ಬೀಳುವ ವಯಸ್ಸಲ್ಲಿ ಎತ್ತರೆತ್ತರಕ್ಕೆ ಏರಿದ ಸಾಹಸಿಗ!
ಎಂಬತ್ತು ವಯಸ್ಸಿನ ಮುದುಕ ಮೌಂಟ್ ಎವರೆಸ್ಟ್ ಏರುತ್ತೇನೆ ಎಂದು ಹೊರಟಾಗ ಹಲವರು ಗೇಲಿ ಮಾಡಿ ನಕ್ಕಿದ್ದರು. ʼಸಾಯೋ ವಯಸ್ಸಲ್ಲಿ ಇದೆಲ್ಲ ಬೇಕಾ?ʼ ಎಂದಿದ್ದರು. ಮಿಯುರಾ ಯಾರ ಮಾತಿಗೂ ಸೊಪ್ಪು ಹಾಕಲಿಲ್ಲ. ಎತ್ತರೆತ್ತರಕ್ಕೆ ಏರುತ್ತಾ ಹೋದರು. ಕೊನೆಗೂ ಮೌಂಟ್ ಎವರೆಸ್ಟ್ನಲ್ಲಿ ಧ್ವಜ ನೆಟ್ಟರು. ಇಡೀ ಜಗತ್ತು ನಿಬ್ಬೆರಗಾಯಿತು. ಸಲಾಂ ಮಿಯುರಾ ಎಂದಿತು. ಯುಚಿರೋಗೆ ಈಗ ತೊಂಬತ್ತೆರಡು ವಯಸ್ಸು. ಈಗಲೂ ಪ್ರತಿದಿನ ಒಂದು ಗಂಟೆ ವ್ಯಾಯಾಮ ಮಾಡುತ್ತಾರೆ. ಕಳೆದ ವರ್ಷವಷ್ಟೇ ಮೌಂಟ್ ಫ್ಯೂಜಿ ಶಿಖರ ಏರಿ ಬಂದಿದ್ದಾರೆ. ತೊಂಬತ್ತೈದು ತುಂಬುವ ಹೊತ್ತಿಗೆ ಮತ್ತೆ ಮೌಂಟ್ ಎವರೆಸ್ಟ್ ಏರುತ್ತೇನೆ ಎಂದು ಹುಮ್ಮಸ್ಸಿನಿಂದ ಹೇಳುತ್ತಾರೆ.
ಎಂಬತ್ತು ವಯಸ್ಸಿನ ಮುದುಕನೊಬ್ಬ ಅಂಥ ಸಾಧನೆ ಮಾಡುತ್ತಾನೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಸಹಜವಾಗಿ ಎಲ್ಲರು ಅದು ವಯೋ ವೃದ್ಧನೊಬ್ಬನ ವಟಗುಟ್ಟುವಿಕೆ ಎಂದುಕೊಂಡರು. ʼಇವತ್ತು ನಾಳೆ ಸಾಯೋನು ಏನಾದರೂ ಮಾತನಾಡಿಕೊಳ್ಳಲಿʼ ಎಂದು ನಿರ್ಲಕ್ಷಿಸಿದರು. ʼಎಂಬತ್ತು ವಯಸ್ಸಲ್ಲಿ ಸಾಧನೆ ಮಾಡೋಕಾಗುತ್ತಾ? ಬಿದ್ದು ಹೋಗುವ ಮರದಲ್ಲಿ ಚಿಗುರು ನೋಡೋ ಆಸೆ ಯಾಕೆ?ʼ ಎನ್ನುತ್ತಾ ಗೇಲಿ ಮಾಡಿದರು. ಆ ಮನುಷ್ಯ ಮಾತ್ರ ಮೌಂಟ್ ಎವರೆಸ್ಟ್ ಏರಿಯೇ ತೀರುತ್ತೇನೆ ಎಂದು ಹೊರಟನು. ಸಂಕಲ್ಪ ಬಲದ ಜಾಗರಣೆ ಮಾಡುತ್ತಲೇ 2013 ರ ಒಂದು ಮುಂಜಾನೆ ಮೌಂಟ್ ಎವರೆಸ್ಟ್ ನ ತುತ್ತ ತುದಿಯಲ್ಲಿ ನಿಂತು ಗೆಲುವಿನ ನಗೆ ಬೀರಿದನು. ಜಗತ್ತು ಬೆರಗಾಗಿದ್ದು ಆಗಲೇ ನೋಡಿ. ವಿಶ್ವದ ಅಷ್ಟೂ ಪತ್ರಿಕೆ ಮತ್ತು ಟಿವಿಗಳು ಆ ವ್ಯಕ್ತಿಯ ಮನೆಯನ್ನು ಎಡತಾಕಿದವು. ವರ್ಣರಂಜಿತ ಹೆಡ್‌ಲೈನ್ ಗಳನ್ನು ಕೊಟ್ಟು ಅವನ ಸಾಧನೆಯನ್ನು ಕೊಂಡಾಡಿದವು. ಅವನ ಹೆಸರು ಯುಚಿರೋ ಮಿಯುರಾ. ತನ್ನನ್ನೇ ಮೀರಿದ ಸಾಧಕ. ತೊಂಬತ್ತೆರಡರ ಈ ಇಳಿ ವಯಸ್ಸಿನಲ್ಲೂ ಪರ್ವತಾರೋಹಣ ಮಾಡುವ ಸಾಹಸಿಗ. ಇದು ಅವನದ್ದೇ ಸಾಹಸಗಾಥೆ.

