ಅಳಿವಿನಂಚಿನಲ್ಲಿರುವ ವಿಶಿಷ್ಟ ಪರ್ವತ ಮೇಕೆ - 'ನೀಲಗಿರಿ ತಾಹರ್'
ನೀಲಗಿರಿ ತಾಹರ್ ಗಳು ಮೂಲತಃ ಸಂಘ ಜೀವಿಗಳು. ತನ್ನ ಪ್ರಮುಖ ಶತ್ರುಗಳಾದ ಚಿರತೆ ಮತ್ತು ಕತ್ತೆ ಕಿರುಬಗಳಿಂದ ತನ್ನನ್ನು ರಕ್ಷಿಸಿಕೊಳ್ಳಲು, ಇವುಗಳು ತಮ್ಮ ದೇಹದ ಬಣ್ಣವನ್ನು ಹೋಲುವ ಬಂಡೆಗಳಿಂದ ಕೂಡಿದ ನೈಸರ್ಗಿಕ ಪರಿಸರದಲ್ಲಿ ವಾಸಿಸುತ್ತವೆ. ಕಲ್ಲಿನ ಬಣ್ಣದಿಂದ ಕೂಡಿದ ಈ ಪರ್ವತ ಮೇಕೆಗಳನ್ನು ಅಲ್ಲಿನ ಬುಡಕಟ್ಟು ಜನಾಂಗದವರು 'ಕಲ್ಲು ಮೇಕೆ' ಎಂದು ಕರೆಯುತ್ತಾರೆ.
- ಡಾ.ಕಾರ್ತಿಕ ಜೆ.ಎಸ್
ತಮಿಳುನಾಡು, ಕರ್ನಾಟಕ ಮತ್ತು ಕೇರಳದ ಗಡಿ ಪ್ರದೇಶದಲ್ಲಿ ನೆಲೆಗೊಂಡಿರುವ ನೀಲಗಿರಿ ಬೆಟ್ಟಗಳು ದಕ್ಷಿಣ ಭಾರತದ ಅತ್ಯಂತ ಸುಂದರವಾದ ಪರ್ವತ ಶ್ರೇಣಿಗಳಲ್ಲೊಂದು. ಪೂರ್ವ ಘಟ್ಟ ಮತ್ತು ಪಶ್ಚಿಮಘಟ್ಟಗಳನ್ನು ಬೆಸೆಯುವ ಈ ಪರ್ವತ ಶ್ರೇಣಿಗಳು ತನ್ನ ಅದ್ಭುತ ಪ್ರಾಕೃತಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಜಗತ್ತಿನ ಬೇರೆಲ್ಲೂ ಕಂಡುಬರದ ವಿಶಿಷ್ಟ ಜೀವಪ್ರಭೇದಗಳ ತವರೂರು ಎಂಬ ಹೆಗ್ಗಳಿಕೆ ಇಲ್ಲಿಯದ್ದು. ಇಲ್ಲಿರುವ ವಿಶಿಷ್ಟ ಅಪರೂಪದ ಜೀವಿಗಳಲ್ಲಿ
ಅಳಿವಿನಂಚಿನಲ್ಲಿರುವ 'ನೀಲಗಿರಿ ತಾಹರ್' ಪ್ರಮುಖವಾದದ್ದು.

ನೀಲಗಿರಿ ತಾಹರ್ ಗಳು ದೃಢವಾದ ಶರೀರ, ಬಾಗಿದ ಕೊಂಬುಗಳು ಮತ್ತು ಬೂದು- ಕಂದು ಮಿಶ್ರಿತ ಮೈ ಬಣ್ಣ ಹೊಂದಿರುವ ಆಕರ್ಷಕ ಪರ್ವತ ಮೇಕೆಗಳಾಗಿವೆ.
