ವರ್ಜಿನ್ ಮೇರಿಯ ಪಾತ್ರ ಮಾಡಲು ಕನ್ಯತ್ವ ಕಡ್ಡಾಯ!
ವ್ಯಾಪಾರ ವಹಿವಾಟು, ಮನೋರಂಜನೆ, ಊಟ ಸ್ವಾದಗಳ ಆಸ್ವಾದಗಳ ನಡುವೆ ಹತ್ತಾರು ಹುಡುಗಿಯರು ಮೇರಿಯಾಗುವ ಕನಸು ಕಾಣುತ್ತಾ ತಪಸ್ಸು ಮಾಡುವ ಊರೊಂದಿದೆ. ಜರ್ಮನಿ ದೇಶದ ಮ್ಯೂನಿಕ್ ನಗರದಿಂದ 55 ನಿಮಿಷಗಳಷ್ಟು ದಾರಿಯಲ್ಲಿ ಅಮ್ಮೆರ ಎನ್ನುವ ನದಿಯಿದೆ. ಅದರ ದಂಡೆಯ ಮೇಲೆ ತಣ್ಣಗೆ ಮಲಗಿರುವ ಈ ಹಳ್ಳಿಯ ಹೆಸರು ‘ಒಬರಮೆರ್ಗಾವ್’ (Oberammmergau).
- ಅಂಜಲಿ ರಾಮಣ್ಣ
“ಒಂದೇ ಮಗೂಗೆ ಊರವ್ರೆಲ್ಲ ತೊಟ್ಲು ತೂಗಿದ್ರಂತೆ” ಎನ್ನುವ ಮಾತನ್ನು ಪ್ರತಿ ಗೋಕುಲಾಷ್ಟಮಿಯಲ್ಲೂ ಕೇಳಿಸಿಕೊಂಡು ಬೆಳೆದಿರುವ ನನಗೆ ಇಂಥದ್ದೇ ಅನುಭವ ಕೊಟ್ಟಿದ್ದು ಯುರೋಪಿನ ಕ್ರಿಸ್ ಮಸ್. ಬಾಲಯೇಸು ಹುಟ್ಟಿದ್ದು ಒಬ್ಬ; ಆದರೆ ಸಿಂಗಾರಗೊಳ್ಳುವುದು ಇಡೀ ಶಹರ. ಪ್ರತಿ ಮನೆಯಲ್ಲೂ ಬೆತ್ಲೆಹೆಮ್ ನಲ್ಲಿ ಇದ್ದ ಕೊಟ್ಟಿಗೆಯದ್ದೇ ಪ್ರತಿರೂಪ. ಶಂಖಾಕೃತಿಯ ಹಸಿರು ಮರದ ಮೈಯೆಲ್ಲಾ ಮಿಂಚುಹುಳುವಿನ ಬೆಳಕು. ಪ್ರತಿ ಅಡುಗೆ ಕೋಣೆಯಲ್ಲೂ ಖಾಸ್ ಬಾತಿನ ಘಮಲು. ವರ್ಷದ ಹನ್ನೊಂದು ತಿಂಗಳಿನ ಏಕತಾನತೆಯನ್ನು ಡಿಸೆಂಬರ್ ಎನ್ನುವ ಒಂದು ಗುಳಿಗೆಯನ್ನು ನುಂಗಿ ಓಡಿಸಿಬಿಡುತ್ತಾರೆ ಅಲ್ಲಿನ ಜನ.
ಇದನ್ನೂ ಓದಿ: ಪ್ರವಾಸದಲ್ಲಿ ಶಾಪಿಂಗ್ ಮಾಡದಿದ್ದರೆ ಶಾಪ ವಿಮೋಚನೆಯಾಗದು!