ಎಲ್ಲೆಗಳಿಲ್ಲದ ಸಾಧನೆ
ಜಪಾನ್ ಮೂಲದ ಯುಚಿರೋ ಮಿಯುರಾ ಹುಟ್ಟು ಸಾಹಸಿಗ. ಚಿಕ್ಕಂದಿನಿಂದಲೂ ತಂದೆ ಕೀಜೊ ಮಿಯುರಾನ ಗರಡಿಯಲ್ಲಿ ಪಳಗಿದವನು. ಒಲಂಪಿಕ್ಸ್‌ನಲ್ಲಿ ಆಟವಾಡಿ ದೇಶಕ್ಕೆ ಚಿನ್ನ ತರಬೇಕೆಂಬ ಕನಸನ್ನು ತಂದಿಟ್ಟುಕೊಂಡಿದ್ದವನು. ಆದರೆ ಕನಸು ಕೈಗೂಡಲಿಲ್ಲ. ಯುಚಿರೋ ಅಷ್ಟಕ್ಕೆ ಸುಮ್ಮನಾಗಲಿಲ್ಲ. ಬೇರೊಂದು ಕನಸಿನ ಬೆನ್ನು ಹತ್ತಿದನು. ತಂದೆಯಂತೆಯೇ ಪರ್ವತಾರೋಹಿಯಾದನು. ತನ್ನ ಇಪ್ಪತ್ತನೆಯ ವಯಸ್ಸಿನಲ್ಲೇ ಅವನಿಗೆ ಸ್ಕೀಯಿಂಗ್ ಪರಿಚಯವಾಯಿತು. ತನ್ನ ತಂದೆಯೊಂದಿಗೆ ಸಾಕಷ್ಟು ಪರ್ವತಗಳನ್ನೂ ಏರಿ ಇಳಿದನು. ಹೀಗೊಮ್ಮೆ ಅವನಿಗೆ ಮೌಂಟ್ ಎವರೆಸ್ಟ್ ಏರುವ ಆಸೆಯಾಯಿತು. 1970 ರಲ್ಲಿ ದಕ್ಷಿಣ ಕೊಲ್ಲಿಯಿಂದ ಮೌಂಟ್ ಎವರೆಸ್ಟ್ ಅನ್ನು ಯುಚಿರೊ ಸ್ಕೀಯಿಂಗ್ ಮಾಡಿದನು. ಅಂಥ ದಾಖಲೆಯನ್ನು ಆವರೆಗೆ ಯಾರೂ ಬರೆದಿರಲಿಲ್ಲ. ಅವನೇ ಮೊದಲಿಗ. ಅದಕ್ಕೂ ಮೊದಲೇ ಯುಚಿರೊ ಮೌಂಟ್ ಫ್ಯೂಜಿ, ಮೌಂಟ್ ಕೊಸ್ಸಿಯುಸ್ಕೊ ,ಮೌಂಟ್ ಮೆಕಿನ್ಲೆ, ಮೌಂಟ್ ಪೊಪೊಕಾಟೆಪೆಟ್ಲ್ ಪರ್ವತಾರೋಹಣ ಮಾಡಿ ಗಿನ್ನಿಸ್ ದಾಖಲೆ ಬರೆದಿದ್ದನು. ಆದರೆ ಅವನ ಗಮ್ಯ ಮೌಂಟ್ ಎವರೆಸ್ಟ್ ನತ್ತ ಇತ್ತು. ಏಕನಿಷ್ಠೆಯಿಂದ ಅದನ್ನೂ ಸಾಧಿಸಿದನು. 1970 ರಲ್ಲಿ ಮೌಂಟ್ ಎವರೆಸ್ಟ್ ಏರಿ ಇಳಿದಿದ್ದ ಯುಚಿರೊ ಮತ್ತೆ 2003 ರಲ್ಲಿ ಅಂದರೆ ತಮ್ಮ ಎಪ್ಪತ್ತನೆಯ ವಯಸ್ಸಿನಲ್ಲಿ ಎವರೆಸ್ಟ್ ಪರ್ವತಾರೋಹಣ ಮಾಡಿದರು. ಅಷ್ಟಕ್ಕೆ ಸುಮ್ಮನಾಗದೆ ತಮ್ಮ ಎಂಬತ್ತನೆಯ ವಯಸ್ಸಿನಲ್ಲೂ ಏರಿದರು. ಆಗಲೇ ಯುಚಿರೋ ಮಿಯುರಾನ ಸಾಧನೆ ಮನೆ ಮಾತಾಗಿದ್ದು!

