ಇಸ್ರೇಲಿನ ‘ಸಿಟಿ ಆಫ್ ಡೇವಿಡ್’
ದೇವರು ತನ್ನ ಸೇವಕ ಡೇವಿಡ್ ನ ಸ್ಮರಣೆಯನ್ನು ಅನೇಕ ತಲೆಮಾರುಗಳಿಂದ ಜೀವಂತವಾಗಿರಿಸಿದ್ದರಿಂದ, ಜೆರುಸಲೆಮ್ 3,000 ವರ್ಷಗಳಿಗೂ ಹೆಚ್ಚು ಕಾಲ 'ಡೇವಿಡ್ ನಗರ' ಎಂದು ಪ್ರಸಿದ್ಧವಾಗಿದೆ.
ನಾನು ಈ ಮೊದಲು ಇಸ್ರೇಲಿನ ರಾಜಧಾನಿ ಜೆರುಸಲೆಮ್ ಗೆ ಹಲವು ಸಲ ಹೋಗಿದ್ದರೂ, ಪ್ರತಿ ಸಲ ಆಲ್ಲಿನ ಪ್ರಸಿದ್ಧ ವೆಸ್ಟರ್ನ್ ವಾಲ್ ಗೆ ಭೇಟಿ ಕೊಟ್ಟಿದ್ದರೂ, ಅಲ್ಲಿಂದ ಅರ್ಧ ಕಿಮೀ ಸನಿಹದಲ್ಲಿರುವ 'ಸಿಟಿ ಆಫ್ ಡೇವಿಡ್'ಗೆ ಭೇಟಿ ನೀಡಿರಲಿಲ್ಲ. 'ಸಿಟಿ ಆಫ್ ಡೇವಿಡ್' (City of David) ಎಂಬುದು ಒಂದು ಪ್ರಾಚೀನ ಪುರಾತ್ವ ಸ್ಥಳವಾಗಿದ್ದು, ಇದು ಬೈಬಲ್‌ನಲ್ಲಿ ವಿವರಿಸಲಾದ ಕಿಂಗ್ ಡೇವಿಡ್‌ನ ರಾಜಧಾನಿಯ ತಾಣವೆಂದು ನಂಬಲಾಗಿದೆ. ಸೋಜಿಗವೆಂದರೆ, ಈ ಇಡೀ ನಗರ ಮಣ್ಣಿನಲ್ಲಿ ಹುದುಗಿ ಹೋಗಿತ್ತು. ಅದರ ಮೇಲೆ ಬೇರೊಂದು ನಗರವೇ ನಿರ್ಮಾಣವಾಗಿತ್ತು. ನಂತರ ಎಷ್ಟೋ ವರ್ಷಗಳ ನಂತರ ಅಲ್ಲೊಂದು ನಗರವಿತ್ತು ಎಂಬುದನ್ನು ಸಂಶೋಧಿಸಿ, ಉತ್ಖನನ ಮಾಡಿ 'ಸಿಟಿ ಆಫ್ ಡೇವಿಡ್'ನ್ನು ಅನಾವರಣಗೊಳಿಸಿದ್ದು ಒಂದು ಅದ್ಭುತವೇ ಸರಿ.
