Saturday, July 26, 2025
Saturday, July 26, 2025

ಪ್ರವಾಸದಲ್ಲಿ ಕಾಡಿದ ಪೆಹಲ್ಗಾಮ್ ಪ್ಯಾನಿಕ್!

ಆ ಪುಟ್ಟ ಹಳ್ಳಿಯಲ್ಲಿ ಇದ್ದಿದ್ದೇ ನಾಲ್ಕೈದು ಹೋಮ್ ಸ್ಟೇಗಳು. ಪ್ರವಾಸಿಗರನ್ನು ಹೊರತುಪಡಿಸಿದರೆ, ಅದೇ ಊರಿನ ಜನ ಅಲ್ಲಿ ಕಮ್ಮಿ. ಅಲ್ಲಿರುವ ಕೆಲಸಗಾರರೆಲ್ಲರೂ ಮನಾಲಿಯಿಂದಲೇ ದಿನವೂ ಬಂದು ಹೋಗುತ್ತಾರಂತೆ! ಸ್ಥಳೀಯರೂ ಇಲ್ಲದ ಈ ಹಳ್ಳಿಯಲ್ಲಿ ರಾತ್ರಿ ಕಳೆಯುವುದು ಹೇಗೆ ಪ್ರಶ್ನೆ ಕಾಡತೊಡಗಿತ್ತು.

- ಅಮೃತಾ ಹೆಗಡೆ

ಈ ಬಾರಿಯ ಬೇಸಿಗೆ ರಜಾದಲ್ಲಿ ಹಿಮಾಲಯನ್‌ ಮೌಂಟೇನ್ಸ್‌ ನ ಕಣ್ತುಂಬಿಕೊಳ್ಳಬೇಕು ಎಂಬ ಉದ್ದೇಶದಿಂದ ಗಂಡ ಮತ್ತು ಮಗನೊಂದಿಗೆ ಹಿಮಾಚಲ ಪ್ರದೇಶದ ಮನಾಲಿಗೆ ಹೋಗಿದ್ದೆ. ಏಪ್ರಿಲ್‌ ತಿಂಗಳ ಮೂರನೇ ವಾರವದು. ಮೊದಲನೇ ದಿನ ಮನಾಲಿ ನಗರವನ್ನು ಸುತ್ತಿ, ಎರಡನೇ ದಿನ ರೋಥಾಂಗ್‌ಪಾಸ್‌, ಅಟಲ್‌ ಟನಲ್‌, ಸಿಸ್ಸು ಎಂಬ ಪ್ರದೇಶಗಳನ್ನೆಲ್ಲ ಕಣ್ತುಂಬಿಕೊಂಡು, ಹಿಮ ಸ್ಪರ್ಶದ ಮೊದಲ ಅನುಭವ ಪಡೆದಾಗಿತ್ತು. ಮೂರನೇ ದಿನ ಏಪ್ರಿಲ್‌ 22 ! ಮನಾಲಿಯಿಂದ 15 ಕಿಲೋಮೀಟರ್‌ ದೂರದಲ್ಲಿರುವ, ಸಮುದ್ರಮಟ್ಟಕ್ಕಿಂತ 2700 ಮೀಟರ್‌ ಎತ್ತರದಲ್ಲಿರುವ ಸೇಥನ್‌ ಎಂಬ ಪುಟಾಣಿ ಹಳ್ಳಿಗೆ ನಮ್ಮ ಪ್ರಯಾಣ ಹೊರಟಿತ್ತು.

ನುರಿತ ಕಾರುಚಾಲಕ ತಮ್ಮ ಡಿಸೈರ್‌ ಕಾರಿನಲ್ಲಿ ನಮ್ಮನ್ನು ಕರೆದೊಯ್ದ. ಕಡಿದಾದ ಪರ್ವತವನ್ನು ಏರುವುದಕ್ಕಾಗಿಯೇ ಹಾವಿನಂಥ ರಸ್ತೆಯಿದೆ. ರಸ್ತೆಯುದ್ದಕ್ಕೂ ಒಟ್ಟೂ 34ಕ್ಕೂ ಹೆಚ್ಚು ಹೇರ್‌ಪಿನ್‌ ಕರ್ವ್‌ಗಳು ಸಿಗುತ್ತವೆ. ಪ್ರತಿಯೊಂದು ತಿರುವಿನಲ್ಲಿಯೂ ಕೆಳಗೆ ಕಣ್ಣು ಹಾಯಿಸುತ್ತಿದ್ದ ನಮಗೆ, ಮನಾಲಿ ಊರು ತಿರುವಿನಿಂದ ತಿರುವಿಗೆ ಚಿಕ್ಕದಾದಂತೆ ತೋರುತ್ತಿತ್ತು. ಅಲ್ಲಿನ ಮನೆಗಳೆಲ್ಲ ಆಟಿಕೆಗಳಂತೆ ತೋರುತ್ತಿದ್ದವು. ಕಾರಿನಲ್ಲಿ ಆ 15 ಕಿಲೋಮೀಟರ್‌ ಕ್ರಮಿಸುವುದಕ್ಕೆ ಒಂದೂವರೆ ಗಂಟೆಗೂ ಹೆಚ್ಚು ಹೊತ್ತು ಬೇಕಾಗಿತ್ತು.

