ಜ್ಯೋತಿರ್ಲಿಂಗದ ದರ್ಶನಕ್ಕೆ ಐದು ಗಂಟೆಗಳ ಫಜೀತಿ
ಅಲ್ಲಿ, ಕೆಲವರನ್ನು ಮಾತ್ರ ಮುಖ್ಯ ದ್ವಾರದಿಂದ ಒಳಗೆ ಬಿಡುತ್ತಿದ್ದರು. 500 ರುಪಾಯಿ ಟಿಕೆಟ್ ಕೊಂಡರೆ ಈ ದರ್ಶನವಂತೆ. ಅಲ್ಲೆ ಇದ್ದ ಯಾರೋ ಹೇಳುತ್ತಿದ್ದರು ʻ500 ರುಪಾಯಿ ಕೊಟ್ಟರೆ ಎರಡು ಗಂಟೆ, 300 ಕೊಟ್ಟರೆ ಮೂರು ಗಂಟೆಯ ಒಳಗೆ ದರ್ಶನವಾಗುತ್ತದೆ, ಧರ್ಮದರ್ಶನಕ್ಕೆ ಐದು ಗಂಟೆ ಆಗಬಹುದುʼ ಎಂದು. ಅಂದರೆ ದುಡ್ಡು ಕೊಟ್ಟವರಿಗೆ ಅಧರ್ಮ ದರ್ಶನವೇ? ಎಂಬ ನನ್ನ ಪ್ರಶ್ನೆಗೆ ನಕ್ಕರು ನಮ್ಮವರು.
- ನಿಂಗಮ್ಮ ಭಾವಿಕಟ್ಟಿ
ಕಳೆದ ವರ್ಷ ನವೆಂಬರ್‌ನಲ್ಲಿ ನಾವು ಎರಡು ಫ್ಯಾಮಿಲಿ ಸೇರಿ ಅಜಂತಾ ಎಲ್ಲೋರಾ ಟ್ರಿಪ್ ಹೊರಟಿದ್ವಿ.
ಅದೇಕೋ, ಮತ್ತೆ ಮತ್ತೆ ಹೊರನಾಡು, ಶೃಂಗೇರಿ, ಕೊಲ್ಲೂರು, ಧರ್ಮಸ್ಥಳ ಹೀಗೆ ಅದೇ ರೂಟ್, ಬೇರೆ ಕಡೆ ಹೋಗುವ ಪ್ರಮೇಯವೇ ಬರುತ್ತಿರಲಿಲ್ಲ. ನಾನು ಹೇಳುತ್ತಿದ್ದೆ 'ಬರೀ ನೋಡಿದ ಪ್ಲೇಸ್‌ಗಳನ್ನು ತೋರಿಸುತ್ತೀರಿ ನಾನು ಅಜಂತ ಎಲ್ಲೋರ ನೋಡಬೇಕು... ಜಮ್ಮು-ಕಾಶ್ಮೀರದಲ್ಲಿ ಪ್ರೇಮ ಕಾಶ್ಮೀರ ಹಾಡಬೇಕು... ಆಗ್ರಾದಲ್ಲಿ ನೀವು ಪ್ರಪೋಸ್ ಮಾಡಬೇಕು… ಹಿಮಾಲಯಕ್ಕೆ ಹೋಗಬೇಕು ಅಲ್ಲಿ ಹತ್ತು ನಿಮಿಷವಾದರೂ ಕಣ್ಮುಚ್ಚಿ ಕುಳಿತು ಧ್ಯಾನ ಮಾಡಬೇಕು. ಮೌಂಟ್ ಅಬು ನೋಡಬೇಕು' ಎಂದು. ಹೀಗೆ ಹೇಳಿದಾಗಲೆಲ್ಲ ನಮ್ಮವರು ನಿನ್ನ ಪಟ್ಟಿ ದೊಡ್ಡದಿದೆ ಎನ್ನುತ್ತಿದ್ದರು.
ಹೀಗೆ ಒಂದು ದಿನ ಆ ಕಡೆಗೆ ಇನೋವಾ ಹೈಬ್ರಿಡ್‌ನಲ್ಲಿ ಹೋಗುವ ಅವಕಾಶ ಒದಗಿ ಬಂದಿತ್ತು. ಶಿರಡಿ, ಅಜಂತ, ಎಲ್ಲೋರಾ ಹೀಗೆ ಮಹಾರಾಷ್ಟ್ರ ಕಡೆಗೆ ಒಂದು ರೌಂಡ್ ಹೋಗಿ ಬರಲು ನಿರ್ಧಾರ ಮಾಡಿದೆವು. ಇದರ ಜತೆಗೆ ನಾಸಿಕ್‌ನ ತ್ರ್ಯಂಬಕೇಶ್ವರ ನೋಡಿಕೊಂಡು ಊರಿಗೆ ಮರಳುವುದು ನಮ್ಮ ಯೋಜನೆ ಆಗಿತ್ತು. ಅವುಗಳಲ್ಲಿ ತ್ರ್ಯಂಬಕೇಶ್ವರ ದರ್ಶನ ಪಡೆದುಕೊಳ್ಳಲು ಐದು ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಂತು ನೋಡಿ ಬಂದ ಅನುಭವ ಮಜವಾಗಿತ್ತು.

