ಭಾರತದಲ್ಲಿದೆ ಅತ್ಯಂತ ಸುಂದರ ಕಡಲತೀರಗಳು.. ಭೇಟಿ ನೀಡಲು ಇನ್ಯಾಕೆ ತಡ ?
ಭಾರತದ ಕರಾವಳಿಯ ಭಾಗ ಅನೇಕ ಕಡಲತೀರಗಳಿಗೆ ಹೆಸರುಮಾಡಿದೆ. ಕರ್ನಾಟಕ, ಕೇರಳ, ಗೋವಾದಂತಹ ರಾಜ್ಯಗಳಲ್ಲಿ ಹೆಚಚಿನ ಸಮಕಯೆಯಲ್ಲಿ ಸಮುದ್ರ ತಟಗಳಿದ್ದು, ಪ್ರವಾಸಿಗರ ನೆಚ್ಚಿನ ತಾಣವಾಗಿ ರೂಪುಗೊಂಡಿದೆ.
ಐತಿಹಾಸಿಕ ದೇವಾಲಯಗಳು, ಪಾರಂಪರಿಕೆ ಪ್ರವಾಸಿ ತಾಣಗಳು, ಶ್ರೀಮಂತವಾದ ಸಾಹಿತ್ಯ, ಮನಸೂರೆಗೊಳಿಸುವ ಹಚ್ಚಹಸಿರಿನ ಗಿರಿ ಶಿಖರಗಳು ಹೀಗೆ ಒಂದಕ್ಕಿಂತ ಒಂದು ವಿಭಿನ್ನ ಆಕರ್ಷಣೆಗಳ ತವರೂರು ಭಾರತ. ಇವೆಲ್ಲದರ ಜೊತೆಗೆ ಭಾರತದಲ್ಲಿ ಪ್ರಶಾಂತವಾದ ಕಡಲ ತೀರಗಳೂ ಸಾಕಷ್ಟು ಸಂಖ್ಯೆಯಲ್ಲಿದ್ದು, ಬೀಚ್ ಪ್ರಿಯರನ್ನು ಸೆಳೆಯುತ್ತಿರುತ್ತವೆ. ಹೌದು, ಭಾರತದ ಈ ಸುಂದರವಾದ ಕಡಲತೀರಗಳಿಗೆ ಜೀವನದಲ್ಲಿ ಒಮ್ಮೆಯಾದರೂ ನೀವು ಭೇಟಿ ನೀಡಲೇಬೇಕು.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿನ ರಾಧಾನಗರ ಬೀಚ್
ಸ್ವರಾಜ್ ದ್ವೀಪದ (ಹ್ಯಾವ್ಲಾಕ್ ದ್ವೀಪ) ಸುಂದರವಾದ ರಾಧಾನಗರ್ ಬೀಚ್ ಎಲ್ಲರ ಅಚ್ಚುಮೆಚ್ಚಿನ ಕಡಲತೀರ. ಈ ಬೀಚ್ ಏಷ್ಯಾದ ಅತ್ಯುತ್ತಮ ಕಡಲತೀರಗಳಲ್ಲಿ ಒಂದೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಸ್ಫಟಿಕದಂತೆ ಸ್ಪಷ್ಟವಾಗಿರುವ ಈ ಸಮುದ್ರದ ನೀರು, ಬಿಳಿ ಮರಳು ಮತ್ತು ಸೂರ್ಯಾಸ್ತವನ್ನು ಆಸ್ವಾದಿಸುವ ಅನುಭವವೇ ಬೇರೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಹೋಗಿದ್ದೇ ಆದಲ್ಲಿ ತಪ್ಪದೇ ರಾಧಾನಗರ ಬೀಚ್ ಗೆ ಭೇಟಿ ನೀಡಿ.