ಜೆರುಸಲೆಮ್ ಈಗಾಗಲೇ ಒಂದು ನಗರವಾಗಿ ಅಸ್ತಿತ್ವದಲ್ಲಿದ್ದರೂ, ಡೇವಿಡ್ ಅದನ್ನು ವಶಪಡಿಸಿಕೊಂಡ ನಂತರ ಅದು 'ಡೇವಿಡ್ ನಗರ' ಎಂದೇ ಪ್ರಸಿದ್ಧವಾಯಿತು. ನಗರದಲ್ಲಿ ತನ್ನ ಆಳ್ವಿಕೆಯ ಸಮಯದಲ್ಲಿ, ಡೇವಿಡ್ ಅದನ್ನು ಬೃಹತ್ ನಗರ ಪ್ರದೇಶವಾಗಿ ಅಭಿವೃದ್ಧಿಪಡಿಸಿದ. ನಂತರ ಆರ್ಕ್ ಅನ್ನು ಜೆರುಸಲೆಮ್‌ಗೆ ತಂದ. ಡೇವಿಡ್ ತನ್ನ ಮಗ ಸೊಲೊಮನ್ ನ ನಿರ್ದೇಶನದಲ್ಲಿ ದೇವಾಲಯ (ಟೆಂಪಲ್)ವನ್ನು ನಿರ್ಮಿಸಲು ಯೋಜನೆಗಳನ್ನು ರೂಪಿಸಿದ. ಹಳೆಯ ಒಡಂಬಡಿಕೆಯಲ್ಲಿ, 'ಡೇವಿಡ್ ನಗರ' ಎಂಬ ಪದಗುಚ್ಛವನ್ನು ಜೆರುಸಲೆಮ್ ಕುರಿತು 45 ಬಾರಿ ಬಳಸಲಾಗಿದೆ. ಹೊಸ ಒಡಂಬಡಿಕೆಯಲ್ಲಿ, ಈ ನುಡಿಗಟ್ಟು ಎರಡು ಬಾರಿ ಕಂಡುಬರುತ್ತದೆ. ಆದರೂ ಹೊಸ ಒಡಂಬಡಿಕೆಯಲ್ಲಿ, ಈ ನುಡಿಗಟ್ಟು ಡೇವಿಡ್ ಜನಿಸಿದ ಬೆಥ್ ಲೆಹೆಮ್ ಅನ್ನು ಸೂಚಿಸುತ್ತದೆ. ಪ್ರಾಚೀನ ಮೆಡಿಟರೇನಿಯನ್ ಜಪ್ರದೇಶದಲ್ಲಿ ನಗರವನ್ನು ಅದರ ನಾಯಕನ ಹೆಸರಿನಿಂದ ನಾಮಕರಣ ಮಾಡುವ ಪದ್ಧತಿ ಸಾಕಷ್ಟು ಸಾಮಾನ್ಯವಾಗಿತ್ತು.

ದೇವರು ತನ್ನ ಸೇವಕ ಡೇವಿಡ್ ನ ಸ್ಮರಣೆಯನ್ನು ಅನೇಕ ತಲೆಮಾರುಗಳಿಂದ ಜೀವಂತವಾಗಿರಿಸಿದ್ದರಿಂದ, ಜೆರುಸಲೆಮ್ 3,000 ವರ್ಷಗಳಿಗೂ ಹೆಚ್ಚು ಕಾಲ 'ಡೇವಿಡ್ ನಗರ' ಎಂದು ಪ್ರಸಿದ್ಧವಾಗಿದೆ. ಕಿಂಗ್ ಡೇವಿಡ್ ಮತ್ತು ಡೇವಿಡ್ ಮಗನಾದ ಯೇಸು ಕ್ರಿಸ್ತನ ನಡುವೆ ನಿಕಟ ಸಂಬಂಧವೂ ಇದೆ (ಮತ್ತಾಯ 1:1). ಇಬ್ಬರೂ ಬೆಥ್ ಲೆಹೆಮ್ ನಲ್ಲಿ ಜನಿಸಿ ಜೆರುಸಲೆಮ್ ನಲ್ಲಿ ನಿಧನರಾದರು. ಇಬ್ಬರೂ ಅಜ್ಞಾತದಿಂದ ರಾಜರಾಗಲು ಬಂದರು. ಇಬ್ಬರೂ ದೇವರಿಗೆ ಸಮರ್ಪಿತರಾಗಿದ್ದರು. ಯೇಸು ಡೇವಿಡ್ ನ ಮೂಲದ ಯಹೂದಿ ಕುಲದವನು. ಮೂರು ಸಾವಿರ ವರ್ಷಗಳ ಹಿಂದೆ 'ಡೇವಿಡ್ ನಗರ' ಅಷ್ಟು ಜನಪ್ರಿಯವಾಗಿದ್ದರೂ, ಕಾಲಾನಂತರ ಅದು ಮಣ್ಣಿನಲ್ಲಿ ಹೂತು ಹೋಗಿದ್ದು ಕಾಲನ ವಿಸ್ಮಯವೇ.
