ಏರಿ ನೋಡು ದೊರೆಕಟ್ಟೆ... ಕೊಂಚ ಮೈಮರೆತರೆ ನೀ ಕೆಟ್ಟೆ!
ನೂರಾರು ಎಕರೆ ಹುಲ್ಲುಗಾವಲಿನ ಪ್ರದೇಶದಲ್ಲಿ ನಿಂತು ಬಿರುಗಾಳಿಯಂತೆ ಬೀಸುವ ಗಾಳಿಗೆ ಮೈಯೊಡ್ಡಿ ಸುತ್ತಲೂ ಕಣ್ಣುಹಾಯಿಸುವುದೆಂದರೆ ‘ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ’ ಎಂಬ ಸರ್ವಜ್ಞನ ಕವಿ ವಾಣಿಗೆ ನಿಜ ಅರ್ಥ ಸಿಕ್ಕಂತೆ! ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಯಲ್ಲಾಪುರ, ಕಾರವಾರ, ಅಂಕೋಲಾ ಹಾಗೂ ಕುಮಟಾ ತಾಲೂಕಿನ ಅನೇಕ ಸ್ಥಳಗಳನ್ನು ನಿಂತ ಜಾಗದಿಂದಲೇ ನೋಡಬಹುದು.
- ಬೀರಣ್ಣ ನಾಯಕ ಮೊಗಟಾ
‘ಸೊಕ್ಕು ಇದ್ದವನಿಗೆ ಯಾಣ, ರೊಕ್ಕ ಇದ್ದವನಿಗೆ ಗೋಕರ್ಣ’ ಎನ್ನುವುದು ಉತ್ತರ ಕನ್ನಡ ಜಿಲ್ಲೆಯ ಜನಪ್ರಿಯ ಗಾದೆ ಮಾತು. ಈ ಗಾದೆ ಮಾತು ಉಣ ಬಡಿಸಿದವ ಹೆಚ್ಚಾಗಿ ದೊರೆಕಟ್ಟೆ ನೋಡಿರಲಿಕ್ಕಿಲ್ಲ ಅಥವಾ ದೊರೆಕಟ್ಟೆಗೆ ಪ್ರಯಾಣ ಮಾಡಿ ಬಂದವರ ಅನುಭವ ಕೇಳಿರಲಿಕ್ಕಿಲ್ಲ! ಒಮ್ಮೆ ದೊರೆಕಟ್ಟೆಗೆ ಹೋಗಿ ಬಂದವ ಆ ಕಡೆ ತಲೆಹಾಕಿ ಮಲಗಲು ಭಯ ಪಡುತ್ತಾನೇನೊ! ‘ಸಾಯೋದ್ರಾಗ ಒಮ್ಮೆ ನೋಡು ಜೋಗಾದ ಗುಂಡಿ’ ಎನ್ನುವ ಹಾಗೆ ಸಾಯುವುದರ ಒಳಗೆ ಒಮ್ಮೆ ದೊರೆಕಟ್ಟೆ ನಾವು ನೋಡದೆ ಇದ್ದರೆ ಕಣ್ಣು ಕೊಟ್ಟ ದೇವರಿಗೆ ಅಪಚಾರ ಮಾಡಿದ ಹಾಗೆ! ಈ ದೊರೆಕಟ್ಟೆಗೆ ಪ್ರವಾಸ ಎಂದರೆ ಮೈ ಜುಂ ಅನ್ನಲೇಬೇಕು.
ದೊರೆಕಟ್ಟೆ ಇರುವುದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಮೋತಿಗುಡ್ಡದಲ್ಲಿ.