ವೈಜ್ಞಾನಿಕವಾಗಿ 'ನೀಲಗಿರಿಟ್ರಾಗಸ್ ಹೈಲೋಕ್ರಿಯಸ್' ಎಂದು ಕರೆಯಲ್ಪಡುವ ಇವುಗಳು ಸಮುದ್ರಮಟ್ಟಕ್ಕಿಂತ 3000 ಅಡಿಗಳಿಗಿಂತಲೂ ಹೆಚ್ಚು ಎತ್ತರವಿರುವ ನೀಲಗಿರಿ ಪರ್ವತ ಶ್ರೇಣಿಗಳಲ್ಲಿ ಕಾಣಸಿಗುತ್ತವೆ. ವಯಸ್ಕ ಗಂಡು ನೀಲಗಿರಿ ತಾಹರ್ ಗಳ ಬೆನ್ನಿನ ಮೇಲೆ ವಿಶಿಷ್ಟವಾದ ತಿಳಿ ಬೂದು ಬಣ್ಣದ ತುಪ್ಪಳದ ತೇಪೆಯಿರುತ್ತದೆ ( Saddle patch). ಆದ್ದರಿಂದ ಸ್ಥಳೀಯವಾಗಿ ಇವುಗಳನ್ನು 'ಸ್ಯಾಡಲ್ ಬ್ಯಾಕ್' ( Saddle back) ಎಂದೂ ಕರೆಯುತ್ತಾರೆ. ಇವುಗಳು ಶುದ್ಧ ಸಸ್ಯಾಹಾರಿಗಳು. ಸೊಪ್ಪು, ಎಲೆಗಳ ಚಿಗುರು ಮತ್ತು ರೆಂಬೆಗಳ ಕುಡಿಗಳು ಇವುಗಳ ಪ್ರಮುಖ ಆಹಾರ. ಅತಿ ಕಡಿದಾದ ಕಲ್ಲು ಬಂಡೆಗಳನ್ನು ಸಲೀಸಾಗಿ ಹತ್ತಬಲ್ಲವು.
ನೀಲಗಿರಿ ತಾಹರ್ ಗಳು ಮೂಲತಃ ಸಂಘ ಜೀವಿಗಳು. ತನ್ನ ಪ್ರಮುಖ ಶತ್ರುಗಳಾದ ಚಿರತೆ ಮತ್ತು ಕತ್ತೆ ಕಿರುಬಗಳಿಂದ ತನ್ನನ್ನು ರಕ್ಷಿಸಿಕೊಳ್ಳಲು, ಇವುಗಳು ತಮ್ಮ ದೇಹದ ಬಣ್ಣವನ್ನು ಹೋಲುವ ಬಂಡೆಗಳಿಂದ ಕೂಡಿದ ನೈಸರ್ಗಿಕ ಪರಿಸರದಲ್ಲಿ ವಾಸಿಸುತ್ತವೆ. ಕಲ್ಲಿನ ಬಣ್ಣದಿಂದ ಕೂಡಿದ ಈ ಪರ್ವತ ಮೇಕೆಗಳನ್ನು ಅಲ್ಲಿನ ಬುಡಕಟ್ಟು ಜನಾಂಗದವರು 'ಕಲ್ಲು ಮೇಕೆ' ಎಂದು ಕರೆಯುತ್ತಾರೆ. ಇವುಗಳು ನಮ್ಮ ಅಂಗೈಯಷ್ಟು ಅಗಲದ ಬಂಡೆಯ ಮೇಲೆ ನಾಲ್ಕು ಕಾಲುಗಳನ್ನು ಒಟ್ಟಿಗೆ ಹಿಡಿದು ನಿಲ್ಲುವಷ್ಟು ಸಮತೋಲನ ಹೊಂದಿರುವುದು ವಿಶೇಷ!

