ವರುಣನ ನರ್ತನದ ನಡುವೆ ಕುರಿಂಜಾಲ್ ಚಾರಣ !
ಟ್ರೆಕ್ ಮಧ್ಯೆ "ಕಲ್ಲು ಗುಡ್ಡ" ಎಂಬ ಭಾಗ ಬರುತ್ತದೆ, ಅಲ್ಲಿ ಸ್ವಲ್ಪ ಎಚ್ಚರಿಕೆ ಅಗತ್ಯವಿದೆ. ಕೊನೆಯ ಭಾಗವು ಕಡಿದಾದದ್ದು, ಮಳೆಗಾಲದಲ್ಲಿ ರಭಸ ಗಾಳಿ, ಮಳೆಮಿಶ್ರಿತ ಮಂಜಿನಿಂದ ಈ ಭಾಗದ ಟ್ರೆಕ್ ವಿಸ್ಮಯ ಲೋಕವನ್ನೇ ಸೃಷ್ಟಿಸಿರುತ್ತದೆ. ಆದ್ದರಿಂದ ಕೊಂಚ ನಿಧಾನದಲ್ಲಿ ಹತ್ತಿದರೆ ಒಳಿತು. ಆದರೆ ಕುರಿಂಜಾಲ್ ಶಿಖರದ ತುತ್ತತುದಿ ತಲುಪಿದಾಗ ಸಿಗುವ ಅನುಭೂತಿ ಅನೂಹ್ಯ-ಅದ್ಭುತ. ಆ ನೋಟ ಎಲ್ಲ ಆಯಾಸವನ್ನು ಹೋಗಲಾಡಿಸುತ್ತದೆ.
- ಭಾಗ್ಯ ಎಂ ಟಿ, ಶಿವಮೊಗ್ಗ
ಈ ಮಳೆಗಾಲದ ಆರಂಭದಲ್ಲಿ ಕೈಗೊಳ್ಳಬಹುದಾದ ಟ್ರೆಕ್ಕಿಂಗ್ ಗಳಲ್ಲಿ ನೀವು ಮಿಸ್ ಮಾಡಿಕೊಳ್ಳಬಾರದ ಒಂದು ಚಾರಣ ಅಂದರೆ ಅದು ‘ಕುರಿಂಜಾಲ್’ ಟ್ರೆಕ್ಕಿಂಗ್.
ಕುರಿಂಜಾಲ್ ಟ್ರೆಕ್ ಕರ್ನಾಟಕದ ಅತ್ಯಂತ ರಮಣೀಯ ಮತ್ತು ರೋಮಾಂಚಕಾರಿ ಟ್ರೆಕ್ಕಿಂಗ್ ಮಾರ್ಗಗಳಲ್ಲಿ ಒಂದು. ಇದು ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಭಾಗವಾಗಿದೆ. ಸುಮಾರು1,200 ಮೀಟರ್ ಎತ್ತರದಲ್ಲಿರುವ ಕುರಿಂಜಾಲ್ ಬೆಟ್ಟವು ಅದ್ಭುತ ನೈಸರ್ಗಿಕ ಸೌಂದರ್ಯ, ದಟ್ಟ ಕಾಡು ಮತ್ತು ಆಕರ್ಷಕ ದೃಶ್ಯಗಳನ್ನು ಹೊಂದಿದೆ. ಕುರಿಂಜಾಲ್ ಶಿಖರ ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಗೊಳಪಡುತ್ತದೆ.
ಚಾರಣ ಶುರು ಮಾಡುವ ಮುನ್ನ, ಕಳಸೇಶ್ವರ ದೇವಾಲಯ ದರ್ಶನ ಮಾಡುವವರು ಕಳಸಕ್ಕೂ ಹೋಗಬಹುದು. ಕಳಸದಿಂದ ಸುಮಾರು 8.5 ಕಿಮೀ ದೂರದಲ್ಲಿ ಸಂಸೆ ಎಂಬ ಊರಿಗೆ ಹೋದರೆ ಅಲ್ಲಿ ಅದ್ಭುತ ಉಪಾಹಾರ, ಕಾಫಿ ಸಿಗುತ್ತದೆ. ಲಂಚ್ ಕೂಡ ಪ್ಯಾಕ್ ಮಾಡಿಕೊಂಡು ಕುರಿಂಜಾಲ್ ಕಡೆ ಹೊರಡಬಹುದು.

