ಮಾ ’ಕಸಂ..’ ಇನ್ನೊಮ್ಮೆ ’ಕಸ’ ಎಸೆಯಲು ಹೋಗಲ್ಲ!
ದಬದಬನೆ ಜೋರಾಗಿ ಬಾಗಿಲು ಬಡಿಯುತ್ತಾ ‘Help me, help me..’ ಅಂತ ಕಿರುಚಿದೆ. ನನ್ನ ದನಿ ಯಾರಿಗೂ ಕೇಳಿಸದೆ, ನನಗೇ bounce ಆಗುತ್ತಿತ್ತು. ಇದೀಗ ಮತ್ತಷ್ಟು ದಿಗಿಲುಗೊಂಡು ನಡುಗುವ ದನಿಯಲ್ಲೇ ಶಕ್ತಿ ಮೀರಿ ಬಾಗಿಲು ಬಡಿಯುತ್ತ ಮತ್ತೆ ‘Help.. help..’ ಅಂತ ಕಿರುಚಿದೆ. ಎರಡು ನಿಮಿಷ ಗಾಢ ಮೌನದ ನಂತರ ಆಚೆಯಿಂದ ಚಕ್.. ಚಕ್.. ಎಂದು ಚಿಲಕ ತೆಗೆದ ಸದ್ದಾಗಿ, ಬಾಗಿಲು ತೆರೆದುಕೊಂಡಿತು.
- ಧಾರಿಣಿ ಮಾಯಾ
ಕಳೆದ ವರ್ಷ ನನ್ನ ಮಗನ ಗ್ರಾಜುಯೇಷನ್ ಸೆರೆಮನಿ ಎಂದು ನಾನು ಮತ್ತು ನನ್ನ ಪತಿ ಅಮೆರಿಕದ ಸಿಯಾಟಲ್‌ಗೆ ಹೋಗಿದ್ದೆವು. ಈ ಹಿಂದೆ ನಾಲ್ಕು ದಿನಗಳಿಂದ ಒಂದು ವಾರದವರೆಗೆ ವಿದೇಶಿ ಪ್ರವಾಸಗಳನ್ನು ಕೈಗೊಂಡಿದ್ದರೂ, ದೂರ ದೇಶದಲ್ಲಿ ವಾಸ್ತವ್ಯ ಹೂಡಿದ್ದ ಬ್ಯಾಚುಲರ್ ಮಗನ ಮನೆಗೆ ಮೊದಲ ಬಾರಿಗೆ ಹೋಗುತ್ತಿದ್ದ ನನ್ನ ಸಂಭ್ರಮ ಹೇಳತೀರದಾಗಿತ್ತು. ಅಲ್ಲಿ ದುಬಾರಿ ಜೀವನವಾದ್ದರಿಂದ ನನ್ನ ಮಗ ಸಿಂಗಲ್ ಬೆಡ್‌ರೂಮ್ ಅಪಾರ್ಟ್‌ಮೆಂಟಿನಲ್ಲಿದ್ದ. ಅವನ ಮನೆಯಲ್ಲಿ ಎಲ್ಲೆಲ್ಲಿ ಏನೇನಿದೆ ಎಂದು ತಿಳಿಯಲು ಹೆಚ್ಚು ಹೊತ್ತು ಬೇಕಾಗಲಿಲ್ಲ. ಯಾವಾಗಲೂ ಗ್ಯಾಸ್ ನಲ್ಲೇ ಅಡುಗೆ ಮಾಡುವ ಅಭ್ಯಾಸವಿದ್ದ ನನಗೆ ಅಲ್ಲಿ ಎಲೆಕ್ಟ್ರಿಕ್ ಹಾಬ್‌ನಲ್ಲಿ ಅಡುಗೆ ಮಾಡಲು ಹೊಸದರಲ್ಲಿ ಸ್ವಲ್ಪ ತ್ರಾಸಾಯಿತು. ಬಟ್ಟೆ ವಾಷ್ ಮಾಡಲು ಬೇರೆಬೇರೆಯಾಗಿಯೇ ಉಪಯೋಗಿಸಬೇಕಿದ್ದ ವೆಟ್ ಅಂಡ್ ಡ್ರೈ ದೈತ್ಯ ವಾಷಿಂಗ್ ಮೆಷೀನು ಹೊಸ ಅನುಭವ ನೀಡಿತ್ತು. ಬಾತ್ ಟಬ್ಬಿನೊಳಗೆ ಇಳಿದು ಶವರಿನಲ್ಲೇ ಸ್ನಾನ ಮಾಡಬೇಕಾಗಿದ್ದರಿಂದ, ನೋ ಬಕೆಟ್, ನೋ ಮಗ್. ಆದ್ರೆ ನನ್ನ ಮುದ್ದು ಮಗ ನನಗಾಗಿ ಮೊದಲೇ ಒಂದು ಬಕೆಟ್, ಒಂದು ಮಗ್ಗನ್ನು ತಂದಿಟ್ಟಿದ್ದ.
