ಕಳೆದ ನೆನಪುಗಳನ್ನು ಕೂಡಬಹುದು. ಈ ಇಳಿದು ಹತ್ತುವ ಗೋಜುಗಳು ಬೇಡ ಎಂದು ಅನಿಸಿದರೆ ಜಾಲಿಯಾಗಿ ಬೈಕ್‌ ರೈಡಿಂಗ್‌ ಮಾಡಿಕೊಂಡು ಇಲ್ಲಿಗೆ ಬರಬಹುದು.

ಗಣಿ ನಾಡ ಬ್ಯೂಟಿ ಈ ತುಮಟಿ

ಸಾಹಸ ಪ್ರಿಯರಿಯರಿಗೆ ಇಲ್ಲಿ ಸಾಕಷ್ಟು ಅವಕಾಶ

tumti (1)

ಬಳ್ಳಾರಿ ಯುವಕರ ನಿದ್ದೆಗೆಡಿಸುವ ಗಣಿ ನಾಡ ಬ್ಯೂಟಿ ಈ ʼತುಮಟಿʼ‌ಯನ್ನು ನೀವು ನೋಡಬೇಕು. ಅಂದರೆ ತುಮಟಿ ಬೆಟ್ಟವನ್ನು ನೋಡಬೇಕು ಅಂದೆ. ಇದರ ಹೆಸರು ಕೇಳುತ್ತಲೇ ಬಳ್ಳಾರಿ ಬೈಕ್‌ರೈಡಿಂಗ್ ಪ್ರಿಯರ ಮನಸು ಆತುರ - ಕೌತುಕಗಳಿಂದ ತುಂಬಿ ಬರುತ್ತದೆ. ಬಳ್ಳಾರಿಯಿಂದ ಕೇವಲ 18 ಕಿಮೀ ಅಂತರದಲ್ಲಿ ಈ ಬೆಟ್ಟಗಳ ಸಾಲಿನ ಪ್ರದೇಶವಿದೆ. ಮಳೆಗಾಲಕ್ಕೆ ಮೈಯೊಡ್ಡಿ ಸೆಪ್ಟಂಬರ್‌- ಅಕ್ಟೋಬರ್‌ ಹೊತ್ತಿಗೆ ಹಚ್ಚ ಹಸಿರಿನ ವನ-ತರು-ಲತೆಗಳ ಋತುಮಾನದ ಸೀರೆಯನುಟ್ಟು ಮದುಮಗಳಂತೆ ಕಂಗೊಳಿಸುತ್ತದೆ. ಅಲ್ಲಲ್ಲಿ ನೇರವಾಗಿ ಬೈಕ್‌ಗಳ ಮೂಲಕವೇ ಬೆಟ್ಟಗಳ ತುದಿ ತಲುಪಲು ಅವಕಾಶಗಳಿದ್ದು, ಸಾಹಸಮಯ ಕ್ಷಣಗಳಿಗೆ ಸಾಕಷ್ಟು ಅವಕಾಶಗಳನ್ನು ನೀಡಿದೆ.

ಬಳ್ಳಾರಿಯಿಂದ ತುಮಟಿ ಬೆಟ್ಟಕ್ಕೆ ಹಾದಿ ಸವೆಸುವವರಿಗೆ ಬಿಸಿಲು ಬೇಗೆಯ ಅನುಭವ ತಟ್ಟನೆ ಅಘೋಚರವಾಗುತ್ತದೆ. ಮೈ-ಮನದ ನೋವುಗಳೆಲ್ಲ ಮಲೆಹತ್ತಿ ತುತ್ತ ತುದಿಗೆ ನಿಂತಾಗ ಸಿಗುವ ಸ್ವರ್ಗ ಸದೃಶ ದೃಶ್ಯಕ್ಕೆ ಮರೆತೇ ಹೋಗುತ್ತವೆ. ಚಿಕ್ಕಮಗಳೂರಿನ ಪ್ರಕೃತಿ ಸೌಂದರ್ಯ ಸವಿಯ ಬಯಸುವ ಚಾರಣಿಗರು, ಸಾಹಸಿ ಬೈಕ್‌ರೈಡ್‌ ಪ್ರಿಯರು ಬಿಸಿಲ ನಾಡಲ್ಲೇ ಅದರ ಅನುಭವಗಳನ್ನು ಆನಂದಿಸಬಹುದು. ಈ ಬೆಟ್ಟವು ಸಮುದ್ರ ಮಟ್ಟದಿಂದ 745 ಮೀ ಎತ್ತರವಿದ್ದು, ಮಳೆಗಾಲದ ಮಂಜಿನ ಮೋಡಗಳು ತುಮಟಿ ಬೆಟ್ಟಕ್ಕೆ ಮುತ್ತಿಕ್ಕುವಂತೆ ಭಾಸವಾಗುತ್ತವೆ. ಎತ್ತ ನೋಡಿದರು ಸುತ್ತ ಹಸಿರ ಛಾಯೆ ಮೂಡಿದ್ದು, ವರದಿಗಳ ಪ್ರಕಾರ 124 ಜಾತಿಗಳ ವೈವಿದ್ಯ ಸಸ್ಯ ಪ್ರಭೇದ ಇಲ್ಲಿವೆ. ಅವುಗಳಲ್ಲಿ ಕುರುಚಲು, ಹುಲ್ಲುಗಾವಲು, ಮರಗಳು, ಕೃಷಿ ಭೂಮಿ ಸೇರಿದ್ದು ವಿಹಂಗಮ ನೋಟವನ್ನು ಸೃಷ್ಟಿಸಿವೆ. ಪ್ರತಿ ವರ್ಷ ಅಕ್ಟೋಬರ್‌ ಆರಂಭದಿಂದ ಎಪ್ರಿಲ್‌ವರೆಗೆ ಸ್ಥಳ ಭೇಟಿ ಉತ್ತಮವಾಗಿದ್ದು, ಬೆಳಗಿನ ಸಮಯ, ತಿಳಿ ನೀಲಿ ಮೋಡ, ಹಚ್ಚ ಹಸಿರ ಬೆಟ್ಟಗಳ ಮಡಿಲಲ್ಲಿ ಫೊಟೋ ಕ್ಲಿಕ್ಕಿಸಿಕೊಳ್ಳಬಹುದು.

ದಾರಿ ಹೇಗೆ?

ಬಳ್ಳಾರಿಯಿಂದ ಬೆಳಗಲ್‌ ತಾಂಡ ಮಾರ್ಗವಾಗಿ ಸಾಗಿದರೆ 18 ಕಿಮೀ ಅಂತರದಲ್ಲಿ ತುಮಟಿ ಬೆಟ್ಟವನ್ನು ತಲುಪಬಹುದು. ತಾಣ ವೀಕ್ಷಣೆಗೆ ಬೈಕ್‌ ವ್ಯವಸ್ಥೆ ಇದ್ದರೆ ಉತ್ತಮ. ಉಳಿದಂತೆ ತುಮಟಿ ತಾಂಡಕ್ಕೆ ಸರಕಾರಿ ಬಸ್‌ ವ್ಯವಸ್ಥೆಯೂ ಇದ್ದು, ಕಾಲ್ನಡಿಗೆಯಲ್ಲಿ ಬೆಟ್ಟ ಸುತ್ತಬಹುದು.