ಅರಣ್ಯ ವಿಹಾರ… ಚಾರಣಕ್ಕಿನ್ನು ಚಿಂತೆ ಬೇಕಿಲ್ಲ
ಅರಣ್ಯ ಇಲಾಖೆ ಚಾರಣಿಗರನ್ನು ಗಮನದಲ್ಲಿಟ್ಟುಕೊಂಡು ʻಅರಣ್ಯ ವಿಹಾರʼ ಎಂಬ ವಿಶೇಷ ವೆಬ್ಸೈಟ್ ಒಂದಕ್ಕೆ ಚಾಲನೆ ನೀಡಿ ವರ್ಷವೇ ಕಳೆದಿದೆ. ರಾಜ್ಯದ ಎಲ್ಲ ಟ್ರೆಕ್ಕಿಂಗ್ ಪ್ರದೇಶಗಳಿಗೆ ಒಂದೇ ವೇದಿಕೆಯಲ್ಲಿ ಟಿಕೆಟ್ ಖರೀದಿಸುವ ಅವಕಾಶವನ್ನು ಈ ವೆಬ್ಸೈಟ್ ಮೂಲಕ ಇಲಾಖೆ ಕಲ್ಪಿಸಿಕೊಟ್ಟಿದ್ದು, ಒಂದು ಬಾರಿಗೆ 300 ಜನರಿಗೆ ಚಾರಣಕ್ಕೆ ಇಲ್ಲಿ ಅವಕಾಶ ನೀಡಿದೆ. ಸಂಚಾರ ದಟ್ಟಣೆ ಸೇರಿ ವಿವಿಧ ಕಾರಣಕ್ಕೆ ಮಿತಿ ಹಾಕಲಾಗಿದೆ.
- ಭಾಗ್ಯ ದಿವಾಣ
ತುಂತುರು ಮಳೆಯೇ ಇರಲಿ, ಮೈಸುಡುವ ಬಿಸಿಲೇ ಇರಲಿ ಚಾರಣ ಮಾಡುವ ಮನಸ್ಸಾದರೆ ಇದ್ಯಾವುದೂ ಲೆಕ್ಕಕ್ಕೆ ಬರುವುದೇ ಇಲ್ಲ. ಚಾರಣಕ್ಕೆ ಅಗತ್ಯವಾದ ವಸ್ತುಗಳನ್ನು ಪ್ಯಾಕ್ ಮಾಡಿಕೊಳ್ಳುವುದು, ಬೆನ್ನಿಗೆ ಬ್ಯಾಗ್ ಏರಿಸಿ ಹೊರಟೇ ಬಿಡುವ ಎನಿಸುತ್ತದೆ. ಚಾರಣದ ಹುಚ್ಚು ಹಾಗೆಯೇ..ಒಬ್ಬಂಟಿಯಾಗಿರಲಿ, ಗೆಳೆಯರ ಬಳಗವಿರಲಿ, ಕುಟುಂಬದ ಜತೆಗೇ ಆದರೂ ಸರಿಯೇ, ಟ್ರೆಕ್ಕಿಂಗ್ ಮಾಡಬೇಕೆನಿಸಿದರೆ, ತಾಣವನ್ನು ಹುಡುಕುವುದೇ ಕೆಲಸವಷ್ಟೇ. ಆದರೆ ಇಂಥ ಟ್ರೆಕ್ಕಿಂಗ್‌ಗಳು ಎಷ್ಟು ಸುರಕ್ಷಿತ..? ಈ ಪ್ರಶ್ನೆ ಮೂಡಿಸುವಂಥ ಅದೆಷ್ಟೋ ಘಟನೆಗಳಿಗೆ ನಾವು ನೀವೆಲ್ಲರೂ ಸಾಕ್ಷಿಯಾಗಿದ್ದೇವೆ.
