ಟಿಪ್ಸ್ ಕೇಳುವುದು ಈಜಿಪ್ಟಿನ ಕಲ್ಚರ್! ಪ್ರವಾಸಿಗರಿಗೆ ಶಾಕ್!
ಎಲ್ಲರನ್ನೂ ಒಂದೇ ತಕ್ಕಡಿಗೆ ಹಾಕಿ ತೂಗಲು ಬರುವುದಿಲ್ಲ ಎನ್ನುವುದಕ್ಕೂ ಎರಡು ಅನುಭವಗಳು ಕಾರಣವಾದವು. ಹೈ ವೇ ಒಂದರಲ್ಲಿ ಪೆಟ್ರೋಲ್ ಹಾಕಿಸಲು ನಿಂತೆವು. ಹಾಗೆ ವಾಶ್ ರೂಮ್ ಕಡೆ ಹೋದೆ. ಇಲ್ಲಿನ ಪೆಟ್ರೋಲ್ ಪಂಪುಗಳಲ್ಲಿ ಟಾಯ್ಲೆಟ್ ತುಂಬಾ ಸ್ವಚ್ಛವಾಗಿಟ್ಟಿರುತ್ತಾರೆ. ಜೊತೆಗೆ ಅಲ್ಲೊಬ್ಬ ವ್ಯಕ್ತಿ ಸದಾ ನಿಂತಿರುತ್ತಾನೆ. ಟಾಯ್ಲೆಟ್ ಒಳಗೆ ಹೋಗುವ ಮುನ್ನ ಅಲ್ಲಿದ್ದ ವ್ಯಕ್ತಿ ಎರಡೂ ಬೊಗಸೆಯಲ್ಲಿ ನೀರು ತುಂಬಿಸಿ ಕೊಂಡು ಕಮೋಡ್ ಮೇಲೆ ಹಾಕಿ ಸ್ವಚ್ಛ ಗೊಳಿಸಿದರು. ಇದನ್ನು ಒಂದೆರಡು ಬಾರಿ ರಿಪೀಟ್ ಮಾಡಿದರು. ಕರುಳು ಚುರ್ ಎಂದಿತು. ಅಚ್ಚರಿ ಎಂದರೆ ಆತ ಟಿಪ್ಸ್ ಕೇಳಲಿಲ್ಲ.
ನಿತ್ಯವೂ ಒಂದಲ್ಲ ಒಂದು ಕಾರಣಕ್ಕೆ ಸಹೋದರ ನಾಗೇಂದ್ರನ ಜತೆ ಮಾತುಕತೆ ಇದ್ದೇ ಇರುತ್ತದೆ. ಇವತ್ತಿಗೆ ಇಪ್ಪತ್ತು ದಿನದ ಹಿಂದೆ ಒಟ್ಟಿಗೆ ಎಲ್ಲಾದರೂ ಪ್ರಯಾಣ ಮಾಡಬೇಕು ಎನ್ನುವ ಮಾತು ಬಂದಿತು. ಆ ಕ್ಷಣಕ್ಕೆ ಈಜಿಪ್ಟ್ ನೋಡಿಲ್ಲ, ಹೋಗೋಣವೇ? ಎನ್ನುವ ನನ್ನ ಮಾತಿಗೆ ಒಂದು ಕ್ಷಣ ಕೂಡ ಯೋಚಿಸದೆ ಓಕೆ ಎಂದದ್ದು ನಾಗೇಂದ್ರ. ಹೀಗೆ ತೀರಾ ಅನಿಯತವಾದ ಮಾತುಗಳಲ್ಲಿ ಈಜಿಪ್ಟ್ ಪ್ರವಾಸ ಹೋಗುವುದು ಎಂದು ತೀರ್ಮಾನವಾಗಿ ಹೋಯ್ತು. ಅಲ್ಲಿಗೆ ಹೋಗಬೇಕು ಎಂದಾಕ್ಷಣ ಒಂದಷ್ಟು ಅಲ್ಲಿನ ವಿಷಯಗಳನ್ನು ತಿಳಿದುಕೊಳ್ಳುವುದು ಸಾಮಾನ್ಯ. ಹೀಗಾಗಿ ಅಲ್ಲಿನ ಬಗ್ಗೆ ಸಾಕಷ್ಟು ವಿಷಯ ಸಂಗ್ರಹಣೆ ಕೂಡ ಮಾಡಿಕೊಂಡೆವು. ಆದರೆ ಅಲ್ಲಿನ ಜನರ ಬಗ್ಗೆ, ದೇಶದ ಬಗ್ಗೆ, ಪ್ರವಾಸಿಗರ ಅಭಿಪ್ರಾಯ ಮಾತ್ರ ಓದಲು ಹೋಗಲಿಲ್ಲ. ಏಕೆಂದರೆ ಎಲ್ಲರೂ ಅವರಿಗೆ ದಕ್ಕಿದ ಅಂಶಗಳನ್ನು ಸತ್ಯ ಮತ್ತು ಅದೇ ಸತ್ಯ ಎನ್ನುವಂತೆ ಹೇಳುತ್ತಾರೆ. ಅದರಾಚೆ ನಿಂತು ನೋಡುವ ವ್ಯವಧಾನ ಎಲ್ಲಿಂದ ಬರಬೇಕು ಹೇಳಿ? ತಿಂಗಳ ನಂತರ ನೋಡಿದ ಜಾಗಗಳನ್ನು ತಕ್ಷಣ ಹೇಳಿ ಎಂದರೆ ತಡಬಡಾಯಿಸುವ ಜನ, ಆ ದೇಶದ ಬಗ್ಗೆ ಮತ್ತು ಜನರ ಬಗ್ಗೆ ಮಾತ್ರ ನಿಖರವಾದ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಇದು ನನಗೆ ಸದಾ ಅಚ್ಚರಿ. ಹತ್ತಾರು ವರ್ಷದ ಹಿಂದೆ ಹೋಗಿ ಬಂದವರು ಇನ್ನೂ ಅದೇ ಗುಂಗಿನಲ್ಲಿ ಆ ದೇಶದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಅಲ್ಲಿ ನೋಡಿದರೆ ಸಾಕಷ್ಟು ನೀರು ಹರಿದು ಹೋಗಿರುತ್ತದೆ. ಹೀಗಾಗಿ ಆನ್ ಲೈನ್ ಇರಬಹುದು ಅಥವಾ ಆಫ್ ಲೈನ್ ಇರಬಹುದು, ಸಮಾಜದ ಬಗ್ಗೆ, ಜನರ ಬಗ್ಗೆ ಮತ್ತು ಅವರ ರೀತಿರಿವಾಜುಗಳ ಬಗ್ಗೆ ನಾನು ಬೇರೆಯವರ ಅಭಿಪ್ರಾಯ ಕೇಳುವುದಿಲ್ಲ. ಪ್ರವಾಸಿಗನಾಗಿ ಹೋಗುವವನು ಅಭಿಪ್ರಾಯವನ್ನು ರೂಪಿಸಿಕೊಂಡು ಹೋಗಬಾರದು. ನಮ್ಮದೇ ಆದ ಅಭಿಪ್ರಾಯವನ್ನು ಅಲ್ಲಿನ ಅನುಭವಗಳ ಆಧಾರದ ಮೇಲೆ ಕಟ್ಟಿಕೊಳ್ಳಬೇಕು ಎನ್ನುವುದು ನನ್ನ ಅಭಿಪ್ರಾಯ. ಹೀಗಾಗಿ ಮನಸ್ಸನ್ನು ಖಾಲಿ ಸ್ಲೇಟು ಮಾಡಿಕೊಂಡು ಈಜಿಪ್ಟಿನ ಕೈರೊದಲ್ಲಿ ಇಳಿದೆವು.
