ಬೈಕೆಂಬ ಬಯಕೆಯ ಬೆನ್ನೇರಿ!
ಬೈಕ್‌ನಲ್ಲಿ ಸಾಹಸ ಪ್ರವಾಸಗಳ ಬಗ್ಗೆ ಹೇಳುವುದಾದರೆ, ಜನರು ಹೆಚ್ಚಾಗಿ ಲೇಹ್-ಲಡಾಖ್‌ಗೆ ಹೋಗಲು ಇಷ್ಟಪಡುತ್ತಾರೆ. ಇದಲ್ಲದೆ, ಜೈಪುರ-ಜೈಸಲ್ಮೇರ್, ಚಿಕ್ಕಮಗಳೂರು, ಕೇರಳ, ಡಾರ್ಜಿಲಿಂಗ್-ಸಿಕ್ಕಿಂ, ತವಾಂಗ್‌ನಂಥ ಸ್ಥಳಗಳಿಗೂ ಬೈಕ್ ಪ್ರಯಾಣ ಬೆಳೆಸುವುದಕ್ಕೆ ಆದ್ಯತೆ ನೀಡುತ್ತಾರೆ. ತಾಜಾ ಗಾಳಿಯನ್ನು ಅನುಭವಿಸುತ್ತಾ ನೈಸರ್ಗಿಕ ಕಣಿವೆಗಳ ಮೂಲಕ ಹಾದುಹೋಗುವುದು ಮರೆಯಲಾಗದ ರೋಮಾಂಚನ ಅನುಭವವಾಗಿದ್ದರೂ, ಈ ಮಾರ್ಗಗಳಲ್ಲಿನ ಸವಾಲುಗಳು ಸಹ ಕಡಿಮೆಯಿಲ್ಲ, ಆದ್ದರಿಂದ ಮುಂಗಡ ತಯಾರಿ ಮತ್ತು ಸರಿಯಾದ ಪ್ಲಾನ್ ಬಹಳ ಮುಖ್ಯ.
- ನಟರಾಜ್ ವಿರಾಜಪೇಟೆ
ಬೈಕ್ ಟ್ರಿಪ್ ಹೋಗುವುದು ಒಂದು ರೋಮಾಂಚನಕಾರಿ ಅನುಭವ, ಹೀಗಾಗಿ ಅನೇಕ ಯುವಕರು ಅದನ್ನು ಅನುಭವಿಸಲು ಬಯಸುತ್ತಾರೆ. ಯುವಕರಿಗೆ ಬೈಕ್ ಜತೆ ಒಂದು ಸ್ಪೆಷಲ್ ಬಾಂಡಿಂಗ್ ಇದ್ದೇ ಇರುತ್ತೆ. ಸಿನಿಮಾದಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ಬೈಕ್ ಟ್ರಾವೆಲ್ ಮಾಡುವ ಸೀನ್‌ಗಳಿಗೆ ಎಲ್ಲರೂ ಫಿದಾ ಆಗ್ತಾರೆ. ನೀವು ಬೈಕ್‌ನಲ್ಲಿ ದೂರದ ಪ್ರಯಾಣ ಮಾಡಲು ಯೋಚಿಸುತ್ತಿದ್ದರೆ, ಯಾವ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಿ.
