Friday, October 3, 2025
Friday, October 3, 2025

ಇದು ಅಮೆಜಾನ್‌ ಕಾಡಲ್ಲ; ಕಾಡಿನ ಮಧ್ಯದಲ್ಲಿರುವ ಅದ್ಭುತ ಕ್ರಿಕೆಟ್ ಮೈದಾನ: ಇದೆಲ್ಲಿದೆ?

ಹಚ್ಚ ಹಸಿರಿನ ಕಾಡಿನ ಮಧ್ಯದಲ್ಲಿರುವ ಕ್ರಿಕೆಟ್ ಮೈದಾನವೊಂದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದನ್ನು ನೋಡಿ ನೆಟ್ಟಿಗರು ಕೂಡ ಫುಲ್‌ ಫಿದಾ ಆಗಿದ್ದಾರೆ. ಇದು ನೋಡಲು ಅಮೆಜಾನ್ ಮಳೆ ಕಾಡಿನಂತೆ ಕಾಣುತ್ತಿದೆ. ಈ ಕಾರಣಕ್ಕೆ ನೆಟ್ಟಿಗರ ಗಮನ ಸೆಳೆದಿದೆ. - ಪವಿತ್ರಾ ಶೆಟ್ಟಿ

ತಿರುವನಂತಪುರಂ: ಭಾರತವು ಹಲವು ಅದ್ಭುತ ಸ್ಥಳಗಳಿಂದ ಕೂಡಿದೆ. ಅವುಗಳಲ್ಲಿ ಅನಿರೀಕ್ಷಿತವಾದುದು ಎಲ್ಲರ ಗಮನ ಸೆಳೆಯುತ್ತದೆ. ಇತ್ತೀಚೆಗೆ ಕೇರಳದ ಕ್ರಿಕೆಟ್ ಮೈದಾನವೊಂದರ ವಿಡಿಯೊ ಎಲ್ಲರ ಗಮನಸೆಳೆದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಈ ಅದ್ಭುತ ದೃಶ್ಯ ನೋಡಿ ನೆಟ್ಟಿಗರು ಫುಲ್‌ ಫಿದಾ ಆಗಿದ್ದಾರೆ. ಯಾಕೆಂದರೆ ಅದು ಇತರ ಯಾವುದೇ ಸಾಮಾನ್ಯ ಕ್ರಿಕೆಟ್ ಮೈದಾನದಂತೆ ಇಲ್ಲ. ಬದಲಾಗಿ ಇದು ಹಚ್ಚ ಹಸಿರಿನ ಕಾಡಿನ ಮಧ್ಯೆದಲ್ಲಿ ಅಡಗಿದ್ದು, ನೈಸರ್ಗಿಕ ಸೌಂದರ್ಯದಿಂದ ತುಂಬಿ ತುಳುಕುತ್ತಿದೆ.

amzon ground new

ವೈರಲ್ ವಿಡಿಯೊದಲ್ಲಿ ತ್ರಿಶೂರ್‌ನ ವರಂದರಪಳ್ಳಿಯಲ್ಲಿರುವ ಹ್ಯಾರಿಸನ್ಸ್ ಮಲಯಾಳಂ ಪ್ಲಾಂಟೇಶನ್‌ನೊಳಗೆ ಇರುವ ಪಾಲಪಳ್ಳಿ ಮೈದಾನವನ್ನು ಸೆರೆಹಿಡಿಯಲಾಗಿದೆ. ಡ್ರೋನ್ ಮೂಲಕ ಸೆರೆಹಿಡಿಯಲಾದ ಈ ದೃಶ್ಯದಲ್ಲಿ ಅದು ಅಮೆಜಾನ್ ಮಳೆಕಾಡಿನಂತೆ ಕಾಣುತ್ತದೆ. ಮೈದಾನದ ಮಧ್ಯದಲ್ಲಿ, ಜನರ ಗುಂಪೊಂದು ಕ್ರಿಕೆಟ್ ಆಡುತ್ತಿರುವುದು ಸೆರೆಯಾಗಿದೆ.

ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದ್ದು, ಇದು ವೈರಲ್ ಆಗಿದೆ. ಇದು ಈಗಾಗಲೇ ನಲವತ್ತು ಮಿಲಿಯನ್ ವ್ಯೂವ್ಸ್‌ ದಾಟಿದೆ. ಕಾಮೆಂಟ್ ವಿಭಾಗದಲ್ಲಿ ವೀಕ್ಷಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಒಬ್ಬರು, "ನನ್ನ ಬಾಲ್ಯವೆಲ್ಲ ಇಲ್ಲೇ ಕಳೆದೆ... ನಿಜವಾದ ನಾಸ್ಟಾಲ್ಜಿಯಾ" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, "ಸರಿ, ಮೊದಲ ನೋಟದಲ್ಲಿ ಅದು 'ಟ್ವಿಲೈಟ್' ಚಿತ್ರದಲ್ಲಿ ತೋರಿಸಿರುವ ಸ್ಥಳ ಎಂದು ನಾನು ಭಾವಿಸಿದೆ" ಎಂದು ಹೇಳಿದರು. ಇನ್ನೊಬ್ಬ ವ್ಯಕ್ತಿ, "ಇದು ನಿಜ ಜೀವನನಾ!? ನಾನು ಇಲ್ಲಿಗೆ ಹೋಗಲೇಬೇಕು!" ಎಂದು ಕೇಳಿದಾಗ, ಯಾರೋ ಒಬ್ಬರು, "ಅಲ್ಲಿ ಸಿಕ್ಸರ್ ಹೊಡೆದರೆ ಬಾಲ್‍ ಎಂದಿಗೂ ಸಿಗುವುದಿಲ್ಲ" ಎಂದು ತಮಾಷೆ ಮಾಡಿದ್ದಾರೆ.

ವರದಿಯ ಪ್ರಕಾರ, ಹ್ಯಾರಿಸನ್ ಮಲಯಾಳಂ ಕಂಪನಿಯು ತಮ್ಮ ತೋಟದ ಕಾರ್ಮಿಕರಿಗಾಗಿ ಬಹಳ ಹಿಂದೆಯೇ ಈ ರೀತಿಯ ಪ್ರದೇಶವನ್ನು ನಿರ್ಮಿಸಿತ್ತು. ಹತ್ತಿರದಲ್ಲಿ ಇದೇ ರೀತಿಯ ಮತ್ತೊಂದು ಮೈದಾನವಿತ್ತಂತೆ. ಆದರೆ ನಂತರ ಅದನ್ನು ತೆಗೆದುಹಾಕಲಾಯಿತು. ಈಗ, ಈ ಪ್ರದೇಶದಲ್ಲಿ ಉಳಿದಿರುವ ಏಕೈಕ ಮೈದಾನ ಇದಾಗಿದೆ. ಈಗ ಇಡೀ ಸ್ಥಳೀಯರು ಆಟವಾಡಲು, ಸಮಯ ಕಳೆಯಲು ಮತ್ತು ಒಟ್ಟಿಗೆ ಆನಂದಿಸಲು ಈ ಮೈದಾನವನ್ನು ಬಳಸುತ್ತಿದ್ದಾರೆ.

ತಲುಪುವುದು ಹೇಗೆ ?

ಅಂಬಲ್ಲೂರು ಜಂಕ್ಷನ್‌ನಿಂದ, ವರಂದರಪ್ಪಲ್ಲಿ ಮಾರ್ಗದಲ್ಲಿ ಬಲಕ್ಕೆ ತಿರುಗಿ. ನೀವು ಹಳೆಯ ಪಿಲ್ಲಥೋಡ್ ಸೇತುವೆಯನ್ನು ತಲುಪಿದ ನಂತರ, ಅದರ ಪಕ್ಕದ ರಸ್ತೆ ಬನ್ನಿ. ಪಾಲಪಳ್ಳಿ ಮೈದಾನ ಇಲ್ಲಿಂದ ಕೇವಲ 25 ಮೀಟರ್ ದೂರದಲ್ಲಿದೆ.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..