ಛತ್ರಪತಿಯ ಉಳಿಸಿದ ಪನ್ಹಾಲಾ ಕೋಟೆ
ಪನ್ಹಾಲಾ ಕೋಟೆಯು ಕೇವಲ ಐತಿಹಾಸಿಕ ಮಹತ್ವವನ್ನು ಹೊಂದಿಲ್ಲ, ಬದಲಿಗೆ ಅದ್ಭುತವಾದ ನಿಸರ್ಗ ಸೌಂದರ್ಯವನ್ನು ಹೊಂದಿದೆ. ಕೋಟೆಯ ಮೇಲಿಂದ ಸುತ್ತಲೂ ಕಾಣುವ ದೃಶ್ಯಗಳು ನಿಜಕ್ಕೂ ಮನಮೋಹಕವಾಗಿವೆ. ಹಚ್ಚ ಹಸಿರಿನ ಸಹ್ಯಾದ್ರಿ ಪರ್ವತಗಳು ಮತ್ತು ಆಳವಾದ ಕಣಿವೆಗಳ ಭವ್ಯ ದೃಶ್ಯವು ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತದೆ.
- ಡಾ. ಕೆ. ಬಿ. ಸೂರ್ಯ ಕುಮಾರ್, ಮಡಿಕೇರಿ
ಕೊಲ್ಲಾಪುರದ ಮಹಾಲಕ್ಷ್ಮಿ ದೇವಾಲಯವನ್ನು ನೋಡಲು ಸಾಮಾನ್ಯವಾಗಿ ಬಹಳಷ್ಟು ಭಕ್ತರು ಹೋಗುತ್ತಾರೆ. ಆದರೆ ಚಾರಿತ್ರಿಕ ಘಟನೆಗಳ ಬಗ್ಗೆ ಆಸಕ್ತಿಯುಳ್ಳವರು ಮಾತ್ರ ಅಲ್ಲಿಂದ ಸ್ವಲ್ಪ ದೂರದಲ್ಲಿರುವ ಪನ್ಹಾಲಾ ಕೋಟೆಗೆ ಭೇಟಿ ನೀಡುತ್ತಾರೆ.
ಮಹಾರಾಷ್ಟ್ರದ ಇತಿಹಾಸದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಹೊಂದಿರುವ ಪನ್ಹಾಲಾ ಕೋಟೆ ಕೇವಲ ಒಂದು ಐತಿಹಾಸಿಕ ಸ್ಮಾರಕವಲ್ಲ, ಬದಲಿಗೆ ಸಮಯದೊಂದಿಗೆ ಸಾಗಿ ಬಂದಿರುವ ಸಾವಿರಾರು ಕಥೆಗಳನ್ನು ಹೇಳುವ ಜೀವಂತ ಸಾಕ್ಷಿ. ಸಹ್ಯಾದ್ರಿ ಪರ್ವತ ಶ್ರೇಣಿಯ ಸುಂದರ ಮಡಿಲಲ್ಲಿ ನೆಲೆಸಿರುವ ಈ ಕೋಟೆಯು ಕೊಲ್ಲಾಪುರ ನಗರದಿಂದ ಸುಮಾರು 20 ಕಿಮೀ ದೂರದಲ್ಲಿದೆ. ಇದರ ವಾಸ್ತುಶಿಲ್ಪ, ಕಾರ್ಯತಂತ್ರದ ಮಹತ್ವ ಮತ್ತು ಸುತ್ತಲಿನ ನಿಸರ್ಗ ಸೌಂದರ್ಯವು ಪ್ರವಾಸಿಗರನ್ನು ತನ್ನತ್ತ ಸೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ.
ಪನ್ಹಾಲಾ ಕೋಟೆಯ ಚರಿತ್ರೆ
ಪನ್ಹಾಲಾ ಕೋಟೆಯ ಇತಿಹಾಸವು ಸುಮಾರು 8ನೇ ಶತಮಾನದಷ್ಟು ಹಳೆಯದು ಎಂದು ನಂಬಲಾಗಿದೆ. ಇದನ್ನು ಮೊದಲು ಸಿಲ್ಹಾರ ರಾಜವಂಶದ ಎರಡನೇ ರಾಜ ಭೋಜ ನಿರ್ಮಿಸಿದನು. ನಂತರ ಇದು ಯಾದವರು, ಬಹಮನಿ ಸುಲ್ತಾನರು, ಬಿಜಾಪುರದ ಆದಿಲ್‌ಶಾಹಿಗಳು ಮತ್ತು ಮರಾಠರು ಸೇರಿದಂತೆ ಹಲವು ರಾಜವಂಶಗಳ ಆಳ್ವಿಕೆಗೆ ಒಳಪಟ್ಟಿತ್ತು.

ಈ ಕೋಟೆಯು ಛತ್ರಪತಿ ಶಿವಾಜಿ ಮಹಾರಾಜರ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದೆ. 1659 ರಲ್ಲಿ, ಶಿವಾಜಿಯು ಬಿಜಾಪುರದ ಸೈನ್ಯದಿಂದ ಪನ್ಹಾಲಾ ಕೋಟೆಯನ್ನು ವಶಪಡಿಸಿಕೊಂಡರು. ಆದರೆ, 1660 ರಲ್ಲಿ ಆದಿಲ್‌ಶಾಹಿಯ ಸೈನ್ಯವು ಸಿದ್ಧಿ ಜೋಹರ್ ಎಂಬ ಸೇನಾಧಿಪತಿ ಆದೇಶದಂತೆ ಈ ಕೋಟೆಗೆ ಮುತ್ತಿಗೆ ಹಾಕಿದಾಗ, ಶಿವಾಜಿಯು ತನ್ನ ಸೇನಾನಿ ಬಾಜಿ ಪ್ರಭು ದೇಶಪಾಂಡೆಯ ಸಹಾಯದಿಂದ "ಪಾವನ್ ಖಿಂಡ್" ಮೂಲಕ ತಪ್ಪಿಸಿಕೊಂಡನು. ಈ ಘಟನೆಯು ಮರಾಠರ ಇತಿಹಾಸದಲ್ಲಿ ಒಂದು ಸ್ಮರಣೀಯ ಪುಟವಾಗಿದೆ.
ಐದು ತಿಂಗಳ ಕಾಲ ಸತತ ಆದಿಲ್ ಶಾಹಿಯ ಸೈನ್ಯ ಕೋಟೆಯನ್ನು ಮುತ್ತಿಗೆ ಹಾಕಿತ್ತು. ಆ ಸಮಯದಲ್ಲಿ ಅಲ್ಲಿದ್ದ ಎಲ್ಲ ಆಹಾರ ಪದಾರ್ಥಗಳ ದಾಸ್ತಾನು ಮುಗಿಯುತ್ತಾ ಬಂದಾಗ ಛತ್ರಪತಿ ಶಿವಾಜಿ ಮಹಾರಾಜರು ಪಲಾಯನ ಮಾಡುವುದೊಂದೇ ಆಯ್ಕೆ ಎಂದು ನಿರ್ಧರಿಸಿದರು. ಅವರು ತಮ್ಮ ವಿಶ್ವಾಸಾರ್ಹ ಸೈನ್ಯಾಧಿಕಾರಿ ಬಾಜಿ ಪ್ರಭು ದೇಶಪಾಂಡೆಯೊಂದಿಗೆ ಸ್ವಲ್ಪ ಸಂಖ್ಯೆಯ ಸೈನಿಕರನ್ನು ಅಲ್ಲಿ ಬಿಟ್ಟು ಜುಲೈ 13, 1660 ರಂದು ರಾತ್ರಿಯ ವೇಳೆ ವಿಶಾಲ್‌ಘಡ್ ಗೆ ತಪ್ಪಿಸಿಕೊಂಡರು. ಶಿವಾಜಿಯಂತೆ ಕಾಣುತ್ತಿದ್ದ ಕ್ಷೌರಿಕ ಶಿವ ಕಾಶಿದ್ ವಾಸ್ತವವಾಗಿ ತಾವೇ ಛತ್ರಪತಿ ಶಿವಾಜಿ ಮಹಾರಾಜ ಎಂಬ ಭಾವನೆಯನ್ನು ಆದಿಲ್ ಶಾಹಿ ಸೈನಿಕರಿಗೆ ಮನವರಿಕೆ ಮಾಡುವಲ್ಲಿ ಮೊದಲು ಯಶಸ್ವಿಯಾದರು. ನಂತರದ ಪಾವನ್ ಖಿಂಡ್ ಕದನದಲ್ಲಿ ಬಾಜಿ ಪ್ರಭು ಸೇರಿದಂತೆ ಒಂದು ಸಾವಿರ ಬಲಿಷ್ಠ ಪಡೆಯಲ್ಲಿ ಸುಮಾರು ಮುಕ್ಕಾಲು ಭಾಗ ಮರಣ ಹೊಂದಿದರು. ಕೋಟೆ ಆದಿಲ್ ಷಾ ಕೈವಶವಾಯಿತು. ಅಲ್ಲಿಂದ ಮುಂದೆ 1673 ರವರೆಗೆ ಛತ್ರಪತಿ ಶಿವಾಜಿ ಮಹಾರಾಜರು ಅದನ್ನು ಶಾಶ್ವತವಾಗಿ ಆಕ್ರಮಿಸಿಕೊಳ್ಳಲು ಸಾಧ್ಯವಾಗಲಿಲ್ಲ. ತದನಂತರ ಸಂಭಾಜಿ ಮಹಾರಾಜ ಮತ್ತು ತಾರಾಬಾಯಿ ಸೇರಿದಂತೆ ಹಲವು ಮರಾಠ ರಾಜರು ಈ ಕೋಟೆಯಿಂದ ಆಡಳಿತ ನಡೆಸಿದರು.
