Saturday, July 26, 2025
Saturday, July 26, 2025

ಅಕ್ಲಿಮಟೈಸೇಷನ್ ಅಂದ್ರೇನು ಗೊತ್ತಾ?

ಎಲ್ಲಕ್ಕಿಂತ ಘೋರವಾದದ್ದು ತೀವ್ರ ಪರ್ವತ ಕಾಯಿಲೆ. ಇದು ನಮಗೆ ನಾವೇ ತಂದುಕೊಳ್ಳಬಹುದಾದ ಅತ್ಯಂತ ಸುಲಭವಾದ ಸಾವು. ಈ ತೀವ್ರ ಪರ್ವತ ವ್ಯಾಧಿಗೆ ಕಾರಣ ಸರಿಯಾಗಿ ಕಾರಣ ಅಲ್ಲಿನ ವಾತಾವರಣಕ್ಕೆ ದೇಹವನ್ನು ಒಗ್ಗಿಸದೇ ಇರುವುದು.

  • ಹಿಮಪಯಣಿಗ

ಆಗಿದ್ದು ಇಷ್ಟೇ. ಚಾರಣದ ದಿನ ಎಂದಿನಂತೆ ಎತ್ತರವಾದ ಹಿಮಾಲಯದ ಸೊಬಗನ್ನು ಕಣ್ಣುತುಂಬಿಕೊಂಡು ಹೊರಟಿದ್ದೆವು. ಅವನೂ ನನ್ನಂತೆಯೇ ಹೊರಟ, ಆದರೆ ಎಲ್ಲರಿಗಿಂತಲೂ ಬೇಗ ತಲಪುತ್ತೇನೆಂಬ ಹುಂಬ ಧೈರ್ಯ ಹಾಗೂ ಟ್ರೆಕ್ಕಿಂಗ್‌ನ ಗೈಡ್‌ಗಳ ಕಣ್ಣಿಗೆ ಕಾಣದಂತೆ ಬಚ್ಚಿಟ್ಟು ತಂದಿದ್ದ ಮದಿರೆಯನ್ನು ಟೆಂಟ್‌ ಒಳಗೆ ಸವಿಯುವ ಆತುರ. ಸಂಜೆ ನಾವು ಟೆಂಟ್‌ ತಲುಪುವಷ್ಟರಲ್ಲಿ ಆಗಲೇ ಟೆಂಟ್‌ ಒಳಗೆ ನಿದ್ದೆ ಮಾಡಿದ್ದ. ನಿದ್ದೆ ಮಾಡಿದ್ದ ಎಂದೇ ನಾವು ತಿಳಿದಿದ್ದೆವು. ಆದರೆ ಸರಿರಾತ್ರಿ ಅವನ ಶವವನ್ನು ಹೊತ್ತು ಗೈಡ್‌ಗಳು ಆ ಹಿಮದ ಮಧ್ಯೆ ಇಳಿಯಬೇಕಾಯಿತು. 37 ತುಂಬಿರದ ಆ ಮುಂಬೈ ಹುಡುಗನ ಮಂದಸ್ಮಿತ ಮುಖ ನನ್ನ ಮನದಲ್ಲಿ ಎಂದೆಂದಿಗೂ ʼಅಮರʼ.

trukking new

ಇಲ್ಲಿ ಆತ ಮಾಡಿದ್ದ ಮೂರು ಮೂರ್ಖ ತಪ್ಪುಗಳನ್ನು ಹೇಳಿಬಿಡ್ತೀನಿ. ಮೊದಲನೆಯದಾಗಿ ಗಡಿಬಿಡಿಯಲ್ಲಿ ಹತ್ತಿದ್ದು. ಎರಡನೆಯದು ಮದಿರೆಯ ಸೇವನೆ. ಮೂರನೆಯದು ಕ್ಯಾಂಪ್ ಗೆ ಹೋದ ತಕ್ಷಣ ಟೆಂಟ್‌ ಒಳಗೆ ನಿದ್ದೆ ಮಾಡಿದ್ದು. ಈ ಮೂರೂ ಸೇರಿಯೋ ಅಥವಾ ಯಾವುದೇ ಒಂದು ಕಾರಣವಾದರೂ ಸಾಕಾಗಿತ್ತು ಜೀವ ಹೋಗಲು. ಇವುಗಳನ್ನು ಮಾಡಬೇಡಿ ಎಂದು ಎಲ್ಲಾ ಚಾರಣ ಸಂಸ್ಥೆಯ ಗೈಡ್‌ಗಳು ಹೇಳುತ್ತಲೇ ಇರುತ್ತಾರೆ. ಸ್ಥಳೀಯ ಗೈಡ್‌ಗಳು ಹೇಳಿದ್ದನ್ನು ಕೇಳದೆ ತಮ್ಮದೇ ಬುದ್ಧಿವಂತಿಕೆ ಬಳಸಿದರೆ ಜೀವಕ್ಕೇ ಅಪಾಯ. ಹಿಮಾಲಯದ ಟ್ರೆಕ್ಕಿಂಗ್ ಅಂದ್ರೆ ಅದೊಂದು ಉತ್ಕಟ ಪ್ರೇಮಧ್ಯಾನ. ಉಡಾಫೆ ಮಾಡೋರಿಗೆ ಖಂಡಿತ ಅಲ್ಲ.

