Monday, June 29, 2026
Monday, June 29, 2026

ಎರಡು ಪ್ರವಾಸ ಕಥನಗಳು

ಅಂದಿನ ಸೋವಿಯತ್ ಒಕ್ಕೂಟಕ್ಕೆ ಭೇಟಿನೀಡಿದ್ದ ಜಿಎಸ್‌ಎಸ್, ಅಲ್ಲಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಸೂಕ್ಷ್ಮವಾಗಿ ಗಮನಿಸಿದರು. ಮಾಸ್ಕೋದ ರೆಡ್ ಸ್ಕ್ವೇರ್, ಅಲ್ಲಿನ ಮೆಟ್ರೋ ರೈಲುಗಳ ಭವ್ಯತೆ ಮತ್ತು ರಷ್ಯಾದ ಸಾಹಿತ್ಯದ ಮೇಲೆ ಜನರಿಗಿರುವ ಗೌರವವನ್ನು ಅವರು ವರ್ಣಿಸಿದ್ದಾರೆ. ಸಮಾಜವಾದಿ ವ್ಯವಸ್ಥೆಯಲ್ಲಿನ ಸಕಾರಾತ್ಮಕ/ನಕಾರಾತ್ಮಕ ಅಂಶಗಳನ್ನು ಅತಿಶಯೋಕ್ತಿಯಿಲ್ಲದೆ ಕಟ್ಟಿಕೊಟ್ಟಿದ್ದಾರೆ.

  • ಬಾಲಚಂದ್ರ ಹೆಗಡೆ

ಕಳೆದ ವಾರ ಧಾರವಾಡದ ಒಂದು ಪುಸ್ತಕದ ಅಂಗಡಿಯಲ್ಲಿ ಅಕಸ್ಮಾತಾಗಿ ʻಎರಡು ಪ್ರವಾಸ ಕಥನಗಳುʼ ಪುಸ್ತಕ ಕಣ್ಣಿಗೆ ಬಿತ್ತು. ತಿರುವಿ ನೋಡಿದಾಗ ಇದು ರಾಷ್ಟ್ರ ಕವಿ ದಿವಂಗತ ಜಿ.ಎಸ್. ಶಿವರುದ್ರಪ್ಪನವರ ʻನನ್ನ ಮಾಸ್ಕೋದಲ್ಲಿ 22 ದಿನʼ ಹಾಗೂ ʼಇಂಗ್ಲೆಂಡಿನಲ್ಲಿ ಚತುರ್ಮಾಸʼ ಎಂಬ ಎರಡು ಪ್ರವಾಸಿ ಕಥನಗಳ ಅಪರೂಪದ ಕೃತಿ ಎಂದು ತಿಳಿಯಿತು. ಖರೀದಿಸಿ ಓದಿ ಮುಗಿಸಿದೆ. ಸ್ವತಃ ನಾನೇ ಆ ದೇಶಗಳಲ್ಲಿ ಪ್ರವಾಸ ಮಾಡಿದ ಅನುಭವವಾಯಿತು. ʻಮಾಸ್ಕೋದಲ್ಲಿ 22 ದಿನʼ ಕೃತಿಗೆ 1973ರಲ್ಲಿ ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ ಸಿಕ್ಕಿದೆ. ʻಮುಸ್ಸಂಜೆಯ ಕಡಲುʼ ಹಾಗೂ ʻಗಂಗೆಯ ಶಿಖರದಲ್ಲಿʼ ಇವುಗಳೂ ಶ್ರೀಯುತರ ಪ್ರವಾಸ ಕಥನಗಳು. ಅವರ ಸಾಹಿತ್ಯದ ಬದುಕಿನ ಪಯಣದಲ್ಲಿ ಬರೆದದ್ದು ನಾಲ್ಕು ಪ್ರವಾಸಿ ಕಥನಳನ್ನು. ಎಲ್ಲವೂ ಅದ್ಭುತವಾಗಿವೆ.