ಬೈಕ್‌ನಲ್ಲಿ ಸಾಹಸ ಪ್ರವಾಸಗಳ ಬಗ್ಗೆ ಹೇಳುವುದಾದರೆ, ಜನರು ಹೆಚ್ಚಾಗಿ ಲೇಹ್-ಲಡಾಖ್‌ಗೆ ಹೋಗಲು ಇಷ್ಟಪಡುತ್ತಾರೆ. ಇದಲ್ಲದೆ, ಜೈಪುರ-ಜೈಸಲ್ಮೇರ್, ಚಿಕ್ಕಮಗಳೂರು, ಕೇರಳ, ಡಾರ್ಜಿಲಿಂಗ್-ಸಿಕ್ಕಿಂ, ತವಾಂಗ್‌ನಂಥ ಸ್ಥಳಗಳಿಗೂ ಬೈಕ್ ಪ್ರಯಾಣ ಬೆಳೆಸುವುದಕ್ಕೆ ಆದ್ಯತೆ ನೀಡುತ್ತಾರೆ. ತಾಜಾ ಗಾಳಿಯನ್ನು ಅನುಭವಿಸುತ್ತಾ ನೈಸರ್ಗಿಕ ಕಣಿವೆಗಳ ಮೂಲಕ ಹಾದುಹೋಗುವುದು ಮರೆಯಲಾಗದ ರೋಮಾಂಚನ ಅನುಭವವಾಗಿದ್ದರೂ, ಈ ಮಾರ್ಗಗಳಲ್ಲಿನ ಸವಾಲುಗಳು ಸಹ ಕಡಿಮೆಯಿಲ್ಲ, ಆದ್ದರಿಂದ ಮುಂಗಡ ತಯಾರಿ ಮತ್ತು ಸರಿಯಾದ ಪ್ಲಾನ್ ಬಹಳ ಮುಖ್ಯ. ನೀವು ನಿಮ್ಮ ಬೈಕ್ ಪ್ರಯಾಣವನ್ನು ಸರಿಯಾಗಿ ಯೋಜಿಸದಿದ್ದರೆ, ಪ್ರಯಾಣದ ಎಲ್ಲಾ ಮೋಜು ಹಾಳಾಗಬಹುದು ಮತ್ತು ನೀವು ಸಮಸ್ಯೆಗಳನ್ನು ಎದುರಿಸುತ್ತಲೇ ಇರುತ್ತೀರಿ. ದಾರಿಯಲ್ಲಿನ ಸುಂದರ ನೋಟಗಳನ್ನು ಗ್ರಹಿಸುವುದರಿಂದ ಹಿಡಿದು ಸಾಹಸವನ್ನು ಆನಂದಿಸುವವರೆಗೆ ಅನುಭವವನ್ನು ಸ್ಮರಣೀಯವಾಗಿಸಲು ನೀವು ಬಯಸಿದರೆ, ಕೆಲವು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು.

ಬೈಕ್‌ನಲ್ಲಿ ಪ್ರಯಾಣಿಸುವುದು ತುಂಬಾ ಸಾಹಸಮಯ. ವಿಶೇಷವಾಗಿ ನೀವು ಗುಡ್ಡಗಾಡು ಪ್ರದೇಶಗಳು, ಹಿಮಭರಿತ ಕಣಿವೆಗಳಿಗೆ ಹೋಗಲು ಯೋಚಿಸುತ್ತಿದ್ದರೆ. ಅದು ನಿಮ್ಮ ತಾಳ್ಮೆಯ ಪರೀಕ್ಷೆಯಾಗಿರುತ್ತದೆ. ಹಾಗಾದರೆ ಬೈಕ್ ಪ್ರಯಾಣವನ್ನು ಯೋಜಿಸುವಾಗ ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಷಯಗಳು ಯಾವುವು ಎಂದು ತಿಳಿದುಕೊಳ್ಳಿ.