901bc38e-0d21-4148-9aae-bc597f0c6472

ಏಪ್ರಿಲ್‌ 22ರ ಸಂಜೆ 4 ಗಂಟೆಯ ಸಮಯ. ಅಂತೂ ಇಂತೂ ಆಗಷ್ಟೇ ನಾವು ಸೇಥನ್‌ ಹಳ್ಳಿಯನ್ನು ತಲುಪಿ, ಅಲ್ಲಿ ನಾವು ಬುಕ್‌ ಮಾಡಿಕೊಂಡಿದ್ದ ಹೋಮ್‌ಸ್ಟೇಯಲ್ಲಿ, ನಮ್ಮ ಲಗೇಜ್‌ಗಳನ್ನೆಲ್ಲ ಇಡುತ್ತಿದ್ದೆವು! ಅಷ್ಟರಲ್ಲಿಯೇ ನ್ಯೂಸ್‌ ಮೀಡಿಯಾದಲ್ಲಿ ಕೆಲಸ ಮಾಡುವ ಸ್ನೇಹಿತನೊಬ್ಬನ ಕರೆ ಬಂತು. ಅರೆರೆ, ಅಪರೂಪಕ್ಕೆ ಈತ ನಮ್ಮನ್ನು ನೆನೆಪಿಸಿಕೊಂಡಿದ್ದಾನಲ್ಲ ಅಂದುಕೊಳ್ಳುತ್ತಾ ಕರೆ ಸ್ವೀಕರಿಸಿದೆ. ನೆಟ್‌ವರ್ಕ್‌ ಸರಿಯಿಲ್ಲದ ಕಾರಣ ಮಾತು ಸರಿಯಾಗಿ ಕೇಳಿಸುತ್ತಿರಲಿಲ್ಲ. ಅಲ್ಲೇ, ನಾಲ್ಕೂ ದಿಕ್ಕಿಗೂ ಅಲೆದಾಡಿ, ಎಲ್ಲಿಯೋ ಒಂದು ದಿಕ್ಕಿನಲ್ಲಿ ನೆಟ್‌ವರ್ಕ್‌ ಹಿಡಿದೆ. ಆಗ ಆತನ ಮಾತು ಸ್ಪಷ್ಟವಾಗುತ್ತಾ ಬಂತು. “ಎಲ್ಲಿದ್ದೀಯಾ? ಕಾಶ್ಮೀರದಲ್ಲಾ? ಹೇಗೀದ್ದೀರಿ ನೀವೆಲ್ಲ?” ಗಾಬರಿಯ ದನಿಯಲ್ಲಿ ಕೇಳುತ್ತಿದ್ದ ಆತ. “ಇಲ್ಲ ಇಲ್ಲ ನಾವು ಕಾ‍ಶ್ಮೀರದಲ್ಲಿಲ್ಲ. ನಾವಿರೋದು ಹಿಮಾಚಲ ಪ್ರದೇಶದಲ್ಲಿ. ಏನಾಯ್ತು?” ಕೇಳಿದೆ. “ಹೌದಾ? ಸೇಫ್‌ ಆಗಿ ಇದ್ದೀರಿ ತಾನೇ ? “ “ಹೌದೌದು ನಾವು ಸೇಫ್‌ ಆಗಿದ್ದೀವಿ. ಏನಾಯ್ತು?” ದನಿಗೆ ಗಾಬರಿ ಅಂಟಿಕೊಂಡಿತ್ತು. “ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ಟೂರಿಸ್ಟ್‌ ಮೇಲೆ ಅಟ್ಯಾಕ್‌ ಆಗಿದೆ. ನೀನು ಹಾಕಿರೋ ಸ್ಟೇಟಸ್‌ ನೋಡಿದ್ದೆನಲ್ಲ. ಯಾವ ಪ್ಲೇಸ್‌ ಅಂತ ಗೊತ್ತಾಗ್ಲಿಲ್ಲ. ಕಾಶ್ಮೀರಕ್ಕೇ ಹೋಗಿದ್ದೀರಿ ಅಂದುಕೊಂಡು ಸ್ವಲ್ಪ ಗಾಬರಿಯಾದೆ. ಮತ್ತೇನಿಲ್ಲ. ಎಂಜಾಯ್‌ ಎಂಜಾಯ್‌. “ ಅಂದು ಕಾಲ್‌ ಕಟ್‌ ಮಾಡಿಯೇಬಿಟ್ಟ.