ಇದನ್ನೂ ಓದಿ: ಮೇಘಗಳ ನಾಡಲ್ಲಿ ಮಾವ್ಲಿನಾಂಗ್‌

ಮಾಸ್ಕೋದಲ್ಲಿ ಇಪ್ಪತ್ತೆರಡು ದಿನಗಳು

ಭಾರತ ಹಾಗೂ ಸೋವಿಯತ್ ಸಾಂಸ್ಕೃತಿಕ ವಿನಿಮಯ ಯೋಜನೆಯ ಅಡಿಯಲ್ಲಿ 1972ರಲ್ಲಿ ಜಿಎಸ್‌ಎಸ್ ಅವರು ಮೊದಲ ವಿದೇಶ ಪ್ರಯಾಣ ಮಾಡಿದರು. ಅದರಲ್ಲೂ ಆಗಿನ ಅಖಂಡ ಸೋವಿಯತ್ ಒಕ್ಕೂಟದ ರಾಜಧಾನಿ ಮಾಸ್ಕೋ ನಗರಕ್ಕೆ ಪ್ರವಾಸ ಕೈಗೊಂಡಿದ್ದರು.

ಸಮಾಜವಾದಿ ನೆಲದ ಸೊಬಗು

ಅಂದಿನ ಸೋವಿಯತ್ ಒಕ್ಕೂಟಕ್ಕೆ ಭೇಟಿನೀಡಿದ್ದ ಜಿಎಸ್‌ಎಸ್, ಅಲ್ಲಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಸೂಕ್ಷ್ಮವಾಗಿ ಗಮನಿಸಿದರು. ಮಾಸ್ಕೋದ ರೆಡ್ ಸ್ಕ್ವೇರ್, ಅಲ್ಲಿನ ಮೆಟ್ರೋ ರೈಲುಗಳ ಭವ್ಯತೆ ಮತ್ತು ರಷ್ಯಾದ ಸಾಹಿತ್ಯದ ಮೇಲೆ ಜನರಿಗಿರುವ ಗೌರವವನ್ನು ಅವರು ವರ್ಣಿಸಿದ್ದಾರೆ. ಸಮಾಜವಾದಿ ವ್ಯವಸ್ಥೆಯಲ್ಲಿನ ಸಕಾರಾತ್ಮಕ/ನಕಾರಾತ್ಮಕ ಅಂಶಗಳನ್ನು ಅತಿಶಯೋಕ್ತಿಯಿಲ್ಲದೆ ಕಟ್ಟಿಕೊಟ್ಟಿದ್ದಾರೆ.