ಈಗಂತೂ ನಮ್ಮದೇ ರಾಜ್ಯದ ತಾಲೂಕು ಕೇಂದ್ರಗಳಿಗೂ ಕ್ರಿಸ್ ಮಸ್ ಆಚರಣೆ ವ್ಯಾಪಾರ ಮತ್ತು ಫ್ಯಾಷನ್ ರೂಪದಲ್ಲಿ ಕಾಲಿಟ್ಟಿದೆ. ಆದರೆ ಅನುಕರಣೆ ಎಂದೂ ಒರಿಜಿನಲ್ ಆಗಲಾರದು. ಕ್ರಿಸ್ ಮಸ್ ಮಾಸದ ಪೂರಾ ಅಲ್ಲಲ್ಲೇ ಸಣ್ಣ ದೊಡ್ಡ ಮಾರುಕಟ್ಟೆಗಳು ಉದ್ಭವವಾಗುತ್ತವೆ. ಪ್ರತಿ ಬೀದಿ ಪ್ರತಿ ಚೌಕಿಗಳೂ ಬೆಳಗುತ್ತವೆ. ರಸ್ತೆರಸ್ತೆಗಳಲ್ಲಿ ನೃತ್ಯ ಮಾಡುವವರು, ಅಭ್ಯಸಿಸುವವರು, ಕವನ ಬರೆಯುವವರು, ಚಿತ್ರ ಬಿಡಿಸುವವರು, ವಾದ್ಯ ನುಡಿಸುವವರು ಹೀಗೆ ಚೆಲುವಿನ ಚಿತ್ತಾರವೊಂದು ಮೂಡಿರುತ್ತದೆ. ಹಂಗೇರಿ ಮತ್ತು ಜಪಾನ್ ದೇಶಗಳಲ್ಲಿ ರೈಲುಗಳನ್ನೂ ಸೇರಿಸಿ ಸಾರ್ವಜನಿಕ ವಾಹನಗಳನ್ನು ಸಾಂಟಾ ಕ್ಲಾಸ್ ಅಥವಾ ಕ್ರಿಸ್ ಮಸ್ ಮರದಂತೆಯೋ ಅಲಂಕಾರ ಮಾಡಿರುತ್ತಾರೆ.
ಕ್ರಿಸ್ಮಸ್ ಸಂಭ್ರಮವನ್ನು ಕಣ್ತುಂಬಿಸಿಕೊಳ್ಳಲೆಂದೇ ದೇಶದಿಂದ ದೇಶಕ್ಕೆ ಜನರು ಪ್ರವಾಸ ಹೋಗುತ್ತಾರೆ. ತೀರ್ಥಯಾತ್ರೆ ಹೋಗುವವರು ಇಸ್ರೇಲಿನ ಜೆರುಸಲೆಮ್, ನಾಝರೆತ್ ಅಲ್ಲಿಯೇ ಸರಹದ್ದಿನಲ್ಲಿರುವ ಬೆತ್ಲೆಹೆಮ್ ಗೆ ಪಯಣಿಸುತ್ತಾರೆ. ವರ್ಷವಿಡೀ ಮಾಡಿದ ಉಳಿತಾಯವನ್ನು ಮನಸೋ ಇಚ್ಛೆ ಖರ್ಚು ಮಾಡಿ ವಿಶೇಷ ಸಾಮಾನುಗಳನ್ನು ಕೊಂಡುಕೊಳ್ಳುತ್ತಾರೆ. ಇಡೀ ಖಂಡವೇ ಆಕರ್ಷಣೆಯ ಅಮಲೇರಿಸಿಕೊಂಡ ಮಾರುಕಟ್ಟೆಯಾಗಿರುತ್ತದೆ. ಬಹಳ ಇಂಟರೆಸ್ಟಿಂಗ್ ಅಂದರೆ ಕೊಸ್ಟರಿಕ ಮತ್ತು ಪೂರ್ವ ಯುರೋಪಿನ ಮೋಲ್ಡೋವಾ ದೇಶಗಳು ಕ್ರಿಸ್ ಮಸ್ ಸಚಿವಾಲಯಗಳನ್ನೇ ಹೊಂದಿವೆ. ಅರ್ಥಾತ್ ಆ ಸಂದರ್ಭದಲ್ಲಿ ದೇಶಗಳ ಆರ್ಥಿಕ ಸ್ಥಿತಿಯಲ್ಲೂ ಧನಾತ್ಮಕ ಬದಲಾವಣೆಯನ್ನು ಗಮನಿಸಿ ಅದರ ಲಾಭ ಪಡೆದುಕೊಳ್ಳಲು ಯೋಜನೆಗಳನ್ನು ರೂಪಿಸಲಾಗುತ್ತದೆ.. ಅಮೆರಿಕದಲ್ಲಿ ರಾಷ್ಟ್ರಾಧ್ಯಕ್ಷರು ಪ್ರತೀ ವರ್ಷವೂ ವಾಷಿಂಗ್ಟನ್ ನಲ್ಲಿ ರಾಷ್ಟ್ರೀಯ ಕ್ರಿಸ್ ಮಸ್ ಟ್ರೀಯನ್ನು ಉದ್ಘಾಟಿಸಿ ಆಚರಣೆಗೆ ಚಾಲನೆ ಕೊಡುತ್ತಾರೆ.

