Friday, October 3, 2025
Friday, October 3, 2025

ಟಾಯ್‌ ಟ್ರೈನ್‌ನಲ್ಲಿ ಪ್ರಯಾಣಿಸಬೇಕೆಂದುಕೊಂಡಿದ್ದೀರಾ ? ಭಾರತದ ಈ ಪ್ರಸಿದ್ಧ ಸ್ಥಳಗಳಿಗೆ ಭೇಟಿ ಕೊಡಿ..

ಕರ್ನಾಟಕಕ್ಕೆ ಸಮೀಪದಲ್ಲಿರುವ ತಮಿಳುನಾಡಿನ ನೀಲಗಿರಿಯ ಮೌಂಟೇನ್‌ ರೈಲ್ವೇಯ ಟಾಯ್‌ ಟ್ರೈನ್‌ ನಲ್ಲಿ ನೀವೆಂದಾದರೂ ಪ್ರಯಾಣಿಸಿದ್ದೀರಾ ? ಭಾರತದ ಬೆರಳೆಣಿಕೆಯಷ್ಟು ಸ್ಥಳಗಳಲ್ಲಿ ಮಾತ್ರ ಲಭ್ಯವಿರುವ ಟಾಯ್‌ ಟ್ರೈನ್‌ ಪ್ರಯಾಣಗಳ ಮಾಹಿತಿ ಇಲ್ಲಿದೆ.

ಸಾಮಾನ್ಯವಾಗಿ ರೈಲು ಪ್ರಯಾಣವನ್ನು ಮೆಚ್ಚಿಕೊಳ್ಳದವರಿಲ್ಲ. ಅದರಲ್ಲೂ ಟಾಯ್‌ ಟ್ರೈನ್‌ ಗಳಲ್ಲಿ ಪ್ರಯಾಣ ಬೆಳೆಸುವ ಅನುಭವವಂತೂ ಅನ್ನೂ ರೋಮಾಂಚಕವಾಗಿರುತ್ತದೆ. ಭಾರತದಲ್ಲೆ ಕೆಲವೇ ಕಡೆಗಳಲ್ಲಿ ಮಾತ್ರ ಟಾಯ್‌ ಟ್ರೈನ್‌ ಪ್ರಯಾಣ ಪ್ರವಾಸಿಗರಿಗೆ ಮುಕ್ತವಾಗಿದೆ. ಅದರಲ್ಲಿ ಕರ್ನಾಟಕಕ್ಕೆ ಸಮೀಪದಲ್ಲಿರುವ ತಮಿಳುನಾಡಿನ ನೀಲಗಿರಿ ಪರ್ವತ ಸಾಲುಗಳ ಮೂಲಕ ನೀವು ಟಾಯ್‌ ಟ್ರೈನ್‌ ನಲ್ಲಿ ನೀವು ಪ್ರಯಾಣಿಸಿರಬಹುದು. ಆದರೆ ದೇಶದ ಇತರ ಯಾವ ಭಾಗದಲ್ಲಿ ಟಾಯ್‌ ಟ್ರೈನ್‌ ಸೌಲಭ್ಯವಿದೆ ನಿಮಗೆ ಗೊತ್ತಾ?

ತಮಿಳುನಾಡಿನ ನೀಲಗಿರಿಯ ಮೌಂಟೇನ್‌ ರೈಲ್ವೇ

ಕರ್ನಾಟಕಕ್ಕೆ ತೀರಾ ಸಮೀಪದಲ್ಲೇ ಟಾಯ್‌ ಟ್ರೈನ್‌ ಅನುಭವವನ್ನು ನೀವು ಪಡೆಯಬೇಕೆಂದರೆ ತಮಿಳುನಾಡಿನ ಪ್ರಸಿದ್ಧ ಗಿರಿಧಾಮವಾದ ಊಟಿಗೆ ಹೋಗಬಹುದು. ಈ ರೈಲು ಮಾರ್ಗವು 1,000 ಮಿಮೀ ಉದ್ದವಿದ್ದು, ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಘೋಷಿಸಲ್ಪಟ್ಟಿದೆ. ಇದು ವಿವಿಧ ಸುರಂಗಗಳು, ತಿರುವುಗಳು ಮತ್ತು ಸುಂದರವಾದ ದೃಶ್ಯಾವಳಿಗಳ ಮೂಲಕ ಹಾದುಹೋಗುವುದರಿಂದ ವಯಸ್ಸಿನ ಅಂತರವಿಲ್ಲದೆ ಎಲ್ಲರೂ ಈ ಪ್ರಯಾಣವನ್ನು ಆನಂದಿಸಬಹುದು.

