Thursday, December 18, 2025
Thursday, December 18, 2025

ಬದುಕಿನ ಸ್ಪಂದನೆ ಅರಿಯುವ ಪಯಣ...!

ವೃದ್ಧಾಶ್ರಮ, ಅನಾಥ ಮಕ್ಕಳ ವಸತಿ ಗೃಹ, ಅಂಧರು ಮತ್ತು ವಿಶೇಷ ಚೇತನರ ಶಾಲೆಗೆ ಭೇಟಿ ನೀಡುವ ಪ್ರವಾಸ ಒಂದು ವಿಶಿಷ್ಟ ಅನುಭವ. ಇದು ಕಣ್ಣಿಗೆ ‘ದೃಶ್ಯ’ ನೀಡುವುದಕ್ಕಿಂತ, ಹೃದಯಕ್ಕೆ ‘ಸ್ಪರ್ಶ’ ನೀಡುವುದೇ ಹೆಚ್ಚು.

- ಹೊಸ್ಮನೆ ಮುತ್ತು

ಈ ಪ್ರವಾಸವು ಕೇವಲ ದೂರದ ಸ್ಥಳಗಳ ಭೇಟಿಯಲ್ಲ; ಇದು ನಮ್ಮ ಮನಸ್ಸನ್ನು ಸ್ಪರ್ಶಿಸುವ, ನಮ್ಮ ದೃಷ್ಟಿಕೋನವನ್ನು ವಿಸ್ತರಿಸುವ ಹಾಗೂ ಹೃದಯವನ್ನು ಮೃದುವಾಗಿಸುವ ಒಂದು ಸುಂದರ ಪಯಣ. ಇಲ್ಲಿ ನಾವು ಬದುಕಿನ ವಿಭಿನ್ನ ಆಯಾಮಗಳನ್ನು ಅನುಭವಿಸುತ್ತೇವೆ; ಜತೆಗೆ ಪ್ರೀತಿ, ಸಹಾನುಭೂತಿ ಹಾಗೂ ಸಹಬಾಳ್ವೆಯ ಮೌಲ್ಯಗಳನ್ನು ಅರಿಯುತ್ತೇವೆ. ಪರ್ವತ, ಕಾಡು, ನದಿ, ಬಯಲು, ದೇಗುಲಗಳಿಗಿಂತಲೂ ಹೆಚ್ಚಾಗಿ, ಮನುಷ್ಯರ ಬದುಕಿನ ಒಳನೋಟ ನೀಡುವ ಸ್ಥಳಗಳು ನಮ್ಮನ್ನು ಹೆಚ್ಚು ಸ್ಪರ್ಶಿಸುತ್ತವೆ. ದಿನನಿತ್ಯದ ಜಂಜಾಟದಿಂದ ಹೊರಬಂದು, ಮತ್ತೊಂದು ಬದುಕಿನ ವಾಸ್ತವತೆಯನ್ನು ಅರಿಯುವ ಈ ವಿನೂತನ ಪಯಣವೇ “ಸಾಮಾಜಿಕ ಪ್ರವಾಸೋದ್ಯಮ (Social Tourism)/ಸೇವಾ ಪ್ರವಾಸೋದ್ಯಮ (Voluntourism)."