ಇದು ಸಮುದ್ರ ಮಟ್ಟದಿಂದ 5,751 ಅಡಿ ಎತ್ತರದಲ್ಲಿದೆ. ರಾಜ್ಯ ಸರ್ಕಾರದ ಕುದುರೆಮುಖ ವನ್ಯಜೀವಿ ವಲಯ, ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಆಧಾರ್ ಕಾರ್ಡ್ ಪ್ರತಿಯನ್ನು ನೀಡಿ ಅನುಮತಿಯನ್ನು ಪಡೆಯಬೇಕಾಗುತ್ತದೆ. ಕಚೇರಿಯ ಸಿಬ್ಬಂದಿ ಎಲ್ಲ ಚಾರಣಿಗರ ಬ್ಯಾಗ್‌ಗಳನ್ನು ಪರಿಶೀಲಿಸಿದ ನಂತರ ಚಾರಣಕ್ಕೆ ಅನುವು ಮಾಡಿಕೊಡುತ್ತಾರೆ. ಪ್ಲಾಸ್ಟಿಕ್ ಕವರ್‌ಗಳಲ್ಲಿ ಪ್ಯಾಕ್ಡ್ ಆಹಾರ, ಪ್ಲಾಸ್ಟಿಕ್ ವಸ್ತುಗಳು, ಮದ್ಯವನ್ನು ತೆಗೆದುಕೊಂಡು ಹೋಗಲು ಅವಕಾಶವಿರುವುದಿಲ್ಲ.
ಉಷ್ಣವಲಯದ ಈ ಕಾಡು ನಿತ್ಯಹರಿದ್ವರ್ಣವಾಗಿದ್ದು ಈ ಚಾರಣವು ಶುದ್ಧ ಪ್ರಕೃತಿ ಮತ್ತು ಪ್ರಶಾಂತತೆಯ ಅನುಭವ ನೀಡುವುದರೊಂದಿಗೆ ವಿಭಿನ್ನ ಲೋಕಕ್ಕೆ ಕರೆದೊಯ್ಯುತ್ತದೆ. ಮಾರ್ಗವು ದಟ್ಟವಾದ ಕಾಡು, ಕಲ್ಲುಗಳು ಮತ್ತು ಕಡಿದಾದ ಏರಿಳಿತದ ದಾರಿಯನ್ನು ಹೊಂದಿದ್ದು, ಅನೇಕ ಸಣ್ಣ ಹೊಳೆಗಳು ಮತ್ತು ಹಚ್ಚ ಹಸಿರಿನ ಹುಲ್ಲುಗಾವಲುಗಳ ಮೂಲಕ ಸಾಗುತ್ತದೆ. ಮಳೆಗಾಲವಾದ್ದರಿಂದ ನಿರಂತರ ಮಳೆಯ ಸಿಂಚನ ನಮ್ಮನ್ನು ಮತ್ತೊಂದು ಮಾಯಾಲೋಕಕ್ಕೇ ಕರೆದೊಯ್ಯುತ್ತದೆ. ಸುಮಾರು 3 ರಿಂದ 4 ಗಂಟೆಗಳ ಕಾಲ ಮಳೆಯಲ್ಲಿ ನೆನೆಯುವ ಅನುಭವ ಅವರ್ಣನೀಯ. ಮಳೆಯಲ್ಲಿ ನೆನೆಯಲು ಸಾಧ್ಯವಾಗದವರು ರೈನ್‌ಕೋಟ್ ಬಳಕೆ ಮಾಡಿದರೆ ಒಳಿತು.