ಚೆನಗಾರಿನಿಂದ ಮೋತಿಗುಡ್ಡದವರೆಗಿನ ದಟ್ಟ ಕಾಡನ್ನು ಸೀಳಿ ಹೊರಟ ಏಣಿಯಾಕಾರದ 5 ಕಿಲೋಮೀಟರ್ ಏರಿನಲ್ಲಿ ಕಾರನ್ನು ಚಲಾಯಿಸುವುದೆಂದರೆ ಅದೊಂದು ಸರ್ಕಸ್! ಮೋತಿಗುಡ್ಡದ ಶಾಲೆಯಿಂದ ಸುಮಾರು ನಾಲ್ಕು ಕಿಲೋಮೀಟರ್ ಕಾಲುದಾರಿಯಲ್ಲಿ, ಹಗ್ಗ ಹಿಡಿದು ಏರಿದಂತೆ ಸಮುದ್ರ ಮಟ್ಟದಿಂದ 2740 ಅಡಿ ಎತ್ತರದಲ್ಲಿರುವ ದೊರೆಕಟ್ಟೆಗೆ ಹೋಗ ಬೇಕು. ಅದನ್ನು ಕಾಲುದಾರಿ ಎನ್ನುವುದಕ್ಕಿಂತ ಕೋಲುದಾರಿ ಎನ್ನುವುದು ಸೂಕ್ತ. ಯಾಕೆಂದರೆ ಅಲ್ಲಿ ನಡೆಯಲು ಕೋಲು ಬೇಕೆ ಬೇಕು! ದೊರೆಕಟ್ಟೆಯೇ ಉತ್ತರ ಕನ್ನಡ ಜಿಲ್ಲೆಯ ಅತಿ ಎತ್ತರದ ಶಿಖರ ಎಂಬ ಮಾತಿದೆ.

ದೊರೆಕಟ್ಟೆಯ ವಿಶಾಲವಾದ ನೂರಾರು ಎಕರೆ ಹುಲ್ಲುಗಾವಲಿನ ಪ್ರದೇಶದಲ್ಲಿ ನಿಂತು ಬಿರುಗಾಳಿಯಂತೆ ಬೀಸುವ ಗಾಳಿಗೆ ಮೈಯೊಡ್ಡಿ ಸುತ್ತಲು ಕಣ್ಣುಹಾಯಿಸುವುದೆಂದರೆ ‘ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ’ ಎಂಬ ಸರ್ವಜ್ಞನ ಕವಿ ವಾಣಿಗೆ ನಿಜ ಅರ್ಥ ಸಿಕ್ಕಂತೆ! ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಯಲ್ಲಾಪುರ, ಕಾರವಾರ, ಅಂಕೋಲಾ ಹಾಗೂ ಕುಮಟಾ ತಾಲೂಕಿನ ಅನೇಕ ಸ್ಥಳಗಳನ್ನು ನಿಂತ ಜಾಗದಿಂದಲೇ ನೋಡಬಹುದು. ಆಕಾಶಕ್ಕೆ ಕೈ ತಾಕೀತೊ, ಬಿಳಿ ಮೋಡಗಳು ತೇಲುತ್ತ ಮುಖಕ್ಕೆ ಬಡಿದು ಬಿಟ್ಟಾವೊ, ಗಗನ ಚುಂಬಿ ಮರಗಳು ಗಾಳಿ ಸೆಳೆತಕ್ಕೆ ಕಾಲು ಬುಡದಲ್ಲಿ ಬಂದಿತೋ ಏನೋ ಎಂಬ ಅನುಭಾವದಲ್ಲಿ ಇಲ್ಲಿಂದಲೇ ಸಾಣಿಕಟ್ಟೆಯ ಉಪ್ಪಿನಾಗರ, ಅರಬೈಲು ಘಟ್ಟ, ತದಡಿ, ಗಂಗಾವಳಿ ನದಿ, ಅಘನಾಶಿನಿ ನದಿ, ಮಾಸ್ತಿಕಟ್ಟೆ, ಅರಬ್ಬಿಸಮುದ್ರ, ಲೆಕ್ಕಕ್ಕೆ ನಿಲುಕದ ಸಹ್ಯಾದ್ರಿ ಸಾಲುಗಳನ್ನು ದಿಟ್ಟಿಸಬಹುದು. ದೊರೆಕಟ್ಟೆಯ ಮೇಲಿಂದ ಸೂರ್ಯಾಸ್ತ ವೀಕ್ಷಣೆ ಸವಿಯಲು ಎರಡು ಕಣ್ಣು ಸಾಲದು! ಅಷ್ಟು ಎತ್ತರದ ಶಿಖರದ ಮೇಲೆ ಶುದ್ಧ ನೀರು ದೊರೆಯುವುದು ದೊರೆಕಟ್ಟೆಯ ವಿಶೇಷ!