ಉಳ್ಳವರು ನಲಿಯುತ್ತಾರೆ ನಾನೇನು ಮಾಡಲಯ್ಯ ನಾ ಬಡವನಯ್ಯ ಎಂದು ನೊಂದುಕೊಳ್ಳುವ ಹಾಗಿಲ್ಲ. ಎಲ್ಲೆಡೆಯೂ ಸೆಕೆಂಡ್ ಹ್ಯಾಂಡ್ ಬಟ್ಟೆಗಳನ್ನು, ಆಟಿಕೆ ಪೀಠೋಪಕರಣಗಳನ್ನು, ಅಡುಗೆ ಪದಾರ್ಥಗಳನ್ನು, ಪರಿಕರಗಳನ್ನು ಈ ಸಮಯದಲ್ಲಿ ಹಂಚಿಕೊಳ್ಳುತ್ತಾರೆ. ಉತ್ತರ ಲಂಡನ್ನಿನ ಕ್ಯಾಂಡನ್ ಟೌನ್ ಮಾರುಕಟ್ಟೆಯ ನಡುವಿನಲ್ಲಿ ಕೊಡಬೇಕು ಎನಿಸುವ ಎಲ್ಲಾ ಸಾಮಾನುಗಳನ್ನು ಒಪ್ಪವಾಗಿ ಜೋಡಿಸಿಟ್ಟಿರುತ್ತಾರೆ. ಬೇಕೆನಿಸಿದವರು ಯಾವುದೇ ಹಿಂಜರಿಕೆ ಇಲ್ಲದೆ ಅಲ್ಲಿಂದ ತಮಗೆ ಬೇಕಾದ್ದನ್ನು ಕೊಂಡೊಯ್ಯಬಹುದು. ಡಿಸೆಂಬರ್ ತಿಂಗಳು ಭರ್ತಿ ಸರಬರಗುಟ್ಟುವ ದೇಶಗಳದ್ದು ಜನವರಿ ತಿಂಗಳ ಮೊದಲ ವಾರಾಂತ್ಯದಿಂದ ಸ್ತಬ್ಧ, ನಿಶ್ಶಬ್ದ, ಕಾರ್ಯನಿಮಿತ್ತ ಮತ್ತು ಮುಂದಿನ ಡಿಸೆಂಬರಿಗಾಗಿ ಕಾಯುವತ್ತ ಚಿತ್ತ.
ವ್ಯಾಪಾರ ವಹಿವಾಟು, ಮನೋರಂಜನೆ, ಊಟ ಸ್ವಾದಗಳ ಆಸ್ವಾದಗಳ ನಡುವೆ ಹತ್ತಾರು ಹುಡುಗಿಯರು ಮೇರಿಯಾಗುವ ಕನಸು ಕಾಣುತ್ತಾ ತಪಸ್ಸು ಮಾಡುವ ಊರೊಂದಿದೆ. ಜರ್ಮನಿ ದೇಶದ ಮ್ಯೂನಿಕ್ ನಗರದಿಂದ 55 ನಿಮಿಷಗಳಷ್ಟು ದಾರಿಯಲ್ಲಿ ಅಮ್ಮೆರ ಎನ್ನುವ ನದಿಯಿದೆ. ಅದರ ದಂಡೆಯ ಮೇಲೆ ತಣ್ಣಗೆ ಮಲಗಿರುವ ಈ ಹಳ್ಳಿಯ ಹೆಸರು ‘ಒಬರಮೆರ್ಗಾವ್’ (Oberammmergau).

