Friday, October 3, 2025
Friday, October 3, 2025

ಎಡಕ್ಕಲ್ ಗುಹೆ: ಟ್ರಕ್ಕಿಂಗ್ ಪ್ರಿಯರು ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ಈ ತಾಣದ ಬಗ್ಗೆ ನಿಮಗೆಷ್ಟು ಗೊತ್ತು?

ಪ್ರವಾಸಿಗರ ಹಾಟ್‌ ಫೆವರೇಟ್‌ ತಾಣ ವಯನಾಡು. ಜಿಲ್ಲಾ ಕೇಂದ್ರ ವಯನಾಡಿನಿಂದ ಸುಮಾರು 25 ಕಿ.ಮೀ. ಪಯಣಿಸಿದರೆ ಆಕರ್ಷಣೆಯ ಕೇಂದ್ರಬಿಂದು ಎನಿಸಿಕೊಂಡ ಐತಿಹಾಸಿಕ ಎಡಕ್ಕಲ್‌ ಗುಹೆ ಕಾಣಸಿಗುತ್ತದೆ. ಇದು ಬೆಂಗಳೂರಿನಿಂದ ಸುಮಾರು 275 ಕಿ.ಮೀ. ದೂರದಲ್ಲಿದೆ.

ಬೆಂಗಳೂರು: ʼವಿರಹಾ ನೂರು ನೂರು ತರಹ...ʼ ಕನ್ನಡದ ಕ್ಲಾಸಿಕಲ್‌ ಚಿತ್ರಗಳಲ್ಲಿ ಒಂದಾದ, ಚಿತ್ರ ಮಾಂತ್ರಿಕ ಪುಟ್ಟಣ್ಣ ಕಣಗಾಲ್‌ ನಿರ್ದೇಶನದ ʼಎಡಕಲ್ಲು ಗುಡ್ಡದ ಮೇಲೆʼ ಚಿತ್ರದ ಈ ಹಾಡು ಇಂದಿಗೂ ಎವರ್‌ಗ್ರೀನ್‌. ಈಗ್ಯಾಕೆ ಈ ಹಾಡು ಎಂದರೆ ಈ ಸಿನಿಮಾದ ಶೂಟಿಂಗ್‌ ನಡೆದ ಜಾಗಕ್ಕೆ ನಾವು ನಿಮ್ಮನ್ನು ಕರೆದುಕೊಂಡು ಹೋಗುತ್ತೇನೆ. ಹೌದು, ʼಎಡಕಲ್ಲು ಗುಡ್ಡದ ಮೇಲೆʼ ಚಿತ್ರದ ಪ್ರಮುಖ ಭಾಗಗಳನ್ನು ಚಿತ್ರೀಕರಿಸಲಾದ ಸ್ಥಳವೇ ಎಡಕ್ಕಲ್‌ ಗುಹೆ. ಇದು ಕೇರಳದ ವಯನಾಡು ಜಿಲ್ಲೆಯಲ್ಲಿದೆ.

ಎಡಕ್ಕಲ್‌ ಗುಹೆ ಪ್ರಕೃತಿ ವಿಸ್ಮಯಕ್ಕೆ ಮತ್ತೊಂಡು ಜ್ವಲಂತ ಸಾಕ್ಷಿ. ವಿಶೇಷ ಎಂದರೆ ಈ ಕಲ್ಲಿನ ಗುಹೆಯಲ್ಲಿ ಸುಮಾರು 6,000 ವರ್ಷಗಳ ಹಿಂದನ ನವಶಿಲಾಯುಗಕ್ಕೆ ಸಂಬಂಧಿಸಿದ ರೇಖಾ ಚಿತ್ರಗಳಿವೆ. ಇದು ಸಿಂಧೂ ನಾಗರಿಕತೆಗೆ ಸಂಬಂಧಿಸಿದ ತಾಣ ಎನ್ನುತ್ತಾರೆ ಇತಿಹಾಸ ತಜ್ಞರು. ಅಲ್ಲದೆ ಈ ಗುಹೆ ಸುಮಾರು 8,000 ವರ್ಷಗಳಿಂದ ಅಸ್ತಿತ್ವದಲ್ಲಿದೆ ಎಂದು ಅಂದಾಜಿಸಲಾಗಿದೆ. ಜತೆಗೆ ಟ್ರಕ್ಕಿಂಗ್‌ ಇಷ್ಟಪಡುವವರು ತೆರಳಲೇಬೇಕಾದ ಜಾಗ ಇದು.

edakal cave

ಎಲ್ಲಿದೆ?