ನಾವು ತ್ರಯಂಬಕೇಶ್ವರ ದೇವಸ್ಥಾನದ ಆವರಣ ತಲುಪಿದಾಗ ಮಧ್ಯಾಹ್ನ 1 ಆಗಿತ್ತು. ಬೆಳಗಿನ ತಿಂಡಿ ಫುಲ್ ಆಗಿತ್ತು. ಹಾಗಾಗಿ ಹಸಿವೆ ಆಗಿರಲಿಲ್ಲ. ಕಬ್ಬಿನ ಹಾಲು ಕುಡಿತೀರಾ? ಎಂದು ನಮ್ಮವರು ಕೇಳಿದ್ದಕ್ಕೆ ಬರುವಾಗ ಕುಡಿಯೋಣ ಎಂದು ಓಡಿದೆವು. ಒಂದು ಗಂಟೆ ಒಳಗೆ ದರ್ಶನ ಮಾಡಿ ಬರುತ್ತೇವೆ ಎಂಬ ಅಂದಾಜು ನನ್ನದು. ಜತೆಗೆ ತ್ರಯಂಬಕೇಶ್ವರನನ್ನು ಭೇಟಿಯಾಗುವ ಯೋಚನೆಯೇ ನನ್ನನ್ನು ಪುಳಕಗೊಳಿಸಿತ್ತು. ಅಲ್ಲಿ, ಕೆಲವರನ್ನು ಮಾತ್ರ ಮುಖ್ಯ ದ್ವಾರದಿಂದ ಒಳಗೆ ಬಿಡುತ್ತಿದ್ದರು. 500 ರುಪಾಯಿ ಟಿಕೆಟ್ ಕೊಂಡರೆ ಈ ದರ್ಶನವಂತೆ. ಅಲ್ಲೆ ಇದ್ದ ಯಾರೋ ಹೇಳುತ್ತಿದ್ದರು ʻ500 ರುಪಾಯಿ ಕೊಟ್ಟರೆ ಎರಡು ಗಂಟೆ, 300 ಕೊಟ್ಟರೆ ಮೂರು ಗಂಟೆಯ ಒಳಗೆ ದರ್ಶನವಾಗುತ್ತದೆ, ಧರ್ಮದರ್ಶನಕ್ಕೆ ಐದು ಗಂಟೆ ಆಗಬಹುದುʼ ಎಂದು. ಅಂದರೆ ʼದುಡ್ಡು ಕೊಟ್ಟವರಿಗೆ ಅಧರ್ಮ ದರ್ಶನವೇ?ʼ ಎಂಬ ನನ್ನ ಪ್ರಶ್ನೆಗೆ ನಕ್ಕರು ನಮ್ಮವರು. ಜನ ಸಣ್ಣಗೆ ಮುಂದೆ ಸರಿಯುತ್ತಿದ್ದರು, ಅಲ್ಲಲ್ಲಿ ಕೂರಲು ಅವಕಾಶ ಮಾಡಲಾಗಿತ್ತು. ಶುದ್ಧ ನೀರಿನ ಸರಬರಾಜು ಚೆನ್ನಾಗಿತ್ತು. ಬಹುಶಃ ತ್ರಯಂಬಕೇಶ್ವರನನ್ನು ಭೇಟಿಯಾಗಲು ಏಳು ದೊಡ್ಡ ದೊಡ್ಡ ಹಾಲ್‌ಗಳನ್ನು ದಾಟಬೇಕಿತ್ತು.
ಶಿವನೇ ಎಂದು ನಿಂತೆವು. ಶುರುವಾಯಿತು, ಮುಂದಿನವರು ಹರ ಹರ ಎಂದು ಕೂಗಿದರೆ ಉಳಿದವರು ಮಹಾದೇವ ಎನ್ನುತ್ತಿದ್ದರು. ಸಾಲಲ್ಲಿ ನಿಂತು ಸುಸ್ತಾಗಿ ಅಲ್ಲಿದ್ದ ಮಕ್ಕಳು ಗೋಳಾಡಿದರೆ ಅಮ್ಮಂದಿರು ಅವರ ಕೈಗೆ ಫೋನ್ ಕೊಟ್ಟು ಕೂಡಿಸಿ ನಿರಾಳರಾಗುತ್ತಿದ್ದರು. ನಾನು 'ರೀ' ...ಎಂದಿದ್ದೆ. 'ದೇವರು ಸಿಗುವುದು ಅಷ್ಟು ಸುಲಭವೇ ಬಾ' ಎಂದರು ನಮ್ಮವರು.
