ಪ್ರವಾಸೋದ್ಯಮಕ್ಕೆ ಹೊಸ ಭಾಷ್ಯ ಬರೆದ ದೇಶಗಳಿವು
ಅದೆಷ್ಟೇ ಹುಡುಕಿದರೂ ಪ್ರಪಂಚದಲ್ಲಿ ʼಜೆʼ ಅಕ್ಷರದಿಂದ ಪ್ರಾರಂಭವಾಗುವ ಮೂರು ದೇಶಗಳು ಮಾತ್ರ ನಮಗೆ ಕಾಣುವುದಕ್ಕೆ ಸಾಧ್ಯ. ತಮ್ಮದೆ ಆದ ಅನನ್ಯ ಸಂಸ್ಕೃತಿ, ಚಾರಿತ್ರಿಕ ಮಹತ್ವವನ್ನು ಹೊಂದಿರುವ ಈ ದೇಶಗಳ ಏಕೈಕ ಸಾಮ್ಯತೆಯೆಂದರೆ ಅನೇಕ ಪ್ರವಾಸಿ ಆಕರ್ಷಣೆಯ ತಾಣಗಳು ಇಲ್ಲಿರುವುದು.
- ರಮೇಶ ಬಳ್ಳಮೂಲೆ
ಪ್ರಪಂಚದಲ್ಲಿ ಸುಮಾರು 190 ದೇಶಗಳಿವೆ. ಒಂದೊಂದು ದೇಶದ್ದು ಒಂದೊಂದು ವಿಶೇಷತೆ. ಪ್ರತಿ ದೇಶದ ಗಡಿ ದಾಟಿದಾಗ ಭಿನ್ನ ಸಂಸ್ಕೃತಿ, ಭಿನ್ನ ಭಾಷೆ, ಭಿನ್ನ ಆಹಾರ ಪದ್ಧತಿ, ಭಿನ್ನ ಜನ ಜೀವನದ ಅನುಭವವಾಗುತ್ತದೆ. ಈಗ ನಾವು ಹೇಳ ಹೊರಟಿರುವುದು ಅಂತಹ ವಿಶಿಷ್ಟತೆಯ ಬಗ್ಗೆ. ಪ್ರಪಂಚದ ಅಷ್ಟೂ ದೇಶಗಳ ಪೈಕಿ 3 ರಾಷ್ಟ್ರಗಳ ಹೆಸರು ಮಾತ್ರ ಇಂಗ್ಲಿಷ್ ಅಕ್ಷರ 'ಜೆ' (J)ಯಿಂದ ಆರಂಭವಾಗುತ್ತದೆ. ಈ ದೇಶಗಳು ವಿಭಿನ್ನ ಆಚಾರ-ವಿಚಾರ ಹೊಂದಿವೆ. ಪ್ರವಾಸಿ ಆಕರ್ಷಣೆಯ ತಾಣಗಳು ಎನ್ನುವುದೇ ಈ ದೇಶಗಳ ನಡುವೆ ಇರುವ ಏಕೈಕ ಸಾಮ್ಯತೆ. ಈ ದೇಶಗಳಿಗೆ ಪ್ರತಿ ವರ್ಷ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಜಪಾನ್, ಜೋರ್ಡಾನ್ ಮತ್ತು ಜಮೈಕ- ಇವೇ ಆ ದೇಶಗಳು.
ಈ ಮೂರು ದೇಶಗಳು ತಮ್ಮದೆ ಆದ ಅನನ್ಯ ಸಂಸ್ಕೃತಿ, ಚಾರಿತ್ರಿಕ ಮಹತ್ವವನ್ನು ಹೊಂದಿವೆ. ಇದೇ ಕಾರಣಕ್ಕೆ ಭಾರತೀಯರು ಸೇರಿದಂತೆ ವಿಶ್ವದ ಮೂಲೆ ಮೂಲೆಯಿಂದಲೂ ಇಲ್ಲಿಗೆ ಪ್ರವಾಸಿಗರು ಭೇಟಿ ನೀಡುತ್ತಾರೆ.
