ಹೊರಡೋಣ ಸ್ವಾಮಿ ನಾವು ನಾಗಮಲೆಗೆ
ಬೆಳಗಿನ ಜಾವದ ನಸುಗತ್ತಲಿನ ಚುಮು ಚುಮು ಚಳಿಯಲ್ಲಿ ಬೆಟ್ಟ ಹತ್ತಲು ಶುರು ಮಾಡಿದರೂ ಬೆಟ್ಟ ತಲುಪುವಷ್ಟರೊಳಗೆ ಬಿಸಿಲಿನ ಝಳಕ್ಕೆ ಒದ್ದೆಯಾಗಿ ಹೋಗಿರುತ್ತೇವೆ. ಆದರೆ ಆಯಾಸ ಕಾಣುವುದಿಲ್ಲ. ನಮ್ಮ ಮನಸ್ಸು ಮತ್ತು ಹೃದಯ ಎರಡೂ ಪ್ರಶಾಂತವಾಗಿರುತ್ತದೆ. ನಾಗಮಲೆ ಬೆಟ್ಟವನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಅಲ್ಲಿರುವ ದೊಡ್ಡದಾದ ಬಂಡೆಯೊಂದು ಹಾವಿನ ಹೊದಿಕೆಯ ಅಡಿಯಲ್ಲಿ ಸೂರ್ಯನ ಕಿರಣಗಳಿಂದ ಆಶ್ರಯ ಪಡೆದಿರುವ ಶಿವಲಿಂಗವನ್ನು ಹೋಲುತ್ತದೆ.
ದಟ್ಟ ಹಸಿರಿನ ಕಾಡು, ಎತ್ತ ಕಣ್ಣು ನೆಟ್ಟರೂ ಎತ್ತರದ ಗುಡ್ಡಗಳು, ಹಕ್ಕಿಗಳ ಕಲರವ, ನವಿಲುಗಳ ಕುಲುಕುಲು ಸದ್ದು, ಎಲ್ಲಿಯೋ ಸಣ್ಣದಾಗಿ ಹರಿಯುವ ತೊರೆಗಳು, ಮುದ ನೀಡುವ ತಣ್ಣನೆಯ ಗಾಳಿ. ಏದುಸಿರು ಬಿಡುತ್ತಾ ದಾರಿ ಸವೆಸಿ ಗುರಿ ತಲುಪಿದಾಗ ಅವ್ಯಕ್ತ ಆನಂದ! ಎಲ್ಲಿಯೂ ಕೂರಲು ಮನಸ್ಸಾಗುವುದಿಲ್ಲ. ತುಟಿ ಒಣಗಿ ಗಂಟಲಿನ ಪಸೆ ಆರಿದರೂ ಮನಸ್ಸು ಮಾತ್ರ ರೆಕ್ಕೆ ತೆರೆದ ಹಕ್ಕಿ.
ತಿಂಗಳುಗಟ್ಟಲೆ ಮಲೆ ಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ಚಾರಣವನ್ನು ನಿರ್ಬಂಧಿಸಲಾಗಿತ್ತು. ಚಾರಣಪ್ರಿಯರಿಗಂತೂ ಹತಾಶೆಯಾಗಿತ್ತು. ಈಗ ಮತ್ತೆ ಕೆಲ ತಿಂಗಳುಗಳಿಂದ ಮುಕ್ತ ಅವಕಾಶ ಸಿಕ್ಕಿದೆ. ನೂರಾರು ಚಾರಣಿಗರು ಪಕ್ಕಾ ಚಾರಣದ ಪೋಷಾಕು ಧರಿಸಿ ಹೆಗಲಿಗೆ ಸಣ್ಣ ಬ್ಯಾಗನ್ನು ಏರಿಸಿಕೊಂಡು ಉಘೇ ಮಾದಪ್ಪ ಎನ್ನುತ್ತಾ ನಾಗಮಲೆ ಬೆಟ್ಟ ಹತ್ತುತ್ತಿದ್ದಾರೆ. ಭರಪೂರ ಜೋಶ್‌ನಲ್ಲಿ ದಂಡು ದಂಡಾಗಿ ಟ್ರೆಕ್ಕಿಂಗ್ ಹೋಗುತ್ತಿದ್ದಾರೆ.
ಸಾಮಾನ್ಯವಾಗಿ ಭಕ್ತರು ಮಹದೇಶ್ವರನ ದರ್ಶನ ಪಡೆದು ನಾಗಮಲೆಗೆ ಹೋಗಿಯೇ ಬರುತ್ತಾರೆ. ಭಕ್ತರಲ್ಲಿ ಅದು ಮಲೆ ಮಹದೇಶ್ವರನ ಮೂಲ ಸ್ಥಾನ ಎಂಬ ನಂಬಿಕೆಯಿದೆ. ಎಪ್ಪತ್ತೇಳು ಮಲೆಯ ಒಡೆಯನ ಸ್ಥಾನಕ್ಕೆ ಹೋಗಿ ಕೃತಾರ್ಥರಾಗುವ ಬಯಕೆಯಲ್ಲಿರುತ್ತಾರೆ. ಆದರೆ ನಾಗಮಲೆಯ ಕಡಿದಾದ ದಾರಿ ಒಂದು ರೀತಿಯ ಸಾಹಸಿ ಅನುಭವವನ್ನೂ ನೀಡುತ್ತದೆ. ದಾರಿ ಕಂಡಲೆಲ್ಲ ಹೆಜ್ಜೆ ಇಡುತ್ತಾ ಹೋದರೆ ಮಂಕು ಕವಿದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಒಂದು ಕ್ಷಣಕ್ಕೆ ಬದುಕಿನ ಜಂಜಾಟವನ್ನೇ ಮರೆತು ಬಿಡುತ್ತೇವೆ. ಮೂಕರಾಗಿ ಬಿಡುತ್ತೇವೆ. ಮೈ ಕೈ ಅರಳಿಸಿಕೊಂಡು ಪ್ರಕೃತಿಯ ಮಾತಿಗೆ ಕಿವಿ ಕೊಡುತ್ತೇವೆ. ಎದೆಯ ಕದವನ್ನೂ ತೆೆರೆದು ಕೂರುತ್ತೇವೆ. ಇಷ್ಟೆಲ್ಲವನ್ನೂ ನಾಗಮಲೆ ಚಾರಣ ಕೊಡಬಲ್ಲದು.

