Tuesday, April 21, 2026
Tuesday, April 21, 2026

ಪ್ರಕೃತಿಯೊಡನೆ ಲಯವಾಗುವ ಪ್ರಬಂಧಗಳು

ಶಶಿಧರ ಹಾಲಾಡಿಯವರ ಪ್ರಬಂಧಗಳುತನ್ನ ಸಹಜ ಶಬ್ಧಸೌಂದರ್ಯದಿಂದ ಸರಳತೆಯಿಂದ ಗೆಲ್ಲುತ್ತ್ತವೆ. ಅವರಲ್ಲಿ ಎಲ್ಲಿಯೂ ತನ್ನನ್ನು ತಾನು ಪ್ರೊಜೆಕ್ಟ್ ಮಾಡಿಕೊಳ್ಳಬೇಕೆನ್ನುವ ಹಮ್ಮುಇಲ್ಲ. ಅವರ ಒಂಟಿತನ ವಿಮುಕ್ತಿಯ ಘೋಷವಲ್ಲ; ಅದು ಸಮಾಧಾನದ ಹುಡುಕಾಟ. ಇದರಲ್ಲಿ ದಾರಿ ಕಥೆಯಾಗುತ್ತದೆ, ಮೌನ ಭಾಷೆಯಾಗುತ್ತದೆ, ಮತ್ತು ಯಾತ್ರಿಕನೇ ಪಠ್ಯವಾಗುತ್ತಾನೆ. ಪಶ್ಚಿಮದ lone traveler ಅಹಂನನ್ನು ಕಿತ್ತುಹಾಕಲು ಹೊರಟರೆ, ಶಶಿಧರ ಹಾಲಾಡಿಯವರ ಯಾತ್ರಿಕನು ಅಹಂನ ಜೊತೆ ಮಾತುಕತೆ ನಡೆಸುತ್ತಾನೆ. ಓದಲೇಬೇಕಾದ ಪುಟ್ಟ ಕೃತಿ ಇದು.

ಶಶಿಧರ ಹಾಲಾಡಿಯವರ ಕೃತಿಗಳನ್ನು ಓದುವಾಗ ಮುಖ್ಯವಾಗಿ ಅನುಭವಕ್ಕೆ ಬರುವುದು ಅವರ ಪರಿಸರ ಪ್ರೇಮ. ಅವರ ಬಾಲ್ಯದ ಪರಿಸರ ಅವರನ್ನು ದಟ್ಟವಾಗಿ ಕಾಡುತ್ತಿರುತ್ತದೆ, ಅವು ಅಕ್ಷರ ರೂಪದಲ್ಲಿ ಆಪ್ತವಾಗಿ ಮೂಡುತ್ತವೆ. ಇದು ಅವರ ಕಾದಂಬರಿಗಳಾದ ’ಅಬ್ಬೆ’ ಮತ್ತು ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಲ್ಲಿ ಬರೆದ ’ನದಿ ದಾಟಿದವರು’ ಇವುಗಳಲ್ಲಿ ಕಾಣಬಹುದು. ನೆಲ, ಬಾನು, ಗುಡ್ಡ, ಚಾರಣ ಇವು ಅವರಿಗೆ ತುಂಬಾ ಪ್ರಿಯವಾದ ವಸ್ತು. ಕೆಲವು ವರ್ಷಗಳ ಹಿಂದೆ ಅವರು ಅಮೇರಿಕಾಕ್ಕೆ ಹೋದಾಗಲೂ ಅವರು ಅಲ್ಲಿನ ಸಿರಿವಂತಿಕೆಯ ವೈಭವಕ್ಕಿಂತ ಸುತ್ತಲಿನ ಪರಿಸರದ ವರ್ಣನೆಯನ್ನೇ ಬಣ್ಣಿಸಿದ್ದರು. ಬಾಲ್ಯದಲ್ಲಿ ಶಾಲೆಗೆ ಹೋಗುವಾಗ ಗದ್ದೆಯ ಬದುವಿನ ಮೇಲೆ ನಡೆಯುತ್ತಾ, ಬಿಡುವಿನಲ್ಲಿ ಹಾಲಾಡಿ ಸುತ್ತಮುತ್ತಲಿನ ಬೆಟ್ಟಗಳ ಹಾಡಿಯಲ್ಲಿ (ಕಾಡು) ಸಮಯವನ್ನು ಕಳೆಯುತ್ತಿದ್ದರು. ಸ್ವಭಾವತ ಅಂತರ್ಮುಖಿಯಾದ ಹಾಲಾಡಿಯವರು ತಮ್ಮೊಳಗಿನ ಅಭಿವ್ಯಕ್ತಿಯನ್ನು ವ್ಯಕ್ತಪಡಿಸುವುದಕ್ಕೆ ಆಯ್ದುಕೊಂಡ ಮಾಧ್ಯಮವೇ ಚಾರಣ, ಅಥವಾ ಪ್ರಕೃತಿಯೊಡನೆ ಅಲೆದಾಟ.