ಆಗ ಶುರುವಾಗಿತ್ತು ಭಯ. ಹೋಮ್‌ ಸ್ಟೇ ಮ್ಯಾನೇಜರ್‌ ರನ್ನು ಕೇಳಿ, ವೈಫೈ ಪಾಸ್‌ವರ್ಡ್‌ ಪಡೆದುಕೊಂಡು, ಯೂಟ್ಯೂಬ್‌ ಮೂಲಕ ನ್ಯೂಸ್‌ ಲೈವ್‌ ನೋಡಲು ಆರಂಭಿಸಿದೆವು. ಎಲ್ಲೆಲ್ಲೂ ಅಟ್ಯಾಕ್‌ ನದ್ದೇ ಸುದ್ದಿ, ಭಯೋತ್ಪಾದಕರ ದಾಳಿಗೆ ಬಲಿಯಾಗಿರುವವರ ಫೊಟೋ, ವಿಡಿಯೋ. ಅಯ್ಯೋ ಛೇ! ಎಂಥ ದುರಂತ ಅಂದುಕೊಂಡು ಮರುಗಿದೆವು. ಆ ವೀಡಿಯೋಗಳನ್ನು ನೋಡಿದಷ್ಟೂ ಸಾಕಾಗುತ್ತಿಲ್ಲ. ಮನಸ್ಸು ತಹಬದಿಗೆ ಬರುತ್ತಿಲ್ಲ. ನಾವು ಕ್ಷೇಮವಾಗಿದ್ದೀವೋ ಇಲ್ಲವೋ ಎಂಬ ಭಯದಿಂದ ಊರಿನಿಂದ ಮೇಸೇಜುಗಳು ಬರಲು ಪ್ರಾರಂಭವಾದವು.

ಮನಾಲಿ ಕಾಶ್ಮೀರದಿಂದ ಎಷ್ಟು ಕಿಲೋಮೀಟರ್‌ ದೂರದಲ್ಲಿದೆ ಎಂದು ಪರೀಕ್ಷಿಸಿದೆ. 605 ಕಿಲೋಮೀಟರ್‌ ದೂರವಿದೆ ಅಂತ ನೋಡಿ ಸಮಾಧಾನಮಾಡಿಕೊಂಡೆ. ಸಂಜೆಯಾಗುತ್ತಿತ್ತು. ಹವಾಮಾನದ ಉಷ್ಣತೆ 1 ಡಿಗ್ರಿಗೆ ಇಳಿದಿತ್ತು. ಹಳ್ಳಿಯ ರಸ್ತೆ ನಿರ್ಜನವಾಗುತ್ತಿತ್ತು. ಆಚೆ ಈಚೆ ಎಲ್ಲಿ ನೋಡಿದರೂ ಬೆರಳೆಣಿಕೆಯಷ್ಟು ಪ್ರವಾಸಿಗರು ಕಾಣಿಸುತ್ತಿದ್ದರು. ಹೋಂಸ್ಟೇಯಲ್ಲಿ ಕೇಳಿದಾಗ ತಿಳಿಯಿತು, ಆ ಪುಟ್ಟ ಹಳ್ಳಿಯಲ್ಲಿ ಇದ್ದಿದ್ದೇ ನಾಲ್ಕೈದು ಹೋಮ್‌ ಸ್ಟೇಗಳು. ಪ್ರವಾಸಿಗರನ್ನು ಹೊರತುಪಡಿಸಿದರೆ, ಅದೇ ಊರಿನ ಜನ ಅಲ್ಲಿ ಕಮ್ಮಿ. ಅಲ್ಲಿರುವ ಕೆಲಸಗಾರರೆಲ್ಲರೂ ಮನಾಲಿಯಿಂದಲೇ ದಿನವೂ ಬಂದು ಹೋಗುತ್ತಾರಂತೆ! ಸ್ಥಳೀಯರೂ ಇಲ್ಲದ ಈ ಹಳ್ಳಿಯಲ್ಲಿ ರಾತ್ರಿ ಕಳೆಯುವುದು ಹೇಗೆ ಪ್ರಶ್ನೆ ಕಾಡತೊಡಗಿತ್ತು.