ಇವುಗಳ ಹಿಂಡಿನಲ್ಲಿರುವ ವಯಸ್ಸಾದ ಹೆಣ್ಣು ಮೇಕೆ ತನ್ನ ಹಿಂಡನ್ನು ಶತ್ರುಗಳಿಂದ ರಕ್ಷಿಸುವ ರೀತಿ ಕುತೂಹಲಕಾರಿ. ಇತರ ಮೇಕೆಗಳು ವಿಶ್ರಾಂತಿ ಪಡೆಯುವ ಸಂದರ್ಭ, ಈ ಹೆಣ್ಣು ಮೇಕೆ ಬಂಡೆಗಳ ಮೇಲೆ ನಿಂತು ಶತ್ರುಗಳ ಬರುವಿಕೆಯನ್ನು ಕಾಯುತ್ತದೆ. ದೂರದಿಂದಲೇ ಶತ್ರುಗಳ ವಾಸನೆಯನ್ನು ಸೂಕ್ಷ್ಮವಾಗಿ ಗ್ರಹಿಸಿ, ಇನ್ನೇನು ಅಪಾಯ ಬರುತ್ತದೆ ಅನ್ನುವಷ್ಟರಲ್ಲಿ ಶಿಳ್ಳೆ ಹೊಡೆದು ಹಿಂಡನ್ನು ಎಚ್ಚರಿಸುತ್ತದೆ.
'ತಮಿಳುನಾಡಿನ ರಾಜ್ಯ ಪ್ರಾಣಿ' ಎಂದೇ ಗುರುತಿಸಲ್ಪಟ್ಟಿರುವ ನೀಲಗಿರಿ ತಾಹರ್ ಸಾಂಸ್ಕೃತಿಕವಾಗಿಯೂ ಮಹತ್ವವನ್ನು ಹೊಂದಿರುವುದು ವಿಶೇಷ. ಪ್ರಾಚೀನ ತಮಿಳು ಕಾವ್ಯಗಳಾದ ಸಿಲಪ್ಪಧಿಕಾರಂ, ಶಿವಕಚಿಂತಾಮಣಿಯಲ್ಲಿ ಈ ವಿಶಿಷ್ಟ ಜೀವಿಯ ಜೀವನಕ್ರಮ ಮತ್ತು ಆವಾಸಸ್ಥಾನದ ಉಲ್ಲೇಖವಿದೆ!
ಪ್ರಸ್ತುತ ತಮಿಳುನಾಡಿನ ಥೇಣಿ, ವಾಲ್ಪರೈ ಮತ್ತು ಕೇರಳದ ಮುನ್ನಾರ್ ಸನಿಹ ಇರುವ ರಾಜಮಲ ಬೆಟ್ಟಗಳು,ಇರವಿಕುಲಂ ರಾಷ್ಟ್ರೀಯ ಉದ್ಯಾನವನ ಇವುಗಳ ಪ್ರಮುಖ ಆವಾಸಸ್ಥಾನಗಳಾಗಿವೆ.
ನೀಲಗಿರಿ ತಾಹರ್ ಕೇವಲ ಒಂದು ಪ್ರಾಣಿಯಲ್ಲ, ಪಶ್ಚಿಮ ಘಟ್ಟಗಳ ಪರಿಸರ ಶ್ರೀಮಂತಿಕೆಯ ಸಂಕೇತ. ಪರ್ವತ ಪರಿಸರದ ಸಮತೋಲನವನ್ನು ಕಾಪಾಡುವಲ್ಲಿ ಇವುಗಳ ಪಾತ್ರ ಪ್ರಮುಖವಾದುದು.

ಹವಾಮಾನ ಬದಲಾವಣೆ, ಚಿರತೆ, ಕತ್ತೆ ಕಿರುಬಗಳ ಧಾಳಿ, ಅತಿಯಾಗಿ ವಿಸ್ತರಣೆಯಾಗುತ್ತಿರುವ ಚಹಾ, ಕಾಫಿ ತೋಟಗಳಿಂದಾಗಿ ಉಂಟಾದ ಆವಾಸಸ್ಥಾನ ಕೊರತೆಯಿಂದಾಗಿ ಇವುಗಳ ಸಂಖ್ಯೆ ತೀವ್ರವಾಗಿ ಕುಸಿಯುತ್ತಿದೆ. ನಿಸರ್ಗ ಸಂರಕ್ಷಣೆಯ ಅಂತರಾಷ್ಟ್ರೀಯ ಒಕ್ಕೂಟ (ಐ.ಯು.ಸಿ.ಎನ್) ನೀಲಗಿರಿ ತಾಹರ್ ಗಳನ್ನು ಅಳಿವಿನಂಚಿನಲ್ಲಿರುವ ಪ್ರಾಣಿ ಪಟ್ಟಿಯಲ್ಲಿ ಗುರುತಿಸಿದೆ. ತಮಿಳುನಾಡು ಮತ್ತು ಕೇರಳ ಸರ್ಕಾರಗಳು ಜಂಟಿಯಾಗಿ ತಯಾರಿಸಿದ 2024ನೇ ಸಾಲಿನ ವರದಿ ಪ್ರಕಾರ, ಪ್ರಸ್ತುತ ಇರುವ ನೀಲಗಿರಿ ತಾಹರ್ ಗಳ ಸಂಖ್ಯೆ ಕೇವಲ 1858.