ಟ್ರ್ಯಾಶ್ ಬಿನ್‌ನಲ್ಲಿ ಅದಾಗಲೇ ಮುಕ್ಕಾಲು ಭಾಗ ವೇಸ್ಟ್ ತುಂಬಿದ್ದರಿಂದ ಅದನ್ನು ಹೊರಗೆ ಎಲ್ಲಿ ಹಾಕಬೇಕೆಂದು ಮಗನನ್ನು ಕೇಳಿದಾಗ, ‘ಅದೇ ಫ್ಲೋರಿನಲ್ಲಿ ಒಂದು ಕಡೆ Trash Room ಇದೆ. ಅಲ್ಲಿ ವೆಟ್ ಅಂಡ್ ಡ್ರೈ, ಬೇರೆಯದಾಗಿದ್ದು, ಅದಕ್ಕೆ ತಕ್ಕಂತೆ ಹಾಕಬೇಕಾಗುತ್ತೆ, but you don’t worry; ನಾನು ಸಂಜೆ ಕೆಲಸ ಮುಗಿಸಿ ಬಂದ ಮೇಲೆ ಹಾಕುವೆ. ನೀವು ಜಸ್ಟ್ ರಿಲ್ಯಾಕ್ಸ್ ಮಾಡಿ’ ಎಂದು ಹೊರಟೇಬಿಟ್ಟ.
ಮಗರಾಯ ಪಾಪ ಸಂಜೆ ಬರುವ ಹೊತ್ತಿಗೆ ಸುಸ್ತಾಗಿರುತ್ತಾನೆ, ಅವನು ಬರುವಷ್ಟರಲ್ಲಿ ಕಸ ಎಸೆಯುವ ಕೆಲಸ ನಾನೇ ಮಾಡಿ ಮುಗಿಸಿ ಸೈ ಎನಿಸಿಕೊಳ್ಳುವ ಎಂದು ಮನೆಯ ಕಸ ಗುಡಿಸಿ, ಅದಾಗಲೇ ಕುತ್ತಿಗೆ ತನಕ ತುಂಬಿ ಗಂಟಲುಬ್ಬಿದ್ದ ಕಸದ ಗಂಟನ್ನು ಕೈಯಲ್ಲಿ ಹಿಡಿದು ನನ್ನ ಹಿಂದೆ ಬಾಗಿಲು ಹಾಕಿ ಹೊರ ನಡೆದೆ. ಅದೊಂಥರಾ ಯಾವುದೋ ಹೋಟೆಲ್ಲಿನ ಕಾರಿಡಾರ್ ರೀತಿಯಿತ್ತು. ಎಲ್ಲಿಯೂ ಒಂದು ನರಪಿಳ್ಳೆಯ ಸುಳಿವೂ ಇರಲಿಲ್ಲ. ಸೂಜಿ ಬಿದ್ದರೂ ಕೇಳಿಸುವಷ್ಟು ಮೌನ. ಕೈಯಲ್ಲಿ ಕಸದ ಗಂಟು ಹಿಡಿದು ಬೀಗುತ್ತಾ, ನನ್ನ ಮಗನ ಮನೆಯ ಕಸ ಎಸೆಯಲು ಹೆಜ್ಜೆ ಹಾಕಿದೆ. ಮೊದಲೇ ಅವನಿಂದ ಕೇಳಿ ತಿಳಿದುಕೊಂಡಿದ್ದರೂ ಎತ್ತ ತಿರುಗಿದರೂ ಆ ದಾರಿ ಮಾತ್ರ ತಿಳಿಯಲಿಲ್ಲ. ಅದೊಂಥರ ಭೂಲ್ ಭುಲಯ್ಯಾ ರೀತಿ ಎತ್ತೆತ್ತಲೋ ಗಿರಕಿ ಹೊಡೆಯುವಂತೆ ಮಾಡಿತು. ಕೊನೆಗೂ Trash Room ಎಂಬ ಫಲಕ ನೋಡಿ ಯಾವುದೋ ನಿಧಿ ಸಿಕ್ಕಂತೆ ಮುಖವರಳಿತು.