ಕೃತಿಯ ವೈಶಿಷ್ಟ್ಯಗಳು

ಜಿಎಸ್‌ಎಸ್ ಕವಿಯಾದ್ದರಿಂದ, ಅವರ ಪ್ರವಾಸ ಕಥನದ ಭಾಷೆ ಅತ್ಯಂತ ಸುಂದರ ಮತ್ತು ಹರಿತವಾಗಿದೆ. ಅವರ ಬರಹ ಕಾವ್ಯಾತ್ಮಕವಾಗಿದೆ. ಇದು ಬರೀ ಒಂದೆಡೆಯಿಂದ ಮತ್ತೊಂದೆಡೆಗೆ ಹೋದ ವರದಿಯಲ್ಲ; ಭಾರತೀಯ ಪರಂಪರೆ ಮತ್ತು ಪಾಶ್ಚಾತ್ಯ ಆಧುನಿಕತೆಯ ನಡುವಿನ ತುಲನಾತ್ಮಕ ನೋಟ. ಅಲ್ಲಿನ ಗೋಡೆಗಳು, ಚರ್ಚ್‌ಗಳು, ಜಾರ್ ದೊರೆಗಳ ಐಷಾರಾಮಿ ಅರಮನೆಗಳು. ಸ್ಮಾರಕಗಳು ಇವೆಲ್ಲವುಗಳಿಗಿಂತ ಅಲ್ಲಿನ ಜನರ ಮನಸಿಗೆ ಹೆಚ್ಚು ಪ್ರಾಮುಖ್ಯತೆ ಕೊಟ್ಟಂತೆ ಅನಿಸುತ್ತದೆ. ಜನರ ಎಲ್ಲಾ ಅವಶ್ಯಗಳನ್ನು ಕಮ್ಯೂನಿಸ್ಟ್ ದೇಶವಾದ್ದರಿಂದ ಸರಕಾರವೇ ನೋಡಿಕೊಳ್ಳುತ್ತದೆ. ಹಾಗಾಗಿ ಅಲ್ಲಿನ ಜನರ ಮನಸ್ಥಿತಿ ಯಂತ್ರದಂತೆ ಆಗಿಹೋಗಿದೆ ಎಂದು ವಿವರಿಸಿದ್ದಾರೆ. ಸಸ್ಯಾಹಾರಿಯಾದ ಅವರಿಗೆ ಅಲ್ಲಿ ಆಗುತ್ತಿದ್ದ ಕಷ್ಟಗಳನ್ನು ನವಿರಾದ ಹಾಸ್ಯದ ಮೂಲಕ ವಿವರಿಸಿದ್ದಾರೆ. ಅಲ್ಲಿಯ ಜನರ ಸಾಂಸ್ಕೃತಿಕ ಬದುಕಿನ ಭಾಗವಾದ ನಾಟಕಗಳು, ಬ್ಯಾಲೆ, ಸರ್ಕಸ್ ಅವುಗಳನ್ನು ನೋಡಿ ಆನಂದಿಸಿ, ಅನುಭವಿಸಿ ಬರೆದಿದ್ದಾರೆ. ಲೆನಿನ್ ಕ್ರಾಂತಿಯ ನಂತರ ಅವರು ದೇಶ ಕಟ್ಟಿದ ರೀತಿಯನ್ನು ಹೊಗಳಿದ್ದಾರೆ. ಅಲ್ಲಿಯ ಅಗಲವಾದ ರಸ್ತೆಗಳು ಅವುಗಳನ್ನು ಸ್ವಚ್ಛವಾಗಿಡುವ ರೀತಿ ಎಲ್ಲವನ್ನೂ ನೋಡಿ ನಮ್ಮ ಜನ ಮಾತ್ರ ಸ್ವಚ್ಛತೆಯ ವಿಷಯದಲ್ಲಿ ಯಾಕೆ ಹೀಗೆ? ಎಂದು ವಿಷಾದಿಸಿದ್ದಾರೆ. ಮಾಸ್ಕೋ ವಿಶ್ವವಿದ್ಯಾಲಯದ ಪ್ರಾಚ್ಯ ಭಾಷಾ ಭೋದಕ ಸಂಸ್ಥೆಯಲ್ಲಿ ತಮಿಳು, ತೆಲಗು, ಮರಾಟಿ, ಉರ್ದು, ಬೆಂಗಾಲಿ ಈ ಎಲ್ಲ ಭಾಷೆಗಳು ಪೂರಕ ವಿಷಯಗಳಾಗಿ ಭೋಧಿಸಲ್ಪಡುತ್ತಿದ್ದರೂ ಕನ್ನಡಕ್ಕೆ ಸ್ಥಾನ ಕೊಡದೆ ಇದ್ದುದರ ಬಗ್ಗೆ ಬೇಸರ ಪಟ್ಟು ಅಲ್ಲಿನ ಮುಖ್ಯಸ್ಥರನ್ನು ಈ ಬಗ್ಗೆ ಪ್ರಶ್ನಿಸಿದರಂತೆ. ಈ ಪ್ರವಾಸಿ ಕಥನ ಓದುತ್ತಾ ಹೋದರೆ ನಾವೇ ಮಾಸ್ಕೋದಲ್ಲಿ ಜಿಎಸ್‌ಎಸ್ ಅವರೊಡನೆ ಸಂಚರಿಸಿದ ಅನುಭವ ಕೊಡುತ್ತದೆ.