ಇದನ್ನೂ ಓದಿ: ಶಕುನಾಪಶಕುನಗಳ ಪರಿಕಲ್ಪನೆ ನಮ್ಮ ದೇಶಕ್ಕೆ ಮಾತ್ರ ಸೀಮಿತವಲ್ಲ!
ಈ ನೆಲದಲ್ಲಿ ಇಳಿದು ಒಂದೆರಡು ತಾಸಿನಲ್ಲಿ ಈ ದೇಶದ ಜನರು ಮಾಡಿದ ಪ್ರತಿ ಕೆಲಸಕ್ಕೂ ಟಿಪ್ಸ್ ಕೇಳುವುದು ಸಾಮಾನ್ಯ ಎನ್ನುವ ವಿಷಯ ತಿಳಿದುಕೊಂಡೆವು. ಇದು ತೀರಾ ಕೆಳದರ್ಜೆಯಲ್ಲಿ ಕೆಲಸ ಮಾಡುವವರಲ್ಲಿ ಸಾಮಾನ್ಯ ಎಂದುಕೊಂಡರೆ ಅದು ತಪ್ಪು. ಈ ಟಿಪ್ಸ್ ಕೇಳುವ ಅಭ್ಯಾಸ ಎಲ್ಲಾ ವರ್ಗದಲ್ಲೂ ಸಮಾನವಾಗಿದೆ. ಒಂದು ಸಣ್ಣ ಘಟನೆ ಹೇಳುತ್ತೇನೆ, ಆಗ ನಿಮಗೆ ಇಲ್ಲಿನ ಟಿಪ್ಸ್ ಕಲ್ಚರ್ ಬಗ್ಗೆ ಅರಿವಾಗುತ್ತದೆ. ದಾರಿಯಲ್ಲಿ ನೀವು ನಿಂತು ಎರಡು ದಾರಿಯಲ್ಲಿ ಯಾವುದಕ್ಕೆ ಹೋಗಬೇಕು ಎಂದು ಸಂಶಯದಲ್ಲಿ ಅಲ್ಲಿನ ಸ್ಥಳೀಯನನ್ನು ಕೇಳಿದರೆ ಆತ ಈ ದಾರಿಯಲ್ಲಿ ಹೋಗಿ ಎಂದು ಹೇಳುತ್ತಾನೆ. ಬದಲಿಗೆ ನೀವು ಧನ್ಯವಾದಗಳು ಎಂದರೆ ಅಲ್ಲಿಗೆ ಲೆಕ್ಕ ಮುಗಿಯುವುದಿಲ್ಲ. ನಿಮಗೆ ಅಚ್ಚರಿ ಮತ್ತು ಗಾಬರಿ ಹುಟ್ಟಿಸುವಂತೆ ಆತ ಕೈ ಮುಂದೆ ಮಾಡುತ್ತಾನೆ. ಏಕೆ ಕೊಡಬೇಕು ಮತ್ತು ಎಷ್ಟು ಕೊಡಬೇಕು ಎನ್ನುವ ಗೊಂದಲ ಸಹಜವಾಗಿಯೇ ನಮ್ಮಲ್ಲಿ ಉಂಟಾಗುತ್ತದೆ. ಇದು ಬಹು ದೊಡ್ಡ ಕಲ್ಚರಲ್ ಶಾಕ್! ನಾನು ಪ್ರವಾಸ ಮಾಡಿದ ಎಲ್ಲಾ ದೇಶಗಳಲ್ಲಿ, ಇದೇ ಪ್ರಥಮ ಬಾರಿಗೆ ನಾನು ಇಂಥ ಟಿಪ್ಸ್ ಕಲ್ಚರ್ ನೋಡುತ್ತಿದ್ದೇನೆ! ಸಾಮಾನ್ಯವಾಗಿ ಹೊಟೇಲಿನಲ್ಲಿ ಸರ್ವರ್ ಗಳಿಗೆ , ಪ್ರವಾಸಿ ಗೈಡಿಗೆ ಇನ್ನಿತರ ಸಹಾಯ ಮಾಡಿದವರಿಗೆ ಟಿಪ್ಸ್ ಕೊಡುವುದು ಸಹಜ. ಅದು ಬಹಳ ಕಡೆ ಸಾಮಾನ್ಯವಾಗಿದೆ ಕೂಡ. ಅಮೆರಿಕದಂಥ ದೇಶದಲ್ಲಿ ಸರ್ವರ್ ಗಳಿಗೆ ಬಿಲ್ ಮೊತ್ತದ ಇಷ್ಟು ಪ್ರತಿಶತ ಟಿಪ್ಸ್ ಕೊಡಬೇಕು ಎಂದು ಬೋರ್ಡ್ ಕೂಡ ಹಾಕಿರುತ್ತಾರೆ. ಕೆಲವು ಕಡೆ ಸರ್ವಿಸ್ ಚಾರ್ಜ್ ಹೆಸರಿನಲ್ಲಿ ನಮ್ಮ ಅನುಮತಿ ಇಲ್ಲದೆ ಆ ಹಣವನ್ನು ಪಡೆದುಕೊಳ್ಳುತ್ತಾರೆ. ಆದರೆ ತೀರಾ ರಸ್ತೆಯಲ್ಲಿ ಅಡ್ರೆಸ್ ಕೇಳಿದ್ದಕ್ಕೆ ಅಥವಾ ಇಲ್ಲಿ ಟ್ಯಾಕ್ಸಿ ಎಲ್ಲಿ ಸಿಗುತ್ತೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಕ್ಕೆ ಕೂಡ ಟಿಪ್ಸ್ ಕೊಡಬೇಕು ಎಂದರೆ? ಹೋಗಲಿ ಕೊಡೋಣ ಎಂದರೆ ಎಷ್ಟು ಕೊಡುವುದು? ಪ್ರಥಮ ಬಾರಿ ಬಂದವರಿಗೆ ಸಹಜವಾಗೇ ಗೊಂದಲ ಉಂಟಾಗುತ್ತದೆ. ಇದೇನು ಈ ಜನ ಇಷ್ಟು ಚೀಪ್ ಎನ್ನಿಸಿ ಬಿಡುತ್ತದೆ. ಅದರಲ್ಲೂ ಕೆಲವರು ಇಂಥ ಸನ್ನಿವೇಶವನ್ನು ಬಳಸಿಕೊಂಡು ಪ್ರವಾಸಿಗಳ ಸುಲಿಗೆ ಕೂಡ ಮಾಡುತ್ತಾರೆ. ಇಷ್ಟು ಸಾಕಲ್ಲ, ನೆಟ್ಟಿಗರು ಈ ದೇಶವನ್ನು, ಇಲ್ಲಿನ ಜನರನ್ನು ಸ್ಕ್ಯಾಮರ್ಸ್ ಎಂದು ಕರೆದಿದ್ದಾರೆ. ದೇಶಕ್ಕೆ ದೇಶವೇ ಸುಲಿಗೆಗೆ ನಿಂತಿದೆ ಎನ್ನುವಂತೆ ಬರೆದಿದ್ದಾರೆ. ಇವರು ಹೇಳಿದ್ದು ಸುಳ್ಳು ಎಂದು ಸಾರಾಸಗಟಾಗಿ ತಳ್ಳಿ ಹಾಕುವಂತೆಯೂ ಇಲ್ಲ. ಹೊಟ್ಟೆ ಬಟ್ಟೆಗೆ ತತ್ವಾರ ಇರುವ ಟಾಂಗಾ ಮಾಲೀಕ ಅಥವಾ ಬದುಕಿನ ಕೊನೆಯ ಸ್ತರದಲ್ಲಿ ಊಟಕ್ಕೆ ಬಡಿದಾಡುವ ವ್ಯಕ್ತಿ ತಾನು ಮಾಡಿದ ಕೆಲಸಕ್ಕೆ ಒಂದಷ್ಟು ಪ್ರತಿಫಲ ಅಪೇಕ್ಷಿಸಿದರೆ ಉಪೇಕ್ಷಿಸಿ ಹೋಗಲಿ ಬಿಡು ಎನ್ನಬಹುದು. ಅವರ ಕೈಗೆ ಹೆಚ್ಚೇನೂ ಬೇಡ ಐದು ಅಥವಾ ಹತ್ತು