ಇದು 1600ನೆಯ ಇಸವಿಗೂ ಮೊದಲು ಪ್ಯಾರಿಶ್ ಜನಾಂಗದವರ ಚರ್ಚ್ ಇದ್ದ ಜಾಗವಾಗಿದ್ದು, ಪ್ಲೇಗ್ ಮಾರಿಯಿಂದ ಅಲ್ಲಿದ್ದವರ ಸಾವಾಗಿ ಹೋಯಿತು. ಮತ್ತೊಮ್ಮೆ ಜೀವನವನ್ನು ಕಟ್ಟಿಕೊಳ್ಳಲು ಅಲ್ಲಿ ಜನರ ವಾಸ್ತವ್ಯ ಪ್ರಾರಂಭವಾಯಿತು. ಈಗ ಹೇಗಿದೆಯೆಂದರೆ, ನಮ್ಮ ನಮ್ಮ ಬಾಲ್ಯದಲ್ಲಿ ಯಕ್ಷ ಕಿನ್ನರಿಯರ ಕಥೆಗಳಲ್ಲಿ ಓದಿ ಕಲ್ಪಿಸಿಕೊಂಡ ಓಣಿಗಳಲ್ಲಿ ಒಪ್ಪಗೊಂಡು ಮರದ ಚೌಕಟ್ಟುಗಳೊಳಗೆ ನಿಂತ ಮನೆಗಳು. ಮನೆಯ ಸುತ್ತಲೂ ಹೆಸರು ಹೇಳಲೂ ಬಾರದ ಸುಂದರ ಬಣ್ಣಗಳ ಹೂದೋಟ. ಬೀಡಿನ ಗೋಡೆಗಳ ಮೇಲೆಲ್ಲಾ ಗೋಥೆ (Goethe) ಶೈಲಿಯ ಕುಂಚ ಕಲೆ ಮತ್ತು ಅದಕ್ಕೆ ನೈಸರ್ಗಿಕವಾಗಿ ಪ್ರತಿ ಮನೆಯವರೇ ತಯಾರಿಸಿಗೊಂಡ ವರ್ಣಗಳಿಂದ ಅಲಂಕಾರ. ಹೂವು, ಚಿಟ್ಟೆ, ನದಿ, ಬೆಟ್ಟಗಳು ಮಾತ್ರವಲ್ಲ ಕ್ರಿಸ್ತನ ಜೀವನದ ವಿವಿಧ ಹಂತಗಳನ್ನು ತೋರುವ ಚಿತ್ರಗಳು, ಬೈಬಲ್ ನಲ್ಲಿ ಬರುವ ಕಥೆ ಉಪಕಥೆಗಳ ರೇಖಾಚಿತ್ರ ಮತ್ತದಕ್ಕೆ ಸಂಬಂಧಪಟ್ಟ ಹಾಗೆಯೇ ಇರುವ ಜಾನಪದ ಕಥೆಗಳು. ಅವರವರ ವಂಶವೃಕ್ಷದ ವಿವರಗಳು ಕೂಡ ಬಣ್ಣಗಳಲ್ಲಿ ಅರಳಿರುತ್ತವೆ. ಇಲ್ಲಿರುವ ಒಂದಷ್ಟು ಸಾವಿರ ಜನಗಳು ಜೀವನಕ್ಕೆ ಹೊರಗಿನವರನ್ನು ಅವಲಂಬಿಸಿಯೇ ಇಲ್ಲ.