Untitled design (6)

ಇಂಗ್ಲೆಂಡಿನಲ್ಲಿ ಚಾತುರ್ಮಾಸ: ಪಾಶ್ಚಾತ್ಯ ಶಿಸ್ತಿನ ದರ್ಶನ

ಈ ವಿಭಾಗವು ಲೇಖಕರು ಲಂಡನ್ ಮತ್ತು ಕೇಂಬ್ರಿಡ್ಜ್ ನಗರಗಳಲ್ಲಿ ಕಳೆದ ನಾಲ್ಕು ತಿಂಗಳ ಅನುಭವಗಳನ್ನು ಒಳಗೊಂಡಿದೆ. ಜಿಎಸ್‌ಎಸ್ ಅವರು ಕೇವಲ ಪ್ರೇಕ್ಷಣೀಯ ಸ್ಥಳಗಳನ್ನು ವರ್ಣಿಸದೆ, ಅಲ್ಲಿನ ಜನರ ಜೀವನಕ್ರಮ, ಶಿಕ್ಷಣ ವ್ಯವಸ್ಥೆ ಮತ್ತು ಶಿಸ್ತನ್ನು ಗಮನಿಸುತ್ತಾರೆ. ಹೈಡ್ ಪಾರ್ಕ್‌ನ ಮುಕ್ತ ಚರ್ಚೆಗಳು, ಲಂಡನ್ ನಗರದ ಅಚ್ಚುಕಟ್ಟುತನ ಮತ್ತು ಬ್ರಿಟಿಷ್ ಸಂಸ್ಕೃತಿಯಲ್ಲಿನ ವೈಚಾರಿಕತೆಯನ್ನು ಅವರು ಒಬ್ಬ ವಿಮರ್ಶಕನ ಕಣ್ಣಿನಿಂದ ನೋಡಿದ್ದಾರೆ. 50 ವರ್ಷಗಳ ಹಿಂದೆ ಒಬ್ಬ ಭಾರತೀಯ ವಿದ್ವಾಂಸನಿಗೆ ಪಾಶ್ಚಾತ್ಯ ಜಗತ್ತು ಹೇಗೆ ಭಾಸವಾಯಿತು ಎಂಬುದು ಇಲ್ಲಿನ ಸ್ವಾರಸ್ಯ. ಜಿಎಸ್‌ಎಸ್ ಅವರ ಮಾತುಗಳಲ್ಲೇ ಈ ಎರಡು ಪ್ರವಾಸಿ ಕಥನಗಳ ಬಗ್ಗೆ ಉಲ್ಲೇಖಿಸುವುದಾದರೆ, ʻವರ್ಡ್ಸ ವರ್ತ್‌ ಕವಿಯ ದೃಷ್ಟಿಯಲ್ಲಿ ಇಂಗ್ಲೆಂಡ್ ಲೇಕ್ ಡಿಸ್ಟ್ರಿಕ್ಟ್, ಮನುಷ್ಯ ಈ ಮಣ್ಣಿನ ಮೇಲೆ ಕಂಡಿರಬಹುದಾದ ಅತ್ಯಂತ ಸುಂದರ ಸ್ಥಳಗಳಲ್ಲಿ ಒಂದು. ಇಂಗ್ಲೆಂಡ್ ನಾಟ್ಯ ಪ್ರತಿಭೆಯ ಉಗಮಸ್ಥಾನವಾದ ಶೇಕ್ಸ್ ಪಿಯರ್ ಮನೆ ಅಂದು ಹೇಗಿತ್ತೊ ಇಂದು ಹಾಗೆಯೇ ಇದೆ. ಮಾಸ್ಕೋದ ಕೆಂಪು ಚೌಕದಲ್ಲಿ ಸೋವಿಯತ್ ಕಮ್ಯುನಿಸ್ಟರು ಧರ್ಮವನ್ನು ದೂರೀಕರಿಸಿ ಇದ್ದ ಚರ್ಚ್‌ಗಳನ್ನೆಲ್ಲಾ ವಸ್ತು ಸಂಗ್ರಹಾಲಯ ಮಾಡಿ, ಬದಲಿಗೆ ಲೆನಿನ್ನನನ್ನೇ ದೇವರ ನಿಲುವಿಗೆ ಏರಿಸಿ ಅವನ ಶವಾಲಯವನ್ನೇ ದೇಗುಲವನ್ನಾಗಿ ಮಾಡಿಕೊಂಡಂತೆ ತೋರುತ್ತದೆ. ಮತ ಮೌಢ್ಯಗಳ ಬೇಲಿಯಾಚೆ ಅನಿರ್ಭಂದ ಚೇತನಕ್ಕೆ ಸ್ಮಾರಕವಾಗಿರುವ ಟಾಲ್ಸ್ಟಾಯ್ ಸಮಾಧಿಯನ್ನು ನೋಡಿದರೆ ಅದು ಮಲೆನಾಡ ಪರಿಸರವನ್ನು ನೆನಪಿಸುತ್ತದೆ. ಪ್ಯಾರಿಸ್ ನಗರವೆಂದರೆ ಭೋಗ ವೈಭವಗಳ ರಾಜಧಾನಿ. ಬೆಡಗಿನ, ಬೆಳಕಿನ, ವಿಲಾಸಗಳ ಮಾಯಾನಗರಿ. ಸಾಹಿತಿಗಳ, ಕಲಾವಿದರ, ಶ್ರೀಮಂತರ, ಕ್ರಾಂತಿಕಾರಿಗಳ ಬೀಡುʼ. ಹೀಗೆ ಜಿಎಸ್‌sssಎಸ್ ಅವರ ಪ್ರವಾಸಿ ಕತನದ ಸೊಗಸೆಂದರೆ ಸ್ಥಳ ವಿಶೇಷದೊಂದಿಗೆ ಅಲ್ಲಿ ಜನರ ಸಾಮಾಜಿಕ ಸಾಂಸ್ಕೃತಿಕ ಜೀವನ ಶೈಲಿಯ ವಿವರಣೆ ಹಾಗೂ ತುಲನಾತ್ಮಕವಾಗಿ ನಮ್ಮ ಸಂಸ್ಕೃತಿಯೊಡನೆ ಹೋಲಿಕೆ. ಸಕಾರಾತ್ಮಕ ಹಾಗೂ ನಕಾರಾತ್ಮಕ ಅಂಶಗಳ ಅವಲೋಕನೆ.