ಇದನ್ನೂ ಓದಿ: ಟೂರು ಕೇರಿಯ ನೂರು ಕಥೆಗಳು

’ಸೋಲೋ ಟ್ರಿಪ್’ ಕೃತಿಯಲ್ಲಿ ಒಟ್ಟೂ 19 ಅನುಭವ ಚಾರಣದವಿದೆ. ಚಾರಣವೆಂದರೆ ಕೇವಲ ಪ್ರಯಾಣವಲ್ಲ.’ಸೊಲೋ ಟ್ರಿಪ್’ ಎಲ್ಲದರಿಂದ ಬಿಡುಗಡೆ ಬಯಸಿ ಮೌನವಾಗಿ ಸವಿಯುವ ಪಯಣ. ಅನೇಕ ಸಂದರ್ಭದಲ್ಲಿ ಇವರ ನಡಿಗೆಗಳಿಗೆ ಪೂರ್ವ ನಿರ್ಧರಿತ ವೇಳಾಪಟ್ಟಿಯೇ ಇರುವುದಿಲ್ಲ. ಈ ಕೃತಿಯಲ್ಲಿ ಅಂತಹ ಕೆಲ ಚಾರಣಗಳಿವೆ. ಮುಖ್ಯವಾಗಿ ಇವರು ’ಬಾಳೆಬರೆ ಘಟ್ಟ’ದ ಏಕಾಂಗಿ ಚಾರಣ ಒಂದು ಅಪರೂಪದ ಅನುಭವ. ಆ ದಾರಿಯಲ್ಲಿ ಸಿಗುವ ಚಂಡಿಕಾಂಬಾ ದೇವಾಲಯದಿಂದ ಮೇಲೆ ಏರಿ ಸೂರ್ಯಾಸ್ತವನ್ನು ಸವಿಯುವ ಜಾಗದಲ್ಲಿ ನಿಂತು ಪಶ್ಚಿಮ ಘಟ್ಟದ ಇಳಿಜಾರಿನಲ್ಲಿ ದೂರದಲ್ಲಿ ಕಾಣುವ ಅರಬ್ಬಿ ಸಮುದ್ರವನ್ನು ಸವಿಯುವುದಿದೆಯಲ್ಲ, ಅದು ವಿಶಿಷ್ಟ ಅನುಭವವನ್ನು ಕೊಡುತ್ತದೆ.. ಮನೆಯಲ್ಲಿ ಕುಂದಾಪುರಕ್ಕೆ ಎಂದು ಸುಳ್ಳು ಹೇಳಿ ಅದರ ವಿರುದ್ಧವಾದ ದಿಕ್ಕಿಗೆ ಬಂದು ಸವಿದ ಸಂತೋಷಕ್ಕೆ ಇವರ ಸಂಬಂಧಿ ಅಕಃಸ್ಮಾತಾಗಿ ಬಸ್ಸಿನಲ್ಲಿ ಗಮನಿಸಿ ಮನೆಗೆ ಪತ್ರ ಮುಖೇನ ತಿಳಿಸಿದಾಗ ಈ ಅನುಭವದ ಜತೆಗೆ ಆ ಸಂದಿಗ್ಧ ಪರಿಸ್ಥಿಯಲ್ಲಿ ಲೇಖಕರು ಅನುಭವಿಸಿದ ತಳಮಳ ಇನ್ನಷ್ಟು ರೋಚಕವಾಗಿದೆ.