ಬೈಕ್ ಸರ್ವಿಸ್ ಮಾಡಿಸಿ
ಪ್ರವಾಸಕ್ಕೆ ಹೋಗುವಾಗ ಅತ್ಯಂತ ಮುಖ್ಯವಾದ ವಿಷಯವೆಂದರೆ ಬೈಕ್. ಅದರಲ್ಲಿ ಸ್ವಲ್ಪ ಸಮಸ್ಯೆ ಇದ್ದರೂ ಪ್ರಯಾಣ ಹಾಳಾಗಬಹುದು. ಆದ್ದರಿಂದ ಹೋಗುವ ಮೊದಲು, ನಿಮ್ಮ ಬೈಕ್ ಅನ್ನು ಸರ್ವಿಸ್ ಮಾಡಿಸಿ ಮತ್ತು ನಂತರ, ಅದನ್ನು ಚಾಲನೆ ಮಾಡುವ ಮೂಲಕ, ಬ್ರೇಕ್‌ನಿಂದ ಕ್ಲಚ್‌ವರೆಗೆ ಎಲ್ಲವೂ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಂಡಿತವಾಗಿ ಪರಿಶೀಲಿಸಿ. ಲಾಂಗ್ ಡ್ರೈವ್‌ಗೆ ಅಧಿಕ ಸಿಸಿ ಬೈಕ್‌ಗೆ ಆದ್ಯತೆ ನೀಡಿ. ನೀವು ಯಾವುದೇ ಬೈಕ್ ಆರಿಸಿಕೊಂಡರೂ ಅದರಲ್ಲಿ ನೀವು ಕಂಫರ್ಟ್ ಆಗಿದ್ದೀರಾ, ಆರಾಮಾಗಿ ಲಾಂಗ್ ರೈಡ್ ಮಾಡಬಹುದಾ ಅನ್ನೋದನ್ನು ಮೊದಲು ಮನವರಿಕೆ ಮಾಡಿಕೊಳ್ಳಿ. ಬೈಕನ್ನು ಮೊದಲೇ ಸರ್ವಿಸ್ ಮಾಡಿಸಿ, ಸವಾರರು ಮಾಡುವ ಕೆಲವು ಸಾಮಾನ್ಯ ಬದಲಾವಣೆಗಳೆಂದರೆ ವಿಭಿನ್ನ ಹ್ಯಾಂಡಲ್ ಬಾರ್, ಹೆಚ್ಚು ಆರಾಮದಾಯಕವಾದ ಆಸನ, ಗಾರ್ಡ್‌ಗಳು, ಉತ್ತಮ ಹೆಡ್ ಲೈಟ್. ಬೈಕ್‌ನಲ್ಲಿ ಕೂಲ್ ಆಗಿ ಕಾಣಿಸಿದ್ರೆ ಸಾಲದು, ಅದು ನಮ್ಮ ದೇಹಕ್ಕೂ ಆರಾಮದಾಯಕವಾಗಿರಬೇಕು. ಇದಲ್ಲದೆ, ಬೈಕ್‌ನ ಟ್ರಂಕ್ ಅಥವಾ ಬ್ಯಾಗ್‌ನಲ್ಲಿ ಸಣ್ಣ ಪಂಕ್ಚರ್ ಟೂಲ್ ಕಿಟ್ ಅನ್ನು ಇಟ್ಟುಕೊಳ್ಳಿ.
ದಾಖಲೆಗಳನ್ನು ನೋಡಿಕೊಳ್ಳಿ
ಬೈಕ್ ಪ್ರಯಾಣದಲ್ಲಿ ನಿಮ್ಮ ದಾಖಲೆಗಳನ್ನು ಪೂರ್ಣವಾಗಿ ಇಟ್ಟುಕೊಳ್ಳುವುದು ಅತ್ಯಂತ ಮುಖ್ಯ. ಡ್ರೈವಿಂಗ್ ಲೈಸೆನ್ಸ್, ಇನ್ಶೂರೆನ್ಸ್ , ಮಾಲಿನ್ಯ ಪ್ರಮಾಣಪತ್ರ ಮತ್ತು ಬೈಕ್ RC ಕಾರ್ಡ್ ಹಾಗೂ ನಿಮ್ಮ ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿಯಂಥ ದಾಖಲೆಗಳನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ.