ಜೆರುಸಲೆಮ್‌ನಲ್ಲಿರುವ ‘ಸಿಟಿ ಆಫ್ ಡೇವಿಡ್’ (City of David) ಅನ್ನು ಪುನಃ ಕಂಡುಹಿಡಿದದ್ದು ಒಂದು ದೀರ್ಘ ಮತ್ತು ಅತ್ಯಂತ ಆಸಕ್ತಿದಾಯಕ ಹುಡುಕಾಟ. ಇದು ಕೇವಲ ಒಂದು ಕ್ಷಣದಲ್ಲಿ ಆದ ಆವಿಷ್ಕಾರವಲ್ಲ, ಬದಲಾಗಿ ಹಲವು ದಶಕಗಳ ಪುರಾತತ್ವಶಾಸ್ತ್ರಜ್ಞರ ಅವಿರತ ಶ್ರಮ, ಅಪರಿಮಿತ ಆಸಕ್ತಿ ಮತ್ತು ಸುದೀರ್ಘ ಹೋರಾಟಕ್ಕೆ ಸಂದ ಫಲ. ಈ ತಾಣವನ್ನು ಕಂಡುಹಿಡಿದಿದ್ದು ಒಂದು ಪವಾಡವೇ. ಈ ನಿಟ್ಟಿನಲ್ಲಿ ಬೈಬಲ್ ಮತ್ತು ಪುರಾತನ ದಾಖಲೆಗಳ ಅಧ್ಯಯನಗಳು ಪೂರಕವಾಗಿ ಒದಗಿ ಬಂದಿದ್ದು ಸಹ ಯೋಗಾಯೋಗವೇ.
ಡೇವಿಡ್ ನಗರದ (City of David) ಅವಶೇಷಗಳು ಇಂದಿನ ಜೆರುಸಲೇಮ್ ನಗರದ ಮೇಲ್ಮೈಯಿಂದ ವಿವಿಧ ಆಳಗಳಲ್ಲಿ ಕಂಡುಬರುತ್ತವೆ. ಇದು ಒಂದು ಸಂಪೂರ್ಣ ನಗರವಾಗಿದ್ದು, ಬೆಟ್ಟದ ಇಳಿಜಾರಿನಲ್ಲಿದೆ. ಹಾಗಾಗಿ, ಎಲ್ಲಾ ಕಡೆ ಒಂದೇ ಸಮನಾದ ಆಳದಲ್ಲಿಲ್ಲ. ಕೆಲವು ಪ್ರದೇಶಗಳಲ್ಲಿ, ಪ್ರಾಚೀನ ನಗರದ ಅವಶೇಷಗಳನ್ನು ತಲುಪಲು ಸುಮಾರು 30 ಅಡಿಗಳಷ್ಟು ಕೆಳಗೆ ಅಗೆಯಬೇಕಾಗುತ್ತದೆ. ಪ್ರವಾಸಿಗರು ಭೇಟಿ ನೀಡುವ ಸುರಂಗಗಳು ಮತ್ತು ಪುರಾತತ್ವ ಸ್ಥಳಗಳು ಇಂದಿನ ನೆಲಮಟ್ಟಕ್ಕಿಂತ ಸಾಕಷ್ಟು ಕೆಳಗಿವೆ.
ಪುರಾತತ್ವಶಾಸ್ತ್ರಜ್ಞರಿಗೆ ಬೈಬಲ್‌ನ ಹಳೆಯ ಒಡಂಬಡಿಕೆಯನ್ನು ಓದುವಾಗ ಮೊದಲ ಬಾರಿಗೆ ಇಂಥದ್ದೊಂದು ನಗರ ಇರುವ ಹೊಳಹು ಸಿಕ್ಕಿತು. ಅವರು ಓದಿ ಸುಮ್ಮನಾಗಲಿಲ್ಲ. ಈ ಬಗ್ಗೆ ಮತ್ಷ್ಟು ಪೂರಕ ದಾಖಲೆಗಳ ತಡಕಾಟ ಆರಂಭಿಸಿದರು. ರಾಜ ಡೇವಿಡ್ ಯೆಬೂಸೀಯರಿಂದ ಜೆರುಸಲೆಮ್ ಅನ್ನು ವಶಪಡಿಸಿಕೊಂಡ ಬಗ್ಗೆ ಬೈಬಲ್‌ನಲ್ಲಿ ಉಲ್ಲೇಖಗಳು ಸಿಕ್ಕವು. ನಿರ್ದಿಷ್ಟವಾಗಿ, ಎರಡನೇ ಸ್ಯಾಮ್ಯುಯೆಲ್ ಪುಸ್ತಕದಲ್ಲಿ ಡೇವಿಡ್ ಯೆಬೂಸೀಯರ ಕೋಟೆಯನ್ನು ವಶಪಡಿಸಿಕೊಂಡು ಅದನ್ನು ‘ಸಿಟಿ ಆಫ್ ಡೇವಿಡ್’ ಎಂದು ಹೆಸರಿಸಿದನೆಂದು ಹೇಳಿದ ವಿಷಯವು ದೊರಕಿತು. ಈ ದಾಖಲೆಗಳು ಪ್ರಾಚೀನ ಜೆರುಸಲೆಮ್ ಆಧುನಿಕ ನಗರದೊಳಗಿಲ್ಲ, ಬದಲಾಗಿ ಬೇರೆಲ್ಲೋ ಇದೆ ಎಂಬ ಸುಳಿವು ನೀಡಿದವು.