ತನ್ನನ್ನೇ ಮೀರಿದ ಮಿಯುರಾ
ತಂದೆಯದ್ದೇ ಜೀನ್ಸ್ ಮಗನಿಗೆ ಬಂದಿದೆ. ಯುಚಿರೋನ ತಂದೆ ಕಿಜೋ ಮಿಯುರಾ ಕೂಡ ಅದ್ಭುತ ಪರ್ವತಾರೋಹಿ. ಅವರು ತಮ್ಮ 77ನೇ ವಯಸ್ಸಿನಲ್ಲಿ ಕಿಲಿ ಮಂಜಾರೊ ಪರ್ವತಾರೋಹಣ ಮಾಡಿದ್ದರು. 99ರ ಮುಪ್ಪಿನಲ್ಲೂ ಕೀಜೋ ಮಾಂಟ್ ಬ್ಲಾಂಕ್ ಹಿಮನದಿಯನ್ನು ತಮ್ಮ ಮಗ ಮತ್ತು ಮೊಮ್ಮಗನ ಒಡಗೂಡಿ ತಲುಪಿದ್ದರು. ಹಾಗಾಗಿ ತಂದೆಯಂತೆಯೇ ಯುಚಿರೋ ಮಿಯುರಾ ಸಾಹಸ ಪ್ರವೃತ್ತಿಯವರು. ತಮ್ಮ ಬದುಕಿನುದ್ದಕ್ಕೂ ಯುಚಿರೋ ಸಾಕಷ್ಟು ಸಂಕಟಗಳನ್ನು ಅನುಭವಿಸಿದ್ದಾರೆ. ಅವರಿಗೆ ಎರಡು ಬಾರಿ ಹೃದಯ ಶಸ್ತ್ರ ಚಿಕಿತ್ಸೆಯಾಗಿತ್ತು. ಬೆನ್ನಿನ ಹುರಿಯೇ ಮುರಿದು ಹೋಗಿದೆ ಎಂದು ವೈದ್ಯರು ಘೋಷಿಸಿದ್ದರು. ಇತ್ತೀಚಿಗಷ್ಟೇ ಅವರ ಗಂಟಲಿನಲ್ಲಿ ಗೆಡ್ಡೆ ಕಾಣಿಸಿಕೊಂಡಿತ್ತು. ತಿಂಗಳುಗಟ್ಟಲೆ ಹಾಸಿಗೆ ಹಿಡಿದರು. ನನ್ನ ಕತೆ ಇಲ್ಲಿಗೆ ಮುಗಿಯಿತು ಎಂದು ಸ್ವತಃ ಅವರೇ ಅಂದುಕೊಂಡರು. ಉಹೂಂ. ಅವರ ಅಧ್ಯಾಯ ಅಲ್ಲಿಗೆ ಮುಗಿಯಲಿಲ್ಲ. ಅವರು ಅಗ್ನಿಯಿಂದ ಎದ್ದ ಬೆಳಕು. ಮತ್ತದೇ ʼಸಂಕಲ್ಪʼದ ಮಂತ್ರದೊಂದಿಗೆ ಎದ್ದು ಕೂತರು. ಆಗಸ್ಟ್ 2023 ರ ತಮ್ಮ 90ನೇ ವಯಸ್ಸಿನಲ್ಲಿ ವೀಲ್‌ಚೇರ್ ಸಹಾಯದಿಂದ ತಮ್ಮ ಕುಟುಂಬ ಮತ್ತು ಸಹಚರರೊಂದಿಗೆ ಮೌಂಟ್ ಫ್ಯೂಜಿ ಶಿಖರವನ್ನು ಹತ್ತಿದರು. ತೊಂಬತ್ತರ ಇಳಿ ವಯಸ್ಸಿನ ಯುಚಿರೋ ಮಿಯುರಾನ ಈ ನಿರಂತರ ಸಾಧನೆ ಹಲವರ ನಿದ್ದೆಗೆಡಿಸಿತು. ಇನ್ನೂ ಹಲವರು ದಂಗುಬಡಿದು ಹೋದರು. "ನಾನು ಈಗ ಸುಮ್ಮನೆ ಕೂರುತ್ತೇನೆ ಎಂದುಕೊಂಡಿರ? ನೆವರ್.. ಪರ್ವತ ಹತ್ತುತ್ತೇನೆ. ಎಲ್ಲರೂ ಸಾಯುತ್ತಾರೆ. ಆದರೆ ನಾನು ಪರ್ವತ ಏರಿದಾಗಲೆಲ್ಲ ಸತ್ತು ಸತ್ತು ಹುಟ್ಟುತ್ತೇನೆ. ಪರ್ವತ ಏರುವುದೂ ಸುಖ ಪ್ರಸಂಗ!" ಹೀಗೆನ್ನುತ್ತಾರೆ ಯುಚಿರೋ. ಅವರ ಜೀವನೋತ್ಸಾಹದಲ್ಲಿ ಲವಲೇಶವನ್ನಾದರೂ ನಾವು ಬಸಿದುಕೊಂಡರೆ?

ಕೋಟ್
“ವೃದ್ಧಾಪ್ಯದಲ್ಲಿ ಈ ಪಾಟಿ ಸಾಧನೆ ಹೇಗೆ ಸಾಧ್ಯವಾಯಿತು ಅಂಥ ಎಲ್ಲರೂ ಕೇಳ್ತಾರೆ. ಹಾಗೆ ನೋಡಿದರೆ ನನ್ನ ತಂದೆ ನನಗಿಂತಲೂ ಸಾಹಸಿಗ. ತಮ್ಮ 77ನೇ ವಯಸ್ಸಿನಲ್ಲಿ ಕಿಲಿಮಂಜಾರೊ ಏರಿದ್ದ ಅವರು 99ನೇ ವಯಸ್ಸಿನಲ್ಲಿ ಕೀಜೊ ಮಾಂಟ್ ಬ್ಲಾಂಕ್ ಹಿಮನದಿ ತಲುಪಿದ್ದರು. ನಾನು ಅವರ ಮಗ. ಸಹಜವಾಗಿ ಅವರದ್ದೇ ಜೀನ್ಸ್ ಇರುತ್ತದೆ. ನನಗೆ 95 ತುಂಬುವ ಹೊತ್ತಿಗೆ ಸ್ಕೀಯಿಂಗ್ ಮಾಡುತ್ತೇನೆ. ಆಗಿದ್ದಾಗಲಿ ಮತ್ತೆ ಮೌಂಟ್ ಎವರೆಸ್ಟ್ ಏರುತ್ತೇನೆ. ಮನೆಯ ಯಾವುದೋ ಮೂಲೆಯಲ್ಲಿ ಕೂತು ಗೊಣಗುವ ಜಾಯಮಾನ ನನ್ನದಲ್ಲ. ವಯಸ್ಸನ್ನು ಮುಚ್ಚಿಡುವ ನನ್ನ ಪ್ರಯತ್ನ ಕೊನೆಯವರೆಗೂ ಜಾರಿಯಲ್ಲಿರುತ್ತದೆ”