ಮನುಷ್ಯತ್ವದ ಕಡೆಗೆ ಒಂದು ಹೆಜ್ಜೆ

ಜೀವನದ ಈ ವೇಗದ ಓಟದಲ್ಲಿ, ನಾವು ಹೆಚ್ಚಾಗಿ ನಮ್ಮ ಸ್ವಂತದ ಬೇಸರ, ಚಿಂತೆ ಮತ್ತು ಸಮಸ್ಯೆಗಳಲ್ಲಿ ಮುಳುಗಿರುತ್ತೇವೆ. ಆದರೆ, ಈ ಲೋಕದಲ್ಲಿ ನಮಗಿಂತಲೂ ಹೆಚ್ಚು ಕಷ್ಟ, ನೋವು ಮತ್ತು ಯಾತನಾಮಯ ಜೀವನವನ್ನು ಕಂಡುಂಡು ಬದುಕುತ್ತಿರುವವರು ಬಹಳ ಮಂದಿ ಇದ್ದಾರೆಂಬುದನ್ನು ನಾವು ಮರೆತುಬಿಡುತ್ತೇವೆ. ಈ ವಾಸ್ತವವನ್ನು ಅನುಭವಿಸಲು ಮತ್ತು ಅರ್ಥಮಾಡಿಕೊಳ್ಳಲು, ವೃದ್ಧಾಶ್ರಮ, ಅನಾಥ ಮಕ್ಕಳ ವಸತಿ ಗೃಹ, ದೃಷ್ಟಿಹೀನರ(Visually Challenged) ಹಾಗೂ ವಿಶೇಷಚೇತನರ ಶಾಲೆಗಳಿಗೆ ಭೇಟಿ ನೀಡುವುದು ಅತ್ಯಂತ ಪ್ರಭಾವಶಾಲಿ ಮತ್ತು ಪರಿವರ್ತನಾತ್ಮಕ ಅನುಭವವಾಗಿರುತ್ತದೆ. ಇಂಥ ಆಶ್ರಯ ತಾಣಗಳು ಕೇವಲ ಕಟ್ಟಡಗಳಲ್ಲ, ಅವು ನೂರಾರು ಜೀವನ ಕಥೆಗಳ ಆಶ್ರಯ ತಾಣಗಳು. ಈ ಸ್ಥಳಗಳಿಗೆ ಭೇಟಿ ನೀಡುವುದು ನಮ್ಮ ಸ್ವಂತ ಅಸ್ತಿತ್ವವನ್ನು ಪುನರ್ವಿಮರ್ಶೆ ಮಾಡಿಕೊಳ್ಳುವ, ನಮ್ಮ ದೃಷ್ಟಿಕೋನವನ್ನು ವಿಸ್ತರಿಸುವ, ಜೀವನದ ನಿಜವಾದ ಅರ್ಥವನ್ನು ಅರಿಯುವ ಮತ್ತು ನಮ್ಮ ಒಳಗಿನ ಮನುಷ್ಯತ್ವವನ್ನು ಉತ್ತೇಜಿಸುವ ಒಂದು ಪ್ರಯತ್ನವಾಗಿದೆ. ಈ ಭೇಟಿಯ ಉದ್ದೇಶ ಕೇವಲ 'ಪ್ರವಾಸ' ಮಾಡುವುದಲ್ಲ; ಬದಲಿಗೆ ಅಲ್ಲಿನ ನಿವಾಸಿಗಳೊಂದಿಗೆ ನಮ್ಮ ಸಂತೋಷವನ್ನು ಹಂಚಿಕೊಳ್ಳುವುದು ಮತ್ತು ಸಮಾಜದ ಬೇರೆಯದ್ದೇ ಒಂದು ಮುಖವನ್ನು ಕಾಣುವುದಾಗಿದೆ. ಜತೆಗೆ ಅವರ ಜೀವನಕ್ಕೆ ಒಂದು ಸಣ್ಣ ಆಸರೆಯಾಗುವ ಮೂಲಕ, ನಾವು ನಮ್ಮ ಜೀವನದಲ್ಲಿ ಪಡೆದಿರುವ ಭಾಗ್ಯದ ಬಗ್ಗೆ ಕೃತಜ್ಞರಾಗಿರುವುದು.