ನಾವು ಬೆಳಗಿನ ಜಾವದ ನಸುಗತ್ತಲಿನ ಚುಮು ಚುಮು ಚಳಿಯಲ್ಲಿ ಬೆಟ್ಟ ಹತ್ತಲು ಶುರು ಮಾಡಿದರೂ ಬೆಟ್ಟ ತಲುಪುವಷ್ಟರೊಳಗೆ ಬಿಸಿಲಿನ ಝಳಕ್ಕೆ ಒದ್ದೆಯಾಗಿ ಹೋಗಿರುತ್ತೇವೆ. ಆದರೆ ಆಯಾಸ ಕಾಣುವುದಿಲ್ಲ. ನಮ್ಮ ಮನಸ್ಸು ಮತ್ತು ಹೃದಯ ಎರಡೂ ಪ್ರಶಾಂತವಾಗಿರುತ್ತದೆ. ಮೊದಲೇ ಹೇಳಿದಂತೆ ಈ ಸ್ಥಳವನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಅಲ್ಲಿರುವ ದೊಡ್ಡದಾದ ಬಂಡೆಯೊಂದು ಹಾವಿನ ಹೊದಿಕೆಯ ಅಡಿಯಲ್ಲಿ ಸೂರ್ಯನ ಕಿರಣಗಳಿಂದ ಆಶ್ರಯ ಪಡೆದಿರುವ ಶಿವಲಿಂಗವನ್ನು ಹೋಲುತ್ತದೆ. ಅಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತಮ ಎರಡೂ ಅದ್ಭುತವಾಗಿ ಕಾಣುತ್ತದೆ. ಫೊಟೋ ಶೂಟ್‌ಗೆ ಹೇಳಿ ಮಾಡಿಸಿದ ಜಾಗ.
ದಾರಿ ಹೇಗಿದೆ?
ಮಹದೇಶ್ವರ ಬೆಟ್ಟದಿಂದ ನಾಗಮಲೆಯವರೆಗೂ ಪೂರ್ಣವಾಗಿ ಸಾರಿಗೆ ವ್ಯವಸ್ಥೆಯಿಲ್ಲ. ಅರ್ಧ ದಾರಿಯವರೆಗೆ ಜೀಪಿನಲ್ಲಿ ತೆರಳಿ ಅಲ್ಲಿಂದ ನಡೆದುಕೊಂಡು ಹೋಗಬೇಕು. ಸರಿ ಸುಮಾರು 8 ಕಿ.ಮೀ ನಡಿಗೆ. ಚಾರಣದಲ್ಲಿ ಆಸಕ್ತಿ ಇರುವವರು ಮಾತ್ರ ಹೋಗಬಹುದು. ಸಾಹಸ ಪ್ರವೃತ್ತಿಯವರೂ ಆಗಿರಬೇಕು. ದಾರಿ ಮಧ್ಯೆ ಆನೆಗಳು ಎದುರಾಗುವ ಸಾಧ್ಯತೆಗಳು ಹೆಚ್ಚು. ಆನೆ ಸೇರಿದಂತೆ ಇತರೆ ಪ್ರಾಣಿಗಳು ದಾಳಿ ಮಾಡುತ್ತವೆ. ಈಗಾಗಲೇ ಸಾಕಷ್ಟು ಪ್ರಕರಣಗಳು ನಡೆದಿವೆ.
ನಾಗಮಲೆ
- ಸ್ಥಳ: ಮಲೆ ಮಹದೇಶ್ವರ ಬೆಟ್ಟ
- ಬೆಂಗಳೂರಿನಿಂದ 210 ಕಿ.ಮೀ
- ಮಹದೇಶ್ವರ ಸನ್ನಿಧಾನದಿಂದ ನಾಗಮಲೆಗೆ 15 ಕಿ.ಮೀ
- ಹಳೆಯೂರಿನಿಂದ ಇಂಡಿಗನತ್ತ ಗ್ರಾಮದವರೆಗೆ ಖಾಸಗಿ ವಾಹನ
- ಇಂಡಿಗನತ್ತದಿಂದ ಪಾದಯಾತ್ರೆ
- ಸಮಯ: ಬೆಳಗ್ಗೆ 5 ರಿಂದ ಸಂಜೆ 5 ಗಂಟೆಯವರೆಗೆ
- ಖಾಸಗಿ ವಾಹನಗಳಿಗೆ ಪ್ರವೇಶ ಶುಲ್ಕವಿದೆ