ಪ್ರಿ-ಪ್ಲಾನ್ ಮಾಡಿ
ನೀವು ಮೋಟಾರ್ ಸೈಕಲ್‌ನಲ್ಲಿ ಪ್ರವಾಸಕ್ಕೆ ಹೋಗುತ್ತಿದ್ದರೆ, ಪೆಟ್ರೋಲ್ ಪಂಪ್‌ಗಳು ಎಲ್ಲಿವೆ ಎಂಬುದನ್ನು ಮುಂಚಿತವಾಗಿ ತಿಳಿದುಕೊಳ್ಳಿ. ಇದಲ್ಲದೆ, ಮೆಡಿಕಲ್ ಅಂಗಡಿಗಳು, ಆಸ್ಪತ್ರೆ, ಪೊಲೀಸ್ ಠಾಣೆ, ಹೊಟೇಲ್‌ಗಳು ಇತ್ಯಾದಿಗಳ ಬಗ್ಗೆಯೂ ಮುಂಚಿತವಾಗಿ ಮಾಹಿತಿಯನ್ನು ಪಡೆಯಿರಿ. ಇದರಿಂದ ಅಗತ್ಯವಿದ್ದಾಗ ನೀವು ಚಿಂತಿಸಬೇಕಾಗಿಲ್ಲ.
ರೋಡ್ ಮ್ಯಾಪ್ ಇಟ್ಟುಕೊಳ್ಳಿ
ಎಲ್ಲರಿಗೂ ಎಲ್ಲಾ ರಸ್ತೆ ಗೊತ್ತಿರುವುದಿಲ್ಲ. ಪ್ರತಿಯೊಬ್ಬರೂ ಗೂಗಲ್ ಮ್ಯಾಪ್ ಇಟ್ಟುಕೊಂಡು ಅದರಂತೆ ರಸ್ತೆಯಲ್ಲಿ ಸಾಗುತ್ತಾ ಹೋಗುತ್ತಾರೆ. ಅದಕ್ಕಾಗಿ ನೀವು ಯಾವ ದಿಕ್ಕಿನಲ್ಲಿ ಸಾಗುತ್ತಿದ್ದೀರಿ ಮತ್ತು ನೀವು ಯಾವ ಮಾರ್ಗವನ್ನು ತೆಗೆದುಕೊಳ್ಳುತ್ತಿದ್ದೀರಿ ಎಂಬುದರ ಬಗ್ಗೆ ಸರಿಯಾಗಿ ತಿಳಿದುಕೊಂಡರೆ ನಿಮ್ಮ ಸಮಯ ವ್ಯರ್ಥವಾಗುವುದನ್ನು ತಪ್ಪಿಸಿಕೊಳ್ಳ ಬಹುದು. ನಿಮ್ಮ ಮೊಬೈಲ್‌ನಲ್ಲಿ ಮ್ಯಾಪ್ ಅನ್ನು ಆಫ್ ಲೈನ್‌ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ, ಇಲ್ಲವಾದರೆ ನಕ್ಷೆಯ ಒಂದು ಕಾಪಿಯನ್ನು ಮುದ್ರಿಸಿಟ್ಟುಕೊಳ್ಳಿ. ದಾರಿಯಲ್ಲಿ ಸಿಗುವ ಸ್ಥಳೀಯರಲ್ಲಿ ದಾರಿ ಕೇಳಿ. ಇದರಿಂದ ನೀವು ದಾರಿಗೊತ್ತಾಗದೇ ಕಷ್ಟ ಪಡುವುದು ತಪ್ಪುತ್ತದೆ.