old age home

ಪ್ರೀತಿಯ ಹುಡುಕಾಟದಲ್ಲಿ

ವೃದ್ಧಾಶ್ರಮದಲ್ಲಿನ ಹಿರಿಯರೊಂದಿಗೆ ಕಳೆವ ಕ್ಷಣಗಳು ಅಮೂಲ್ಯ. ಅವರ ಜೀವನಾನುಭವದ ಕಥೆಗಳು, ಅವರ ನಗು ಮತ್ತು ಕಣ್ಣುಗಳಲ್ಲಿನ ಆಳವಾದ ಪ್ರೀತಿಯ ಹಂಬಲ ನಮ್ಮ ಮನಸ್ಸನ್ನು ಕಲಕುತ್ತದೆ. ಸಕಾರಣವೋ, ವಿನಾ ಕಾರಣವೋ ಮನೆಯವರು, ಕುಟುಂಬದವರು ದೂರವಾಗಿ, ಅನಾಥ ಭಾವದಿಂದ ದಿನ ಕಳೆಯುವ ಹಿರಿಯ ಜೀವಿಗಳನ್ನು ಇಲ್ಲಿ ಕಾಣಬಹುದು. ಇಲ್ಲಿನ ವಾತಾವರಣ ಒಂದು ವಿಚಿತ್ರ ಮಿಶ್ರಣವನ್ನು ಒಳಗೊಂಡಿದೆ. ಒಂದು ಕಡೆ ಶಾಂತಿ ಮತ್ತು ಆಧ್ಯಾತ್ಮಿಕ ಚಿಂತನೆ, ಇನ್ನೊಂದು ಕಡೆ ಒಂಟಿತನ ಮತ್ತು ಕಾಯುವಿಕೆ. ಅವರಿಗೆ ಸ್ವಲ್ಪ ಸಮಯ ನೀಡಿ, ಅವರ ಕಷ್ಟ-ಸುಖ ಆಲಿಸಿದರೆ ಸಾಕು, ಅವರ ಮುಖದಲ್ಲೊಂದು ಬೆಳದಿಂಗಳು ಮೂಡುತ್ತದೆ. ನಮ್ಮ ಸಣ್ಣ ಮಾತುಗಳು ಅವರಿಗೆ ಬದುಕು ಇನ್ನೂ ಸುಂದರವಾಗಿದೆ ಎಂಬ ಭರವಸೆ ನೀಡಬಹುದು. ಅವರ ಪ್ರತಿ ಮಾತಿನಲ್ಲಿ ಜೀವನದ ಅನುಭವದ ಸಾಂದ್ರತೆ ಇರುತ್ತದೆ. ಅವರು ನಮಗೆ ಕೊಡುವ ಆಶೀರ್ವಾದವೇ ನಮ್ಮ ಜೀವನದ ದೊಡ್ಡ ಸಂಪತ್ತು. ಅವರಿಗೆ ನಾವು ನೀಡುವುದು ಕೇವಲ ನಮ್ಮ ಸಮಯ ಮತ್ತು ಕಾಳಜಿ ಮಾತ್ರ. ಆದರೆ ಅವರಿಂದ ನಮಗೆ ಅಮೂಲ್ಯವಾದ ಜೀವನದ ಪಾಠಗಳೇ ದೊರಕುತ್ತವೆ.

ಮುಗ್ಧ ಮನಸ್ಸುಗಳು, ಸ್ಫೂರ್ತಿದಾಯಕ ಕನಸುಗಳು

ಅನಾಥ ಮಕ್ಕಳ ವಸತಿ ಗೃಹದಲ್ಲಿ ಭವಿಷ್ಯದ ಕನಸುಗಳನ್ನು ಹೊತ್ತುಕೊಂಡಿರುವ, ಪ್ರೀತಿ ಮತ್ತು ಮಾರ್ಗದರ್ಶನಕ್ಕಾಗಿ ಕಾಯುತ್ತಿರುವ ನೂರಾರು ಮುಗ್ಧ ಮಕ್ಕಳನ್ನು ಕಾಣಬಹುದು. ಈ ಮಕ್ಕಳು ತಮ್ಮ ಜೀವನದಲ್ಲಿ ಅನೇಕ ಸಂಕಷ್ಟಗಳನ್ನು ಎದುರಿಸಿದ್ದರೂ, ಅವರಲ್ಲಿರುವ ಉತ್ಸಾಹ, ನಗು, ಆಟ-ಪಾಟ, ಮತ್ತು ಕಲಿಯುವ ಹಂಬಲ ನಿಜಕ್ಕೂ ಸ್ಫೂರ್ತಿದಾಯಕ. ಮಕ್ಕಳೊಂದಿಗೆ ಆಡುವುದು, ಹಾಡುವುದು, ಅವರಿಗೆ ಕಥೆ ಹೇಳುವುದು ಅತ್ಯಂತ ಸಂತೋಷದ ಭಾಗ. ಅವರ ಮುಖದಲ್ಲಿನ ಮುಗ್ಧ ನಗು ಮತ್ತು ಹೊಸದನ್ನು ಕಲಿಯುವ ಕುತೂಹಲ ನಮ್ಮೆಲ್ಲ ಚಿಂತೆಗಳನ್ನು ಮರೆಸಿಬಿಡುತ್ತದೆ. ನಾವು ಕೇವಲ ಭೇಟಿ ನೀಡುವವರಾಗಿ ಅಲ್ಲದೆ, ಅಲ್ಪಾವಧಿಯ ಮಾರ್ಗದರ್ಶಕರು, ಸ್ನೇಹಿತರಾಗಿ ಮಾರ್ಪಡುತ್ತೇವೆ. ನಮ್ಮ ಸಣ್ಣ ಬೆಂಬಲವು ಅವರ ಶಿಕ್ಷಣ ಮತ್ತು ಭವಿಷ್ಯಕ್ಕೆ ದೊಡ್ಡ ಬುನಾದಿಯಾಗಬಲ್ಲದು.