ರೋಮನ್ ಇತಿಹಾಸಕಾರ ಜೋಸೆಫಸ್ ಮತ್ತು ಇತರ ಪುರಾತನ ದಾಖಲೆಗಳು ಕೂಡ ಪ್ರಾಚೀನ ಜೆರುಸಲೆಮ್‌ನ ಸ್ಥಳದ ಬಗ್ಗೆ ಪ್ರಮುಖ ಸುಳಿವುಗಳನ್ನು ನೀಡಿದವು. ಈ ದಾಖಲೆಗಳು ನಗರವು ದೇವಾಲಯದ ಪರ್ವತದ (Temple Mount) ದಕ್ಷಿಣಕ್ಕೆ ಇದೆ ಎಂದು ಸೂಚಿಸಿದ್ದವು.

ಹತ್ತೊಂಬತ್ತನೇ ಶತಮಾನದ ಮಧ್ಯಭಾಗದಲ್ಲಿ ಆಧುನಿಕ ಪುರಾತತ್ವಶಾಸ್ತ್ರದ ಆರಂಭದ ದಿನಗಳಲ್ಲಿ, ಬ್ರಿಟಿಷ್ ಸೇನೆಯ ಎಂಜಿನಿಯರ್ ಚಾರ್ಲ್ಸ್ ವಾರೆನ್ ಜೆರುಸಲೆಮ್‌ನಲ್ಲಿ ಉತ್ಖನನಗಳನ್ನು ಆರಂಭಿಸಿದ. 1867-1870ರ ಅವಧಿಯಲ್ಲಿ ಆತ ನಡೆಸಿದ ಭೂಗತ ಪರಿಶೋಧನೆಗಳು ಸಿಲೋಮ್ ಸುರಂಗ (Siloam Tunnel) ಮತ್ತು ಗಿಹೋನ್ ಬುಗ್ಗೆ (Gihon Spring)ಯಂಥ ಪ್ರಮುಖ ಜಲಮಾರ್ಗಗಳನ್ನು ಬಹಿರಂಗಪಡಿಸಿದವು. ಯಾವಾಗ ಜಲಮಾರ್ಗಗಳು ಸಿಕ್ಕಿದವೋ, ಆಗ ಆಲಿ ಒಂದು ನಗರವಿದ್ದಿರಲೇಬೇಕು ಎಂಬ ತರ್ಕಕ್ಕೆ ಬಲವಾದ ಪುಷ್ಟಿ ನೀಡಿತು ಈ ಆವಿಷ್ಕಾರಗಳು ಪ್ರಾಚೀನ ನಗರದ ಸ್ಥಳವನ್ನು ಗುರುತಿಸಲು ಸಹಾಯ ಮಾಡಿದವು. ವಾರೆನ್ ಆವಿಷ್ಕರಿಸಿದ ‘ವಾರೆನ್ಸ್ ಷಾಫ್ಟ್’ ಎಂಬ ಭೂಗತ ಮಾರ್ಗವು ಕಿಂಗ್ ಡೇವಿಡ್‌ನ ಸೇನೆ ನಗರವನ್ನು ವಶಪಡಿಸಿಕೊಳ್ಳಲು ಬಳಸಿದ್ದ ದಾರಿಯಾಗಿರಬಹುದು ಎಂಬ ವಾದವನ್ನು ಸಮರ್ಥಿಸಿದವು.