ಟ್ರ್ಯಾಶ್ ರೂಮ್ ಬಾಗಿಲಿನ ದಪ್ಪನೆಯ ಹ್ಯಾಂಡಲ್ ತಿರುಗಿಸಿ, ಬಾಗಿಲು ನೂಕಿ ಒಳಗೆ ಅಡಿಯಿಟ್ಟೆ. ಅದೊಂದು 6/8 ಸೈಜಿನ ಪುಟ್ಟ ಕೊಠಡಿ. ನೆಲದಲ್ಲಿ ದಪ್ಪನೆಯ ಕಾರ್ಪೆಟ್ ಹಾಸಿತ್ತು. ಬಾಗಿಲ ಎದುರು ಎರಡು ಬಾಕ್ಸ. ವೆಟ್ ವೇಸ್ಟಿಗೊಂದು, ಡ್ರೈ ವೇಸ್ಟಿಗೊಂದು. ಅದರ ಹ್ಯಾಂಡಲ್ ತಿರುಗಿಸಿ ಓಪನ್ ಮಾಡಿ ಕೈಯಲ್ಲಿದ್ದ ಕಸದ ಗಂಟನ್ನು ಒಳಕ್ಕೆ ಹಾಕಿದೆ. ಅದೆಷ್ಟೋ ಅಡಿ ಪಾತಾಳಕ್ಕೆ ಹೋಗಿ ಆ ಗಂಟು ಬಿದ್ದಿತು. ಏನೋ ಸಾಧಿಸಿದ ಹಾಗೆ ನನ್ನಷ್ಟಕ್ಕೆ ನಾನೇ ತಣ್ಣನೆಯ ನಗೆ ಚೆಲ್ಲಿದೆ. ಸೂಪರ್ ವುಮನ್ ಫೀಲ್ ನಲ್ಲಿ ಹೊರಗೆ ಹೋಗಲು ತಿರುಗಿ ಬಾಗಿಲಿನ ಹ್ಯಾಂಡಲ್ ತಿರುಗಿಸಿದೆ. ಬಾಗಿಲು ಓಪನ್ ಆಗಲಿಲ್ಲ. ಪುನಃ ತಿರುಗಿಸಿದೆ. ಊಹೂಂ.. ಈಗಲೂ ಜಗ್ಗಲಿಲ್ಲ. ಗಾಬರಿಯಿಂದ ಸ್ವಲ್ಪ ರಭಸದಿಂದಲೇ ಚಕ್ ಚಕ್ ಅಂತ ತಿರುಗಿಸಿದೆ. ಈಗ್ಲೂ ಅದು ಹಾಗೇ ಭದ್ರವಾಗಿತ್ತು. ಜೋರಾಗಿ ಎಳೆದರೆ, ಎಲ್ಲಿ ಹ್ಯಾಂಡಲ್ಲೇ ಕಿತ್ತು ಬರುವುದೋ ಎಂದು ಗಾಬರಿ, ಭಯದಿಂದ ಮತ್ತೆ ಮೆಲ್ಲನೆ ತಿರುಗಿಸಲೆತ್ನಿಸಿದೆ.
ನೋ ವೇ.. ಜಪ್ಪಯ್ಯ ಅಂದ್ರೂ ಅದು ಜಗ್ಗಲಿಲ್ಲ. ಈಗಂತೂ ನಿಜಕ್ಕೂ ನನ್ನ ಭಯ ಹತ್ತುಪಟ್ಟು ಹೆಚ್ಚಾಯಿತು. ಮನೆಯಲ್ಲೇ ಇದ್ದ ಪತಿಮಹಾಶಯನಿಗೆ ಫೋನ್ ಮಾಡೋಣ ಎಂದರೆ, ಫೋನ್ ಕೂಡ ತರದೆ ಹಾಗೇ ಬಂದಿದ್ದೆ. ಒಳಗಿನಿಂದ ದಬದಬನೆ ಜೋರಾಗಿ ಬಾಗಿಲು ಬಡಿದೆ. ಬರುವ ದಾರಿಯಲ್ಲಿ ಮೊದಲೇ ಎಲ್ಲೂ ಒಂದು ನರಪಿಳ್ಳೆಯೂ ಕಂಡಿರಲಿಲ್ಲ. ಅದನ್ನು ನೆನೆದು, ಈಗ ಯಾರಪ್ಪಾ ನನ್ನನ್ನು ಕಾಪಾಡೋರು ಎಂದು ಹೆದರಿ ಪತರಗುಟ್ಟಿದೆ. ನನ್ನ ಫೇವರಿಟ್ ಗಣೇಶನ ಮೊದಲುಗೊಂಡು ಇದ್ದಬದ್ದ ದೇವರ ಹೆಸರುಗಳನ್ನೆಲ್ಲ ಸಾಲಾಗಿ ಜಪಿಸಹತ್ತಿದೆ.