ಅಸಾಧ್ಯವೇ ಇಲ್ಲದ ಜಗತ್ತು

ದೈಹಿಕ ಅಥವಾ ದೃಷ್ಟಿ ಸವಾಲುಗಳನ್ನು ಎದುರಿಸುತ್ತಿರುವ ಮಕ್ಕಳು ಮತ್ತು ವಯಸ್ಕರಿರುವ ಆಶ್ರಮ ಅಥವಾ ಶಾಲೆಯಲ್ಲಿ ನಾವು ಅಸಾಧಾರಣ ಮಾನಸಿಕ ಶಕ್ತಿ ಮತ್ತು ಧೈರ್ಯದ ಅಭಿವ್ಯಕ್ತಿಯನ್ನು ಕಾಣುತ್ತೇವೆ. ಅವರು ಎದುರಿಸುವ ಸವಾಲುಗಳು ದೊಡ್ದದಾಗಿದ್ದರೂ, ಅವರ ಮನಸ್ಸಿನ ಬಲ ನಮಗೆ ಪ್ರೇರಣೆಯಾಗುತ್ತದೆ. ಕನಸುಗಳನ್ನು ಕಾಣುವುದರಲ್ಲಿ, ಸಾಧನೆ ಮಾಡುವುದರಲ್ಲಿ ಅವರು ಹಿಂದಿರುವುದಿಲ್ಲ. ಬ್ರೈಲ್ ಲಿಪಿಯನ್ನು ಕಲಿತು ಓದುವ ಅವರ ಕೌಶಲ್ಯ, ತಮ್ಮ ಸೀಮಿತ ಸಾಮರ್ಥ್ಯಗಳಲ್ಲಿಯೇ ಸಂಗೀತವನ್ನು ನುಡಿಸುವ ಅವರ ಪ್ರತಿಭೆ, ಮತ್ತು ಜೀವನವನ್ನು ಸಂಪೂರ್ಣವಾಗಿ ಒಪ್ಪಿಕೊಂಡು ಮುನ್ನುಗ್ಗುವ ಅವರ ‘ಧೈರ್ಯ’ ಮತ್ತು ‘ಛಲ’ ಪ್ರಶಂಸನೀಯ.

ಚಿತ್ರಕಲೆ, ಸಂಗೀತ ಮತ್ತು ನಾಟಕಗಳಲ್ಲಿ ತೊಡಗಿಸಿಕೊಂಡು ಅವರು ತಮ್ಮ ಅಡಚಣೆಗಳನ್ನು ಮೀರಿದ ರೀತಿಯಲ್ಲಿ ಬದುಕುವರು. ಅವರ ಜೀವನದ ಹಂಬಲ, ಕಲಿಯುವ ಆಸಕ್ತಿ, ಸ್ವಾವಲಂಬನೆಯ ಪ್ರಯತ್ನ ನಮಗೆ ಪ್ರೇರಣೆ ನೀಡುತ್ತದೆ. ಅವರ ಹೃದಯ ಅಪಾರವಾದ ಪ್ರೇಮ ಮತ್ತು ನಿಷ್ಕಪಟತೆಯಿಂದ ತುಂಬಿರುತ್ತದೆ. ಅವರೊಂದಿಗೆ ಮಾತನಾಡುವಾಗ, ಕರುಣೆಯ ಬದಲು ಗೌರವ ಮತ್ತು ಸಮಾನತೆಯ ಭಾವನೆಯನ್ನು ವ್ಯಕ್ತಪಡಿಸುವುದು ಮುಖ್ಯ.