ಈ ಘಟನೆಯು ಶಿವಾಜಿಯ ಧೈರ್ಯ ಮತ್ತು ಬಾಜಿ ಪ್ರಭು ಅವರ ತ್ಯಾಗಕ್ಕೆ ಉದಾಹರಣೆಯಾಗಿದೆ. ಈ ಬಲಿದಾನದ ಸ್ಮಾರಕವಾಗಿ ಆ ವೀರ ಯೋಧರನ್ನು ನೆನಪಿಸಿಕೊಳ್ಳುವ ಎರಡು ಪ್ರತಿಮೆಗಳು ಈಗಲೂ ಈ ಕೋಟೆಯಲ್ಲಿ ಜನರನ್ನು ತಮ್ಮೆಡೆಗೆ ಸೆಳೆಯುತ್ತದೆ.
ಪನ್ಹಾಲಾ ಕೋಟೆಯು ಸುಮಾರು 7 ಕಿಲೋಮೀಟರ್‌ಗಳಷ್ಟು ಉದ್ದದ ಕೋಟೆ ಗೋಡೆಗಳನ್ನು ಹೊಂದಿದ್ದು ಒಟ್ಟು 110 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಕೋಟೆಯು ವಿಶಿಷ್ಟವಾದ ಮರಾಠಿ, ಮುಘಲ್ ಮತ್ತು ಬಿಜಾಪುರಿ ವಾಸ್ತುಶಿಲ್ಪ ಶೈಲಿಗಳ ಮಿಶ್ರಣವನ್ನು ಪ್ರದರ್ಶಿಸುತ್ತದೆ. ಕೋಟೆಯೊಳಗಡೆ ಹಲವಾರು ಆಕರ್ಷಕ ರಚನೆಗಳಿವೆ.
- ತೀನ್ ದರ್ವಾಜಾ (ಮೂರು ಬಾಗಿಲುಗಳು): ಇದು ಕೋಟೆಯ ಪ್ರಮುಖ ಪ್ರವೇಶ ದ್ವಾರವಾಗಿದ್ದು, ಸುಂದರವಾದ ರಚನೆಯನ್ನು ಹೊಂದಿದೆ.
- ಅಂಧರ್ ಬಾವ್ಡಿ (ಗುಪ್ತ ಬಾವಿ): ಒಳಗಿಂದ ಒಳಗೆ ಕೋಣೆಗಳಂತಿದ್ದು ಅನೇಕ ದೊಡ್ಡ ಮೆಟ್ಟಿಲುಗಳಿರುವ ಬಾವಿಯಾಗಿದೆ. ಮೇಲ್ನೋಟಕ್ಕೆ ನೀರು ಕಾಣದೆ ಇದ್ದು, ಯುದ್ಧದ ಸಮಯದಲ್ಲಿ ನೀರನ್ನು ಸಂಗ್ರಹಿಸಲು ಬಳಸಲಾಗುತ್ತಿತ್ತು. ಇದರ ವಿನ್ಯಾಸವು ನೋಡುಗರಿಗೆ ಅಚ್ಚರಿ ಮೂಡಿಸುತ್ತದೆ.
- ಕಲಾ ಆಜರ್ (ಕಪ್ಪು ಬಾವಿ): ಇನ್ನೊಂದು ಪ್ರಮುಖ ನೀರಿನ ಮೂಲ.