ಈ ಮಹತ್ತರ ಶೋಧಗಳು ಪುರಾತತ್ವ ಪರಿಣತರಲ್ಲಿ ಅಪರಿಮಿತವಾದ ಕುತೂಹಲವನ್ನು ಕೆರಳಿಸಿದವು. 1920ರ ದಶಕದಲ್ಲಿ ಬ್ರಿಟಿಷ್ ಪುರಾತತ್ವಶಾಸ್ತ್ರಜ್ಞರಾದ ಡಂಕನ್ ಮತ್ತು ಮೆಕಾಲಿಸ್ಟರ್ ಇದೇ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಉತ್ಖನನ ನಡೆಸಿದರು. ಅವರು ಆಳವಾಗಿ ಅಗೆದು ಬೈಬಲ್ ಕಾಲದ ಗೋಡೆಗಳು ಮತ್ತು ಇತರ ಪ್ರಾಚೀನ ಕಟ್ಟಡಗಳ ಅವಶೇಷಗಳನ್ನು ಕಂಡುಹಿಡಿದರು. ಅಂದಿನಿಂದಲೂ ಈ ಪ್ರದೇಶದಲ್ಲಿ ಉತ್ಖನನ ಕಾರ್ಯ ಎಡೆಬಿಡದೇ ನಡೆದೇ ಇತ್ತು. ಪ್ರತಿ ಒಂದು ತಿಂಗಳಿಗೆ ಹೊಸ ಹೊಸ ವಸ್ತುಗಳು ಸಿಕ್ಕ ಬಗ್ಗೆ ಸುದ್ದಿಯಾಗುತ್ತಲೇ ಇದ್ದವು. ಆದರೆ ಬೃಹತ್ ಪ್ರಮಾಣದ ಉತ್ಖನನ ಕಾರ್ಯಕ್ಕೆ ಹಣಕಾಸು ಮತ್ತು ಯಂತ್ರಗಳ ಸಹಾಯ ಬೇಕಾಗಿತ್ತು. ಆದರೆ ಕಾಲಕಾಲಕ್ಕೆ ನಡೆಯುತ್ತಿದ್ದ ಸಂಘರ್ಷ, ಯುದ್ಧಗಳಿಂದಾಗಿ ಉತ್ಖನನಕ್ಕೆ ಅಡ್ಡಿ-ಆತಂಕಗಳು ತಲೆದೋರುತ್ತಿದ್ದವು. ಸುಮಾರು ಹದಿನೆಂಟು ವರ್ಷಗಳ ಕಾಲ ಈಗ ‘ಸಿಟಿ ಆಫ್ ಡೇವಿಡ್’ ಇರುವ ಪ್ರದೇಶವನ್ನು ಜೋರ್ಡಾನ್ ಆಕ್ರಮಿಸಿಕೊಂಡಿತ್ತು. ಆ ಸಂದರ್ಭದಲ್ಲಿ ಯಾವ ಉತ್ಖನನಗಳೂ ನಡೆಯಲಿಲ್ಲ.
ಆಧುನಿಕ ತಂತ್ರಜ್ಞಾನ ಮತ್ತು ವಿಧಾನಗಳನ್ನು ಬಳಸಿ, ಇಸ್ರೇಲಿ ಪುರಾತತ್ವಶಾಸ್ತ್ರಜ್ಞರಾದ ಎಲಿಷು ಮಾರ್ಟಿನ್ ಮತ್ತು ಯಿಷಾಯ ನಜರ್ ಇಲ್ಲಿ ಮತ್ತಷ್ಟು ಸಂಶೋಧನೆ ನಡೆಸಿದರು. 2005ರಲ್ಲಿ, ನಜರ್ ಅವರು ಬೃಹತ್ ಶಿಲಾ ರಚನೆಯೊಂದನ್ನು (Large Stone Structure) ಕಂಡುಹಿಡಿದರು. ಇದು ಕಿಂಗ್ ಡೇವಿಡ್‌ನ ಅರಮನೆಯ ತಳಪಾಯವಾಗಿರಬಹುದು ಎಂದು ಅವರು ಊಹಿಸಿದರು. ಈ ಆವಿಷ್ಕಾರವು ಈ ಪ್ರದೇಶವೇ ‘ಸಿಟಿ ಆಫ್ ಡೇವಿಡ್’ ಎಂಬುದನ್ನು ದೃಢಪಡಿಸಿತು.