ಆರಾಮದಾಯಕ ಉಡುಪುಗಳ ಆಯ್ಕೆ
ದೂರದ ಪ್ರಯಾಣಕ್ಕಾಗಿ ಯಾವಾಗಲೂ ರೈಡಿಂಗ್ ಪ್ಯಾಂಟ್, ಉತ್ತಮ ಹಿಡಿತವಿರುವ ಬೂಟುಗಳು ಆಯ್ಕೆ ಮಾಡಿಕೊಳ್ಳಿ. ರೈಡಿಂಗ್ ಜಾಕೆಟ್ ಮತ್ತು ಸಹಜವಾಗಿ ಪೂರ್ಣ ಮುಖದ ಹೆಲ್ಮೆಟ್ ಧರಿಸಿ. ಅಥವಾ ಮೊಣಕಾಲು ಮತ್ತು ಮೊಣಕೈ ಗಾರ್ಡ್ ಆಯ್ಕೆ ಮಾಡಿಕೊಳ್ಳಿ. ಮೋಟಾರ್ ಸೈಕ್ಲಿಂಗ್ ಗೇರ್ ಅನ್ನು ಆನ್‌ಲೈನ್ ಅಥವಾ ಅಂಗಡಿಗಳಲ್ಲಿ ಸುಲಭವಾಗಿ ಖರೀದಿಸಬಹುದು. ಸಾಧ್ಯವಾದಷ್ಟು ನಿಮ್ಮ ಗಾತ್ರಕ್ಕೆ ಸರಿಯಾದದ್ದನ್ನೇ ಆಯ್ಕೆ ಮಾಡಿಕೊಳ್ಳಿ. ಬಹಳ ಲೂಸ್ ಆಗಿರುವ, ಅಥವಾ ನಿಮ್ಮ ಸೈಜ್ ಅಲ್ಲದ ಗೇರ್ ಅಥವಾ ಬಟ್ಟೆ ಬೈಕ್ ರೈಡಿಂಗ್ ಸಮಯದಲ್ಲಿ ನಿಮಗೆ ತೊಂದರೆ ನೀಡಬಹುದು. ನೀವು ಕಂಫರ್ಟ್ ಆಗಿರದೆ ಇರಬಹುದು. ಹಾಗಾಗಿ ಸರಿಯಾದ ಬಟ್ಟೆಯನ್ನೇ ಧರಿಸಿ.
ವಿಶ್ರಾಂತಿ ಪಡೆದುಕೊಳ್ಳಿ
ಹೆಚ್ಚು ಸವಾರಿ ಮಾಡಿ ನಿಮ್ಮ ಬೈಕ್‌ಗೂ ದೇಹಕ್ಕೂ ವಿಶ್ರಾಂತಿ ಬೇಕಿರುತ್ತದೆ. ಬೈಕ್‌ನಲ್ಲಿ ಕೂತು ಸೊಂಟ ನೋವಾಗುವುದು ಸಾಮಾನ್ಯ. ನೀವು ಗಂಟೆಗಟ್ಟಲೆ ಬೈಕ್ ಚಲಾಯಿಸುತ್ತಿದ್ದೀರೆಂದಾದರೆ ದಾರಿ ಮಧ್ಯೆ ಸ್ವಲ್ಪ ವಿಶ್ರಾಂತಿ ಪಡೆದುಕೊಳ್ಳಿ. ಹೊಟೇಲ್ ಕಾಣಿಸಿದರೆ ಚಹಾ, ತಿಂಡಿ ಸೇವಿಸಿ, ಶೌಚಾಲಯಕ್ಕೆ ಹೋಗಿ. ನೀವು ವಿಶ್ರಾಂತಿ ಪಡೆದುಕೊಳ್ಳುವಾಗ ನಿಮಗೆ ಬೇಕಾದಷ್ಟು ನೀರು ಇದೆಯೇ, ಬೈಕ್‌ನಲ್ಲಿ ಬೇಕಾಗುವಷ್ಟು ಪೆಟ್ರೋಲ್ ಇದೆಯೇ ಅನ್ನೋದನ್ನು ತಿಳಿಯಿರಿ. ಈ ಮೂಲಕ ನೀವು ನಿಮ್ಮ ಮುಂದಿನ ವಿಶ್ರಾಂತಿಯ ತಾಣವನ್ನು ನಿರ್ಧರಿಸಬಹುದು.