ಕಣ್ಣೆದುರು ಸಾವನ್ನು ಕಾಣುವುದು ಭೀಕರ. ಅದರಲ್ಲೂ ಹಿಮಾಲಯದ ಚಾರಣದಲ್ಲಿ ಇಷ್ಟು ದಿನಗಳು ನಮ್ಮೊಂದಿಗಿದ್ದವರು ಇದ್ದಕ್ಕಿದ್ದಂತೆ ಕಣ್ಮರೆಯಾಗುವುದಂತೂ ದುಸ್ವಪ್ನ. ಇದ್ದಕ್ಕಿದ್ದಂತೆ ಹೀಗೆ ಸಾವಿನಿಂದಲೇ ಹೇಳಲು ಪ್ರಾರಂಭಿಸಿದ್ದಕ್ಕೆ ಕಾರಣ ಇದೆ. ಸಾವಿನಂಥ ಘಟನೆ ಚಾರಣದ ಸಮಯದಲ್ಲಿ ಕಣ್ಣೆದುರು ಆಗಬಹುದು. ಅಂಥ ಕೆಲವು ಸಾವುಗಳನ್ನು ಕಂಡಿದ್ದೇನೆ. ಈ ಸಾವಿಗೆ ಕಾರಣಗಳು ಅನೇಕ. ಕಂದಕದಲ್ಲಿ ಬೀಳುವುದು, ಬೇರೆ ಪ್ರಾಣಿಗಳಿಂದ ಘಾಸಿಗೊಳ್ಳುವುದು, ವಾತಾವರಣದ ಬದಲಾವಣೆಗಳು ಇಂಥದ್ದು ಮನುಷ್ಯನ ಕೈಮೀರಿ ಅಪರೂಪಕ್ಕೆ ಆಗುತ್ತಲೇ ಇರುತ್ತವೆ. ಆದರೆ ಇವೆಲ್ಲಕ್ಕಿಂತ ಘೋರವಾದದ್ದು ತೀವ್ರ ಪರ್ವತ ಕಾಯಿಲೆ (Acute Mountain Sickness - AMS). ಇದು ನಮಗೆ ನಾವೇ ತಂದುಕೊಳ್ಳಬಹುದಾದ ಅತ್ಯಂತ ಸುಲಭವಾದ ಸಾವು. ಈ ತೀವ್ರ ಪರ್ವತ ವ್ಯಾಧಿಗೆ ಕಾರಣ ಸರಿಯಾಗಿ acclimatize (ವಾತಾವರಣಕ್ಕೆ ಒಗ್ಗಿಕೊಳ್ಳುವುದು) ಆಗದಿರುವುದು.

himalaya trukking (1)

ಈ ತೀವ್ರ ಪರ್ವತ ಕಾಯಿಲೆ (AMS)ಗೆ ಕಾರಣ ಒಂದೇ, ಅದು ಎತ್ತರದ ಪರ್ವತಗಳಿಗೆ ಹೋದಾಗ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳದಿರುವುದು (acclimatize). ಎತ್ತರದ ಪರ್ವತ ಪರಿಸರ ಅಥವಾ ಹವಾಮಾನಕ್ಕೆ ಹೊಂದಿಕೊಳ್ಳುವ ಪ್ರಕ್ರಿಯೆಯೇ ಈ ಅಕ್ಲಿಮಟೈಸೇಷನ್. ವಿಶೇಷವಾಗಿ ನಾವು (ಪರ್ವತ ಪ್ರದೇಶದಲ್ಲಿ ಇಲ್ಲದವರು) ಒಗ್ಗಿಕೊಂಡಿರುವ ಪರಿಸರಕ್ಕಿಂತ ಭಿನ್ನವಾಗಿರುವ ವಾತಾವರಣ. ಇದು ಅಲ್ಲಿನ ತಾಪಮಾನ, ಎತ್ತರ, ಆಮ್ಲಜನಕದ ಕೊರತೆ, ಆರ್ದ್ರತೆ ಅಥವಾ ಇತರ ಪರಿಸರ ಅಂಶಗಳಲ್ಲಿನ ಬದಲಾವಣೆಗಳನ್ನು ಒಳಗೊಂಡಿರುತ್ತದೆ.