ಚಾರಣ ಆರಂಭಕ್ಕೆ ಮುನ್ನ ವಲಯ ಕಚೇರಿಯಿಂದ 500 ಮೀಟರ್‌ಗಳಷ್ಟು ದೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದುಕೊಂಡು ಹೋಗಬೇಕು. ಸುಮಾರು 500 ಮೀಟರ್ ನಂತರ ಎಡಭಾಗದಲ್ಲಿ ಒಂದು ಗೇಟ್ ಕಾಣುತ್ತದೆ. ಆ ಗೇಟ್ ಮೂಲಕ ಹಾದು ಹೋದರೆ ಚಾರಣ ಆರಂಭವಾಗುತ್ತದೆ.
ಗೇಟ್ ನಿಂದ ಸುಮಾರು 300 ಮೀಟರ್ ದೂರದಲ್ಲಿ, ಒಂದು ಸೇತುವೆ ಕಾಣುತ್ತದೆ. ಸೇತುವೆ ಕೆಳಗೆ ಭದ್ರೆ ಸೊಬಗಿನಿಂದ ಹರಿಯುತ್ತಾಳೆ. ಮಳೆಗಾಲವಾದ್ದರಿಂದ ಭದ್ರೆ ಕೊಂಚ ರಭಸದಲ್ಲೇ ಧುಮ್ಮಿಕ್ಕಿ ಹರಿಯುತ್ತಿರುತ್ತಾಳೆ. ಬೇಸಗೆ ಕಾಲದಲ್ಲಿ ನದಿಗೆ ಇಳಿದು, ನೀರಿನ ಬಾಟಲಿಗಳನ್ನು ಈ ತಣ್ಣನೆಯ ನೀರಿನಿಂದ ತುಂಬಿಸಿ ಮನದಣಿಯೆ ಕುಡಿದು ದಣಿವಾರಿಸಿಕೊಳ್ಳಬಹುದು. ನಂತರದ ಹಾದಿ ಕಲ್ಲುಮಣ್ಣಿನಿಂದ ಕೂಡಿದ್ದು ಅಷ್ಟೇನೂ ದಣಿವಾಗುವುದಿಲ್ಲ. ಮುಂದೆ ಸಾಗುತ್ತಿದ್ದಂತೆ ಬಲಭಾಗಕ್ಕೆ ಸಣ್ಣ ಸಣ್ಣ ಜಲಪಾತಗಳು ಕಾಣುತ್ತವೆ. ಈ ಜಲಪಾತದ ಬಳಿ ಹೋಗಿ ಫೊಟೋ ಕ್ಲಿಕ್ಕಿಸದೇ ಮುಂದೆ ಸಾಗಲು ಸಾಧ್ಯವಾಗುವುದೇ ಇಲ್ಲ. ಆದರೆ ಬೇಕಾದಷ್ಟು ಇಂಬಳಗಳು ನಿಮ್ಮ ರಕ್ತ ಹೀರಲು ಸನ್ನದ್ಧವಾಗಿರುತ್ತವೆ.
ಟ್ರೆಕ್ ಮಧ್ಯೆ "ಕಲ್ಲು ಗುಡ್ಡ" ಎಂಬ ಭಾಗ ಬರುತ್ತದೆ, ಅಲ್ಲಿ ಸ್ವಲ್ಪ ಎಚ್ಚರಿಕೆ ಅಗತ್ಯವಿದೆ. ಕೊನೆಯ ಭಾಗವು ಕಡಿದಾದದ್ದು, ಮಳೆಗಾಲದಲ್ಲಿ ರಭಸ ಗಾಳಿ, ಮಳೆಮಿಶ್ರಿತ ಮಂಜಿನಿಂದ ಈ ಭಾಗದ ಟ್ರೆಕ್ ವಿಸ್ಮಯ ಲೋಕವನ್ನೇ ಸೃಷ್ಟಿಸಿರುತ್ತದೆ. ಆದ್ದರಿಂದ ಕೊಂಚ ನಿಧಾನದಲ್ಲಿ ಹತ್ತಿದರೆ ಒಳಿತು. ಆದರೆ ಈ ಕಡಿದಾದ ಹಾದಿಯ ಶ್ರಮವನ್ನು ಶಿಖರದ ತುತ್ತತುದಿಯ ರಮಣೀಯ ನೋಟ ಮರೆಸುತ್ತದೆ. ಈ ತುದಿಯಿಂದ ಕುದುರೆಮುಖ ಶಿಖರವನ್ನು ಕಣ್ತುಂಬಿಕೊಳ್ಳಬಹುದು. ಆದರೆ ಮಳೆಗಾಲದಲ್ಲಿ ಮಳೆಯಿಂದಾಗಿ ಉಂಟಾದ ಮಂಜಿನಿಂದ ಅದು ಸಾಧ್ಯವಾಗಲಿಲ್ಲ.