ಔಷಧಿಗಳನ್ನು ಜತೆಗಿಟ್ಟುಕೊಳ್ಳಿ
ಬೈಕ್‌ನಲ್ಲಿ ಎಲ್ಲಿಗೆ ಬೇಕಾದರೂ ಪ್ರವಾಸ ಯೋಜಿಸುವುದು ಕೇವಲ ಮೋಜಿನ ಸಮಯವಲ್ಲ, ಜವಾಬ್ದಾರಿಯುತ ಕೆಲಸವೂ ಆಗಿದೆ. ಆದ್ದರಿಂದ ಎಲ್ಲವನ್ನೂ ಸರಿಯಾಗಿ ಯೋಜಿಸಬೇಕಾಗುತ್ತದೆ. ಎಲ್ಲಾ ಸುರಕ್ಷತಾ ವಸ್ತುಗಳನ್ನು ನಿಮ್ಮೊಂದಿಗೆ ಇಟ್ಟುಕೊಳ್ಳುವುದರ ಜತೆಗೆ, ವಾಂತಿ, ಜ್ವರ, ಅತಿಸಾರ, ORS ಮುಂತಾದ ಸಣ್ಣ ಸಮಸ್ಯೆಗಳಿಂದ ಪರಿಹಾರ ಪಡೆಯಲು ನೋವು ನಿವಾರಕಗಳು, ಮಾತ್ರೆಗಳಂಥ ಕೆಲವು ಮೂಲಭೂತ ಔಷಧಿಗಳನ್ನು ಸಹ ನಿಮ್ಮೊಂದಿಗೆ ಇಟ್ಟುಕೊಳ್ಳಬೇಕು.
ಮಾನಸಿಕ, ದೈಹಿಕವಾಗಿ ಸಿದ್ಧರಾಗಿರಿ
ಬೈಕ್ ರೈಡ್ ಮಾಡುತ್ತಾ ದೂರದ ಊರಿಗೆ ಹೋಗುವುದು, ಪಿಕ್‌ನಿಕ್‌ಗೆ ಹೋಗುವುದು ಅಷ್ಟೊಂದು ಸುಲಭದ ಕೆಲಸವೇನಲ್ಲ. ಲಾಂಗ್ ಬೈಕ್ ಡ್ರೈವ್ ಹೋಗಬೇಕಾದರೆ ಅದಕ್ಕೆ ಮುಂಚಿತವಾಗಿಯೇ ಮಾನಸಿಕವಾಗಿ ಹಾಗೂ ದೈಹಿಕವಾಗಿ ತಯಾರಾಗಿರಬೇಕು. ಸುದೀರ್ಘ ಮೋಟಾರ್ ಸೈಕಲ್ ಪ್ರಯಾಣಗಳಲ್ಲಿ ನೀವು ಯಾವುದೇ ಸಮಯದಲ್ಲಿ ಯಾವುದೇ ರೀತಿಯ ಹವಾಮಾನವನ್ನು ಎದುರಿಸಲು ಸಿದ್ಧರಾಗಿರಬೇಕು. ಬೈಕ್ ನಲ್ಲಿ ದೂರ ಸವಾರಿ ಹೋಗುವಾಗ ಬ್ಯಾಗ್ ಪ್ಯಾಕ್ ನಲ್ಲಿ ನಿಮಗೆ ಅಗತ್ಯವಿರುವ ವಸ್ತುಗಳನ್ನಷ್ಟೇ ಇಟ್ಟುಕೊಳ್ಳಿ. ಅನಾವಶ್ಯಕ ವಸ್ತುಗಳನ್ನು ಇಟ್ಟರೆ ಅದು ನಿಮಗೆ ಹೊರೆ ಎನಿಸಬಹುದು.
ನೀವು ನಿಮ್ಮ ಸ್ನೇಹಿತರೊಂದಿಗೆ ಬೈಕ್‌ನಲ್ಲಿ ಲಾಂಗ್ ರೈಡ್ ಹೋಗಬೇಕೆಂದಿದ್ದರೆ ಈ ಕೆಲವು ಟಿಪ್ಸ್ ಗಳನ್ನು ನೆನಪಿನಲ್ಲಿಡಿ. ಇಲ್ಲವಾದಲ್ಲಿ ನಿಮ್ಮ ಜಾಲಿ ರೈಡ್ ಹೋಗಿ ಇನ್ಯಾವತ್ತೂ ಬೈಕ್‌ನಲ್ಲಿ ಲಾಂಗ್ ರೈಡ್ ಬೇಡ ಅನಿಸಬಹುದು.