ಜಪಾನ್
ಪೆಸಿಫಿಕ್ ಮಹಾಸಾಗರದಲ್ಲಿ ಪೂರ್ವ ಏಷ್ಯಾದಲ್ಲಿ ನೆಲೆಗೊಂಡಿರುವ ದ್ವೀಪ ರಾಷ್ಟ್ರ ಜಪಾನ್. ಸೂರ್ಯೋದಯದ ನಾಡು ಎಂದು ಕರೆಯಲ್ಪಡುವ ಜಪಾನ್‌ಲ್ಲಿ ಆಧುನಿಕ ತಂತ್ರಜ್ಞಾನ, ಪ್ರಾಚೀನ ಸಂಪ್ರದಾಯ ಮತ್ತು ಸದೃಢ ಆರ್ಥಿಕತೆ ಸರಿಸಮನಾಗಿ ಬೆರೆತುಹೋಗಿದೆ. ಅಪೂರ್ವ ಎನ್ನುವಂತೆ ಈ ದೇಶ ಪರಂಪರೆ ಮತ್ತು ಆಧುನಿಕತೆಗೆ ಸಮಾನ ಪ್ರಾಧಾನ್ಯತೆ ನೀಡುತ್ತಿದೆ. ಅದಕ್ಕೆ ಉದಾಹರಣೆ ಎನ್ನುವಂತೆ ಪ್ರಾಚೀನ ದೇವಾಲಯಗಳಿಂದ ಹಿಡಿದು ಜಾಗತಿಕ ಮೂಲ ಸೌಕರ್ಯಗಳು ಇಲ್ಲಿವೆ. ಈ ಮೂಲಕ ಇಡೀ ಜಗತ್ತೆ ಬೆರಗುಗಣ್ಣಿಂದ ನೋಡುವಂತೆ ಮಾಡಿದೆ.

ಭೇಟಿ ನೀಡಲು ಉತ್ತಮ ಸಮಯ: ಮಾರ್ಚ್‌ನಿಂದ ಮೇ ಮತ್ತು ಸೆಪ್ಟೆಂಬರ್‌ನಿಂದ ನವೆಂಬರ್.
ಭೇಟಿ ನೀಡಲೇಬೇಕಾದ ಸ್ಥಳಗಳು: ಮೌಂಟ್ ಫ್ಯೂಜಿ, ಫುಶಿಮಿ ಇನಾರಿ ತೈಶಾ, ಟೋಕಿಯೋ ಸ್ಕೈ ಟ್ರೀ, ಅರಾಶಿಯಾಮಾ ಬಿದಿರು ತೋಪು, ಹಿರೋಷಿಮಾ ಪೀಸ್ ಮೆಮೋರಿಯಲ್ ಪಾರ್ಕ್, ಇಟ್ಸುಕುಶಿಮಾ ಶ್ರಿನ್ (ಮಿಯಾಜಿಮಾ).
ಜೋರ್ಡಾನ್
ಜೋರ್ಡಾನ್ ಮಧ್ಯಪ್ರಾಚ್ಯದ ಅತ್ಯಂತ ಹಳೆಯ ದೇಶಗಳಲ್ಲಿ ಒಂದು. ವಿಶ್ವದ ಹೊಸ ಏಳು ಅದ್ಭುತಗಳಲ್ಲಿ ಒಂದಾದ ಪೆಟ್ರಾ ಜೋರ್ಡಾನ್‌ನ ವಿಶೇಷ ಆಕರ್ಷಣೆ. ಪೆಟ್ರಾ ಜೋರ್ಡಾನ್‌ನ ಅತ್ಯಂತ ಅಮೂಲ್ಯ ಆಸ್ತಿಯಷ್ಟೆ ಅಲ್ಲ, ವಿಶ್ವದ ಪ್ರವಾಸಿಗರನ್ನು ಸೆಳೆಯುವ ಐತಿಹಾಸಿಕ ತಾಣ. ಈ ಐತಿಹಾಸಿಕ ಹಾಗೂ ವಾಸ್ತುಶಿಲ್ಪ ನಗರ ಬಂಡೆಯನ್ನು ಕತ್ತರಿಸಿ ಕೆತ್ತಲ್ಪಟ್ಟ ವಾಸ್ತುಶಿಲ್ಪ ಹಾಗೂ ಪ್ರಾಚೀನ ಕಾಲದ ನೀರಿನ ಸಂಗ್ರಹದ ವಿಶೇಷ ವ್ಯವಸ್ಥೆಗೆ ಪ್ರಸಿದ್ಧ. ಇಸ್ಲಾಂ ಪೂರ್ವ ಕಾಲದಲ್ಲಿ ಕ್ರಿ..ಪೂ. 400ರಿಂದ ಕ್ರಿ.ಶ. 106ರವರೆಗೆ ಇಲ್ಲಿ ನಬಾಡಿಯನ್ ಸಾಮ್ರಾಜ್ಯವಿತ್ತು ಎನ್ನುತ್ತಾರೆ ಇತಿಹಾಸ ತಜ್ಞರು. ವಿಸ್ತಾರವಾದ ಗೋರಿ, ದೇವಾಲಯ ವಾಸ್ತುಶಿಲ್ಪ, ಧಾರ್ಮಿಕ ಪ್ರದೇಶಗಳು, ಕಾಲುವೆಗಳ ಅವಶೇಷಗಳು, ಸುರಂಗಗಳು, ತಿರುವು ಅಣೆಕಟ್ಟುಗಳು, ತಾಮ್ರ ಗಣಿಗಾರಿಕೆ, ಇಗರ್ಜಿಗಳು ಮುಂತಾದ 27ಕ್ಕೂ ಹೆಚ್ಚು ಪ್ರವಾಸಿ ಆಕರ್ಷಣೆಯ ತಾಣ ಪೆಟ್ರಾದಲ್ಲಿದೆ. ಇಲ್ಲಿನ ಪ್ರವಾಸೋದ್ಯಮವು ಪ್ರವರ್ಧಮಾನಕ್ಕೆ ಬರುತ್ತಿದ್ದು, ಜಾಗತಿಕವಾಗಿ ಗಮನ ಸೆಳೆಯುತ್ತದೆ. ಅರಬ್, ಇಸ್ಲಾಮಿಕ್ ಮತ್ತು ಪ್ರಾಚೀನ ಸಂಪ್ರದಾಯಗಳಿಂದ ಹೆಚ್ಚು ಪ್ರಭಾವಿತವಾದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಇದು ಹೊಂದಿದ್ದು ಪುರಾತತ್ತ್ವ ಶಾಸ್ತ್ರದ ಅನ್ವೇಷಣೆಯ ಕೇಂದ್ರವಾಗಿ ಬದಲಾಗಿದೆ.