ನನ್ನೊಳಗೆ ಜಿಜ್ಞಾಸೆ ಶುರುವಾಯಿತು. ದೇವರು ಇಲ್ಲಿ ಮಾತ್ರ ಇದ್ದಾನಾ? ನಮ್ಮೆಲ್ಲರಲ್ಲಿ ಇಲ್ಲವಾ? ಎಂದು ಒಳಗೊಳಗೇ ಗೊಣಗಾಡುತ್ತಿದ್ದೆ.
ಅಷ್ಟರಲ್ಲೇ ನನ್ನ ಪಕ್ಕದಲ್ಲಿದ್ದ ಒಂದು ಹುಡುಗಿ ಬಂಬಂ ಭೋಲೇನಾಥ್ ಎಂದು ಜಯಘೋಷಗಳನ್ನು ಕೂಗಲು ಶುರು ಮಾಡಿದ್ದಳು. ಇದನ್ನು ನೋಡಿ ನಮ್ಮವರು 'ಆಕೆ ಯಾಕೆ ಅಷ್ಟು ಶ್ರದ್ಧೆಯಿಂದ ಜಯಘೋಷ ಕೂಗುತ್ತಿದ್ದಾಳೆ ಗೊತ್ತಾ? 'ಯಾಕೆ ಎಂದು ನಾನು ಕೇಳಿದೆ. 'ಪಾಪ ಇನ್ನೂ ಮದುವೆ ಆಗಿಲ್ಲ ನನ್ನಂಥ ಒಳ್ಳೆ ಗಂಡ ಬೇಗ ಸಿಗಲಿ ಅಂತ ಅಂದರು'. ಹಾಗಂತ ನಿಮ್ಮೆದುರು ಹೇಳಿದಳೇ? ಎಂದೆ. ಗೊತ್ತಾಗಲ್ವಾ ಪರಿಸ್ಥಿತಿ ನೋಡಿ ಎಂದಿದ್ದಕ್ಕೆ, ನಮ್ಮ ಜತೆಗಿದ್ದವರು ನಕ್ಕಿದ್ದೆ ನಕ್ಕಿದ್ದು.
ಅಷ್ಟೊತ್ತಿಗೆ ಮಹಾಲಿಂಗಪುರದ ತಂಡ ಒಂದು ನುಗ್ಗಿ ಬಂತು. 'ನಮ್ಮವರು ಮುಂದಿದ್ದಾರೆ ನಾವು ತಪ್ಪಿಸಿಕೊಳ್ಳುತ್ತೇವೆ ಚೂರು ದಾರಿ ಬಿಡಿ ಎನ್ನುತ್ತಲೇ ಮುಂದೆ ಹೋಗಿ ತಮ್ಮವರ ತಂಡ ಸೇರಿಕೊಂಡರು. ಇನ್ನೊಬ್ಬಾಕೆ ಮಾತ್ರ ಹಿಂದಿದ್ದಳು. ಆಕೆ ಮರಿ ಆನೆಯಂತೆ ಧಾಡಸಿ ಹೆಂಗಸು. ನಮ್ಮವರು 'ಬಾರವ್ವ ನೀನು ನಿಮ್ಮ ತಂಡದಿಂದ ಹಿಂದೆ ಉಳಿದ್ಯಾ?' ಅಂದಿದ್ದಕ್ಕೆ 'ಹೂಂ ರೀ ಸರ' ಎನ್ನುತ್ತಲೆ ನುಗ್ಗಲು ಪ್ರಯತ್ನಿಸಿದಳು. ಕನ್ನಡದವರು ಸಿಕ್ಕಿದ್ದಕ್ಕೆ ಬಹುಶಃ ಆಕೆಗೆ ಖುಷಿಯಾಗಿರಬೇಕು. 'ತಾಯಿ ಯಲ್ಲವ್ವ ಹೋಗವ್ವ ಹೋಗು' ಎಂದು ನನ್ನವರು ಆಕೆಯನ್ನು ಕಳುಹಿಸಿದರು. ಹೀಗೆ ಹೇಳಿದ್ದನ್ನು ಕೇಳಿ ನನ್ನ ಗೆಳತಿ ಬಿದ್ದು ಬಿದ್ದು ನಗುತ್ತಿದ್ದಳು.