ಅದೇ ಸಮಯದಲ್ಲಿ, ಒಳಚರಂಡಿ ನಿರ್ಮಾಣ ಕೆಲಸದ ಸಂದರ್ಭದಲ್ಲಿ, 2004ರಲ್ಲಿ ಪುರಾತನ ಸಿಲೋಮ್ ಹೊಂಡ(Pool of Siloam)ದ ಮೆಟ್ಟಿಲುಗಳು ಮತ್ತು ಭಾಗಗಳು ಮತ್ತೆ ಬೆಳಕಿಗೆ ಬಂದವು. ಈ ಹೊಂಡವು ಯೇಸು ಕ್ರಿಸ್ತನ ಕಾಲದಲ್ಲಿ ಪ್ರಮುಖ ಸ್ಥಳವಾಗಿತ್ತು ಎಂದು ನಂಬಲಾಗಿದೆ. ಸಿಲೋಮ್ ಹೊಂಡದಿಂದ ದೇವಾಲಯದ ಪರ್ವತದ ಕಡೆಗೆ ಸಾಗುವ ಯಾತ್ರಾ ಮಾರ್ಗವನ್ನು ಕೂಡ ಈ ಪ್ರದೇಶದಲ್ಲಿ ಉತ್ಖನನ ಮಾಡಲಾಯಿತು. ಈ ಮಾರ್ಗವು ಎರಡನೇ ದೇವಾಲಯದ ಕಾಲದಲ್ಲಿ (Second Temple period) ಜನರು ಜೆರುಸಲೆಮ್‌ನ ಪವಿತ್ರ ದೇವಾಲಯಕ್ಕೆ ಯಾತ್ರೆಗೆ ಬಳಸುತ್ತಿದ್ದರು ಎಂಬುದಕ್ಕೆ ಪುರಾವೆ ನೀಡಿದೆ.
ಇಸ್ರೇಲಿ ಪುರಾತತ್ವಶಾಸ್ತ್ರಜ್ಞರು ಈ ಸ್ಥಳದಲ್ಲಿ ಕಿಂಗ್ ಡೇವಿಡ್‌ನ ಅರಮನೆಯೆಂದು ನಂಬಲಾದ ಕಟ್ಟಡದ ಅವಶೇಷಗಳನ್ನು ಪತ್ತೆಹಚ್ಚಿದ್ದಾರೆ. ಈ ಅರಮನೆಯು ದೊಡ್ಡದಾದ ಕಲ್ಲಿನ ರಚನೆಯಾಗಿದ್ದು, ಅದರ ಕೆಳಗೆ ಪುರಾತನ ಮಣ್ಣಿನ ಗೋಡೆಗಳ ತಳಹದಿ ಪತ್ತೆಯಾಗಿರುವುದು ಹಲವು ತರ್ಕಗಳನ್ನು ಹುಟ್ಟು ಹಾಕಿವೆ. 'ಸಿಟಿ ಆಫ್ ಡೇವಿಡ್' ಒಂದು ಸಾಮಾನ್ಯ ಪ್ರದೇಶವಲ್ಲ, ಬದಲಾಗಿ ಇದು ನಿರಂತರ ಪುರಾತತ್ವಶಾಸ್ತ್ರದ ಸಂಶೋಧನೆಗೆ ಒಳಗಾಗುವ ಜೀವಂತ ಪುರಾತತ್ವ ವಿಶ್ವವಿದ್ಯಾಲಯ. ಪ್ರತಿ ಶೋಧವೂ ಪ್ರಾಚೀನ ಜೆರುಸಲೆಮ್‌ನ ಬಗ್ಗೆ ಹೊಸ ಸಂಗತಿಗಳನ್ನು ಬಯಲು ಮಾಡುತ್ತಿವೆ.
ಸಿಟಿ ಆಫ್ ಡೇವಿಡ್‌ನಲ್ಲಿ ಕಂಡುಬಂದ ಪ್ರಾಚೀನ ದೇವಾಲಯದ ಮೆಟ್ಟಿಲುಗಳು ಮತ್ತು ರಸ್ತೆಗಳು, ಪವಿತ್ರ ಸ್ಥಳಕ್ಕೆ ಯಾತ್ರಿಕರು ನಡೆದು ಹೋಗುತ್ತಿದ್ದರು ಎಂಬುದನ್ನು ತೋರಿಸುತ್ತದೆ. ಈ ಯಾತ್ರಾ ಮಾರ್ಗವು ಸಾವಿರಾರು ವರ್ಷಗಳ ಹಿಂದೆಯೇ ಪ್ರಮುಖ ಧಾರ್ಮಿಕ ಮಹತ್ವವನ್ನು ಹೊಂದಿತ್ತು.