Visually Challenged

ಭೇಟಿಯ ಮಾರ್ಗಸೂಚಿಗಳು

ಯಾವುದೇ ಆಶ್ರಮ ಅಥವಾ ವಸತಿ ಗೃಹಗಳಿಗೆ ಭೇಟಿ ನೀಡುವ ಮೊದಲು, ಅನುಮತಿ ಪಡೆಯುವುದು ಮತ್ತು ಅವರ ನಿಯಮಗಳನ್ನು ಪಾಲಿಸುವುದು ಅತಿ ಮುಖ್ಯ. ಈ ಭೇಟಿಗಳು ಆ ಸ್ಥಳದ ನಿವಾಸಿಗಳಿಗೆ ತೊಂದರೆಯಾಗದಂತೆ ಇರಬೇಕು. ಈ ರೀತಿಯ ಭೇಟಿಗಳು ಅತ್ಯಂತ ಸೂಕ್ಷ್ಮವಾದವು. ಇದು ಪ್ರವಾಸಿಗರ ಮನೋರಂಜನೆಗಿಂತ ಹೆಚ್ಚಾಗಿ ಸೇವೆ ಮತ್ತು ಸಂವೇದನಶೀಲತೆಯ ಕೇಂದ್ರಬಿಂದುವಾಗಿರಬೇಕು. ಆ ಸಂಸ್ಥೆ ಮತ್ತು ಅಲ್ಲಿನ ಜನರ ಗೌರವ ಹಾಗೂ ಸುರಕ್ಷತೆಯ ಬಗ್ಗೆ ಕಾಳಜಿ ಇರಬೇಕು. ಕೊಡುಗೆ/ಉಪಹಾರ, ಹಣ್ಣು-ಹಂಪಲು, ಬಟ್ಟೆ, ಪುಸ್ತಕ, ಕಾರ್ಯಕ್ರಮ ಯೋಜನೆ ಎಲ್ಲ ಕಾರ್ಯಗಳಿಗೂ ಸಂಸ್ಥೆಯ ಪೂರ್ವಾನುಮತಿ ಅಗತ್ಯ. ಹಿರಿಯರು ವಿಶೇಷ ಚೇತನರು ಮತ್ತು ಮಕ್ಕಳೊಂದಿಗೆ ಸಹಾನುಭೂತಿಯಿಂದ ಸಂಭಾಷಣೆ ನಡೆಸುವುದು ಮುಖ್ಯ. ಅವರೊಡನೆ ಅನಗತ್ಯವಾದ ವಿಚಾರಗಳನ್ನು ಕೇಳುವುದು ಅಥವಾ ಹೇಳುವುದು ತಪ್ಪು.

ಈ 'ಸೇವಾ ಪಯಣ' ಕೇವಲ ಪ್ರವಾಸವಲ್ಲ, ಇದು ಹೃದಯದ ಶುದ್ಧೀಕರಣದ ಒಂದು ಮಹಾಯಾತ್ರೆ. ನಾವು ನೀಡುವ ಪ್ರೀತಿ, ನಾವು ಪಡೆಯುವ ಸಂತೋಷಕ್ಕಿಂತ ಹೆಚ್ಚು ಅಮೂಲ್ಯವಾಗಿದೆ. ಇಂಥ ಅರ್ಥಪೂರ್ಣ ಪ್ರವಾಸಗಳು ನಮಗೆ ಕರುಣೆ, ಕೃತಜ್ಞತೆ ಮತ್ತು ನಮ್ರತೆಯ ಪಾಠಗಳನ್ನು ಕಲಿಸುತ್ತವೆ. ವೃದ್ಧಾಶ್ರಮದ ಅಜ್ಜಿಯ ನಗು, ಅಂಧ ವಿದ್ಯಾರ್ಥಿಯ ಸ್ಫೂರ್ತಿ ಮತ್ತು ವಿಶೇಷ ಚೇತನರ ಧೈರ್ಯ ಅನಾಥ ಮಗುವಿನ ಆಲಿಂಗನದಂತಹ, ಅನುಭವಗಳು ನಮ್ಮ ಜೀವನದ ಸಮಸ್ಯೆಗಳು ಎಷ್ಟೊಂದು ಚಿಕ್ಕವು ಎಂದು ಅರಿವು ಮೂಡಿಸುತ್ತವೆ. ಆದ್ದರಿಂದ, ಈ ಮಾನವೀಯತೆಯ ಮಂದಿರಗಳಿಗೆ ಭೇಟಿ ನೀಡಿ, ನಿಮ್ಮ ಜೀವನಕ್ಕೂ ಒಂದು ಹೊಸ ಅರ್ಥವನ್ನು ಕಂಡುಕೊಳ್ಳಿ. ಈ ಪ್ರವಾಸ ಮುಗಿದ ಮೇಲೆ, ನಾವು ಖಾಲಿ ಕೈಯಲ್ಲಿ ಹಿಂದಿರುಗುವುದಿಲ್ಲ; “ನಮ್ಮೊಂದಿಗೆ ಕರುಣೆಯ ಹೃದಯ, ಕೃತಜ್ಞತೆಯ ಕಣ್ಣುಗಳನ್ನು ಹೊತ್ತು ಮರಳುತ್ತೇವೆ."

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?