Nilgiri-mountain

ಕಲ್ಕಾ-ಶಿಮ್ಲಾ ಟಾಯ್ ಟ್ರೈನ್

ನೀವು ಕಲ್ಕಾದಿಂದ ಈ ವಿಂಟೇಜ್ ಟಾಯ್‌ ಟ್ರೈನ್‌ ಏರಿದರೆ ಶಿಮ್ಲಾದವರೆಗೂ ಗಾಜಿನ ಕಿಟಕಿಗಳ ಮೂಲಕ ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸಬಹುದು. ಪರ್ವತ ಶ್ರೇಣಿಗಳನ್ನು ಕಣ್ತುಂಬಿಕೊಳ್ಳುತ್ತಾ, ನವಿರಾಗಿ ಬೀಸುವ ಗಾಳಿಗೆ ಮೈಯೊಡ್ಡಿಕೊಂಡು ಪ್ರವಾಸದ ಅನುಭವವನ್ನು ಆಸ್ವಾದಿಸುವ ಸಂಭ್ರಮವೇ ಬೇರೆ.. ಕಲ್ಕಾದಿಂದ ಶಿಮ್ಲಾ ಹಾಗೂ ಶಿಮ್ಲಾದಿಂದ ಮತ್ತೆ ಕಲ್ಕಾಗೆ ಈ ಟಾಯ್‌ ಟ್ರೈನ್‌ ಮೂಲಕ ಪ್ರಯಾಣ ಕೈಗೊಂಡರೆ ನಿಮ್ಮ ಪ್ರಯಾಣ ಎಂದಿಗೂ ನೆನಪಿನಲ್ಲಿಡತಕ್ಕಂತಹ ಅನುಭವಗಳನ್ನು ಹೊಂದಿರುತ್ತದೆ.

Kalka-Shimla-Toy-Train

ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ನ ಹಿಮಾಲಯನ್ ರೈಲ್ವೆ

ನ್ಯೂ ಜಲ್ಪೈಗುರಿಯಿಂದ ಡಾರ್ಜಿಲಿಂಗ್‌ಗೆ ಸುಮಾರು 88 ಕಿ.ಮೀ ಉದ್ದದ ಟಾಯ್‌ ಟ್ರೈನ್‌ ಪ್ರಯಾಣ, ವಿವಿಧ ಚಹಾ ತೋಟಗಳ ಮೂಲಕ ಹಾದುಹೋಗಿ ಪ್ರಯಾಣಿಕರಿಗೆ ಹೊಸ ಅನುಭವವನ್ನು ನೀಡುತ್ತದೆ. ಈ ವೇಳೆ ಪ್ರಯಾಣಿಕರು ವಿಶ್ವದ ಮೂರನೇ ಅತಿ ಎತ್ತರದ ಪರ್ವತವಾದ ಕಾಂಚನಜುಂಗಾ ಶಿಖರದ ವಿಶಾಲ ನೋಟಗಳನ್ನು ನೋಡಬಹುದು. ಭಾರತದ ಅತಿ ಎತ್ತರದ ರೈಲು ನಿಲ್ದಾಣವಾದ ಕುರ್ಸಿಯಾಂಗ್ ಮತ್ತು ಘುಮ್, ಈ ಪ್ರಯಾಣದ ನಡುವೆ ಸಿಗಲಿದ್ದು,ಇಲ್ಲಿನ ಸ್ಥಳೀಯ ಜೀವನಶೈಲಿ ಮತ್ತು ಐತಿಹಾಸಿಕ ಮೋಡಿಯನ್ನು ನೋಡುವ ಅವಕಾಶವನ್ನು ನೀಡುತ್ತದೆ.