ಉದಾಹರಣೆಗೆ, ನಾವು ಕಡಿಮೆ ಎತ್ತರದ ಪ್ರದೇಶದಿಂದ ಹೆಚ್ಚಿನ ಎತ್ತರದ ಪ್ರದೇಶಕ್ಕೆ ಚಾರಣಿಸುತ್ತಿದ್ದರೆ, ನಮ್ಮ ದೇಹವು ಕಡಿಮೆ ಆಮ್ಲಜನಕದ ಮಟ್ಟಕ್ಕೆ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ. ಇದಕ್ಕೆ acclimatize ಎನ್ನುತ್ತಾರೆ. ಹೀಗೆ ಹೊಸ ವಾತಾವರಣಕ್ಕೆ ಒಗ್ಗಿಕೊಳ್ಳಲು ನಮ್ಮ ದೇಹವು ಹೊಸ ಪರಿಸರಕ್ಕೆ ಹೊಂದಿಕೊಳ್ಳುವಂತೆ ಸಹಾಯ ಮಾಡಲು ಕೆಂಪು ರಕ್ತ ಕಣಗಳ ಉತ್ಪಾದನೆಯಂಥ ಶಾರೀರಿಕ ಬದಲಾವಣೆಗಳನ್ನು ಮಾಡುತ್ತದೆ. ಎತ್ತರದ ಚಾರಣ ಅಥವಾ ತೀವ್ರ ಹವಾಮಾನಕ್ಕೆ ಪ್ರಯಾಣಿಸುವಂಥ ಚಟುವಟಿಕೆಗಳಲ್ಲಿ ತೊಡಗುವಾಗ ನಮಗೆ ಒಗ್ಗಿಕೊಳ್ಳುವಿಕೆ (acclimatize) ಮುಖ್ಯವಾಗಿ ಬೇಕಾಗಿರುತ್ತದೆ. ಇದು ವಿವಿಧ ಆರೋಗ್ಯ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ ಮತ್ತು ಹೊಸ ಪರಿಸರಕ್ಕೆ ಸುರಕ್ಷಿತವಾದ ನಮ್ಮ ದೇಹವನ್ನು ಪರಿವರ್ತನೆಯನ್ನು ಮಾಡುತ್ತದೆ.

ಹೀಗೆ ಒಗ್ಗಿಕೊಳ್ಳದಿದ್ದರೆ ತೀವ್ರ ಪರ್ವತ ವ್ಯಾಧಿ (AMS) ಆಗುವ ಸಂಭವ ಹೆಚ್ಚು. ಇದಕ್ಕೆ ಕಾರಣ ಪರ್ವತದ ಎತ್ತರದ ವಾತಾವರಣದ ಒತ್ತಡ. ಪರ್ವತಗಳಲ್ಲಿ ಎತ್ತರದ ಒತ್ತಡವು ಎತ್ತರ ಹೆಚ್ಚಾದಂತೆ ವಾತಾವರಣದ ಒತ್ತಡದಲ್ಲಿನ ಇಳಿಕೆಯನ್ನು ಸೂಚಿಸುತ್ತದೆ. ನೀವು ಸಮುದ್ರ ಮಟ್ಟಕ್ಕಿಂತ ಎತ್ತರಕ್ಕೆ ಹೋದಂತೆ, ವಾತಾವರಣವು ತೆಳುವಾಗುವುದರಿಂದ ಗಾಳಿಯ ಒತ್ತಡ ಕಡಿಮೆಯಾಗುತ್ತದೆ. ರಕ್ತ ಪರಿಚಲನೆ ಮಾಡಲು ಹೃದಯಕ್ಕೆ ಹೆಚ್ಚು ಕೆಲಸ ಬೇಕಾಗುತ್ತದೆ. ರಕ್ತದ ಒತ್ತಡ ಕಡಿಮೆ ಆಗುತ್ತದೆ. ಮೊದಲು ಮೆದುಳಿಗೆ ರಕ್ತ ಹರಿಯುವುದು ಕಡಿಮೆ ಆಗುತ್ತದೆ. ಅದರಿಂದಾಗಿ ಸಣ್ಣದಾಗಿ ತಲೆನೋವು ಪ್ರಾರಂಭವಾಗುತ್ತದೆ. ನಂತರ ಸುಸ್ತು, ವಾಕರಿಕೆ, ತಲೆಸುತ್ತು ಪ್ರರಂಭವಾಗುತ್ತದೆ. ಆಮೇಲೆ ಶ್ವಾಸಕೋಶಗಳ ಮೇಲೆ ಒತ್ತಡ ಹೆಚ್ಚಾಗಿ ಮೂಗಿನಿಂದ ರಕ್ತಸ್ರಾವ ಪ್ರಾರಂಭವಾಗುತ್ತದೆ. ನಂತರದ್ದೇ ಸಾವು.

