ಯಾಕಿಂಗ್ ಆಡ್ತೀರೋ.. ಕಯಾಕಿಂಗ್ ಆಡ್ತೀರೋ..
ದಿನದಿಂದ ದಿನಕ್ಕೆ ಕೊಡಗು ಜಿಲ್ಲೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಪ್ರವಾಸಿಗರನ್ನು ಆಕರ್ಷಿಸುತಿದ್ದು ಜಲಕ್ರೀಡೆ, ಸಾಹಸ ಕ್ರೀಡೆಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ವಾರ್ಷಿಕ 40 ರಿಂದ 50 ಲಕ್ಷ ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡುತ್ತಿದ್ದು, ಕೊಡಗಿನ ಸೌಂದರ್ಯವನ್ನು ಆಸ್ವಾದಿಸುವ ಮೂಲಕ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
- ಅನಿಲ್ ಹೆಚ್.ಟಿ.
ಮಳೆಗಾಲದಲ್ಲಿ ಕೊಡಗು ಪ್ರವಾಸೋದ್ಯಮದ ಮಜವೇ ಬೇರೆ. ಧೋ ಎಂದು ಸುರಿಯುವ ಮಳೆಯಲ್ಲಿ, ಪ್ರವಾಹರೂಪಿಯಾಗಿ ಹರಿಯುವ ಕಾವೇರಿ ನದಿಯಲ್ಲಿ ಜಲಕ್ರೀಡೆಯ ಮೋಜು, ಮಜ ಮತ್ತು ಸವಾಲು ಅನುಭವಿಸಲೆಂದೇ ಸಾವಿರಾರು ಪ್ರವಾಸಿಗರು ಕೊಡಗಿಗೆ ಬರುತ್ತಾರೆ. ಮಳೆಗಾಲದ ಸಾಹಸ ಜಲಕ್ರೀಡೆಗಳು ಎಂಟೆದೆಯವರೊಂದಿಗೆ ಸಾಹಸ ಎದುರಿಸುವ ಛಲವಂತರನ್ನೂ ಕೈಬೀಸಿ ಕೊಡಗಿಗೆ ಕರೆಯುತ್ತದೆ.
ಈ ಸಾಹಸಮಯ ಪ್ರವಾಸೋದ್ಯಮಕ್ಕೆ ಈಗ ಹೊಸ ಕ್ರೀಡೆಯೊಂದರ ಸೇರ್ಪಡೆ ಆಗುತ್ತಿದೆ. ಅದಕ್ಕೆ ಸಿದ್ಧತೆಯೂ ಶುರುವಾಗಿದೆ. ಕೊಡಗಿನಲ್ಲಿ ಹೊಸ ರೀತಿಯ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾಯಕಿಂಗ್ ಸಾಹಸ ಕ್ರೀಡೆಯನ್ನು ಕೆಲವು ಪ್ರದೇಶಗಳಲ್ಲಿ ಜಾರಿಗೆ ತರಲು ಪ್ರವಾಸೋದ್ಯಮ ಇಲಾಖೆ ಯೋಜನೆ ರೂಪಿಸಿದೆ.

ದಿನದಿಂದ ದಿನಕ್ಕೆ ಕೊಡಗು ಜಿಲ್ಲೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಪ್ರವಾಸಿಗರನ್ನು ಆಕರ್ಷಿಸುತಿದ್ದು ಜಲಕ್ರೀಡೆ, ಸಾಹಸ ಕ್ರೀಡೆಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ವಾರ್ಷಿಕ 40 ರಿಂದ 50 ಲಕ್ಷ ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡುತ್ತಿದ್ದು, ಕೊಡಗಿನ ಸೌಂದರ್ಯವನ್ನು ಆಸ್ವಾದಿಸುವ ಮೂಲಕ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಹೀಗಿದ್ದರೂ, ಸಾಕಷ್ಟು ಪ್ರವಾಸೋದ್ಯಮ ಅವಕಾಶಗಳು ಜಿಲ್ಲೆಯಲ್ಲಿದ್ದರೂ, ಕೊಡಗಿನ ಪ್ರವಾಸೋದ್ಯಮದಲ್ಲಿ ಕಾಯಕಿಂಗ್ ಇಲ್ಲದಿರುವ ಬಗ್ಗೆ ಅನೇಕ ಪ್ರವಾಸಿಗರು ಬೇಸರ ವ್ಯಕ್ತಪಡಿಸುತ್ತಿದ್ದರು.