ಈಜಿಪ್ಷಿಯನ್ ಡಾಲರ್ ಇಟ್ಟರೆ ಸಾಕು, ಖುಷಿಯಿಂದ ಮುಂದೆ ಹೋಗುತ್ತಾರೆ. ಲೆಕ್ಕಾಚಾರಕ್ಕೆ ಹೇಳುತ್ತೇನೆ; ಒಂದು ಈಜಿಪ್ಷಿಯನ್ ಡಾಲರ್ ಎಂದರೆ ಎರಡು ರೂಪಾಯಿ! ಅಂದರೆ ಅಲ್ಲಿ ನೀವು ಹತ್ತು ಡಾಲರ್ ಖರ್ಚು ಮಾಡಿದರೆ ಭಾರತ ಇಪ್ಪತ್ತು ರುಪಾಯಿ ಖರ್ಚು ಮಾಡಿದಕ್ಕೆ ಸಮ.
ಆದರೆ ತೀರಾ ಸರಕಾರಿ ಕೆಲಸದಲ್ಲಿ ಇದ್ದವರು ಕೂಡ ಕೈ ಒಡ್ಡಿದರೆ ಸಿಟ್ಟು ಬರುವುದು ಸಹಜ. ವಿಶ್ವ ಮಾನ್ಯತೆ ಪಡೆದಿರುವ ಸ್ಥಳವೊಂದರಲ್ಲಿ ಎಲೆಕ್ಟ್ರಿಕ್ ಕಾರ್ಟ್ ಮೂಲಕ ಐನೂರು ಮೀಟರ್ ದೂರ ಕರೆದುಕೊಂಡು ಹೋಗಿ ಬಿಡುತ್ತಾರೆ. ಅಲ್ಲಿಂದ ಮುಂದಕ್ಕೆ ನಾವು ನಡೆಯಬೇಕಾಗುತ್ತದೆ. ಈ ಸೇವೆ ಪಡೆಯಲು ಇಪ್ಪತ್ತು ಈಜಿಪ್ಷಿಯನ್ ಡಾಲರ್ ಶುಲ್ಕ ಕೊಟ್ಟಿದ್ದೆವು. ನಾನು ವಾಹನ ಚಲಾಯಿಸುವವನ ಪಕ್ಕದ ಸೀಟಿನಲ್ಲಿ ಕುಳಿತೆ. ಆತ ನಿರ್ಲಜ್ಜೆಯಿಂದ ಇದು ಬ್ಯುಸಿನೆಸ್ ಕ್ಲಾಸ್ ಸೀಟು, ಎಲ್ಲವೂ ಎಷ್ಟು ಚಂದ ಕಾಣುತ್ತಿದೆಯಲ್ಲವೇ ನನಗೆ ಹಣ ನೀಡು ಎಂದು ಪೀಡಿಸತೊಡಗಿದ. ಅವನಿಗೆ ನಯಾಪೈಸೆ ಕೊಡಲಿಲ್ಲ ಎನ್ನುವುದು ಬೇರೆ ಮಾತು. ಇನ್ನೊಬ್ಬ ನಮ್ಮೊಂದಿಗೆ ಐದಾರು ಹೆಜ್ಜೆ ಹಾಕಿ ನಮಗೆ ಅರ್ಥವಾಗದ ಭಾಷೆಯಲ್ಲಿ ಏನೇನೋ ಹೇಳಿ ಕೈ ಒಡ್ಡಿದ. ಹೀಗೆ ನಮಗೆ ಎದುರಾದ ಮುಕ್ಕಾಲು ಪಾಲು ಸ್ಥಳೀಯರು ಕೈ ಒಡ್ಡಿದವರೇ ಆಗಿದ್ದರು. ನಮ್ಮ ಮುಖ ನೋಡಿ ನಕ್ಕರೆ ಸಾಕು ಅವರ ನಮ್ಮನ್ನು ಈಗ ಟಿಪ್ಸ್ ಕೇಳುತ್ತಾರೆ ಎಂದು ನಾವು ಮಾತಾಡಿಕೊಳ್ಳುವಷ್ಟು ಟಿಪ್ಸ್ ರೇಜಿಗೆ ಹುಟ್ಟಿಸಿಬಿಟ್ಟಿತು.

