ಅಮೆರಿಕ ವೀಸಾ ಸಂದರ್ಶನವೆಂಬ ಕಬ್ಬಿಣದ ಕಡಲೆ!
ವೀಸಾ ಸಂದರ್ಶನವು ಚೆನ್ನೈ, ಮುಂಬೈ ಮುಂತಾದ ಮುಖ್ಯ ಪಟ್ಟಣಗಳಲ್ಲಿರುತ್ತದೆ. ನಮಗೆ ಬೇಕಾದ ಕಡೆಯಲ್ಲಿ ಸಂದರ್ಶನ ನೀಡುವ ಅವಕಾಶವಿರುತ್ತದೆ. ಸಂದರ್ಶನದ ಸಂದರ್ಭದಲ್ಲಿ ತಪ್ಪಿಯೂ ಮಕ್ಕಳನ್ನು ಕಾಣಲು ಹೋಗುವುದೆಂದು ಹೇಳುವ ಹಾಗಿಲ್ಲ. ಬದಲಿಗೆ, ಅಮೆರಿಕದ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಹೋಗುವುದಾಗಿ ಸಂದರ್ಶಕರಿಗೆ
- ಶಂಕರಿ ಶರ್ಮ, ಪುತ್ತೂರು.
ಯಾವುದೇ ದೇಶಕ್ಕೆ ಹೋಗಿ ಬರಬಹುದು. ಆದರೆ ಅಮೆರಿಕ ಹೋಗುವುದು ಸುಲಭವಲ್ಲ. ಅಮೆರಿಕಕ್ಕೆ ಹೋಗುವ ಪ್ರಕ್ರಿಯೆಗೇ ಒಂದು ಕ್ರ್ಯಾಶ್ ಕೋರ್ಸ್ ಇಟ್ಟರೂ ಅದು ಯಶಸ್ವಿಯಾಗುತ್ತದೆ. ನಿಮ್ಮಲ್ಲಿ ವ್ಯಾಲಿಡ್ ಪಾಸ್ ಪೋರ್ಟ್ ಇರಬಹುದು. ಆದರೆ ವೀಸಾ ಇಲ್ಲದೆ ಪಾಸ್ ಪೋರ್ಟ್ ಗೆ ಬೆಲೆ ಇಲ್ಲ. ವೀಸಾ ಅಂದರೇನು ಗೊತ್ತಾ? ವಿಸಿಟರ್ಸ್ ಇಂಟರ್ ನ್ಯಾಷನಲ್ ಸ್ಟೇ ಅಡ್ಮಿಶನ್ ಅಂತ. ವೀಸಾ ಪಡೆಯಲು ಅರ್ಜಿ ಹಾಕಬೇಕಾಗುತ್ತದೆ. ಬೇರೆ ಬೇರೆ ದೇಶಗಳಿಗೆ ವೀಸಾ ನಿಯಮಗಳು ಬೇರೆ ಬೇರೆಯಾಗಿರುತ್ತವೆ. ಎಲ್ಲಾ ದೇಶಗಳಿಗಿಂತ ಅಮೆರಿಕಕ್ಕೆ ವೀಸಾ ಸಿಗುವುದು ಬಹಳ ಕಷ್ಟ. ವೀಸಾಕ್ಕಿರುವ ಸಂದರ್ಶನವೂ ಅಷ್ಟೇ ಕಷ್ಟವಾಗಿರುವುದರಿಂದ ಸಂಪೂರ್ಣ ಸಿದ್ಧತೆ ಬೇಕಾಗುತ್ತದೆ. ಒಮ್ಮೆ ವೀಸಾ ಸಿಕ್ಕಿತೆಂದರೆ, ಪ್ರವಾಸಿಗಳಾಗಿ ವರ್ಷಕ್ಕೊಂದು ಬಾರಿ, ಹತ್ತು ವರ್ಷಗಳ ತನಕ ನಿರಾತಂಕವಾಗಿ ಹೋಗಬಹುದು. ಹತ್ತು ವರ್ಷಗಳ ಬಳಿಕ ನವೀಕರಣವು ಕೆಲವು ಸರಳ ಪ್ರಕ್ರಿಯೆಗಳ ಮೂಲಕ ಸುಲಭದಲ್ಲಿ ಆಗಿಬಿಡುವುದು.