ಈ ಸಂಗತಿಗಳು ಸಿಟಿ ಆಫ್ ಡೇವಿಡ್ ಒಂದು ಸಾಮಾನ್ಯ ಪ್ರವಾಸಿ ತಾಣಕ್ಕಿಂತಲೂ ಹೆಚ್ಚು ಎಂದು ತೋರಿಸುತ್ತವೆ. ಇದು ಇಸ್ರೇಲ್‌ನ ಇತಿಹಾಸ, ಸಂಸ್ಕೃತಿ ಮತ್ತು ಧಾರ್ಮಿಕ ನಂಬಿಕೆಗಳಿಗೆ ಜೀವಂತ ಉದಾಹರಣೆಯಾಗಿದೆ.
‘ಸಿಟಿ ಆಫ್ ಡೇವಿಡ್’ ಒಂದೇ ಸಲಕ್ಕೆ ಕಂಡುಹಿಡಿದಿದ್ದಲ್ಲ. ಇಡೀ ಪ್ರದೇಶವನ್ನು ಹಲವುದಶಕಗಳ ಸತತ ಪ್ರಯತ್ನದಿಂದ, ಹಂತಗಳಲ್ಲಿ ಕಂಡುಹಿಡಿಯಲಾಯಿತು. ಇದು ಕೇವಲ ಒಂದು ನಿರ್ದಿಷ್ಟ ಆವಿಷ್ಕಾರದ ಫಲವಲ್ಲ, ಬದಲಾಗಿ ನೂರಾರು ವರ್ಷಗಳ ಪುರಾತತ್ವಶಾಸ್ತ್ರದ ಪರಿಶೋಧನೆ, ಬೈಬಲ್‌ನ ಅಧ್ಯಯನ ಮತ್ತು ಆಧುನಿಕ ತಂತ್ರಜ್ಞಾನದ ಬಳಕೆಯಿಂದ ಸಾಧ್ಯವಾಗಿದ್ದು ಗಮನಾರ್ಹ. ಉತ್ಖನನ ಕಾರ್ಯ ಈಗಲೂ ಭರದಿಂದ ಸಾಗುತ್ತಲೇ ಇದೆ. ಪ್ರತಿ ಸಲ ಅಗೆದಾಗಲೂ ಏನಾದರೂ ಒಂದು ವಸ್ತು ಮತ್ತು ಅವಶೇಷ ಸಿಗುತ್ತದೆ ಮತ್ತು ಅದು ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲುತ್ತದೆ.
'ಸಿಟಿ ಆಫ್ ಡೇವಿಡ್' ಕೇವಲ ಕಲ್ಲು, ಅವಶೇಷಗಳ ಪುರಾತತ್ವ ಶೋಧನೆಯಷ್ಟೇ ಅಲ್ಲ. ಅದು ಧಾರ್ಮಿಕ ಭಾವನೆಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ತಾಣವೂ ಹೌದು. ಇಲ್ಲಿ ಡೇವಿಡ್‌ರ ಹಾಡುಗಳು, ಸೊಲೊಮನ್‌ರ ಜ್ಞಾನ, ಹೆಜೆಕಿಯಾ ಧೈರ್ಯ ಎಲ್ಲವೂ ಜೀವಂತವಾಗಿವೆ. ಇದು ಯಹೂದ್ಯರಿಗೆ ಆಧ್ಯಾತ್ಮಿಕ ಮೂಲ ನೆಲಗಟ್ಟು. ಜಗತ್ತಿಗೆ ಯಹೂದಿ ಸಾರ್ವತ್ರಿಕ ಮೌಲ್ಯ, ಜೀವನ ವಿಧಾನ, ಶ್ರೇಷ್ಠತೆ, ಜನಜೀವನ ವಿಧಾನವನ್ನು ಪ್ರತಿಪಾದಿಸುವ ಪ್ರದೇಶವಾಗಿ ಗೋಚರಿಸುತ್ತಿದೆ. 'ಸಿಟಿ ಆಫ್ ಡೇವಿಡ್' ನಲ್ಲಿ ನಿಂತರೆ ರಿವರ್ಸ್ ಗೇರ್ ನಲ್ಲಿ ಮೂರು ಸಾವಿರ ವರ್ಷಗಳ ಹಿಂದೆ ಹೋಗಿ ನಿಂತ ಅನುಭವವಾಗುತ್ತದೆ. ಬೈಬಲ್ ನಲ್ಲಿ ಪ್ರಸ್ತಾಪಿಸಿದ ಸಂಗತಿಗಳ ನಿಜದರ್ಶನಗಳೂ ತೆರೆದುಕೊಳ್ಳುತ್ತವೆ.