ಇತ್ತೀಚೆಗಷ್ಟೇ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ನಿರ್ಬಂಧಿತ ಅರಣ್ಯ ಪ್ರದೇಶ ಬಿದಿರುತಲದಲ್ಲಿ ಅನುಮತಿಯಿಲ್ಲದೆ ಚಾರಣ ಮಾಡಿದ್ದಕ್ಕಾಗಿ 103 ಪ್ರವಾಸಿಗರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಅಲ್ಲದೆ ಎರಡು ಪ್ರವಾಸಿ ಬಸ್ ಮತ್ತು ಎರಡು ಪಿಕಪ್ ವಾಹನಗಳನ್ನು ವಶಪಡಿಸಿಕೊಂಡ
ಘಟನೆ ಎಲ್ಲರಿಗೂ ನೆನಪಿರಬಹುದು. ಇದಕ್ಕೆ ಹೊರತಾಗಿಯೂ ಚಾರಣಕ್ಕೆ ಹೋದವರು ಕಾಣೆಯಾಗಿರುವ ಬಗ್ಗೆ, ಅಪಘಾತಕ್ಕೆ ತುತ್ತಾಗಿರುವ ಅದೆಷ್ಟೋ ಸನ್ನಿವೇಶಗಳೂ ನಮ್ಮ ಸುತ್ತಲೂ ನಡೆಯುತ್ತಲೇ ಇರುತ್ತವೆ.

ಟ್ರೆಕ್ಕಿಂಗ್ ತೆರಳುವ ಮುನ್ನ
ಹಾಗೆ ನೋಡಿದರೆ ಚಾರಣಕ್ಕೆ ಸೂಕ್ತವಾದ ತಾಣವನ್ನು ಹುಡುಕುವುದಷ್ಟೇ ಚಾರಣಿಗನ ಕೆಲಸವಾ? ಖಂಡಿತವಾಗಿಯೂ ಅಲ್ಲ. ಅದಕ್ಕೆ ಹೊರತಾಗಿಯೂ ಚಾರಣಿಗನಾದವನಿಗೆ ಅನೇಕ ಜವಾಬ್ದಾರಿಗಳಿರುತ್ತವೆ. ಹವಾಮಾನಕ್ಕೆ ಸೂಕ್ತವಾದ ಚಾರಣ ಸ್ಥಳಗಳ ಆಯ್ಕೆ, ಪ್ರವೇಶಕ್ಕೆ ಅನುಮತಿಯ ಅಗತ್ಯವಿದೆಯೇ, ಹೋಗುವ ಮುನ್ನ ಯಾವೆಲ್ಲಾ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಮುಂತಾದ ಅನೇಕ ವಿಚಾರಗಳ ಬಗ್ಗೆ ಗಮನಹರಿಸಲೇ ಬೇಕಾಗುತ್ತದೆ.
ಚಾರಣಿಗನ ಇಂಥ ಈ ಸಮಸ್ಯೆಗಳಿಗೆ ಉತ್ತರವೆಂಬಂತೆ ಈಗಂತೂ ಅನೇಕ ತಂಡಗಳು, ಟ್ರಾವೆಲ್ ಏಜೆನ್ಸಿಗಳು ತಲೆ ಎತ್ತಿವೆ. ಇವುಗಳ ಮೂಲಕವೂ ಚಾರಣ ಸುಲಭ ಸಾಧ್ಯ. ಇಲ್ಲಿ ಅವರು ನಿಗದಿಪಡಿಸಿದಷ್ಟು ಮೊತ್ತವನ್ನು ಭರಿಸಿ, ಬುಕ್ಕಿಂಗ್ ಮಾಡಿಕೊಂಡು ಚಾರಣಕ್ಕೆ ತೆರಳುವುದಷ್ಟೇ ಕೆಲಸ. ಆದರೆ ಇಂಥ ಗುಂಪುಗಳು, ಏಜೆನ್ಸಿಗಳ ಬಗ್ಗೆ ಪೂರ್ಣ ಮಾಹಿತಿಗಳನ್ನು ಪಡೆದುಕೊಂಡೇ ಮುಂದಕ್ಕೆ ಹೆಜ್ಜೆಯಿಡಬೇಕಾದ ಅನಿವಾರ್ಯತೆಯನ್ನು ಅಲ್ಲಗಳೆಯುವಂತೆಯೂ ಇಲ್ಲ. ಆದರೆ ಈ ಎಲ್ಲ ಗೊಂದಲಗಳ ನಡುವೆಯೇ ಅರಣ್ಯ ಇಲಾಖೆಯೇ ಖುದ್ದು ಕಣಕ್ಕಿಳಿದಿದೆ. ಚಾರಣಿಗರ ನೆರವಿಗೆ ಬಂದಿರುವ ಇಲಾಖೆ, ಹೊಸ ಯೋಜನೆಯೊಂದನ್ನು ಜಾರಿಗೊಳಿಸಿ ಸದ್ದಿಲ್ಲದೇ ಕೆಲಸ ನಿರ್ವಹಿಸುತ್ತಿದೆ.