ಅಂಡಮಾನಿನ ನೀಲ್ ದ್ವೀಪ ಕಡಲತೀರಗಳು
ದ್ವೀಪಗಳ ನಗರಿಯೆಂದೇ ಹೆಸರು ಮಾಡಿರುವ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ನೀಲ್ ದ್ವೀಪವು ಭರತ್‌ಪುರ, ಲಕ್ಷ್ಮಣ್‌ಪುರ ಮತ್ತು ಸೀತಾಪುರದಂತಹ ಹಲವಾರು ಸುಂದರವಾದ ಕಡಲತೀರಗಳಿವೆ. ಇಲ್ಲಿ ಕಡಲ ತೀರಗಳಲ್ಲಿ ಜಲಕ್ರೀಡೆಗಳನ್ನು ಮಾಡುವ ಅವಕಾಶಗಳು ಹೆಚ್ಚಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.
ಗೋವಾದ ಪಲೋಲೆಮ್ ಬೀಚ್
ಬೀಚುಗಳಿಗಿಂದಲೇ ಅಂತರಾಷ್ಟ್ರೀಯ ಪ್ರವಾಸಿಗರನ್ನು ಸೆಳೆಯುತ್ತಿರುವ ರಾಜ್ಯ ಗೋವಾ. ದಕ್ಷಿಣ ಗೋವಾದಲ್ಲಿ ನೆಲೆಗೊಂಡಿರುವ ಪಲೋಲೆಮ್ ಬೀಚ್, ರಾಜಧಾನಿ ಪಣಜಿಯಿಂದ 70ಕಿಮೀ ದೂರದಲ್ಲಿದೆ. ಅರ್ಧಚಂದ್ರಾಕಾರದಲ್ಲಿ ಕಾಣಸಿಗುವ ಈ ಸಮುದ್ರದ ಸೌಂದರ್ಯವನ್ನು ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಡಾಲ್ಫಿನ್ ಗಳನ್ನು ನೋಡಲುಬಯಸುವವರು ತಪ್ಪದೇ ಈ ಬೀಚ್ ಗೆ ಭೇಟಿ ನೀಡಬಹುದು.

ಕೇರಳದ ವರ್ಕಲಾ ಬೀಚ್
ಕೇರಳದಲ್ಲಿ ಬೀಚ್ ಪ್ರಿಯರಿಗೆ ಅನೇಕ ಆಯ್ಕೆಗಳಿವೆ. ಒಂದಕ್ಕಿಂತ ಒಂದು ಸುಂದರ ಅನುಭವಗಳನ್ನು ನೀಡುವ ಬೀಚ್ ಗೀದ್ದು ದೇವರನಾಡಿನಲ್ಲಿದ್ದು, ವರ್ಕಲಾ ಬೀಚ್ ಅವುಗಳಲ್ಲಿ ಪ್ರಮುಖವಾಗಿದೆ. ಅರೇಬಿಯನ್ ಸಮುದ್ರದ ನೋಟವನ್ನು ನೋಡಬಯಸುವ ಮಂದಿಗಿದು ಉತ್ತಮ ಆಯ್ಕೆಯಾಗಿದೆ. ಈ ಸಮುದ್ರ ತಟದಲ್ಲಿ ಶಾಪಿಂಗ್ ಆಯ್ಕೆ, ಕೆಫೆಗಳೂ ಇದ್ದು ಪ್ರವಾಸಿಗರಿಗೆ ನೆಚ್ಚಿನ ತಾಣವೆನ್ನಿಸಿಕೊಂಡಿದೆ.
ಮಹಾರಾಷ್ಟ್ರದ ತರ್ಕರ್ಲಿ ಬೀಚ್
ಭಾರತದ ಮಹಾರಾಷ್ಟ್ರ ರಾಜ್ಯದ ಸಿಂಧುದುರ್ಗ ಜಿಲ್ಲೆಯ ಮಾಲ್ವಾನ್ ತಾಲೂಕಿನ ಒಂದು ಗ್ರಾಮ ತರ್ಕರ್ಲಿ. ಇದು ದಕ್ಷಿಣ ಮಹಾರಾಷ್ಟ್ರದ ಕಡಲತೀರದಲ್ಲಿದೆ. ಕೆಲವು ವರ್ಷಗಳ ಹಿಂದೆ, ತರ್ಕರ್ಲಿ ಬೀಚ್ ಅನ್ನು ಕೊಂಕಣ ಪ್ರದೇಶದ ಕ್ವೀನ್ ಬೀಚ್ ಎಂದು ಘೋಷಿಸಲಾಯಿತು. ಸ್ಪಷ್ಟ ನೀರು, ಸಮೃದ್ಧವಾದ ಸಮುದ್ರ ಜೀವಿಗಳಿಗೆ ಈ ಪರಿಸರ ಹೆಸರುವಾಸಿಯಾಗಿದೆ. ಅಲ್ಲದೆ ಜಲ ಕ್ರೀಡಾ ಉತ್ಸಾಹಿಗಳಿಗೆ ಇದು ಸ್ವರ್ಗವಾಗಿದ್ದು, ಕಾರ್ಲಿ ನದಿಯ ಹಿನ್ನೀರಿನಲ್ಲಿ ಸ್ಕೂಬಾ ಡೈವಿಂಗ್, ಸ್ನಾರ್ಕ್ಲಿಂಗ್ ಮತ್ತು ದೋಣಿ ವಿಹಾರದಂತಹ ಚಟುವಟಿಕೆಗಳನ್ನು ಕೈಗೊಳ್ಳಬಹುದು.