ಸೊಲೋ ಟ್ರಿಪ್ ಎಂಬ ಪರಿಕಲ್ಪನೆ ಪಶ್ಚಿಮದ individualism ನಿಂದ ಬಂದಂತೆ ಕಾಣಬಹುದು. ಆದರೆ ಭಾರತೀಯ ಸಂವೇದನೆಯಲ್ಲಿ ಇದು ಪುರಾತನವಾದುದು! ವಾನಪ್ರಸ್ಥ, ತೀರ್ಥಯಾತ್ರೆ, ಏಕಾಂತ ಸಾಧನೆ ಇವೆಲ್ಲವೂ ನಡೆಯುವ ದೇಹ, ಆದರೆ ಅನೇಕ ಪ್ರಶ್ನೆಗಳನ್ನು ಹೊತ್ತ ಮನಸ್ಸಿನ ಪ್ರಯಾಣಗಳೇ. ಹೀಗಾಗಿ ಸೊಲೋ ಟ್ರಿಪ್ ಹೊಸ ಪದವಾದರೂ, ಅನುಭವ ಪುರಾತನ. ಒಂಟಿಯಾಗಿ ಹೊರಡುವವನಿಗೆ ಮೊದಲ ಎದುರಾಗುವ ಸಮಸ್ಯೆ ಮೌನವನ್ನು ನಿಭಾಯಿಸುವುದು. ಇದನ್ನು ಅವರ ಮೊದಲ ಏಕಾಂಗಿ ಪ್ರಯಾಣದ, ಅಂದರೆ ಅವರ ಕಾಲೇಜು ದಿನದಂದು ಕುಂದಾಪುರದಿಂದ ಹಾಲಾಡಿಗೆ ಸುಮಾರು 22 ಕಿಮಿ. ನಡೆದು ತಲುಪಿದ ಪಯಣದಲ್ಲಿ ಗಮನಿಸಬಹುದು. ಕಾಲೇಜು ಹುಡುಗ ಯಾರಿಗೂ ಹೇಳದೆ ಹಳ್ಳಿಯ ಟಾರು ರಸ್ತೆಯಾದರೂ ಓರೆಕೋರೆಯಲ್ಲಿ ಹಾಡಿಯ ನಡುವೆ ಸೀಳಿಕೊಂಡು ಸಾಗುವ ರಸ್ತೆ, ಬದಿಯಲ್ಲಿ ತೆಂಗು ಅಡಿಕೆ ತೋಟ, ಗದೆ , ಹಳ್ಳ, ಹೊಳೆ ಹೀಗೆ ಎಲ್ಲವನ್ನು ದಾಟುತ್ತಾ ನಎಯುವಾಗ ಮೌನವೇ ಸಂಗಾತಿ. ಒಳಮನಸ್ಸು ಮತ್ತು ಹೊರ ಮನಸ್ಸು ಎರಡೂ ಅಂತರಂಗದ ಸಂವಾದಕ್ಕೆ ತೊಡಗುತ್ತವೆ. ಗುಂಪಿನಲ್ಲಿದ್ದಾಗ ಮೌನಕ್ಕೆ ಅವಕಾಶವೇ ಇಲ್ಲ; ಇಲ್ಲಿ ಮೌನವೇ ಸಂಗಾತಿ. ಆ ಮೌನದಲ್ಲಿ ನೆನಪುಗಳು ಮಾತನಾಡುತ್ತವೆ, ಅನುಮಾನಗಳು ಪ್ರಶ್ನಿಸುತ್ತವೆ, ಮತ್ತು ಕೆಲವೊಮ್ಮೆ ಮನಸ್ಸು ವಿವಿಧ ಭಾವನೆಯಿಂದ ಮಿಡುಕುತ್ತವೆ. ಈ ಕಾರಣಕ್ಕೇ ಈ ಪುಸ್ತಕ ಕೇವಲ ಭೌತಿಕ ಯಾನವಲ್ಲ; ಮನಸ್ಸಿನೊಳಗೇ ಸಂಚರಿಸುವ ಅನೇಕ ಏರಿಳಿತಗಳ ಅನಾವರಣ.