ಕುರಿಂಜಾಲ್ ಶಿಖರ ಚಾರಣವನ್ನು ಬೆಳಿಗ್ಗೆ ಬೇಗನೆ ಪ್ರಾರಂಭಿಸುವುದು ಸೂಕ್ತ. ತುದಿ ತಲುಪಲು ನಿಮಗೆ ಸುಮಾರು ಎರಡೂವರೆ ಗಂಟೆ ಮತ್ತು ಹಿಂತಿರುಗಲು ಒಂದೂವರೆ ಗಂಟೆ ಬೇಕಾಗುತ್ತದೆ. ಸಂಜೆ 6 ಗಂಟೆಯ ನಂತರ ಚಾರಣ ಮಾಡಲು ಅರಣ್ಯ ಕಚೇರಿಯಿಂದ ನಿರ್ಬಂಧವಿದೆ.
ಅಲ್ಲದೆ, ಪಶ್ಚಿಮ ಘಟ್ಟಗಳಲ್ಲಿ, ಮಧ್ಯಾಹ್ನ 2 ಗಂಟೆಯ ನಂತರ ಹವಾಮಾನವು ಗಾಳಿಯಿಂದ ಕೂಡಿರುತ್ತದೆ. ಮಧ್ಯಾಹ್ನ 1 ಗಂಟೆಯ ಮೊದಲು ನೀವು ಶಿಖರವನ್ನು ತಲುಪಿ ಸಂಜೆ 6 ಗಂಟೆಯೊಳಗೆ ಹಿಂದಿರುಗಬೇಕು.
ಅಕ್ಟೋಬರ್ ನಿಂದ ಫೆಬ್ರವರಿವರೆಗೆ ಚಾರಣ ಮಾಡಲು ಉತ್ತಮ ಸಮಯ. ಮಳೆಗಾಲದಲ್ಲಿ ಚಾರಣ ಇನ್ನೊಂದು ಬಗೆಯ ವಿಸ್ಮಯ. ಆದರೆ ರೇನ್ ಕೋಟ್, ಉತ್ತಮ ಶೂಸ್ ಸೇರಿದಂತೆ ಸ್ವಲ್ಪ ಎಚ್ಚರಿಕೆ ವಹಿಸಿ ಚಾರಣ ಕೈಗೊಳ್ಳಬಹುದು.

ಮಳೆಗಾಲದಲ್ಲಿ ಚಾರಣ ಆಯಾಸವನ್ನು ಉಂಟು ಮಾಡುವುದಿಲ್ಲ. ಶಿಖರದ ತುದಿಯ ಭಾಗಕ್ಕೆ ತಲುಪುತ್ತಿದ್ದ ಹಾಗೆ ಮಳೆ-ಮಂಜಿನ ಮಿಶ್ರಣದೊಂದಿಗೆ ಗಾಳಿಯೂ ಸೇರಿ ಸಮ್ಮೋಹನಗೊಳಿಸುವ ದೃಶ್ಯವನ್ನು ಕಟ್ಟಿಕೊಡುತ್ತದೆ.
ಮಳೆಗಾಲದಲ್ಲಿ ಇಂಬಳಗಳು ಇಲ್ಲಿ ಸಾಮಾನ್ಯ. ಚಾರಣಿಗರು ಇಂಬಳದಿಂದ ಬಚಾವಾಗಲು, ಡೆಟಾಲ್, ನಶ್ಯ, ಕೊಬ್ಬರಿ ಎಣ್ಣೆ ಬಳಸಬಹುದು. ಆದರೂ ಮಳೆಗಾಲದಲ್ಲಿ ಇಂಬಳಗಳಿಗೆ ರಕ್ತದಾನ ಮಾಡದೇ ಚಾರಣ ಮುಗಿಸುವುದು ಅಸಾಧ್ಯ.