- ಅಂಬಾರಖಾನಾ: ಇದು ದೊಡ್ಡ ಪ್ರಮಾಣದ ಧಾನ್ಯ ಸಂಗ್ರಹಾಗಾರವಾಗಿದ್ದು ಆಹಾರ ಧಾನ್ಯವನ್ನು ಸಂಗ್ರಹಿಸಲು ವಿನ್ಯಾಸಗೊಳಿಸಲಾಗಿತ್ತು.
ಇದರಲ್ಲಿ ಗಂಗಾ, ಯಮುನಾ ಮತ್ತು ಸರಸ್ವತಿ ಕೋಠಿಗಳು ಎಂಬ ಮೂರು ಕಟ್ಟಡಗಳನ್ನು ಒಳಗೊಂಡಿದೆ. ಅವುಗಳಲ್ಲಿ ಅತ್ಯಂತ ದೊಡ್ಡದಾದ ಗಂಗಾ ಕೋಠಿ 950 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದ್ದು, 10.5 ಮೀ ಎತ್ತರವಿದೆ. ಇದು 65 ಲಕ್ಷ ಕಿಲೋ ಧಾನ್ಯವನ್ನು ಹಿಡಿದುಕೊಳ್ಳುವ ಸಾಮರ್ಥ್ಯವನ್ನು ಹೊಂದಿತ್ತು.
- ಸಜ್ಜಾ ಕೊಠಡಿ: ಇದು ಶಿವಾಜಿ ಮಹಾರಾಜರು ವಿಶ್ರಾಂತಿ ಪಡೆಯುತ್ತಿದ್ದ ಕೊಠಡಿ ಎಂದು ಹೇಳಲಾಗುತ್ತದೆ.

- ರಸಾಲಾ ಎಂಬ ಸೇನಾಧಿಕಾರಿಯ ನಿವಾಸ ಈಗ ಪುಟ್ಟ ವಸ್ತು ಸಂಗ್ರಹಾಲಯವಾಗಿದೆ. ಕೋಟೆಯ ಒಳಗಡೆ ಈಗಲೂ ಮಹಾಕಾಳಿ, ಅಂಬಾಭಾಯಿ ದೇವಸ್ಥಾನ ಮತ್ತು ಹಳೆಯ ಸಮಾಧಿಗಳಿವೆ.
ಕೋಟೆಯು ಬೃಹತ್ ಗೋಡೆಗಳು, ಬುರುಜುಗಳು, ಭದ್ರವಾದ ದ್ವಾರಗಳು ಮತ್ತು ಅಚ್ಚುಕಟ್ಟಾಗಿ ವಿನ್ಯಾಸಗೊಳಿಸಿದ ರಚನೆಗಳನ್ನು ಹೊಂದಿದ್ದು, ಅಂದಿನ ಕಾಲದ ಎಂಜಿನಿಯರಿಂಗ್ ಕೌಶಲ್ಯಕ್ಕೆ ಇದು ಉತ್ತಮ ನಿದರ್ಶನ.
- ಪಾವನ್ ಖಿಂಡ್ ಮಾರ್ಗ: ಶಿವಾಜಿ ಮಹಾರಾಜರು ತಪ್ಪಿಸಿಕೊಂಡ ಪಾವನ್ ಖಿಂಡ್ ಕಣಿವೆಯ ದೃಶ್ಯವನ್ನು ಸಹ ಇಲ್ಲಿಂದ ನೋಡಬಹುದು. ಇದು ಇತಿಹಾಸಪ್ರಿಯರಿಗೆ ವಿಶೇಷ ಅನುಭವ ನೀಡುತ್ತದೆ.
ಪನ್ಹಾಲಾ ಕೋಟೆಯು ಇತಿಹಾಸ, ವಾಸ್ತುಶಿಲ್ಪ ಮತ್ತು ನಿಸರ್ಗ ಸೌಂದರ್ಯದ ಪರಿಪೂರ್ಣ ಸಂಗಮವಾಗಿದೆ. ಇದು ಮಹಾರಾಷ್ಟ್ರದ ಶ್ರೀಮಂತ ಪರಂಪರೆಯನ್ನು ಅನುಭವಿಸಲು ಬಯಸುವ ಪ್ರತಿಯೊಬ್ಬರಿಗೂ ಭೇಟಿ ನೀಡಲೇಬೇಕಾದ ಸ್ಥಳವಾಗಿದೆ.