ʻಅರಣ್ಯ ವಿಹಾರʼ ಸೂಕ್ತ ಆಯ್ಕೆ
ಚಾರಣ ಮಾಡಲು ಬಯಸುವವರಿಗೆ ರಾಜ್ಯಾದ್ಯಂತ ಸೂಕ್ತವಾದ ತಾಣಗಳು ಯಾವವು? ಚಾರಣದ ಸ್ಥಳಗಳಲ್ಲಿ ಅಥವಾ ಅರಣ್ಯ ಪ್ರದೇಶಗಳಲ್ಲಿ ಮುಂಚಿತವಾಗಿ ಪ್ರವೇಶ ಶುಲ್ಕ ಭರಿಸಿಕೊಳ್ಳುವುದು, ಯಾವ ಸ್ಥಳಕ್ಕೆ ಯಾವ ತಿಂಗಳು ಅಥವಾ ಕಾಲ ಸೂಕ್ತ ಇಂಥ ಅನೇಕ ವಿಚಾರಗಳ ಬಗ್ಗೆ ಮಾಹಿತಿ ನೀಡಲು ಅರಣ್ಯ ಇಲಾಖೆಯು ʻಅರಣ್ಯ ವಿಹಾರʼ ಎಂಬ ವೆಬ್‌ಸೈಟ್ ಒಂದನ್ನು ಸಿದ್ಧಪಡಿಸಿದೆ. ಅಲ್ಲದೆ ವರ್ಷದ ಹಿಂದಷ್ಟೇ ಅರಣ್ಯ ಸಚಿವ ಈಶ್ವರ್ ಖಂಡ್ರೆಯವರು ಈ ವೆಬ್‌ಸೈಟ್ ಗೆ ಚಾಲನೆ ನೀಡಿದ್ದಾರೆ. ಈ ಮೂಲಕ ರಾಜ್ಯದ ಎಲ್ಲ ಟ್ರೆಕ್ಕಿಂಗ್ ಪ್ರದೇಶಗಳಿಗೆ ಒಂದೇ ವೇದಿಕೆಯಲ್ಲಿ ಟಿಕೆಟ್ ಖರೀದಿಸುವ ಅವಕಾಶವನ್ನು ಸಹ ಇಲಾಖೆ ನೀಡಿರುವುದು ವಿಶೇಷ. ಜತೆಗೆ ಒಂದು ಬಾರಿಗೆ 300 ಜನರಿಗೆ ಚಾರಣಕ್ಕೆ ಇಲ್ಲಿ ಅವಕಾಶ ಕಲ್ಪಿಸಿದ್ದು, ಸಂಚಾರ ದಟ್ಟಣೆ ಸೇರಿ ವಿವಿಧ ಕಾರಣಕ್ಕೆ ಮಿತಿ ಹಾಕಲಾಗಿದೆ.
ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕಲಬುರ್ಗಿ, ಕೊಡಗು, ಕೋಲಾರ, ರಾಮನಗರ, ಶಿವಮೊಗ್ಗ, ತುಮಕೂರು, ಉಡುಪಿ ಜಿಲ್ಲೆಯ ಪ್ರಮುಖ ಚಾರಣ ಸ್ಥಳಗಳನ್ನು ಗುರುತಿಸಲಾಗಿದೆ. ಪ್ರತಿ ಜಿಲ್ಲೆಯಲ್ಲೂ ಅನೇಕ ಚಾರಣ ಪಥಗಳಿದ್ದು, ಯಾವ ಚಾರಣ ಕೈಗೊಳ್ಳಬೇಕು, ಯಾವ ದಿನಾಂಕ ಎಂಬುದನ್ನು ವೆಬ್ ಸೈಟ್ ನಲ್ಲಿ ಸರಿಯಾಗಿ ಆಯ್ಕೆ ಮಾಡಿಕೊಂಡು ಪ್ರವೇಶ ಶುಲ್ಕ ಪಾವತಿಸಬೇಕಿರುವ ಜವಾಬ್ದಾರಿ ಚಾರಣಿಗನ ಮೇಲಿದೆ.

ಬುಕ್ಕಿಂಗ್ ಹೇಗೆ?
ಗೂಗಲ್‌ನಲ್ಲಿ www.aranyavihaara.karnataka.gov.in ಎಂದು ಟೈಪ್ ಮಾಡಿ ಅರಣ್ಯ ಇಲಾಖೆಯ ವೆಬ್‌ಸೈಟ್‌ಗೆ ಲಾಗ್‌ಇನ್ ಆಗಬೇಕು. ನಂತರ ಚಾರಣದ ಲಭ್ಯತೆ, ಜಿಲ್ಲೆ, ಚಾರಣದ ಹೆಸರು ಹಾಗೂ ದಿನಾಂಕವನ್ನು ಸೂಕ್ತವಾಗಿ ಆಯ್ಕೆ ಮಾಡಿಕೊಳ್ಳಬೇಕು. ಒಂದು ಟೀಂನಲ್ಲಿ 10 ಚಾರಣಿಗರಿಗೆ ಅವಕಾಶವಿದ್ದು, ಗುಂಪಿನ ನಾಯಕ ಬುಕ್ ಮಾಡಿದರೆ ಆತನ ಮೊಬೈಲಿಗೆ ಬುಕ್ಕಿಂಗ್ ಒಟಿಪಿ ಬರುತ್ತದೆ. ದೊಡ್ಡ ಚಾರಣಕ್ಕೆ 350 ರೂ. ಜತೆಗೆ ಜಿಎಸ್‌ಟಿ, ಸಣ್ಣ ಚಾರಣಕ್ಕೆ 250 ರೂ. ಜತೆಗೆ ಜಿಎಸ್‌ಟಿ ದರ ನಿಗದಿ ಮಾಡಲಾಗಿದೆ.
ಮಳೆ ಮತ್ತು ಇತರೆ ಅನಿಶ್ಚಿತ ಕಾರಣಗಳಿಂದ ಚಾರಣಗಳು ಕಡೆಯ ನಿಮಿಷದಲ್ಲಿ ಅಥವಾ ನೀವು ಬುಕ್ ಮಾಡಿದ ನಂತರ ರದ್ದಾಗಬಹುದು. ಆದ್ದರಿಂದ ಚಾರಣಕ್ಕೂ ಮುಂಚಿನ ದಿನ ಸಂಬಂಧಿಸಿದ ವಿಭಾಗ ಕಛೇರಿಯಲ್ಲಿ ಚಾರಣ ಕೈಗೊಳ್ಳಬಹುದಾದ ಮಾಹಿತಿಯನ್ನು ಪಡೆಯಲು ಚಾರಣಿಗರಿಗೆ ಇಲಾಖೆ ಸೂಚಿಸಿದೆ.