ಕೇರಳದ ಮರಾರಿ ಬೀಚ್
ಕೇರಳದ ಆಲಪ್ಪುಳ ಜಿಲ್ಲೆಯ ಮರಾರಿ ಬೀಚ್, ಶಾಂತ ಮತ್ತು ನಿರ್ಮಲ ಪರಿಸರದಲ್ಲಿ ಸುತ್ತಾಡಲು ಬಯಸುವ ಕಡಲು ಪ್ರಿಯರಿಗೆ ಒಂದು ಅತ್ಯುತ್ತಮ ತಾಣವಾಗಿದೆ. 'ಮರಾರಿ' ಎಂಬ ಹೆಸರು ಮರಾರಿಕುಲಂ ಎಂಬ ಹೆಸರಿನ ಸಂಕ್ಷಿಪ್ತ ರೂಪವಾಗಿದೆ. ಇಲ್ಲಿ ತೆಂಗಿನ ಮರಗಳಿಗಿಂತಲೂ ಹೆಚ್ಚಿಗೆ ತಾಳೆ ಮರಗಳು ಕಾಣಸಿಗುತ್ತಿದ್ದು, ವಿಶ್ರಾಂತಿ ಬಯಸುವವರು, ಆಯುರ್ವೇದ ಚಿಕಿತ್ಸೆಗಳನ್ನು ಬಯಸುವವರಿಗೂ ಇಲ್ಲಿಗೆ ಮೊದಲ ಆಯ್ಕೆಯಾಗಿರುತ್ತದೆ.
ಕೇರಳದ ಕೋವಳಂ ಬೀಚ್
ಕೇರಳದ ತಿರುವನಂತಪುರಂನಲ್ಲಿರುವ ಕೋವಳಂ ಬೀಚ್ ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಯನ್ನು ಪಡೆದಿದೆ. ಇಲ್ಲಿ ಅರ್ಧಚಂದ್ರಾಕಾರದ ಮೂರು ಕಡಲತೀರಗಳಿವೆ. ಕಡಲ ತೀರದಲ್ಲಿರುವ ಲೈಟ್ ಹೌಸ್, ಕಲಾ ಗ್ಯಾಲರಿ ಮಾತ್ರವಲ್ಲದೆ ದೋಣಿ ವಿಹಾರಕ್ಕೂ ಅನುವುಮಾಡಿಕೊಡಲಾಗಿದೆ. ಇಲ್ಲಿ ಸೂರ್ಯ ಸ್ನಾನ, ಈಜುವಿಕೆಯಿಂದ ಹಿಡಿದು ಸರ್ಫಿಂಗ್ ಮತ್ತು ಪ್ಯಾರಾಸೈಲಿಂಗ್‌ನಂತಹ ಜಲ ಕ್ರೀಡೆಗಳವರೆಗೆ, ಆಯುರ್ವೇದ ಮಸಾಜ್‌ಗಳು ಮತ್ತು ಯೋಗ, ವಿಶ್ರಾಂತಿಯ ಜೊತೆಗೆ ಹಲವಾರು ಚಟುವಟಿಕೆಗಳಿಗೆ ಅವಕಾಶಗಳಿವೆ.