ಕುಂದಕುಂದರು ತಪಸ್ಸಿಗೆ ಕೂತಿದ್ದ ಚಂದಚಂದದ ಕುಂದಾದ್ರಿ ಬೆಟ್ಟ
ಸುತ್ತ ಹಸಿರು ದಟ್ಟ ಕಾನನದ ನಡುವೆ ಕಿರುದಾರಿಯಲಿ ನಡೆದು ಹೋದರೆ ಸಿಗುವುದೇ ಕಣ್ಣಿಗೆ ಮನಸ್ಸಿಗೆ ಮುದನೀಡುವ ಗಿರಿಶಿಖರ ಕುಂದಾದ್ರಿ ಬೆಟ್ಟ. ಇದು ಜೈನರ ಪವಿತ್ರ ಸ್ಥಳವಾಗಿದೆ. ಸುಮಾರು 4ನೇ ಶತಮಾನದ ಪ್ರಮುಖ ಜೈನ ಸನ್ಯಾಸಿ ಆಚಾರ್ಯ ಕುಂದಕುಂದ ಅವರು ಈ ಬೆಟ್ಟದಲ್ಲಿ ತಪಸ್ಸು ಮಾಡಿದ್ದರು. ಹಾಗಾಗಿ ಈ ಬೆಟ್ಟಕ್ಕೆ ಕುಂದಾದ್ರಿ ಎಂಬ ಹೆಸರು ಬಂದಿದೆ ಎಂಬ ಪ್ರತೀತಿ ಇದೆ.
- ಚೇತನ ಭಾರ್ಗವ
ಕುಂದಾದ್ರಿ ಬೆಟ್ಟ ನನ್ನ ತವರೂರಾದ ತೀರ್ಥಹಳ್ಳಿ ತಾಲ್ಲೂಕಿನ ಕಮ್ಮರಡಿ ಊರಿನಿಂದ ಕೇವಲ 12 ಕಿ ಮೀ. ದೂರದಲ್ಲಿದೆ. ನಾನು ನಮ್ಮ ಪರಿವಾರದವರೆಲ್ಲಾ ಸೇರಿ ಆ ಬೆಟ್ಟಕ್ಕೆ ಬಹಳ ಸಾರಿ ಹೋಗಿದ್ದೇವೆ. ಮಳೆಗಾಲದ ಶುರುವಿನಲ್ಲಿ ಹೋದರೆ ಸ್ವರ್ಗವೇ ಭುವಿಗಿಳಿದು ಬಂದ ಹಾಗೆ ಅನಿಸುತ್ತದೆ. ಆ ಪ್ರಕೃತಿ ಸೌಂದರ್ಯವನ್ನು ನೋಡಲು ಎರಡು ಕಣ್ಣು ಸಾಲದು. ಅದು ಸಮುದ್ರ ಮಟ್ಟದಿಂದ ಸುಮಾರು 3200 ಅಡಿಗಳಷ್ಟು ಎತ್ತರವಿದೆ. ಹಾಗಾಗಿ ಮಲೆನಾಡಿನ ಸಣ್ಣ ಪುಟ್ಟ ಹಳ್ಳಿಗಳ ಸೌಂದರ್ಯ ಹಾಗೂ ಎತ್ತ ನೋಡಿದರತ್ತ ಕಣ್ಣು ಹಾಯಿಸಿದಷ್ಟೂ ಕಾಣುವ ಹಸಿರು ಮನಸ್ಸನ್ನು ಸೂರೆಗೊಳ್ಳುತ್ತದೆ.