ಹೋಗಲಿ, ನಾನು ಕಾಣುತ್ತಿಲ್ಲವಲ್ಲ ಅಂತ ನನ್ನ ಗಂಡನಾದರೂ ನನ್ನನ್ನು ಹುಡುಕಿಕೊಂಡು ಬರಬಹುದೆಂದು ನೆನೆದಿದ್ದೆ. ಆದರೆ ಅಮೆರಿಕಗೆ ಬಂದ ಮೊದಲ ದಿನವೇ ಅವರು ನನ್ನನ್ನು ಮರೆತುಬಿಟ್ಟರಲ್ಲ ಎಂದು ಒಂದು ಕ್ಷಣ ಖಿನ್ನಳಾದೆ. ಯಾರಾದರೂ ಟ್ರ್ಯಾಶ್ ರೂಮಿಗೆ ಕಸ ಹಾಕಲು ಬಂದರೆ ನಾನು ಬಚಾವಾಗಬಹುದೆಂಬ ಆಶಯ. ಆದರೆ ಬೆಳಗಿನ 11 ಗಂಟೆಯ ಆ ಹೊತ್ತಿನಲ್ಲಿ ಕೆಲಸಕ್ಕೆ ಹೋಗದೆ ಯಾರು ತಾನೇ ಮನೆಯಲ್ಲಿ ಕುಳಿತಿದ್ದಾರು! ಅದಾಗಲೇ ಹದಿನೈದು ನಿಮಿಷ ಕಳೆದಿತ್ತು. ಯಾವುದೋ ಜೈಲೊಳಗೆ ಲಾಕ್ ಆದ ಕರಾಳ ಅನುಭವ. ಇನ್ನು ಸಂಜೆ ಇತ್ತ ಕಡೆ ಯಾರಾದರೂ ಬರುವ ತನಕ ಗಾಳಿ, ನೀರು, ಊಟವಿಲ್ಲದೆ ಆ ಪುಟ್ಟ ಕೊಠಡಿಯಲ್ಲಿ suffocate ಆಗಿ ಹೀಗೇ ಇರಬೇಕಲ್ಲ ಎಂದು ನೆನೆದು ನನ್ನ ಜಂಘಾಬಲವೇ ಉಡುಗಿ, ಕಣ್ಣಾಲಿ ತುಂಬಿ ಗಂಗಾಭವಾನಿ ಇಳಿಯಲು ಅಣಿಯಾಗಿದ್ದರು.
ಮತ್ತೆ ದಬದಬನೆ ಜೋರಾಗಿ ಬಾಗಿಲು ಬಡಿಯುತ್ತಾ ‘Help me, help me..’ ಅಂತ ಕಿರುಚಿದೆ. ನನ್ನ ದನಿ ಯಾರಿಗೂ ಕೇಳಿಸದೆ, ನನಗೇ bounce ಆಗುತ್ತಿತ್ತು. ಇದೀಗ ಮತ್ತಷ್ಟು ದಿಗಿಲುಗೊಂಡು ನಡುಗುವ ದನಿಯಲ್ಲೇ ಶಕ್ತಿ ಮೀರಿ ಬಾಗಿಲು ಬಡಿಯುತ್ತ ಮತ್ತೆ ‘Help.. help..’ ಅಂತ ಕಿರುಚಿದೆ. ಎರಡು ನಿಮಿಷ ಗಾಢ ಮೌನದ ನಂತರ ಆಚೆಯಿಂದ ಚಕ್.. ಚಕ್.. ಎಂದು ಚಿಲಕ ತೆಗೆದ ಸದ್ದಾಗಿ, ಬಾಗಿಲು ತೆರೆದುಕೊಂಡಿತು. ಸುಮಾರು 35 ರ ಹರೆಯದ ಭಾರತೀಯ ವ್ಯಕ್ತಿ ನನ್ನ ಪಾಲಿನ ಭಗವಂತನಾಗಿ ಅಲ್ಲಿ ನಿಂತಿದ್ದರು. ನಾನು ಅವರಿಗೆ ಕಾಲಿಗೆ ಬೀಳುವುದೊಂದೇ ಬಾಕಿ. “I had online meeting going on, I heard someone screaming, hence I came” ಎಂದು ಆ ವ್ಯಕ್ತಿ ಕೂಲ್ ಆಗಿ ಹೇಳಿದರು. ಹನ್ನೆರಡು ಡಿಗ್ರಿಯ ತಾಪಮಾನದಲ್ಲೂ ನಾನು ಬೆವರಿದ್ದೆ. “O God, you really saved me, thank you so much..” ಎಂದು ಅವರ ಕೈ ಕುಲುಕಿ, ಹೇಳಿದ್ದನ್ನೇ ನಾಲ್ಕಾರು ಬಾರಿ ಹೇಳಿ ಮಗನ ಫ್ಲಾಟ್‌ನತ್ತ ಓಡಿದೆ.