ಸ್ಪೇನ್ ದೇಶಕ್ಕೆ ಹತ್ತಿರವಿರುವ ಕಾರಣ ಬಹಳಷ್ಟು ಸ್ಪ್ಯಾನಿಶರು ಅಲ್ಲಿ ಪ್ರವಾಸಿಗರಾಗಿ ಬಂದಿದ್ದರು. ಇಬ್ಬರು ದಂಪತಿಗಳಿಗೆ ಮೊಬೈಲ್ ಕೊಡಿ ನಿಮ್ಮಿಬ್ಬರ ಫೊಟೋ ತೆಗೆದುಕೊಡುತ್ತೇನೆ ಎಂದು ಸಹಜವಾಗಿ ನಾನು ಆಫರ್ ಮಾಡಿದೆ. ಅರೆ ಘಳಿಗೆ ಅವರು ಸಂಶಯಕ್ಕೆ ಬಿದ್ದರು. ನಾನೆಲ್ಲಿ ಟಿಪ್ಸ್ ಕೇಳುತ್ತೇನೋ ಎನ್ನುವ ಭಯ ಅವರದ್ದು. ನಾನು ಪ್ರವಾಸಿಗ ಎನ್ನುವುದು ಮನದಟ್ಟಾದ ಮೇಲೆ ಖುಷಿಯಿಂದ ನನ್ನೊಂದಿಗೆ ಬೆರೆತರು.
ಹೀಗೆಂದ ಮಾತ್ರಕ್ಕೆ ಎಲ್ಲರನ್ನೂ ಒಂದೇ ತಕ್ಕಡಿಗೆ ಹಾಕಿ ತೂಗಲು ಬರುವುದಿಲ್ಲ ಎನ್ನುವುದಕ್ಕೂ ಎರಡು ಅನುಭವಗಳು ಕಾರಣವಾದವು. ಹೈ ವೇ ಒಂದರಲ್ಲಿ ಪೆಟ್ರೋಲ್ ಹಾಕಿಸಲು ನಿಂತೆವು. ಹಾಗೆ ವಾಶ್ ರೂಮ್ ಕಡೆ ಹೋದೆ. ಇಲ್ಲಿನ ಪೆಟ್ರೋಲ್ ಪಂಪುಗಳಲ್ಲಿ ಟಾಯ್ಲೆಟ್ ತುಂಬಾ ಸ್ವಚ್ಛವಾಗಿಟ್ಟಿರುತ್ತಾರೆ. ಜೊತೆಗೆ ಅಲ್ಲೊಬ್ಬ ವ್ಯಕ್ತಿ ಸದಾ ನಿಂತಿರುತ್ತಾನೆ. ಟಾಯ್ಲೆಟ್ ಒಳಗೆ ಹೋಗುವ ಮುನ್ನ ಅಲ್ಲಿದ್ದ ವ್ಯಕ್ತಿ ಎರಡೂ ಬೊಗಸೆಯಲ್ಲಿ ನೀರು ತುಂಬಿಸಿ ಕೊಂಡು ಕಮೋಡ್ ಮೇಲೆ ಹಾಕಿ ಸ್ವಚ್ಛ ಗೊಳಿಸಿದರು. ಇದನ್ನು ಒಂದೆರಡು ಬಾರಿ ರಿಪೀಟ್ ಮಾಡಿದರು. ಕರುಳು ಚುರ್ ಎಂದಿತು. ಅಚ್ಚರಿ ಎಂದರೆ ಆತ ಟಿಪ್ಸ್ ಕೇಳಲಿಲ್ಲ. ಏನೂ ಮಾಡದೆ ಹಿಂದೆ ಮುಂದೆ ಓಡಾಡಿ ಟಿಪ್ಸ್ ಕೇಳಿದವರ ಸಂಖ್ಯೆ ಅಸಂಖ್ಯ. ಹೀಗಾಗಿ ಈ ವ್ಯಕ್ತಿ ನನಗೆ ಅಚ್ಚರಿಯಾಗಿ ಕಂಡರು . ಅವರಿಗೆ ಟಿಪ್ಸ್ ಕೊಟ್ಟುಬಂದೆ.