ದೊರೆಕಟ್ಟೆಗೆ ಸಾಗುವ ದಾರಿಯ ಕಾಡಿನಲ್ಲಿ ಕುಬ್ಜ ಜಾತಿಯ ಸಣ್ಣ ಅಡಿಕೆಯ ‘ಪಾಂಡವರ ಅಡಿಕೆ’ ತೋಟ ಹಾಗೂ ಸಿಡಿಲಿನಿಂದಾದ ‘ಶಿಡ್ಲಗುಂಡಿ’ ನೋಟ, ‘ಸುಪ್ಪತ್ತಿಗೆ’ ಎಂಬ ವಿಶೇಷ ಪಾಚಿ ಸಸ್ಯಗಳು, ಕಾಡು ಕೋಳಿ, ಮೊಲ, ಬರ್ಕ, ಚಿಗರೆ, ಕೆಂಪಳಿಲು, ಹಾರ್ನಬಿಲ್, ಮುಳ್ಳು ಹಂದಿ, ಕಡವೆ, ಕರಡಿ, ಕಾಡುಕೋಣ ಮುಂತಾದವು ವಿಪುಲವಾಗಿ ನೋಡಸಿಗುತ್ತವೆ. ದೊರೆಕಟ್ಟೆಯ ಕೆಳಭಾಗದಲ್ಲಿ ಹುಲಿ ತಾಣವಿದ್ದು ಇದನ್ನು ‘ಹುಲಿಮಳಿಗೆ’ ಎಂದೆ ಕರೆಯುತ್ತಾರೆ. ದೊರೆಕಟ್ಟೆಯ ತುತ್ತ ತುದಿಯಲ್ಲಿ ಹನುಮಂತನ ದೇವಾಲಯವಿದ್ದು ಹನುಮ ಜಯಂತಿಯಂದು ವಿಶೇಷ ಪೂಜೆ ನಡೆಯುತ್ತದೆ.
ಮಾದನಗೇರಿ ಬಳಿಯ ಹಿಲ್ಲೂರ ತಿರುವಿನಿಂದ ಚೆನಗಾರಿಗೆ 26 ರಾಷ್ಟ್ರೀಯ ಹೆದ್ದಾರಿ(63) ಹೊಸಕಂಬಿ ತಿರುವಿನಿಂದ ಚೆನಗಾರಿಗೆ 8 ಹಾಗೂ ಶಿರಸಿಯಿಂದ ಚೆನಗಾರಿಗೆ 43 ಕಿ.ಮೀ ಇದ್ದು ದೊರೆಕಟ್ಟೆ ಜೀವನದಲ್ಲಿ ಒಮ್ಮೆ ನೋಡಲೇಬೇಕಾದ ತಾಣವಾಗಿದೆ.
ಪ್ರವಾಸಿಯ ಕಾಳಜಿ
ಚೆನಗಾರ ತಿರುವಿನಿಂದ ಮೋತಿಗುಡ್ಡದ ಶಾಲೆಯವರೆಗೆ 5 ಕಿಲೋಮೀಟರ್ ರಸ್ತೆ ಆಗಬೇಕು.
ಮೋತಿಗುಡ್ಡದಿಂದ ದೊರೆಕಟ್ಟೆಯವರೆಗೆ ರಸ್ತೆ ಮಾಡುವುದು ಕಷ್ಟ ಇರುವುದರಿಂದ ರೋಪ್ ವೇ ಮಾಡಬೇಕು.
ದೊರೆಕಟ್ಟೆಯಲ್ಲಿ ಉಳಿದುಕೊಳ್ಳಲು ಅಗತ್ಯ ಇರುವ ವಸತಿ ಸೌಲಭ್ಯ ಆಗಬೇಕು.
ಕರಡಿ ಹಾಗೂ ಇತರ ಕ್ರೂರ ಪ್ರಾಣಿಗಳಿಂದ ರಕ್ಷಣೆ ಒದಗಿಸುವ ವ್ಯವಸ್ಥೆ ಆಗಬೇಕು.
ತೀರಾ ಅಗತ್ಯವಿರುವ ವಸ್ತುಗಳು ಸಿಗುವಂತಾಗಬೇಕು.