ಪ್ರವಾಸಿಗರ ಹಾಟ್‌ ಫೆವರೇಟ್‌ ತಾಣ ವಯನಾಡು ಈ ಐತಿಹಾಸಿಕ ಗುಹೆಯನ್ನು ತನ್ನೊಡಲೊಳಗೆ ಇಟ್ಟುಕೊಂಡು ಸೋಜಿಗ, ಆಕರ್ಷಣೆಯ ಕೇಂದ್ರಬಿಂದು ಎನಿಸಿಕೊಂಡಿದೆ. ಇದು ಬೆಂಗಳೂರಿನಿಂದ ಸುಮಾರು 275 ಕಿ.ಮೀ. ದೂರದಲ್ಲಿದೆ. ಜಿಲ್ಲಾ ಕೇಂದ್ರ ವಯನಾಡಿನಿಂದ ಇಲ್ಲಿಗೆ ತಲುಪಲು ಸುಮಾರು 25 ಕಿ.ಮೀ. ಪಯಣಿಸಬೇಕು. ಬಸ್‌ನಲ್ಲಿ ತೆರಳುವುದಾದರೆ ವಯನಾಡು ಬಸ್‌ ಸ್ಟ್ಯಾಂಡ್‌ನಿಂದ ಅಂಬಲವಯಲ್‌ಗೆ ಹೋಗುವ ಬಸ್‌ನಲ್ಲಿ ತೆರಳಬೇಕು. ಟ್ಯಾಕ್ಸಿಯಲ್ಲೂ ಹೋಗಬಹುದು.

ಹತ್ತಿರದ ರೈಲ್ವೆ ಸ್ಟೇಷನ್‌ ಕೋಝಿಕ್ಕೋಡ್‌ (98 ಕಿ.ಮೀ.), ಹತ್ತಿರದ ವಿಮಾನ ನಿಲ್ದಾಣ ಕ್ಯಾಲಿಕಟ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (106 ಕಿ.ಮೀ.)

ಟ್ರಕ್ಕಿಂಗ್‌ ಪ್ರಿಯರ ಸ್ವರ್ಗ

ಅಂಬುಕುಟ್ಟಿ ಮಲ ಬೆಟ್ಟದಲ್ಲಿ, ಸಮುದ್ರ ಮಟ್ಟದಿಂದ ಸುಮಾರು 1,200 ಮೀ. ಎತ್ತರದಲ್ಲಿ ಈ ಗುಹೆ ಇದೆ. ಇಲ್ಲಿಗೆ ತಲುಪಲು ಸುಮಾರು 300 ಮೆಟ್ಟಿಲುಗಳನ್ನು ಹತ್ತಬೇಕು. ಹೀಗಾಗಿಯೇ ಇದನ್ನು ಟ್ರಕ್ಕಿಂಗ್‌ ಪ್ರಿಯರ ಸ್ವರ್ಗ ಎಂದು ಕರೆಯಲಾಗುತ್ತದೆ. ಮೇಲಿನಿಂದ ನಿಂತು ನೋಡಿದಾಗ ಸುತ್ತಲಿನ ರಮ್ಯ ನೋಟ ನಿಮ್ಮ ಕಣ್ಣೊಳಗೆ ಸೆರೆಯಾಗಿ ಹೊಸ ಪ್ರಪಂಚಕ್ಕೆ ಕಾಲಿಟ್ಟ ಅನುಭವ ನೀಡುತ್ತದೆ.

Edakkal-Caves-1

ಪೌರಾಣಿಕ ಹಿನ್ನೆಲೆ

ಎಡಕ್ಕಲ್‌ ಗುಹೆಗೆ ಚಾರಿತ್ರಿಕ ಜತೆಗೆ ಪೌರಾಣಿಕ ಹಿನ್ನೆಲೆಯೂ ಇದೆ. ಇದು ರಾಮಾಯಣಕ್ಕೆ ಸಂಬಂಧಿಸಿದ್ದು. ಶ್ರೀರಾಮ-ಸೀತಾ ಮಾತೆಯ ಮಕ್ಕಳಾದ ಲವ ಮತ್ತು ಕುಶ ಬಿಟ್ಟ ಬಾಣದಿಂದ ಬೃಹತ್‌ ಬಂಡೆ ಎರಡಾಗಿ ಸೀಳಿ ಗುಹೆ ನಿರ್ಮಾಣವಾಯಿತು ಎನ್ನಲಾಗಿದೆ.