Untitled design - 2026-04-21T163926.130

ಇವರ ಚಾರಣದ ಗೀಳಿಗೆ ಶಕ್ತಿ ತುಂಬಿದವರು ಜಿ.ಎನ್‍.ಅಶೋಕವರ್ಧನರು. ಉಜಿರೆಯ ಸಮೀಪದ ಏರಿಗಲ್ಲನ್ನು ಏರಿದ ಅನುಭವ ಅವರನ್ನು ಚಾರಣಕ್ಕೆ ಬೇಕಾದ ಸಿದ್ಧತೆಯನ್ನೂ ಮಾನಸಿಕ ಸ್ಥಿರತೆಯನ್ನೂ ತುಂಬಿರಬೇಕು. ಅಶೋಕವರ್ಧನರು ಆ ಕಾಲದಲ್ಲಿ ಯುವಕರಲ್ಲಿ ಚಾರಣದ ಧೈರ್ಯ ಮತ್ತು ಅದಕ್ಕೆ ಬೇಕಾದ ಮಾರ್ಗದರ್ಶನ ನೀಡುತ್ತಾ ಲವಲವಿಕೆಯಿಂದ ಇದ್ದವರು

ಜಾಗತಿಕವಾಗಿ ನೋಡಿದರೆ, ಹೆನ್ರಿ ಡೇವಿಡ್ ಥೋರೋ ಅವರ Walden, ಬ್ರೂಸ್ ಚಾಟ್ವಿನ್ನ In Patagonia, Paul Theroux ನ ರೈಲುಪ್ರವಾಸ ಕಥನಗಳು ಇವೆಲ್ಲದರಲ್ಲಿಯೂ ಏಕಾಂಗಿ ಪ್ರಯಾಣದ ರೋಚಕ ವಿವರವಿದೆ. ಇವು ಒಂಟಿ ಪ್ರಯಾಣವನ್ನು ಸ್ವ-ಅನ್ವೇಷಣೆಯ ಸಾಧನವನ್ನಾಗಿಸಿವೆ. ಪಾಶ್ಚಿಮಾತ್ಯ ಸಾಹಿತ್ಯದಲ್ಲಿ ’ಸೋಲೋ ಟ್ರಿಪ” ಒಂದು ರೀತಿಯ ಪ್ರತಿರೋಧ: ಸಮಾಜದ ಗದ್ದಲದಿಂದ ಹಿಂದೆ ಸರಿದು, ಪ್ರಕೃತಿಯ ಎದುರು ನಿಂತು “ನಾನು ಯಾರು?” ಎಂದು ಪ್ರಶ್ನಿಸುವ ಧೈರ್ಯ. ಶಶಿಧರ ಹಾಲಾಡಿಯವರ ಪ್ರಬಂಧಗಳು ಹಾಗಲ್ಲ. ತನ್ನ ಸಹಜ ಶಬ್ಧಸೌಂದರ್ಯದಿಂದ ಸರಳತೆಯಿಂದ ಗೆಲ್ಲುತ್ತ್ತವೆ. ಅವರಲ್ಲಿ ಎಲ್ಲಿಯೂ ತನ್ನನ್ನು ತಾನು ಪ್ರೊಜೆಕ್ಟ್ ಮಾಡಿಕೊಳ್ಳಬೇಕೆನ್ನುವ ಹಮ್ಮುಇಲ್ಲ. ಅವರ ಒಂಟಿತನ ವಿಮುಕ್ತಿಯ ಘೋಷವಲ್ಲ; ಅದು ಸಮಾಧಾನದ ಹುಡುಕಾಟ. ಇದರಲ್ಲಿ ದಾರಿ ಕಥೆಯಾಗುತ್ತದೆ, ಮೌನ ಭಾಷೆಯಾಗುತ್ತದೆ, ಮತ್ತು ಯಾತ್ರಿಕನೇ ಪಠ್ಯವಾಗುತ್ತಾನೆ. ಪಶ್ಚಿಮದ lone traveler ಅಹಂನನ್ನು ಕಿತ್ತುಹಾಕಲು ಹೊರಟರೆ, ಶಶಿಧರ ಹಾಲಾಡಿಯವರ ಯಾತ್ರಿಕನು ಅಹಂನ ಜೊತೆ ಮಾತುಕತೆ ನಡೆಸುತ್ತಾನೆ. ಓದಲೇಬೇಕಾದ ಪುಟ್ಟ ಕೃತಿ ಇದು.

-----

ಕೃತಿಯ ಹೆಸರು : ನನ್ನ Solo ಟ್ರಿಪ್

ಲೇಖಕರು : ಶಶಿಧರ ಹಾಲಾಡಿ

ಪ್ರಕಾಶಕರು : ಸಪ್ನಬುಕ್ ಹೌಸ್

ಬೆಲೆ : ರೂ. 100/-

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!