ಭೇಟಿ ನೀಡಲೇಬೇಕಾದ ಜಾಗಗಳು: ಪೆಟ್ರಾ, ವಾಡಿ ರಮ್, ಡೆಡ್ ಸೀ, ಜೆರಾಶ್, ಅಮ್ಮನ್ ಸಿಟಾಡೆಲ್, ಡಾನಾ ಬಯೋಸ್ಫಿಯರ್ ರಿಸರ್ವ್.
ಭೇಟಿ ನೀಡಲು ಉತ್ತಮ ಸಮಯ: ಮಾರ್ಚ್‌ನಿಂದ ಮೇ ಮತ್ತು ಸೆಪ್ಟೆಂಬರ್‌ನಿಂದ ನವೆಂಬರ್
ಜಮೈಕ
ಜಮೈಕ ಎಂದರೆ ಥಟ್ಟನೆ ನೆನಪಿಗೆ ಬರುವ ಹೆಸರು ಉಸೈನ್ ಬೋಲ್ಟ್. ವಿಶ್ವದ ಅತ್ಯಂತ ವೇಗದ ಓಟಗಾರ, ಒಲಿಂಪಿಕ್ ಚಿನ್ನದ ಪದಕ ವಿಜೇತ ಉಸೈನ್ ಬೋಲ್ಟ್ ಜಮೈಕದವರು. ಜಮೈಕ ದ್ವೀಪ ರಾಷ್ಟ್ರವಾಗಿದ್ದು, ಕೆರಿಬಿಯನ್ ಸಾಗರದ ದಡದಲ್ಲಿದೆ. ಸುಂದರ ಪರ್ವತಗಳ ಮಧ್ಯೆ ಸುಮಾರು 120 ನದಿಗಳು ಇಲ್ಲಿ ಹರಿಯುತ್ತವೆ. 1962ರಲ್ಲಿ ಈ ರಾಷ್ಟ್ರ ಬ್ರಿಟಿಷರಿಂದ ಸ್ವಾತಂತ್ರ್ಯ ಹೊಂದಿತು. ಇಲ್ಲಿನ ವಿಶಿಷ್ಟ ಸಂಸ್ಕೃತಿ, ಸಂಗೀತ, ಪ್ರಕೃತಿ ಸೌಂದರ್ಯಕ್ಕೆ ಪ್ರವಾಸಿಗರು ಮಾರು ಹೋಗುತ್ತಾರೆ. ಗಾತ್ರದಲ್ಲಿ ಚಿಕ್ಕದಾದರೂ ಜಾಗತಿಕ ಸಂಗೀತ ಮತ್ತು ಕ್ರೀಡೆಗಳ ಮೇಲೆ ದೊಡ್ಡ ಪ್ರಭಾವ ಬೀರಿದೆ.

ಭೇಟಿ ನೀಡಲೇಬೇಕಾದ ಜಾಗಗಳು: ನೆಗ್ರಿಲ್ ನದಿ ದಂಡೆ, ಕಿಂಗ್‌ಸ್ಟನ್, ಓಚೋ ರಿವೊಸ್, ವೈಎಸ್ ಜಲಪಾತ, ಮೌಂಟೆಗೋ ಬೇ, ಡನ್ಸ್ ರಿವರ್ ಫಾಲ್ಸ್, ಬ್ಲೂ ಮೌಂಟೇನ್ಸ್, ಬಾಬ್ ಮಾರ್ಲಿ ಮ್ಯೂಸಿಯಂ, ನೆಗ್ರಿಲ್ ಸೆವೆನ್ ಮೈಲ್ ಬೀಚ್, ರೋಸ್ ಹಾಲ್ ಗ್ರೇಟ್ ಹೌಸ್, ಮಾರ್ಥಾ ಬ್ರೇ ರಿವರ್.
ಭೇಟಿ ನೀಡಲು ಉತ್ತಮ ಸಮಯ: ಡಿಸೆಂಬರ್‌ನಿಂದ ಏಪ್ರಿಲ್.