ಒಟ್ಟಿನಲ್ಲಿ ಪರಿಸರ ಪ್ರವಾಸೋದ್ಯಮದ ಕಾರಣದಿಂದ ಅರಣ್ಯಕ್ಕೆ ಧಕ್ಕೆ ಆಗಬಾರದು. ಅಲ್ಲದೆ ನಕಲಿ ಟಿಕೆಟ್ ಮಾರಾಟದ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಬೇಕು. ಹೀಗೆ ಏಕಕಾಲಕ್ಕೆ ಎರಡೂ ಸಮಸ್ಯೆಗಳಿಗೆ ಪರಿಹಾರವನ್ನು ಕಾಣುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಈ ದಿಟ್ಟ ಹೆಜ್ಜೆಯಿಟ್ಟಿದ್ದು, ಅರಣ್ಯ ವಿಹಾರ ವೆಬ್‌ಸೈಟ್ ಬಹು ಉಪಕಾರಿಯಾಗಿದೆ. ಆದರೆ ಚಾರಣದ ಸ್ಥಳಗಳ ಆಯ್ಕೆಯ ವಿಚಾರ ಹಾಗೂ ವೆಬ್‌ಸೈಟ್ ಜನಸಾಮಾನ್ಯರಿಗೆ ಇನ್ನೂ ಹೆಚ್ಚಿಗೆ, ಬೇಗನೆ ತಲುಪುವಂತೆ ಮಾಡಬೇಕಿರುವ ಜವಾಬ್ದಾರಿ ಮಾತ್ರ ಅರಣ್ಯ ಇಲಾಖೆಯ ಮೇಲಿದೆ.
ಚಾರಣಕ್ಕೆ ತೆರಳುವ ಎರಡು ದಿನಗಳ ಮೊದಲೇ ಟಿಕೆಟ್ ಬುಕ್ಕಿಂಗ್ ಮಾಡಿಕೊಳ್ಳಬೇಕಾಗುತ್ತದೆ. 48 ಗಂಟೆ ಮುಂಚಿತವಾಗಿ ಟಿಕೆಟ್ ರದ್ದು ಮಾಡುವ ಅವಕಾಶವನ್ನೂ ಸಹ ಇಲಾಖೆ ನೀಡಿದೆ. ಆದರೆ ಟಿಕೆಟ್ ರದ್ದು ಮಾಡಿದರೆ 75% ಟಿಕೆಟ್ ಹಣ ಮಾತ್ರ ಮರುಪಾವತಿ ಆಗಲಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಅರಣ್ಯ ಇಲಾಖೆಯ ಅರಣ್ಯ ವಿಹಾರ ವೆಬ್‌ಸೈಟ್ ಚಾರಣಿಗರಿಗೆ ಅನುಕೂಲಕರವಾಗಿದೆ. ಮುಂಗಡವಾಗಿಯೇ ಪ್ರವೇಶ ಶುಲ್ಕವನ್ನು ಭರಿಸುವ ಸೌಕರ್ಯವಿರುವುದರಿಂದ ಚಿಂತೆಯಿಲ್ಲದೇ ಟ್ರೆಕ್ಕಿಂಗ್ ಪ್ಲ್ಯಾನ್ ಮಾಡಿಕೊಳ್ಳಬಹುದು. ಚಾರಣಕ್ಕೆ ಒಂದು ಬಾರಿಗೆ 300 ಜನರಿಗೆ ಮಾತ್ರ ಅವಕಾಶ ಕಲ್ಪಿಸಿರುವ ಮೂಲಕ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು, ಪರಿಸರದ ರಕ್ಷಣೆಗೂ ಇದು ಸಹಕಾರಿಯಾಗಲಿದೆ.