ಕುರಿಂಜಾಲ್ ಶಿಖರದ ತುತ್ತತುದಿ ತಲುಪಿದಾಗ ಅನುಭೂತಿ ಅನೂಹ್ಯ-ಅದ್ಭುತ. ಆ ನೋಟ ಎಲ್ಲ ಆಯಾಸವನ್ನು ಹೋಗಲಾಡಿಸುತ್ತದೆ.
ಕುರಿಂಜಾಲ್ ಟ್ರೆಕ್ ಪ್ರಕೃತಿ ಮತ್ತು ಸಾಹಸದ ಪ್ರೇಮಿಗಳಿಗೆ ಒಂದು ಅದ್ಭುತ ಅವಿಸ್ಮರಣೀಯ ಅನುಭವ. ಇದು ಕೇವಲ ಟ್ರೆಕ್ಕಿಂಗ್ ಅಲ್ಲ, ಬದಲಿಗೆ ಪ್ರಕೃತಿಯೊಂದಿಗೆ ಒಂದಾಗುವ ಒಂದು ಪ್ರಕ್ರಿಯೆ. ನೀವು ಟ್ರೆಕ್ಕಿಂಗ್ ಪ್ರಿಯರಾಗಿದ್ದರೆ, ಹೋಗಿ ಬನ್ನಿ. ಬೆಂಗಳೂರಿನಿಂದ 332 ಕಿ.ಮೀ ದೂರವಿದ್ದು, ಇದು ಅತಿ ಕಷ್ಟದ ಟ್ರೆಕ್ಕಿಂಗೂ ಅಲ್ಲ. ಅತಿ ಸುಲಭದ ಟ್ರೆಕ್ಕಿಂಗೂ ಅಲ್ಲ.
ಸಿದ್ಧತೆ ಹೀಗಿರಲಿ
ಕಾಟನ್ ಅಥವಾ ಟ್ರೆಕ್ಕಿಂಗ್ ಪ್ಯಾಂಟ್, ಆರಾಮದಾಯಕ ಕಾಟನ್ ಟೀ-ಶರ್ಟ್, ಕ್ಯಾಪ್, ಟ್ರೆಕ್ಕಿಂಗ್ ಶೂಸ್ ಮತ್ತು ಪುಷ್ಟಿ ನೀಡುವ ತಿಂಡಿ ಮತ್ತು ಸಾಕಷ್ಟು ನೀರು ನಿಮ್ಮ ಜತೆಗಿರಲಿ. ಸ್ಥಳೀಯ ಗೈಡ್ ಸಹಾಯ ಪಡೆಯಲು ಮರೆಯಬೇಡಿ.
ಪ್ಲಾಸ್ಟಿಕ್ ಬೇಡ
ಖಡಾಖಂಡಿತವಾಗಿ ಪ್ಲಾಸ್ಟಿಕ್ ಬಳಕೆ ಮಾಡಬೇಡಿ. ಯಾವುದೇ ರೀತಿಯ ಪ್ರವಾಸ, ಟ್ರೆಕ್ಕಿಂಗ್ ಮಾಡಿದಾಗಲೂ ನಾವು ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಒಂದು ಪಕ್ಷ ಕನಿಷ್ಟ ಮಟ್ಟದ ಪ್ಲಾಸ್ಟಿಕ್ ಬಳಕೆ ಮಾಡಿದರೂ ಅಲ್ಲಿ ಬಿಸಾಡದೆ ವಾಪಸ್ ತಂದು ವಿಲೇವಾರಿ ಮಾಡಬೇಕು. ಇದು ನಮ್ಮೆಲ್ಲರ ಕರ್ತವ್ಯ. ನೆನಪಿಡಿ, ಯಾವುದೇ ಚಾರಣ ಪ್ರೇಮಿಗಳು ನಿಸರ್ಗಕ್ಕೆ ಹಾನಿಯಾಗುವ ಯಾವುದೇ ಕೆಲಸವನ್ನು ಮಾಡುವುದಿಲ್ಲ.