ಗುಹೆಯನ್ನು 19ನೇ ಶತಮಾನದಲ್ಲಿ ಆಕಸ್ಮಿಕವಾಗಿ ಕಂಡುಹಿಡಿಯಲಾಯಿತು. 1890ರಲ್ಲಿ ಪೊಲೀಸ್ ಅಧಿಕಾರಿ ಫ್ರೆಡ್ ಫಾಸೆಟ್ ಬೇಟೆಯಾಡುವ ಸಂದರ್ಭದಲ್ಲಿ ಇದನ್ನು ಗುರುತಿಸಿದರು. ಹೀಗೆ ಕಾಲಗರ್ಭದಲ್ಲಿ ಹುದುಗಿ ಹೋಗಿದ್ದ, ಐತಿಹಾಸಿಕವಾಗಿ ಮಹತ್ವ ಹೊಂದಿರುವ ತಾಣ ಬೆಳಕಿಗೆ ಬಂತು. ಗುಹೆಯಲ್ಲಿ ಕಂಡುಬಂದಿರುವ ನವಶಿಲಾಯುಗಕ್ಕೆ ಸಂಬಂಧಿಸಿದ ರೇಖಾ ಚಿತ್ರಗಳ ಪೈಕಿ ಅನೇಕ ಚಿಹ್ನೆಗಳನ್ನು ಇನ್ನೂ ಅರ್ಥೈಸಿಕೊಳ್ಳಲಾಗಿಲ್ಲ. ಇಲ್ಲಿಯವರೆಗೆ ಸುಮಾರು 400 ಚಿಹ್ನೆಗಳನ್ನು ಮಾತ್ರ ಡಿಕೋಡ್‌ ಮಾಡಲಾಗಿದೆ ಎಂದು ಇತಿಹಾಸ ತಜ್ಞರು ತಿಳಿಸಿದ್ದಾರೆ. ಎರಡು ದೊಡ್ಡ ಬಂಡೆಗಳ ನಡುವೆ ಮೈಚಾಚಿಕೊಂಡಿರುವ ಕಲ್ಲೊಂದರಲ್ಲಿ ಶಿಲಾಯುಗಕ್ಕೆ ಸಂಬಂಧಿಸಿದ ಬರಹ ಇದ್ದು, ಇತಿಹಾಸದತ್ತ ಬೆಳಕು ಚೆಲ್ಲುತ್ತಿದೆ.

edakkal-caves-

ಯಾವಾಗ ಸೂಕ್ತ?

ಮಳೆಗಾಲದ ಎಡಕ್ಕಲ್‌ ಗುಹೆ ಚಾರಣ ಒಂದು ಅನನ್ಯ ಅನುಭವ ನೀಡುತ್ತದೆಯಾದರೂ ಕಲ್ಲು ಬಂಡೆಯಿಂದ ಕೂಡಿರುವ ಪ್ರದೇಶವಾಗಿರುವುದರಿಂದ ಜಾರುವ ಅಪಾಯವಿದೆ. ಹೀಗಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗುತ್ತದೆ. ಹೀಗಾಗಿ ಇಲ್ಲಿಗೆ ನವೆಂಬರ್‌ನಿಂದ ಫೆಬ್ರವರಿ ತನಕ ಭೇಟಿ ನೀಡಲು ಸೂಕ್ತ ಸಮಯ ಎನ್ನುತ್ತಾರೆ ಸ್ಥಳೀಯರು.

ಪ್ರವಾಸ, ಟ್ರಕ್ಕಿಂಗ್‌, ಪ್ರಕೃತಿಯೊಂದಿಗೆ ಒಡನಾಟ ಮತ್ತು ಇತಿಹಾಸದ ಮಾಹಿತಿ-ಹೀಗೆ ಒಂದೇ ಏಟಿಗೆ 4 ಉದ್ದೇಶ ಈಡೇರಬೇಕು ಎಂದು ನೀವು ಬಯಸುವುರಾದರೆ ತಪ್ಪದೆ ಎಡಕ್ಕಲ್‌ ಗುಹೆಗೆ ಭೇಟಿ ನೀಡಿ.

edakkal-caves

ಟ್ರಕ್ಕಿಂಗ್‌ ತೆರಳುವ ಮುನ್ನ ಗಮನಿಸಿ

  • ಸೋಮವಾರ ಎಡಕ್ಕಲ್‌ ಗುಹೆಗೆ ಪ್ರವೇಶ ಇರುವುದಿಲ್ಲ.
  • ಮಂಗಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಈ ಬಗ್ಗೆ ಎಚ್ಚರ ವಹಿಸಿ.
  • ಟೋಪಿ ಮತ್ತು ಸನ್‌ ಗ್ಲಾಸ್‌ ಒಯ್ಯುವುದನ್ನು ಮರೆಯಬೇಡಿ.
  • ಸೂಕ್ತವಾದ ವಾಕಿಂಗ್‌ ಶೂ ಧರಿಸಿ.
  • ಪ್ಲಾಸ್ಟಿಕ್‌ ಬಳಕೆ ನಿಷೇಧಿಸಲಾಗಿದ್ದು, ಈ ಬಗ್ಗೆ ಗಮನ ಹರಿಸಿ.
  • ಸಾಕಷ್ಟು ನೀರು ಒಯ್ಯಿರಿ.
  • ವಯಸ್ಸಾದವರು ಟ್ರಕ್ಕಿಂಗ್‌ ತಪ್ಪಿಸಿ.
  • ಎಚ್ಚರಿಕೆಯಿಂದ ಹೆಜ್ಜೆ ಹಾಕಿ.
Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..