ಮಲೇಷಿಯಾದಲ್ಲಿ ಮಧುಚಂದ್ರ
ಜಗತ್ತು ದೊಡ್ಡದಾಗಿದೆ ಎಂದು ಕೇಳಿದ್ದೆ. ಮದುವೆಯಾದ ಕ್ಷಣ ದೊಡ್ಡದಾದ ಜಗತ್ತಿನಲ್ಲಿ ಒಂದು ಚಿಕ್ಕ ಸುತ್ತು ಸುತ್ತಿ ಬರಲು ದಂಪತಿಗಳು ನಿರ್ಧರಿಸಿದ್ದೆವು. ಅದರಂತೆ, ಮೊದಲ ಅಂತಾರಾಷ್ಟ್ರೀಯ ವಿಮಾನವನ್ನು ಹತ್ತುವ ತವಕ, ಅದರಲ್ಲೂ ಕಸ್ಟಮೈಸ್ಡ್ ಟ್ರಿಪ್ ನಮ್ಮದಾಗಿತ್ತು. ನಾನು ನಮ್ಮವರು ಇಬ್ಬರದ್ದೂ ಚಿಕ್ಕ ವಯಸ್ಸು, ಈ ಪ್ರವಾಸ ಮಾತ್ರ ನಮಗೆ ದೊಡ್ಡ ಅನುಭವ. ಹೊಸ ಕ್ಷಣ, ಹೊಸ ಜನ, ಹೊಸತನ, ಎಲ್ಲವೂ ಹೊಸತು…
- ಸ್ನೇಹಾ ಪೈ
ಹನಿಮೂನ್‌ಗೆ ಹೋದಾಗ ನನ್ನ ಗಂಡನಿಗೆ ಸುತ್ತಾಡಿದ ನಾಲ್ಕು ದಿನಗಳಲ್ಲಿ ಮಸಾಜ್ ಮಾಡಿಕೊಳ್ಳುವ ಆಸೆ ಹುಟ್ಟಿತು. ನನ್ನ ಹತ್ತಿರ ಒಪ್ಪಿಗೆ ಪಡೆದುಕೊಂಡು ಮಸಾಜ್ ಸೆಂಟರ್‌ಗೆ ತೆರಳಿ ಮಸಾಜ್‌ಗೆ ಕುಳಿತೇ ಬಿಟ್ಟರು. ಅಲ್ಲಿಯ ತನಕ ನನ್ನ ಜೀವಮಾನದಲ್ಲಿ ಮಸಾಜ್ ಮಾಡಿಸಿಕೊಳ್ಳುವವರನ್ನು ನೋಡದ ನಾನು ಯಾರೋ ಒಬ್ಬ ಹೆಂಗಸು ಬಂದು ನನ್ನ ಪತಿರಾಯನ ಕಾಲನ್ನು ಒತ್ತುವುದನ್ನು ನೋಡಿದೆ. ಕಣ್ಣುಗಳಲ್ಲಿ ಕಣ್ಣಾಲಿಗಳು ತುಂಬಿ ಬರುತ್ತಿದ್ದವು. ಅದನ್ನು ಗಮನಿಸಿದವರೇ ಅರ್ಧದಲ್ಲಿ ಮಸಾಜ್‌ಗೆ ಗುಡ್ ಬೈ ಹೇಳಿ ನನ್ನೊಡನೆ ನಡೆದು ಬಂದರು. ಹೀಗೆ ಬರುವಾಗ ದಾರಿಯಲ್ಲಿ ನಾನು ಕಣ್ಣೀರು ಹಾಕುತ್ತಿರುವುದನ್ನು ನೋಡಿ ಅಲ್ಲಿನ ಪೊಲೀಸರೂ ಓಡೋಡಿ ಬಂದು ನನ್ನ ಗಂಡನ ಕೈಯನ್ನು ಹಿಡಿದು ವಿಚಾರಿಸಲು ಮುಂದಾದರು. ಹೀಗೆ ಫಜೀತಿಗೆ ಒಳಗಾಗಿದ್ದು ನನ್ನ ಜೀವನದಲ್ಲಿ ನಿಜವಾಗಿಯೂ ಎಂದಿಗೂ ಮರೆಯಲಾಗದ ನೆನಪುಗಳು.

ಮಲೇಷಿಯಾದಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಹೆಣ್ಣು ಮಕ್ಕಳು ಕಣ್ಣೀರು ಹಾಕಿ ನಡೆದರೆ ಕಾರಣರಾದವರಿಗೆ ಸೀದಾ ಆರಕ್ಷಕರ ಠಾಣೆಯೇ ಗತಿ. ಹೀಗೆ ಹೇಳುವ ವಿಚಾರ ತಿಳಿದದ್ದೇ ತಡ ನನ್ನ ಕಣ್ಣೀರು ಬತ್ತಿ ನಗುವಿನೊಂದಿಗೆ ನಾವಿಬ್ಬರು ಗಂಡ ಹೆಂಡತಿ ಎಂದು ಕೈ ಕೈ ಹಿಡಿದು ಓಡಾಡ ತೊಡಗಿದೆವು. ಸಂಜೆಯ ಹೊತ್ತಿಗೆ ನಾವು ತಂಗಿದ್ದ ಹೊಟೇಲ್ ಕಡೆಗೆ ನಡೆದೆವು. ಇದು ನಮ್ಮ ಮೊದಲ ವಿದೇಶ ಸುತ್ತಾಟದಲ್ಲಿ ಮಧುಚಂದ್ರದ ಕಥೆ. ಹೀಗೆ ಕಣ್ಣಲ್ಲಿ ಕಣ್ಣಾಲಿಗಳಿದ್ದರೂ, ಫಜೀತಿಯ ನಡುವೆ ಮುಖದಲ್ಲಿ ನಗು ಮೂಡಿಸಿದ್ದ ಕ್ಷಣವದು.