ಸಮೃದ್ಧ ಪ್ರಕೃತಿ ಒದಗಿಸುವ ಮರಗಳಲ್ಲಿ ಕೆತ್ತನೆಯ ಕೆಲಸ ಮತ್ತು ಪಿಂಗಾಣಿಯಿಂದ ತಯಾರು ಮಾಡುವ ಕರಕುಶಲ ಸಾಮಗ್ರಿಗಳಿಂದ ಈ ಹಳ್ಳಿ ಶ್ರೀಮಂತ. ಇಲ್ಲೊಂದು ರಂಗಸ್ಥಳವಿದೆ. ಅದರ ಹೆಸರು The Passion Play Theatre. 4700 ಜನರು ಒಟ್ಟಿಗೆ ಕುಳಿತು ನಾಟಕ ನೋಡಬಹುದು. ವರ್ಷದ 300 ದಿನಗಳು ತಪ್ಪದೆ ನಾಟಕ ಪ್ರದರ್ಶನವಿರುತ್ತದೆ. ಎಲ್ಲಾ ದಿನಗಳ ನಾಟಕ ನೋಟಕ್ಕೆ ಜಗತ್ತಿನ ಎಲ್ಲಾ ಮೂಲೆಗಳಿಂದಲೂ ಸರಿಸುಮಾರು ಎರಡು ಲಕ್ಷ ಜನ ಬಂದು ಹೋಗುತ್ತಾರೆ.
1674ರಿಂದ ಪ್ರತಿ ಹತ್ತು ವರ್ಷಕ್ಕೊಮ್ಮೆ ಇಲ್ಲಿ ಕ್ರಿಸ್ತನ ಜನನದಿಂದ ಆರಂಭವಾಗಿ ಶಿಲುಬೆಯೇರುವವರೆಗೂ ಎಲ್ಲಾ ಹಂತಗಳನ್ನು ನಾಟಕದ ಮೂಲಕ ಪ್ರಸ್ತುತ ಪಡಿಸಲಾಗುತ್ತದೆ. ಇಂದಿನ ದಿನಗಳಲ್ಲಿ ಯುರೋಪಿನ ಸುಪ್ರಸಿದ್ಧ 60 ನಾಟಕ ನಿರ್ದೇಶಕರು, 600 ನಟರು, 2000 ವಸ್ತ್ರಾಲಂಕಾರಗಳ ಬಳಕೆಯಾಗುತ್ತದೆ. 200 ಬಾರಿ ಬದಲಾಗುತ್ತದೆ ರಂಗಸಜ್ಜಿಕೆ. ಮೇ ತಿಂಗಳ ಮೊದಲ ವಾರದಿಂದ ಅಕ್ಟೋಬರ್ ತಿಂಗಳ ಕೊನೆಯ ವಾರದವರೆಗೂ ಒಂದು ದಿನವೂ ತಪ್ಪದೆ ದಿನಕ್ಕೆ 24 ಗಂಟೆಗಳ ಕಾಲ (ಊಟಕ್ಕೆ ಎಂದು ಒಟ್ಟು 2 ಗಂಟೆಗಳ ಕಾಲದ ಬಿಡುವು ಇರುತ್ತದೆ) ಪ್ರದರ್ಶನವಿರುತ್ತದೆ. ವಿಶೇಷತೆಯೆಂದರೆ, ನಿರ್ದೇಶಕರನ್ನು ಹೊರತು ಪಡಿಸಿ ಎಲ್ಲಾ ನಟರೂ ಮತ್ತು ರಂಗದ ಹಿಂದೆ ಕೆಲಸ ಮಾಡುವ ಕಲಾವಿದರು ಎಲ್ಲರೂ ಈ ಹಳ್ಳಿಯ ಜನರೇ.