ಈ ಬೇಸರ ನಿವಾರಣೆಯ ನಿಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಕಾಯಕಿಂಗ್ ಪ್ರಾರಂಭಿಸುವ ಸಲುವಾಗಿ ಪ್ರವಾಸೋದ್ಯಮ ಇಲಾಖೆ ಚಿಂತನೆ ನಡೆಸಿದ್ದು, ಅಗತ್ಯ ತಯಾರಿಗಳನ್ನು ನಡೆಸಿಕೊಂಡಿದೆ. ಕಳೆಗಟ್ಟುತ್ತಿರುವ ಕೊಡಗಿನ ಪ್ರವಾಸೋದ್ಯಮಕ್ಕೆ ಕಾಯಕಿಂಗ್ ಮತ್ತೊಂದು ಗರಿ ನೀಡಲಿದ್ದು, ಮತ್ತಷ್ಟು ಪ್ರವಾಸಿಗರನ್ನು ಕೊಡಗಿನತ್ತ ಸೆಳೆಯಲಿದೆ. ಇದರಿಂದಾಗಿ ಪ್ರವಾಸೋದ್ಯಮ ಕ್ಷೇತ್ರ ಮತ್ತಷ್ಟು ಸಾಹಸಮಯವಾಗಿ ಆಕರ್ಷಣೆಗೊಳ್ಳಲಿದೆ.
ಮುಂಗಾರು ಸಂದರ್ಭದಲ್ಲಿ ಜಲಪಾತ ವೀಕ್ಷಣೆ ಹಾಗೂ ಜಲಸಾಹಸ ಪ್ರವಾಸಿಗರನ್ನು ಹೆಚ್ಚು ಸೆಳೆಯುತ್ತದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ರಿವರ್ ರ‍್ಯಾಫ್ಟಿಂಗ್ ಕೂಡ ಪ್ರಮುಖವಾಗಿದ್ದು ಇದಕ್ಕೆ ಮತ್ತಷ್ಟು ಪುಷ್ಟಿ ನೀಡುವ ಸಲುವಾಗಿ ಕಾಯಕಿಂಗ್ ಕ್ರೀಡೆಯನ್ನು ಕಾವೇರಿ ನದಿ ಪಾತ್ರದಲ್ಲಿ ಪರಿಚಯಿಸಲಾಗುತ್ತಿದೆ.
ಈಗಾಗಲೇ ಕಾವೇರಿ ನದಿ ಹರಿಯುವ ದುಬಾರೆಯಲ್ಲಿ 75 ರ‍್ಯಾಫ್ಟಿಂಗ್ ಇದೆ. ಬರಪೊಳೆಯಲ್ಲಿ 24 ರ‍್ಯಾಫ್ಟ್ ಗಳು ಕಾರ್ಯನಿರ್ವಹಿಸುತ್ತಿವೆ. ಈ ಸಾಹಸ ಜಲ ಕ್ರೀಡೆಗೆ ಪ್ರವಾಸಿಗರ ದಂಡೇ ಮಳೆಗಾಲದಲ್ಲಿ ದುಬಾರೆಯತ್ತ ಹರಿದು ಬರುತ್ತಿದೆ. ಹಾರಂಗಿ ಹಿನ್ನೀರು ಪ್ರದೇಶದಲ್ಲೂ ಜಲ ಸಾಹಸ ಕ್ರೀಡೆಗಳು ಆರಂಭವಾಗಿದ್ದು ಕೊಡಗು ಪ್ರವಾಸೋದ್ಯಮ ಕ್ಷೇತ್ರದಲ್ಲಿಯೂ ಈಗ ಜಲಕ್ರೀಡೆಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.

ಕಾಯಕಿಂಗ್ ಎಲ್ಲೆಲ್ಲಿ?