trukking

ಇಂಥ ಘಟನೆಗಳು ಸಂಭವಿಸಬಾರದು ಎಂದಾದರೆ ಎತ್ತರದ ಚಾರಣಗಳಿಗೆ ಹೋಗುವ ಮೊದಲೇ ಬೇಸ್‌ಕ್ಯಾಂಪ್‌ಗೆ ಹತ್ತಿರದಲ್ಲಿ ಒಂದೆರಡು ದಿನ ಮುಂಚಿತವಾಗಿ ತೆರಳಿ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವ ಪ್ರಕ್ರಿಯೆಯಲ್ಲಿ ನಾವು ತೊಡಗಿಕೊಳ್ಳಬೇಕು. ಅಲ್ಲಿನ ಪರಿಸರಕ್ಕೆ ಹೊಂದಿಕೊಳ್ಳಬೇಕು. ಇಷ್ಟೆಲ್ಲಾ ಮಾಡಿಯೂ ಕೆಲವೊಮ್ಮೆ ಇಂಥ ತೊಂದರೆಗಳು ಘಟಿಸುತ್ತದೆ. AMS ನ ಲಕ್ಷಣಗಳು ಕಂಡುಬಂದಲ್ಲಿ ಯಾವುದೇ ಮುಲಾಜಿಲ್ಲದೆ ಗೈಡ್‌ಗಳಿಗೆ ತಿಳಿಸಿದರೆ ಅದಕ್ಕೆ ಬೇಕಾದ ಔಷಧಗಳನ್ನು ಕೊಡುತ್ತಾರೆ. ಅಥವಾ ನಾವಿರುವ ಎತ್ತರದ ಸ್ಥಳದಿಂದ ಸ್ವಲ್ಪಕಾಲ ಕೆಳಗೆ ಕಳಿಸುತ್ತಾರೆ. ಅಲ್ಲಿಯ ವಾತಾವರಣಕ್ಕೆ ಹೊಂದಿಕೊಂಡ ನಂತರ ಅಲ್ಲಿಂದ ಮತ್ತೆ ಮೇಲೆ ಏರಬಹುದು. AMS ಲಕ್ಷಣಗಳು ತೀವ್ರವಾಗಿ ಕಂಡರೆ, ಕೂಡಲೇ ಬೇಸ್‌ಕ್ಯಾಂಪ್‌ಗೆ ಹಿಂದಿರುಗಲು ಸಹಾಯಕರೊಂದಿಗೆ ಕಳಿಸಿಕೊಡುತ್ತಾರೆ.

ಹೀಗಾಗಿ, ಚಾರಣ ಪ್ರಾರಂಭಕ್ಕೂ ಎರಡು ಅಥವಾ ಮೂರುದಿನಗಳ ಮುಂಚಿತವಾಗಿ ಆ ಬೇಸ್‌ಕ್ಯಾಂಪ್‌ಗೆ ಹತ್ತಿರ ತಲುಪಿ, ಅಲ್ಲಿನ ಹವಾಮಾನಕ್ಕೆ ನಿಮ್ಮನ್ನು ನೀವು ಒಗ್ಗಿಸಿಕೊಂಡರೆ ನಂತರ ಚಾರಣ ಬಹಳ ಸುಲಲಿತವಾಗಿ ಸಾಗುತ್ತದೆ.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..