ಪ್ರವಾಸ ಮಾರ್ಗದರ್ಶಕಿಯಾಗಿದ್ದ ನ್ಯಾನ್ಸಿಯು ನನ್ನ ಭುಜದ ಮೇಲೆ ಕೈ ಇರಿಸುತ್ತಾ ಹೇಳಿದಳು “ನಿನಗೆ ಗೊತ್ತಾ ಮೇರಿ ಪಾತ್ರ ಮಾಡಲು ಆಯ್ಕೆಯಾಗುವುದು ಈ ಊರಿನ ಹೆಣ್ಣು ಮಕ್ಕಳಿಗೆ ಮತ್ತು ಅವರ ಕುಟುಂಬಕ್ಕೆ ಅತ್ಯಂತ ಹೆಮ್ಮೆಯ, ಪ್ರತಿಷ್ಠಿತ ವಿಷಯ.” “ಮೇರಿಯ ಪಾತ್ರದಲ್ಲಿ ನಟಿಸಲು ಆಯ್ಕೆಯಾಗ ಬೇಕಾದರೆ ಆಕೆ ಕನ್ಯೆಯಾಗಿರಬೇಕು. ಗಂಡುಗಳ ಸ್ನೇಹ ಬೆಳೆಸದೆ, ಹೆಚ್ಚಿನ ಗೆಳತಿಯರೊಡನೆ ಸೇರದೆ, ನಾಟಕ ಸಿನಿಮಾಗಳನ್ನು ನೋಡದೆ, ಉಪ್ಪುರಹಿತ ಊಟ ಮಾಡುತ್ತಾ, ಸದಾ ಕಾಲವೂ ಆಧ್ಯಾತ್ಮಿಕವಾಗಿ ಜೀವನ ನಡೆಸುತ್ತಾ, ಬೈಬಲ್ ಓದುತ್ತಾ, ರಸ್ತೆಗಳಲ್ಲಿ ನಡೆಯುವಾಗ ತಲೆಯೆತ್ತದೆ ಸಾತ್ವಿಕವಾಗಿ 10 ವರ್ಷಗಳನ್ನು ಕಳೆದರೆ ಆಕೆಯು ಆಯ್ಕೆ ಪ್ರಕ್ರಿಯೆಯ ಸರದಿಗೆ ಬರಲು ಅರ್ಹಳಾಗುತ್ತಾಳೆ” ಎಂದಳು ನ್ಯಾನ್ಸಿ.
ಕ್ರಿಸ್ ಮಸ್ ಎನ್ನುವ ವಹಿವಾಟು ರಸ್ತೆಗೆ, ಮನೆಗೆ, ಊರಿಗೆ, ಸಂಗೀತ ನಾಟಕಕ್ಕೆ ಮಾತ್ರ ಸೀಮಿತವಲ್ಲ; ಸಿನಿಮಾವರೆಗೂ ವಿಸ್ತರಿಸಿದೆ. Netflixನ ತುಂಬಾ ಕ್ರಿಸ್ ಮಸ್ ಸಂದರ್ಭಕ್ಕಾಗಿಯೇ ನಿರ್ಮಿಸಿದ ಚಿತ್ರಗಳ ದೊಡ್ಡ ಪಟ್ಟಿ ಇದೆ. ಹಳತನ್ನು ಸರಿಸಿ ಹೊಸ ಸಿನಿಮಾಗಳು ಪ್ರತಿ ನವೆಂಬರ್ ಕೊನೆಯಿಂದಲೇ ಸೇರಿಕೊಳ್ಳುತ್ತಾ ಹೋಗುತ್ತವೆ. ರೊಮ್ಯಾನ್ಸ್, ಕೌಟುಂಬಿಕ ಕಥೆಗಳದ್ದೇ ಕಾರುಬಾರಿನ ನಡುವೆ ಈ ಬಾರಿ ವಿಶೇಷ ಎನಿಸಿದ ಸಿನಿಮಾ Bringing Christmas Home. ಕ್ರಿಸ್ ಮಸ್ ಪ್ರವಾಸ ಮಾಡುತ್ತಲೇ ಈ ಸಿನಿಮಾವನ್ನೂ ನೋಡುತ್ತಿದ್ದರೆ ಕನಸಿನ ಪ್ರಪಂಚವೊಂದನ್ನು ಸುತ್ತಿಬಂದ ಅನುಭವ ಖಂಡಿತ.