2021-06-07things11-31-50

ಹಿಮಾಚಲ ಪ್ರದೇಶ ಕಾಂಗ್ರಾ ಕಣಿವೆ ರೈಲ್ವೆ

ಹಿಮಾಚಲ ಪ್ರದೇಶದ ಹೃದಯಭಾಗವನ್ನು ದಾಟಿ ಸಾಗುವ ಕಾಂಗ್ರಾ ಕಣಿವೆ ರೈಲ್ವೆ ಭಾರತದ ಅತ್ಯಂತ ರಮಣೀಯವಾದ ರೈಲು ಪ್ರಯಾಣಗಳಲ್ಲಿ ಒಂದಾಗಿದೆ. 1929 ರಲ್ಲಿ ನಿರ್ಮಿಸಲಾದ ಮತ್ತು ಈಗ ಯುನೆಸ್ಕೋ ವಿಶ್ವ ಪರಂಪರೆಯ ತಾಣದ ಸ್ಪರ್ಧಿಯಾಗಿರುವ ಈ ಕಿರಿದಾದ ಗೇಜ್ ರೈಲ್ವೆ ಪಠಾಣ್‌ಕೋಟ್‌ನಿಂದ ಜೋಗಿಂದರ್ ನಗರಕ್ಕೆ ಚಲಿಸುತ್ತದೆ. ಇದು ಸುಮಾರು 164 ಕಿಮೀ ದೂರವನ್ನು ಕ್ರಮಿಸುತ್ತಿದ್ದು, ಹಿಮದಿಂದ ಆವೃತವಾದ ಧೌಲಾಧರ್ ಶ್ರೇಣಿಗಳು ಸೇರಿದಂತೆ ಅನೇಕ ಪ್ರವಾಸಿತಾಣಗಳ ವಿಹಂಗಮ ನೋಟವನ್ನು ನೀಡುತ್ತದೆ.

12506456915_f6f03bdcca_b

ಮಾಥೆರಾನ್ ಬೆಟ್ಟದ ರೈಲು - ಮಹಾರಾಷ್ಟ್ರ

ಮಹಾರಾಷ್ಟ್ರ ರಾಜ್ಯದ ಮಾಥೆರಾನ್‌ ಹಿಲ್‌ನಲ್ಲಿಟಾಯ್‌ ಟ್ರೈನ್‌ ಮೂಲಕ ತೆರಳುವ ಅನುಭವವನ್ನು ಟಾಯ್‌ ಟ್ರೈನ್‌ ಪ್ರಿಯರು ಖುದ್ದು ಅನುಭವಿಸಲೇಬೇಕು. 107 ವರ್ಷ ಹಳೆಯದಾದ ನ್ಯಾರೋ ಗೇಜ್ ರೈಲು ನೇರಲ್ ನಿಂದ ಮಾಥೆರಾನ್ ಗೆ ಪ್ರಯಾಣಿಕರನ್ನು ಕರೆದೊಯ್ಯುತ್ತದೆ. ಇದು ದಟ್ಟವಾದ ಕಾಡುಗಳ ಮೂಲಕ, ಪರ್ವತ ಶ್ರೇಣಿಗಳ ಅಂಕುಡೊಂಕಾದ ತಿರುವುಗಳ ನಡುವೆಯೂ ಪರ್ಯಾಣಿಕರನ್ನು ಕರೆದೊಯ್ಯುತ್ತದೆ. ಟಾಯ್‌ ಟ್ರೈನ್‌ ಪ್ರಿಯರು ಭೇಟಿ ನೀಡಲೇಬೇಕಾದ ಹೊಸ ಅನುಭವದ ಪ್ರಯಾಣವನ್ನು ಇದು ಒದಗಿಸುತ್ತದೆ.

images (1)

ಇನ್ಯಾಕೆ ತಡ ? ನೀಲಗಿರಿಯ ಮೌಂಟೇನ್‌ ರೈಲ್ವೇ ಯ ಮೂಲಕ ಟಾಯ್‌ ಟ್ರೈನ್‌ ಅನುಭವ ಪಡೆಯುವುದು ಮಿಸ್‌ ಮಾಡಿಕೊಂಡಿದ್ದರೆ, ದೇಶದ ಈ ವಿಶೇಷ ಟಾಯ್‌ ಟ್ರೈನ್‌ ಸವಾರಿ ತೆರಳಿ ನೋಡಿ, ಮತ್ತೊಮ್ಮೆ ಹೋಗಬೇಕು ಅನ್ನಿಸಿಬಿಡುತ್ತದೆ.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Next

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..