ಕೈರೋ ಸಿಟಿ ಸೆಂಟರ್ ನಲ್ಲಿ ಕುನಾಫ ಎನ್ನುವ ಸಿಹಿ ಖಾದ್ಯವನ್ನು ಮಾಡುವ ಅಂಗಡಿಯೊಂದಕ್ಕೆ ಹೋಗಿದ್ದೆವು. ಸಿಹಿ ತಿಂಡಿ ಎನ್ನುವುದು ಅದರಲ್ಲೂ ಇಲ್ಲಿ ಮಾಡುವ ಕುನಾಫ ಮತ್ತು ಬಕ್ಲಾವ ಎನ್ನುವ ಸಿಹಿ ಖಾದ್ಯ ನನಗೆ ಪಂಚಪ್ರಾಣ. ಆದರೆ ಆರೋಗ್ಯ ಕಾಳಜಿಯಿಂದ ಸಿಹಿ ತಿನಿಸುಗಳಿಗೆ ಬ್ರೇಕ್ ಹಾಕಿದ್ದೇನೆ. ಆದರೂ ಇಲ್ಲಿನ ಪ್ರಸಿದ್ಧ ತಿನಿಸು ಇಲ್ಲಿಗೆ ಬಂದು ತಿನ್ನದಿದ್ದರೆ ಬದುಕಿದ್ದು ತಾನೇ ಏನು ಪ್ರಯೋಜನ ಎಂದು ಕೊಂಡು ಕೇವಲ ಒಂದೊಂದು ತುಂಡು ಕೊಡುವಂತೆ ಅಂಗಡಿಯವನಲ್ಲಿ ವಿನಂತಿಸಿ ಕೊಂಡೆವು. ಆತ ಇಷ್ಟೇ ತೆಗೆದುಕೊಳ್ಳಬೇಕು ಎನ್ನುವ ಯಾವ ನಿಬಂಧನೆ ಹಾಕದೆ ನಾವು ಕೇಳಿದಷ್ಟು ಕೊಟ್ಟರು. ಹಣ ನೀಡಲು ಹೋದರೆ ಆತ ಹಣ ತೆಗೆದುಕೊಳ್ಳಲು ಒಪ್ಪಲೇ ಇಲ್ಲ. ಏನೇನೂ ಸಹಾಯ ಮಾಡದೆ ಟಿಪ್ಸ್ ಟಿಪ್ಸ್ ಎಂದು ದುಂಬಾಲು ಬೀಳುವ ಜನರ ಮಧ್ಯೆ ತನ್ನ ಪದಾರ್ಥವನ್ನು ನೀಡಿ ಕೂಡ ಸಿಹಿ ತಿಂಡಿ ಮಾಲೀಕ ಹಣವನ್ನು ಪಡೆಯಲಿಲ್ಲ! ಈ ಸಂದರ್ಭವನ್ನು ನಾಗೇಂದ್ರ ವಿಡಿಯೋ ಕೂಡ ಮಾಡಿಕೊಂಡರು.