ಪ್ರಸ್ತುತತೆ

ಇಂದು ಜಗತ್ತು ಮೊಬೈಲ್ ಮತ್ತು ಬೆರಳ ತುದಿಯಲ್ಲಿದೆ. ಪ್ರವಾಸ ಮಾಡುವುದು ಮೊದಲಿನಷ್ಟು ಕಷ್ಟವಿಲ್ಲ. ಆದರೆ, 50 ವರ್ಷಗಳ ಹಿಂದೆ ಯಾವುದೇ ಆಧುನಿಕ ತಂತ್ರಜ್ಞಾನವಿಲ್ಲದ ಕಾಲದಲ್ಲಿ, ಜಿಎಸ್‌ಎಸ್ ಅವರು ಯುರೋಪ್ ಹಾಗೂ ಅವಿಭಜಿತ ರಷ್ಯಾ ಪ್ರವಾಸ ಮಾಡಿ ತಮ್ಮ ಪ್ರವಾಸಿ ಅನುಭವಗಳನ್ನು ತೆರೆದಿಟ್ಟ ರೀತಿ ಇಂದಿನ ಪ್ರವಾಸಿಗರಿಗೆ ಹೊಸ ದೃಷ್ಟಿಕೋನ ನೀಡುತ್ತದೆ. ಒಬ್ಬ ಪ್ರವಾಸಿ ಕೇವಲ ಕಣ್ಣುಗಳಿಂದ ನೋಡಬಾರದು, ಮನಸಿನಿಂದ ಅನುಭವಿಸಬೇಕು ಎಂಬುವುದಕ್ಕೆ ಈ ಕೃತಿಯೇ ಸಾಕ್ಷಿ.

ಎರಡು ಪ್ರವಾಸ ಕಥನಗಳು

ಲೇಖಕರು : ದಿ. ಜಿ ಎಸ್ ಶಿವರುದ್ರಪ್ಪ

ಪ್ರಕಾಶಕರು: ವಸಂತ ಪ್ರಕಾಶನ ಬೆಂಗಳೂರು

ಬೆಲೆ : 140

ಪುಟಗಳು : 234

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!