ವನ್ಯಜೀವಿ ಕಾಯ್ದೆ ಅನ್ವಯ ಇವುಗಳ ಬೇಟೆ ನಿಷಿದ್ಧ. ಪ್ರಸ್ತುತ ತಮಿಳುನಾಡು ಸರ್ಕಾರ ತನ್ನ 'ನೀಲಗಿರಿ ತಾಹರ್ ಯೋಜನೆ' ಮೂಲಕ ಹಾಳಾಗಿರುವ ಅವುಗಳ ಆವಾಸಸ್ಥಾನಗಳನ್ನು ಪುನರುಜ್ಜೀವಗೊಳಿಸುತ್ತಿದೆ. ಈ ವಿಶಿಷ್ಟ ಜೀವಿಗಳ ಅಧ್ಯಯನಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಖ್ಯಾತ ಪರಿಸರವಾದಿ ಇ.ಆರ್.ಸಿ.ಡೇವಿದಾರ್ ಅವರ ಜನ್ಮದಿನವಾದ ಅಕ್ಟೋಬರ್ 7 ಅನ್ನು ಪ್ರತಿವರ್ಷ 'ನೀಲಗಿರಿ ತಾಹರ್ ದಿನ' ವನ್ನಾಗಿ ಆಚರಿಸಲಾಗುತ್ತಿದೆ. '2024 ರಲ್ಲಿ ಕೇರಳದ ಇರವಿಕುಲಂ ರಾಷ್ಟ್ರೀಯ ಉದ್ಯಾನವನದಲ್ಲಿ ಜನಿಸಿದ ನೀಲಗಿರಿ ತಾಹರಗಳ ಸಂಖ್ಯೆ 90 ಕ್ಕಿಂತಲೂ ಅಧಿಕ' ಎಂಬ ಅಲ್ಲಿನ ಅರಣ್ಯಾಧಿಕಾರಿಗಳ ಹೇಳಿಕೆ ಸಂರಕ್ಷಣಾ ಕಾರ್ಯಗಳು ಫಲ ನೀಡುತ್ತಿರುವ ಸಂಕೇತವಾಗಿದೆ. ಆದಾಗ್ಯೂ ತಮಿಳುನಾಡಿನಲ್ಲಿ ಕೆಲವು ನೀಲಗಿರಿ ತಾಹರ್ ಗಳ ಹಿಂಡು ಆಹಾರಕ್ಕಾಗಿ ವಾಲ್ಪರೈ ಘಾಟ್ ನ ಕೆಳಗಿಳಿದು ಜನವಸತಿಯತ್ತ ಬರುತ್ತಿರುವುದು ಪರಿಸರ ತಜ್ಞರಲ್ಲಿ ಆತಂಕ ಮೂಡಿಸಿದೆ. ಇದು ಮಾನವ- ವನ್ಯಜೀವಿ ಸಂಘರ್ಷಕ್ಕೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ. ಆದ್ದರಿಂದ ಈ ಅಪರೂಪದ ಜೀವಿಗಳ ಭವಿಷ್ಯಕ್ಕಾಗಿ ರಾಷ್ಟ್ರಮಟ್ಟದಲ್ಲಿ ಇನ್ನಷ್ಟು ಕಠಿಣ ವನ್ಯಜೀವಿ ಕಾನೂನನ್ನು ರೂಪಿಸಿ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರುವ ತುರ್ತು ಅವಶ್ಯಕತೆ ಇದೆ.