ಒಂದು ದೇಶದ ಜನರನ್ನು, ದೇಶವನ್ನು ಅದೆಷ್ಟು ಸುಲಭವಾಗಿ ಸ್ಕ್ಯಾಮರ್ಸ್ ಎಂದು ಬಿಡುತ್ತೇವೆ ಅಲ್ವಾ? ಇಂಟರ್ ನೆಟ್ ನಲ್ಲಿ ಈ ದೇಶದ ಜನರೆಲ್ಲಾ ಸ್ಕ್ಯಾಮರ್ಸ್ ಎನ್ನುವ ಚಿತ್ರಣ ದೊರೆಯುತ್ತದೆ. ಬದುಕೆಂದರೆ ಅಲ್ಲಿ ಎಲ್ಲಾ ಥರದ ಜನ ಸಿಗುತ್ತಾರೆ. ನಾವು ಎಷ್ಟು ಸುಲಭವಾಗಿ ಜನರಲೈಸ್ ಮಾಡಿ ಬಿಡುತ್ತೇವೆ ಅಲ್ವಾ? ನಾವು ನಮ್ಮ ಅನುಭವ ಹಂಚುತ್ತೇವೆ. ನಮಗೆ ದಕ್ಕಿದ್ದು ಮಾತ್ರ ಸತ್ಯ ಎಂದು ಕೊಳ್ಳುತ್ತೇವೆ .ಅದರಾಚೆ ಇರಬಹುದಾದ ಬದುಕನ್ನು ನೋಡಲು ಕೂಡ ನಾವು ಇಚ್ಛಿಸುವುದಿಲ್ಲ. ಒಬ್ಬ ಹೇಳುವುದನ್ನೇ ನಂಬಿಕೊಂಡು, ಅದೇ ಮನಸ್ಥಿತಿ ಹೊತ್ತು ಬಂದರೆ ಬೇರೇನೂ ಕಾಣದು. ಪ್ರವಾಸ ಮಾಡುವವರು ಒಂದು ಅಭಿಪ್ರಾಯ ಹೊತ್ತು ಬರಬಾರದು. ನಮ್ಮ ಅಭಿಪ್ರಾಯ ರೂಪಿಸಿಕೊಳ್ಳಬೇಕು ಎನ್ನುವ ನನ್ನ ಮಾತುಗಳಿಗೆ ಇವು ಸಾಕ್ಷಿಯಾದವು.
ಅಂದಹಾಗೆ ಇಲ್ಲಿ ಟಿಪ್ಸ್ ಕೇಳಲು ಪ್ರಮುಖ ಕಾರಣ ಕಡಿಮೆ ವೇತನ ಮತ್ತು ಏರುತ್ತಿರುವ ಕಾಸ್ಟ್ ಆಫ್ ಲಿವಿಂಗ್. ಟಿಪ್ಸ್ ಕೇಳುವುದು ಸಮಾಜದ ಒಂದು ಭಾಗವಾಗಿ ಹೋಗಿದೆ . ಐವತ್ತೊಂದು ಪ್ರತಿಶತ ಈ ದೇಶದ ಜಿಡಿಪಿ ಬರುವುದು ಸರ್ವಿಸ್ ಇಂಡಸ್ಟ್ರಿ ಮೂಲಕ! ಹೀಗಾಗಿ ಪ್ರವಾಸಿಗರಾಗಿ ಹೋದವರಿಗೆ ಟಿಪ್ಸ್ ಕೇಳುವುವರೆಲ್ಲಾ ಸ್ಕ್ಯಾಮರ್ಸ್ ಎನ್ನಿಸುವುದು ಸಹಜವಾಗಿದೆ. ಆದರೆ ಅದರ ಹಿಂದಿನ ನೋವು ಕರಾಳತೆ ನೋಡುವ ಮನಸ್ಸು ಮತ್ತು ವ್ಯವಧಾನ ಪ್ರವಾಸಿಗರಿಗೆ ಇರುವುದಿಲ್ಲ ಎನ್ನುವುದು ಕೂಡ ಅಷ್ಟೇ ಸತ್ಯವಾಗಿದೆ.