ಹೇಮಾವತಿ ನದಿ ಪಾತ್ರ ಕೊಡ್ಲಿಪೇಟೆ ದೊಡ್ಡಕುಂದ, ಹಟ್ಟಿಹೊಳೆ ಬಳಿಯ ದೇವಸ್ತೂರು ನದಿ, ಕಾವೇರಿ ನದಿ ಪಾತ್ರದ ಐವತ್ತೊಕ್ಲು, ಹೊದ್ದೂರು, ಹಾರಂಗಿ ಹಿನ್ನೀರು ಪ್ರದೇಶದ ಹೆರೂರು, ನಾಕೂರು ಶಿರಂಗಾಲ, ಬೈರಂಪಾಡ, ಚಿಕ್ಕಬೆಟ್ಟಗೇರಿ ಈ ಪ್ರದೇಶಗಳಲ್ಲಿ ಕಾಯಕಿಂಗ್ ಮಾಡಲು ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಅರ್ಜಿಗಳ ಸಂಬಂಧ ಕಾರ್ಯಸಾಧ್ಯತಾ ವರದಿ ನೋಡಿಕೊಂಡು ಮುಂದಿನ ಕ್ರಮವಹಿಸಲು ಕೊಡಗು ಜಿಲ್ಲಾ ರಿವರ್ ರ‍್ಯಾಫ್ಟಿಂಗ್ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಕರ್ನಾಟಕ ಪ್ರವಾಸೋದ್ಯಮ ನೀತಿ 2024-29 ರಡಿ ಜಲ ಸಾಹಸ ಕ್ರೀಡೆಯಲ್ಲಿ ಒಂದಾದ 'ಕಾಯಕಿಂಗ್' ನಡೆಸಲು ಪ್ರಸ್ತಾವನೆ ಬಂದಿದ್ದು, ಈಗಾಗಲೇ ಜಿಲ್ಲೆಯ ನಾನಾ ಭಾಗಗಳಿಂದ 11 ಅರ್ಜಿಗಳು ಪ್ರವಾಸೋದ್ಯಮ ಇಲಾಖೆಗೆ ಸಲ್ಲಿಕೆಯಾಗಿವೆ. ಈ ಬಗ್ಗೆ ಎಲ್ಲೂ ಪ್ರಚಾರವಾಗದ ಕಾರಣ ಕೇವಲ 11 ಅರ್ಜಿಗಳು ಮಾತ್ರ ಬಂದಿವೆ. ಮುಂದಿನ ದಿನಗಳಲ್ಲಿ ಕಾಯಕಿಂಗ್ ಆರಂಭಿಸಲು ಮತ್ತಷ್ಟು ಅರ್ಜಿಗಳು ಬರುವ ಸಾಧ್ಯತೆಗಳಿದೆ ಎಂದು ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕಿ ಅನಿತಾ ಭಾಸ್ಕರ್ ಪ್ರವಾಸಿ ಪ್ರಪಂಚಕ್ಕೆ ಮಾಹಿತಿ ನೀಡಿದರು.
ಕಾಯಕಿಂಗ್ ಎನ್ನುವುದು ಜಲಸಾಹಸ ಕ್ರೀಡೆಗಳಲ್ಲಿ ಒಂದಾಗಿದ್ದು, ನೀರಿನಲ್ಲಿ ಸಾಹಸ ಮಾಡಲು ಬಳಸುವ ಕಿರಿದಾದ ದೋಣಿಯಾಗಿದೆ. ಡಬಲ್ ಬ್ಲೇಡೆಡ್ ಪೆಡಲ್ಸ್ ಹೊಂದಿರುವ ಈ ಕಾಯಕಿಂಗ್ ಮ್ಯಾನುವಲ್ ಆಪರೆಟ್ ಮಾಡಬೇಕಾಗುತ್ತದೆ. ಇದನ್ನು ವೈಟ್ ವಾಟರ್ ಹಾಗೂ ಫ್ಲೋ ವಾಟರ್‌ನಲ್ಲಿ ಬಳಸಲಾಗುತ್ತದೆ. ಇದು ಮನರಂಜನಾ ಚಟುವಟಿಕೆ ಹಾಗೂ ವ್ಯಾಯಾಮದ ರೂಪವಾಗಿದೆ. ಸಾಮಾನ್ಯವಾಗಿ ಇದು ಪ್ರವಾಸಿ ಸ್ಥಳಗಳಲ್ಲೇ ಹೆಚ್ಚು ಕಂಡು ಬರುತ್ತದೆ. ಜಲ ಮಾರ್ಗಗಳನ್ನು ಅನ್ವೇಷಿಸಲು ಹಾಗೂ ಪ್ರಕೃತಿಯೊಂದಿಗೆ ಸಂಪರ್ಕ ಸಾಧಿಸಲು ಇದು ಹೆಚ್ಚು ಬಳಕೆಯಾಗುತ್ತದೆ. ಇದನ್ನು ಒಮ್ಮೆಗೆ ಒಬ್ಬರು ಅಥವಾ ಇಬ್ಬರು ಮಾತ್ರ ಬಳಸಬಹುದು. ರಿವರ್ ರಾಫ್ಟಿಂಗ್ ನ ಸವಾಲಿನ ಮೋಜು, ಮಜ, ಅನುಭವಿಸಲು ಕೊಡಗಿಗೆ ಬರುತ್ತಿದ್ದ ಪ್ರವಾಸಿಗರು ಇನ್ನು ಮುಂದೆ ಕಯಾಕಿಂಗ್ ಜಾರಿಗೊಂಡ ಬಳಿಕ ಇದರ ರೋಮಾಂಚನ ಅನುಭವಿಸಲು ಮುಂಗಾರಿನಲ್ಲಿ ಕೊಡಗಿಗೆ ಬರಬಹುದು.