pahalgam attack

ಪೆಹಲ್ಗಾಮ್‌ ಸುದ್ದಿಯನ್ನು ನಿರಂತರವಾಗಿ ಕೇಳಿಸಿಕೊಳ್ಳುತ್ತಿದ್ದುದರಿಂದ, ಅದ್ಯಾವುದೋ ಒಂದು ಅಪರಿಚಿತ ಭಯ ಮನಸ್ಸನ್ನು ಆವರಿಸಿಕೊಳ್ಳಲು ಆರಂಭಿಸಿತು. ಯಾವುದೋ ಗೊತ್ತಿಲ್ಲದ ಹಳ್ಳಿ, ಜೀವನದಲ್ಲಿ ಒಮ್ಮೆಯೂ ಭೇಟಿಯಾಗದ ಹೊಸ ಜನರು, ಯಾರಾದರೂ ಬಂದು ನಮ್ಮನ್ನೂ ಅಟ್ಯಾಕ್‌ ಮಾಡಿಬಿಟ್ಟರೆ, ನಮ್ಮ ಕೂಗೆಲ್ಲ ಅರಣ್ಯರೋಧನ ! ಇಲ್ಲಿಯ ಸುದ್ದಿ ಮನಾಲಿಗೆ ತಲುಪಿ ಅಲ್ಲಿಂದ ಪೊಲೀಸ್‌ ಇಲ್ಲಿಗೆ ಬರುವುದಕ್ಕೆ ಕನಿಷ್ಟ ಎರಡು ಗಂಟೆ ಬೇಕು! ಇಂಥ ಹತ್ತಾರು ಬೇಡದ ಯೋಚನೆಗಳೆಲ್ಲ ತಲೆತುಂಬಿಕೊಳ್ಳುತ್ತಿದ್ದವು. ಕಾ‍ಶ್ಮೀರದಲ್ಲಾಗಿದ್ದು ಇಲ್ಲೇನೂ ಆಗಲ್ಲ ಎಂದು ನಮಗೆ ನಾವೇ ಸಮಾಧಾನ ಮಾಡಿಕೊಂಡು, ರೂಂನ ಬಾಗಿಲು ಭದ್ರಪಡಿಸಿಕೊಂಡು ಭಯದಲ್ಲಿಯೇ ಮಲಗಿದ್ದೆವು. ನಿದ್ದೆ ಸರಿಯಾಗಿ ಬಾರದ ಆ ರಾತ್ರಿ ಎಂದಿಗೂ ಮರೆಯುವಂತಿಲ್ಲ. ಅಂತೂ ಆ ರಾತ್ರಿ ಕಳೆದು, ಸೂರ್ಯನ ಬೆಳಕು ಕಂಡಮೇಲೆ ಮೈ-ಮನಸ್ಸು ಸ್ವಲ್ಪ ಬೆಚ್ಚಗಾಯ್ತು.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ಮಾ ’ಕಸಂ..’ ಇನ್ನೊಮ್ಮೆ ’ಕಸ’ ಎಸೆಯಲು ಹೋಗಲ್ಲ!

Read Previous

ಮಾ ’ಕಸಂ..’ ಇನ್ನೊಮ್ಮೆ ’ಕಸ’ ಎಸೆಯಲು ಹೋಗಲ್ಲ!

ಯಾರಿಗೂ ಕಾಣದ ದೆವ್ವ ಕಾಜೋಲ್ ಗೆ ಕಂಡದ್ದು ಹೇಗೆ?

Read Next

ಯಾರಿಗೂ ಕಾಣದ ದೆವ್ವ ಕಾಜೋಲ್ ಗೆ ಕಂಡದ್ದು ಹೇಗೆ?