- ಕಿರಣ್ ವಟಿ, ಚಾರಣಿಗ, ರಂಗಕರ್ಮಿ, ಹಿಮಚಾರಣಿಗ
ಅರಣ್ಯ ಇಲಾಖೆ ಕಳೆದ ವರ್ಷ ಅರಣ್ಯ ವಿಹಾರ ವೆಬ್‌ಸೈಟ್ ಲಾಂಚ್ ಮಾಡಿದೆ. ಇದರಲ್ಲಿ ರಿಜಿಸ್ಟರ್ ಮಾಡಿಕೊಂಡು, ಚಾರಣಕ್ಕೆ ತೆರಳುವುದರಿಂದ ಅನೇಕ ಅನುಕೂಲಗಳಿವೆ. ಮೊದಲಿನಂತೆ ಟ್ರೆಕ್ಕಿಂಗ್ ರೂಟ್ ಓಪನ್ ಇದೆಯೇ ಎಂದು ಎಲ್ಲರಲ್ಲೂ ವಿಚಾರಿಸಬೇಕಾಗಿಲ್ಲ. ಈ ವೆಬ್ಸೈಟ್ ಮೂಲಕ ಮಾಹಿತಿಗಳು ಸುಲಭದಲ್ಲಿ ಲಭ್ಯವಾಗುತ್ತದೆ. ರಿಜಿಸ್ಟ್ರೇಷನ್ ಪ್ರೊಸೀಜರ್ ಎಲ್ಲವೂ ಆನ್‌ಲೈನ್ ಮೂಲಕ ಇರುವುದುರಿಂದ ಸಮಯದ ಉಳಿತಾಯವಾಗುತ್ತದೆ. ಸ್ಲಾಟ್ ಓಪನ್ ಇದೆಯಾ ಎಂಬ ದೃಢೀಕರಣವೂ ಸಿಗುವಂತಾಗುತ್ತದೆ.
- ಹರಿಶಂಕರ್ ಮೋದೂರು
ಈ ವೆಬ್ಸೈಟ್ ಮೂಲಕ ಚಾರಣಕ್ಕೆ ಹೋಗುವುದೇ ಒಳ್ಳೆಯದು, ಅದು ಕಾನೂನುಬದ್ಧವೂ ಹೌದು. ಅನುಭವಿಗಳು, ಸಂಸ್ಥೆಗಳು ಚಾರಣಕ್ಕೆ ಕರೆದುಕೊಂಡುಹೋಗುತ್ತಾರೆ. ಆದರೆ ಅನಾಹುತಗಳು ಸಂಭವಿಸಿದಾಗ ಜವಾಬ್ದಾರಿ ತೆಗೆದುಕೊಳ್ಳುವವರು ಇರುವುದಿಲ್ಲ. ಆದರೆ ಅರಣ್ಯ ಇಲಾಖೆಯೇ ಇಂಥ ಯೋಜನೆಯನ್ನು ಜಾರಿಗೆ ತಂದು ಒಳ್ಳೆಯ ಕೆಲಸ ಮಾಡಿದೆ. ಈ ವೆಬ್‌ಸೈಟ್‌ನ ಮೂಲಕ ಬುಕ್ಕಿಂಗ್ ಮಾಡಿದ್ದೀರೆಂದರೆ ಅದು ದೃಢೀಕೃತವಾಗಿದೆಯೆಂದೇ ಅರ್ಥ. ಚಾರಣಕ್ಕೆ ನಿಮ್ಮ ಜತೆಗೆ ಗೈಡ್ ನನ್ನೂ ಕಳುಹಿಸಿಕೊಡುವ ಅರಣ್ಯ ಇಲಾಖೆಯ ಈ ಯೋಜನೆ ಚಾರಣಿಗರಿಗೆ ಸಾಕಷ್ಟು ಅನುಕೂಲಕರವಾಗಿದೆ. ಈ ವೆಬ್‌ಸೈಟನ್ನು ಇನ್ನಷ್ಟು ಅಭಿವೃದ್ಧಿಗೊಳಿಸಬೇಕು, ಹೊಸ ಹೊಸ ಚಾರಣ ಪಥಗಳನ್ನು ತೆರೆಯಬೇಕು ಎಂಬುದು ನನ್ನ ಅನಿಸಿಕೆ.
- ವಿನೋದ್ ಕುಮಾರ್ ಬಿ. ನಾಯ್ಕ್, ಪರಿಸರ ಪತ್ರಕರ್ತ