ಸುತ್ತ ಹಸಿರು ದಟ್ಟ ಕಾನನದ ನಡುವೆ ಕಿರುದಾರಿಯಲಿ ನಡೆದು ಹೋದರೆ ಸಿಗುವುದೇ ಕಣ್ಣಿಗೆ ಮನಸ್ಸಿಗೆ ಮುದನೀಡುವ ಗಿರಿಶಿಖರ ಕುಂದಾದ್ರಿ ಬೆಟ್ಟ. ಇದು ಜೈನರ ಪವಿತ್ರ ಸ್ಥಳವಾಗಿದೆ. ಸುಮಾರು 4ನೇ ಶತಮಾನದ ಪ್ರಮುಖ ಜೈನ ಸನ್ಯಾಸಿ ಆಚಾರ್ಯ ಕುಂದಕುಂದ ಅವರು ಈ ಬೆಟ್ಟದಲ್ಲಿ ತಪಸ್ಸು ಮಾಡಿದ್ದರು. ಹಾಗಾಗಿ ಈ ಬೆಟ್ಟಕ್ಕೆ ಕುಂದಾದ್ರಿ ಎಂಬ ಹೆಸರು ಬಂದಿದೆ ಎಂಬ ಪ್ರತೀತಿ ಇದೆ.
ಈ ಬೆಟ್ಟದ ಮೇಲೆ ಪುರಾತನ ಪಾಶ್ವನಾಥ ಸ್ವಾಮಿಯ ಬಸದಿ ಇದೆ. ಇದು ಸುಮಾರು ಮೂರು ಸಾವಿರ ವರುಷಗಳಷ್ಟು ಇತಿಹಾಸವಿರುವ ಜೈನ ಮಂದಿರವಾಗಿದೆ. ಸೂರ್ಯೋದಯದ ಸಮಯದಲ್ಲಿ ಸೂರ್ಯನ ಮೊದಲ ಕಿರಣ ನೇರವಾಗಿ ಬೀಳುವುದು ಶ್ರೀ ಪಾರ್ಶ್ವನಾಥ ವಿಗ್ರಹದ ಪಾದದ ಮೇಲೆ. ಇದು ಇಲ್ಲಿಯ ವಿಶೇಷಗಳಲ್ಲೊಂದು ಎಂದು ಅಲ್ಲಿ ಪೂಜೆ ಮಾಡುವ ಅರ್ಚಕರು ತಿಳಿಸುತ್ತಾರೆ. ಈ ಮಂದಿರದ ಎಡ ಹಾಗೂ ಬಾಲ ಭಾಗದಲ್ಲಿ ವರ್ಷವಿಡೀ ನೀರು ಇರುವ ಎರಡು ಪುಟ್ಟ ಸರೋವರವಿದೆ.
ಪ್ರಕೃತಿಯ ಮಡಿಲಿನಲ್ಲಿ ಕಳೆಯಬೇಕು ಎಂಬ ಆಸೆಯಿಂದ ಊರಿಗೆ ಹೋದಾಗ ಸಮಯ ಮಾಡಿಕೊಂಡು ಪರಿವಾರದ ಜೊತೆ ಆ ಬೆಟ್ಟಕ್ಕೆ ಹೋಗಿ ಬರಬಹುದು. ಇಲ್ಲಿಯ ಪ್ರಕೃತಿಯ ಸೊಬಗು ಎಲ್ಲರನ್ನೂ ಕಳೆದು ಹೋಗುವಂತೆ ಮಾಡುತ್ತದೆ. ಸೂರ್ಯಾಸ್ತ ಮತ್ತು ಸೂರ್ಯೋದಯದ ದೃಶ್ಯ ರಮಣೀಯವಾಗಿ ಕಾಣಿಸುತ್ತದೆ. ಇದು ಪ್ರಕೃತಿ ಪ್ರಿಯರಿಗೆ ಬಲು ಇಷ್ಟವಾಗುವ ತಾಣ.
ಎಲ್ಲೂ ಸದ್ದು ಗದ್ದಲ ಇರುವುದಿಲ್ಲ. ಪ್ರಶಾಂತವಾದ ಸ್ಥಳ. ಸುತ್ತಲಿನ ಹಚ್ಚ ಹಸಿರು ಕಣ್ಣನ್ನು ತಂಪಾಗಿಸಿದರೆ ಹಕ್ಕಿಗಳ ಚಿಲಿಪಿಲಿಯಿಂದ ಕರ್ಣಾನಂದವಾಗುತ್ತದೆ. ಆಕಾಶಕ್ಕೆ ಮುತ್ತಿಕ್ಕುವ ಹಸಿರು ಬೆಟ್ಟಗಳ ಸಾಲು, ಬೆಟ್ಟಗಳನ್ನೇ ಆಲಿಂಗಿಸುವ ಮಂಜು ಮನಸ್ಸಿಗೆ ಮುದ ನೀಡುತ್ತದೆ. ಒಮ್ಮೊಮ್ಮೆ ದಟ್ಟವಾಗಿ ಆವರಿಸಿದ ಮಂಜು ಸಮುದ್ರದ ಅಲೆಯಂತೆ ಭಾಸವಾಗುತ್ತದೆ. ಗಾಳಿಯ ಶಬ್ದ ಲಯ ಬದ್ಧವಾಗಿ ಸಂಗೀತ ನುಡಿಸಿದಂತೆ ಅನುಭವಕ್ಕೆ ಬರುತ್ತದೆ. ಇಲ್ಲಿ ಮಂಗಗಳ ಹಿಂಡು ಸಾಕಷ್ಟಿವೆ. ಮಕ್ಕಳಿಗೆ ಇಲ್ಲಿ ಅದು ಖುಷಿ ಕೊಡುತ್ತದೆ. ಮಂಗಗಳಿಗೆ ಬಾಳೆಹಣ್ಣನ್ನು ಕೊಡುತ್ತಾ ಅವುಗಳ ಜೊತೆ ನಾವು ಕಪಿಚೇಷ್ಟೆ ಮಾಡುತ್ತಾ ಪ್ರಕೃತಿಯ ಸೌಂದರ್ಯದಲ್ಲಿ ನಮ್ಮ ಬದುಕಿನ ಜಂಜಾಟವನ್ನು ಮರೆಯುತ್ತಾ ಹಾಯಾಗಿ ಅರ್ಧದಿನವನ್ನು ಅಲ್ಲಿ ಕಳೆದು ಸೂರ್ಯಾಸ್ತದ ನಂತರ ಮನೆಗೆ ಹಿಂದಿರುಗಬಹುದು. ಮಲೆನಾಡ ಸೊಬಗನ್ನು ಆಸ್ವಾದಿಸುವವರಿಗೆ ಹೇಳಿ ಮಾಡಿಸಿದ ಸ್ಥಳ ಇದು. ಮಳೆ ಇಲ್ಲದ ದಿನಗಳಲ್ಲಿ ಈ ಕುಂದಾದ್ರಿ ಚಾರಣ ಸಲೀಸು.
ದಾರಿ ಹೇಗೆ?
ತೀರ್ಥಹಳ್ಳಿಯಿಂದ ಆಗುಂಬೆಗೆ ಹೋಗುವ ಮಾರ್ಗದಲ್ಲಿ ಗುಡ್ಡೆಕೇರಿ ಎಂಬ ಗ್ರಾಮ ಸಿಗುತ್ತದೆ. ಅಲ್ಲಿಂದ ಎಡಕ್ಕೆ ತಿರುವು ಪಡೆದು 8 ಕಿಲೋಮೀಟರ್ ಚಲಿಸಿದರೆ ಈ ಸುಂದರ ಕುಂದಾದ್ರಿ ಬೆಟ್ಟ ಸಿಗುತ್ತದೆ.
ಕೊಪ್ಪ ಚಿಕ್ಕಮಗಳೂರು ಕಡೆಯಿಂದ ಬರುವವರು ಆಗುಂಬೆ ಮಾರ್ಗವಾಗಿ ಹೊಸಗದ್ದೆಯಲ್ಲಿ ಬಲಕ್ಕೆ ತಿರುವು ತೆಗೆದುಕೊಂಡು 7 km ಸಂಚರಿಸಿದರೆ ಕಣ್ಣಿಗೆ ಮುದ ನೀಡುವ ಗಿರಿ ಶಿಖರದ ಗಮ್ಯ ತಲುಪಬಹುದು