ಮೊದಲಿಗೆ, ವೀಸಾ ಅರ್ಜಿಗಳನ್ನು ಸರಿಯಾಗಿ ಭರ್ತಿ ಮಾಡಿ, ಅದಕ್ಕೆ ಲಗತ್ತಿಸಲು, ಅಲ್ಲಿ ವಾಸವಾಗಿರುವವರ ಆಹ್ವಾನಪತ್ರದ ಜೊತೆಗೆ, ಅವರು ಕೆಲಸ ಮಾಡುವ ಕಂಪೆನಿಯ ಪೂರ್ತಿ ವಿವರ, ಪಡೆಯುವ ಸಂಬಳ, ವಾಸ್ತವ್ಯ ಇತ್ಯಾದಿಗಳ ಕುರಿತು ಮಾಹಿತಿ ನೀಡಬೇಕಾಗುತ್ತದೆ. ಅದು ಸರಿಯಾಗಿಲ್ಲದಿದ್ದರೆ ಅರ್ಜಿಯು ಸ್ವೀಕೃತವಾಗುವುದಿಲ್ಲ. ಜತೆಗೆ, ಅಲ್ಲಿ ಇರುವಷ್ಟು ದಿನಗಳಿಗೆ ಆರೋಗ್ಯ ವಿಮೆಯನ್ನು ಮಾಡುವುದು ಕಡ್ಡಾಯ. ವೀಸಾಕ್ಕೆ ಲಗತ್ತಿಸಲಿರುವ ಭಾವಚಿತ್ರದ ಅಳತೆ, ಹಿನ್ನೆಲೆಯ ಬಣ್ಣ(ಶುಭ್ರ ಬಿಳಿ) ಎಲ್ಲಾ ಕರಾರುವಾಕ್ಕಾಗಿ ಇರಲೇಬೇಕಾಗುತ್ತದೆ. ಸ್ವಲ್ಪ ಹೆಚ್ಚು ಕಡಿಮೆಯಾದರೂ ತಿರಸ್ಕರಿಸಲ್ಪಡುತ್ತದೆ.

ವೀಸಾ ಸಂದರ್ಶನವು ಚೆನ್ನೈ, ಮುಂಬೈ ಮುಂತಾದ ಮುಖ್ಯ ಪಟ್ಟಣಗಳಲ್ಲಿರುತ್ತದೆ. ನಮಗೆ ಬೇಕಾದ ಕಡೆಯಲ್ಲಿ ಸಂದರ್ಶನ ನೀಡುವ ಅವಕಾಶವಿರುತ್ತದೆ. ಸಂದರ್ಶನದ ಸಂದರ್ಭದಲ್ಲಿ ತಪ್ಪಿಯೂ ಮಕ್ಕಳನ್ನು ಕಾಣಲು ಹೋಗುವುದೆಂದು ಹೇಳುವ ಹಾಗಿಲ್ಲ. ಬದಲಿಗೆ, ಅಮೆರಿಕದ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಹೋಗುವುದಾಗಿ ಸಂದರ್ಶಕರಿಗೆ ಮನವರಿಕೆ ಮಾಡಬೇಕಾಗುತ್ತದೆ. ಆದ್ದರಿಂದ, ಅಲ್ಲಿಯ ಪ್ರವಾಸಿ ತಾಣಗಳ ಹೆಸರುಗಳನ್ನು ನೆನಪಿನಲ್ಲಿ ಇರಿಸಿಕೊಳ್ಳುವುದು ಬಹಳ ಮುಖ್ಯ. ಇನ್ನೊಂದು ಮುಖ್ಯವಾದ ಅಂಶವೆಂದರೆ; ಹೋದವರು ಅಲ್ಲಿ ಹೆಚ್ಚು ಸಮಯ ಉಳಿಯುವ ಹಾಗಿಲ್ಲ. ಆರು ತಿಂಗಳು ಅಂದರೆ, ಸರಿಯಾಗಿ 180 ದಿನಗಳು ಮಾತ್ರ ಅಮೆರಿಕದಲ್ಲಿರಲು ಆ ದೇಶದ ಅನುಮತಿ ಇರುತ್ತದೆ. ಅದರಿಂದ ಒಂದು ದಿನ ಕೂಡಾ ಹೆಚ್ಚಾಗುವಂತಿಲ್ಲ. ಆದರೆ, ಆರೋಗ್ಯ ಸಮಸ್ಯೆಯಂಥ ಕಾರಣಗಳಿದ್ದಲ್ಲಿ ಸ್ವಲ್ಪ ಹೆಚ್ಚಿನ ಸಮಯಕ್ಕೆ ಅನುಮತಿ ನೀಡುವರು. ವಾಪಸ್ ನಮ್ಮೂರಿಗೆ ಹಿಂತಿರುಗುವ ಕುರಿತು ಸಂದರ್ಶಕರಿಗೆ ಮನವರಿಕೆ ಮಾಡಲು, ನಮ್ಮ ಮನೆ, ಜಾಗದ ವಿವರಗಳನ್ನು ಮೂಲ ದಾಖಲೆಗಳ ಸಹಿತ ನಮ್ಮ ಬಳಿಯಲ್ಲಿ ಇರಿಸಿಕೊಳ್ಳಬೇಕು. ನಾವು ನೌಕರಿಯಲ್ಲಿದ್ದರೆ, ಅದರ ಪ್ರಮಾಣಪತ್ರ, ಕುಟುಂಬದ ಭಾವಚಿತ್ರ ಇತ್ಯಾದಿಗಳನ್ನು ದಾಖಲೆಗಾಗಿ ಜೊತೆಗೆ ಒಯ್ಯಬೇಕಾಗುತ್ತದೆ. ಸಂದರ್ಶನದಲ್ಲಿ ಮೊದಲಿನ ಸಲವೇ ಉತ್ತೀರ್ಣರಾಗುವುದು ಕೂಡಾ ಅಷ್ಟೇ ಕಷ್ಟವೆಂಬುದನ್ನು ನಾವು ಅರಿತಿರುವುದು ವಿಹಿತ. ಒಮ್ಮೆ ಅನುತ್ತೀರ್ಣರಾದರೆ, ಮುಂದಿನ ಅವಕಾಶಗಳಲ್ಲಿ ಪ್ರಯತ್ನಿಸಬಹುದಾಗಿದೆ.
ವೀಸಾ ನಮ್ಮ ಕೈಸೇರಿದ ಬಳಿಕ, ಹೋಗುವ ದಿನ ನಿಗದಿ ಪಡಿಸಿ, ನಾಲ್ಕು ತಿಂಗಳು ಮುಂಚಿತವಾಗಿ ಸೀಟು ಕಾದಿರಿಸಬಹುದು. ಈಗ ಅಂತರ್ಜಾಲದ ಮೂಲಕ ಬಹಳ ಸುಲಭವಾಗಿ ಮಾಡಬಹುದಾಗಿದೆ. ಅಲ್ಲದೆ, ಕಾದಿರಿಸದಿದ್ದಲ್ಲಿ ಸೀಟು ಸಿಗುವುದೂ ದುರ್ಲಭ. ಹಾಗೊಮ್ಮೆ ಸಿಕ್ಕಿದರೂ, ಒಂದಕ್ಕೆ ಹತ್ತುಪಟ್ಟು ತೆರಬೇಕಾತ್ತದೆ.
ಮುಂದಿನ ಹಂತವೇ ಜೊತೆಗೆ ಒಯ್ಯಲಿರುವ ಸಾಮಾನುಗಳ ಜೋಡಣೆ. ಒಬ್ಬರಿಗೆ ತಲಾ 23ಕೆ.ಜಿ. ತೂಕದ ಎರಡು ಸೂಟ್ ಕೇಸುಗಳು, ಏಳು ಕೆಜಿಯ ದೊಡ್ಡ ಬ್ಯಾಗು ಹಾಗೂ ಮೂರು ಕೆ.ಜಿ.ಯ ಸಣ್ಣ ಕೈಚೀಲ ಎನ್ನುವ ನಿರ್ಬಂಧಗಳಿವೆ. ತಿಂಡಿ ತಿನಿಸುಗಳು, ಮಸಾಲೆ ಪುಡಿಗಳು, ಉಪ್ಪಿನಕಾಯಿ, ಚೂರಿ, ಪಿನ್ನು ಇತ್ಯಾದಿ ವಸ್ತುಗಳು ಇದ್ದಲ್ಲಿ, 23ಕೆ.ಜಿ ತೂಗುವ ವಸ್ತುಗಳ ಜೊತೆಗಿಟ್ಟು ಚೆಕ್ ಇನ್ ಬ್ಯಾಗಿಗೆ ಹಾಕಬೇಕಾಗುತ್ತದೆ. ಈ ಬ್ಯಾಗುಗಳು ನೇರವಾಗಿ ವಿಮಾನದ ಲಗೇಜ್ ಬಾಕ್ಸ್ ಗೆ ಹೋಗುತ್ತವೆ. ಅವುಗಳನ್ನು ನಮ್ಮ ಕೊನೆಯ ನಿಲ್ದಾಣದಲ್ಲಿ ಪಡೆಯಬಹುದು. ಇಂಥವುಗಳನ್ನು ಕೈಯಲ್ಲಿ ತೆಗೆದುಕೊಂಡು ಹೋಗುವ ಹಾಗಿಲ್ಲ. ಇವುಗಳೆಲ್ಲದರ ತೂಕಗಳು ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಗುವ ಹಾಗಿಲ್ಲ. ಹಾಗೆಯೇ, ತಪಾಸಣಾ ಸಮಯದಲ್ಲಿ ನಿಷೇಧಿಸಿದ ವಸ್ತುಗಳು ಕೈಯಲ್ಲಿ ಒಯ್ಯುವ ಚೀಲಗಳಲ್ಲಿ ಸಿಕ್ಕಿದರೆ ಅಥವಾ ತೂಕ ಹೆಚ್ಚಾಗಿದ್ದಲ್ಲಿ, ಲವಲೇಶವೂ ಕರುಣೆಯಿಲ್ಲದೆ ಸಿಕ್ಕಾಪಟ್ಟೆ ದಂಡ ವಿಧಿಸುವುದರ ಜೊತೆಗೆ, ಏನಾದರೂ ಸಂಶಯ ಬಂದರೆ ಎಲ್ಲಾ ಕಿತ್ತು ಎಸೆಯುತ್ತಾರೆ! ಎಲ್ಲಕ್ಕಿಂತಲೂ ಮಿಗಿಲಾಗಿ, ಕರಿಬೇವಿನ ಸೊಪ್ಪನ್ನು ಹಸಿಯಾಗಿ ಅಥವಾ ಒಣಗಿಸಿ ಕೂಡಾ ಒಯ್ಯುವಂತಿಲ್ಲ. ನಮ್ಮ ಪರಿಚಿತರೊಬ್ಬರು ಈ ತಪ್ಪು ಮಾಡಿ, ನೂರಾರು ಡಾಲರ್ ದಂಡ ತೆರಬೇಕಾಗಿ ಬಂದಿತ್ತು! ಮತ್ತೊಂದು ಮುಖ್ಯ ಸಂಗತಿಯೆಂದರೆ, ಒಂದೇ ರೀತಿಯ ಆಕಾರ, ಬಣ್ಣವಿರುವ ಸೂಟ್ ಕೇಸುಗಳು ಬೇರೆ ಪ್ರಯಾಣಿಕರ ಬಳಿ ಇರುವ ಸಾಧ್ಯತೆ ಇರುವುದರಿಂದ, ಗುರುತಿಗಾಗಿ ನಮ್ಮ ಸೂಟ್ ಕೇಸುಗಳಿಗೆ ಬಣ್ಣದ ರಿಬ್ಬನ್ ಥರದ್ದು ಏನಾದರೂ ಕಟ್ಟಿದರೆ ಅದನ್ನು ಹಿಂದೆ ಪಡೆಯುವಲ್ಲಿ ಕೆಲಸ ಸುಲಭವಾಗುತ್ತದೆ. ನಾವು ವಿಮಾನವೇರುವ ನಿಲ್ದಾಣದಲ್ಲಿ, ಡಿಕ್ಕಿಗೆ ಹೋಗುವ ಸೂಟ್ಕೇಸುಗಳಿಗೆ ಚೀಟಿಯನ್ನು ಅಂಟಿಸಿ, ಅದರ ಇನ್ನೊಂದು ಪ್ರತಿಯನ್ನು ನಮಗೆ ನೀಡುವರು. ಇದರಲ್ಲಿ ಕ್ರಮಸಂಖ್ಯೆ, ತಲಪಬೇಕಾದ ನಿಲ್ದಾಣದ ಹೆಸರು ಮತ್ತು ನಮ್ಮ ಹೆಸರನ್ನು ನಮೂದಿಸಲಾಗಿರುತ್ತದೆ. ಇದನ್ನು ನಾವು ಬಹಳ ಜೋಪಾನವಾಗಿ ಇರಿಸಿಕೊಳ್ಳಬೇಕು. ನಮ್ಮ ಅಂತಿಮ ನಿಲ್ದಾಣದಲ್ಲಿ ನಮ್ಮ ಸೂಟ್ ಕೇಸ್ ಮಿಸ್ ಆದರೆ, ಈ ಚೀಟಿಯಲ್ಲಿರುವ ಮಾಹಿತಿಗಳನ್ನು ನೀಡಿದಲ್ಲಿ, ಒಂದೆರಡು ದಿನಗಳಲ್ಲಿ ಸೂಟ್ ಕೇಸನ್ನು ನಮ್ಮ ಮನೆಗೆ ಉಚಿತವಾಗಿ ತಲುಪಿಸುತ್ತಾರೆ.