ಅಷ್ಟು ಹೊತ್ತು ಸಾಲಿನಲ್ಲಿ ನಿಂತು ನನಗಂತೂ ರೋಸಿಹೋಗಿತ್ತು.12 ಜ್ಯೋತಿರ್ಲಿಂಗಗಳನ್ನು ಒಮ್ಮೆಲೆ ನೋಡಿದಂತೆ ಆಗಿತ್ತು. 'ಚೋಟು ನಿನಗೆ?' ಎಂದಿದ್ದಕ್ಕೆ ಆ ಹುಡುಗ ʻನನಗೆ 13 ಲಿಂಗಗಳನ್ನು ನೋಡಿದಂಗಾತು ಆಂಟಿ' ಎನ್ನಬೇಕೇ? ಹೊಡಿ ಹ್ಯಾಂಡ್ ಎಂದೆ. ನಮ್ಮ ಡ್ರೈವರ್ ಅಣ್ಣನಿಗೆ ಸಾಕಾಗಿ ಏನನ್ನೋ ಹೇಳುತ್ತಿದ್ದರು. ಹೇ ಸುಮ್ನಿರು ಮಾರಾಯ ಮತ್ತೆ ಬರಕಾಗುತ್ತೇನೋ ಅಂದ್ರು ನಮ್ಮವರು. ತುಸು ಸಮಯದಲ್ಲೆ ಗುಡಿಯ ಹತ್ತಿರ ಬಂದಿದ್ದೆವು. ಅಲ್ಲಿಗೆ 500, 300ರುಪಾಯಿ ದರ್ಶನದ ಭಕ್ತರು ಸೇರಿಕೊಳ್ಳುತ್ತಿದ್ದರು. ದೇವಸ್ಥಾನದ ಆವರಣದಲ್ಲಿ ಅಗರಬತ್ತಿ, ಕರ್ಪೂರದ ಸುವಾಸನೆ ಮತ್ತು ಹೂಗಳ ಸುವಾಸನೆ ಎಲ್ಲವೂ ದೈವಿಕ ಭಾವನೆ ಮೂಡಿಸುತ್ತಿತ್ತು. ಪ್ರಸಿದ್ಧ ಜ್ಯೋತಿರ್ಲಿಂಗ ದೇವಸ್ಥಾನದ ಒಳಗಡೆ ಹೋಗುತ್ತಿದ್ದಂತೆ ಎದುರಿಗೆ ದೊಡ್ಡ ಕನ್ನಡಿಯಲ್ಲಿ ಜ್ಯೋತಿರ್ಲಿಂಗದ ಬಿಂಬ ಕಾಣುವಂತೆ ತೂಗು ಹಾಕಿದ್ದಾರೆ. ಅಲ್ಲೇ ನಮಿಸಿದೆವು. ಜ್ಯೋತಿರ್ಲಿಂಗದ ಬಾಗಿಲಲ್ಲಿ ಬರುವುದೇ ತಡ 'ಚಲೋ ಚಲೋ' ಎನ್ನುತ್ತಾ ಅಲ್ಲಿನ ಭದ್ರತಾ ಸಿಬ್ಬಂದಿ ಭಕ್ತರನ್ನು ನೂಕುತ್ತಾರೆ. ಜ್ಯೋತಿರ್ಲಿಂಗವನ್ನು ಬಗ್ಗಿ ನೋಡಬೇಕು ಇದರ ಮುಖ್ಯ ಆಕೃತಿ ಒಳಗಿದೆ. ಅಭಿಷೇಕ ಮಾಡುವುದು, ಹೂಗಳನ್ನು ಬಳಿದು ಬುಟ್ಟಿಯಲ್ಲಿ ತುಂಬುವುದು, ಜನ ಹಾಕುವ ಚಿಲ್ಲರೆ, ನೋಟುಗಳನ್ನು ಬಳಿದು ಮತ್ತೊಂದೆಡೆ ಶೇಖರಿಸುವುದು. ಅದೆಲ್ಲಾ ಹಾಲ್‌ಗಳಲ್ಲಿ ಲೈವ್ ಪ್ರದರ್ಶನದಲ್ಲಿ ಇತ್ತು.
ಐದು ಗಂಟೆಗಳ ನಂತರ ಹೊರ ಬಂದಾಗ, 'ದೇವರು ಸುಲಭಕ್ಕೆ ಸಿಗುವುದಿಲ್ಲ’ ಅನ್ನಿಸಿತು. 'ಗಟ್ಟಿಯಾಗಿದ್ದರೆ ದೇವರು ಭೇಟ್ಟಿಯಾಗುತ್ತಾನೆ' ಎನ್ನುವ ಮಾತು ನನಗೆ ಆಗ ನೆನಪಾಗಿತ್ತು. ಆಯಾಸವೆನಿಸಿದರೂ ಆ ಸಂದರ್ಭ, ಆ ಮಾತು, ಆ ಅನುಭವ ಎಂದಿಗೂ ಮರೆಯಲಾಗದು.