ಹತ್ತು ಮೀಟರ್ ಅಗೆದರೆ...
ಜೆರುಸಲೆಮ್ ನಗರದಲ್ಲಿ ಹತ್ತು ಮೀಟರ್ ಅಗೆದರೆ ಏನಾದರೂ ಸಿಗುತ್ತದೆ ಎಂಬ ಮಾತು ನಿಜ. ಇದು ಆಶ್ಚರ್ಯವೆನಿಸಬಹುದು, ಆದರೆ ಜೆರುಸಲೆಮ್‌ನ ಪುರಾತತ್ವಶಾಸ್ತ್ರದ ಇತಿಹಾಸವು ಇದನ್ನು ದೃಢೀಕರಿಸುತ್ತದೆ.
ಜೆರುಸಲೆಮ್ ಒಂದು ಅತ್ಯಂತ ಪ್ರಾಚೀನ ನಗರ. ಇದು ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ಈ ಅವಧಿಯಲ್ಲಿ, ನಗರವು ಹಲವು ಬಾರಿ ನಾಶವಾಗಿದೆ, ಪುನರ್ನಿರ್ಮಾಣಗೊಂಡಿದೆ ಮತ್ತು ವಿವಿಧ ಸಾಮ್ರಾಜ್ಯಗಳ ಆಳ್ವಿಕೆಗೆ ಒಳಪಟ್ಟಿದೆ. ಪ್ರತಿ ಬಾರಿ ನಾಶವಾದಾಗ, ಹೊಸ ಕಟ್ಟಡಗಳು ಹಳೆಯ ಕಟ್ಟಡಗಳ ಅವಶೇಷಗಳ ಮೇಲೆ ನಿರ್ಮಾಣಗೊಂಡಿವೆ. ಇದರಿಂದ, ನಗರದ ಮೇಲ್ಮೈ ಕೆಳಗೆ, ವಿವಿಧ ಕಾಲಘಟ್ಟಗಳ ನಾಗರಿಕತೆಗಳ ಪದರಗಳು ಸೃಷ್ಟಿಯಾಗಿವೆ.
ಪುರಾತತ್ವಶಾಸ್ತ್ರಜ್ಞರು ಜೆರುಸಲೆಮ್‌ನಲ್ಲಿ ನಡೆಸಿದ ಉತ್ಖನನಗಳಲ್ಲಿ ಈ ಪದರಗಳನ್ನು ಸ್ಪಷ್ಟವಾಗಿ ಗುರುತಿಸಿದ್ದಾರೆ. ಉದಾಹರಣೆಗೆ, ಸಿಟಿ ಆಫ್ ಡೇವಿಡ್ (City of David) ಮತ್ತು ಹಳೆಯ ನಗರದ (Old City) ಸುತ್ತಮುತ್ತಲಿನ ಪ್ರದೇಶಗಳಲ್ಲಿ, ಕೇವಲ ಕೆಲವು ಮೀಟರ್ ಆಳದಲ್ಲಿ, ನೀವು ರೋಮನ್ ಕಾಲದ ರಸ್ತೆಗಳು, ಬೈಬಲ್ ಕಾಲದ ಮನೆಗಳ ತಳಹದಿ ಮತ್ತು ದೇವಾಲಯಗಳ ಅವಶೇಷಗಳನ್ನು ಕಾಣಬಹುದು.
ಜೆರುಸಲೆಮ್‌ನಲ್ಲಿ ಹತ್ತು ಮೀಟರ್ ಆಳದಲ್ಲಿ ಏನಾದರೂ ಸಿಗುವ ಸಾಧ್ಯತೆಗಳು ಹೆಚ್ಚು. ಏಕೆಂದರೆ ಆಳವಾದ ಪದರಗಳಲ್ಲಿ ಇನ್ನೂ ಹಳೆಯ ಮತ್ತು ಸಂರಕ್ಷಿತ ಅವಶೇಷಗಳು ಇರುವ ಸಾಧ್ಯತೆಯಿದೆ. ಈ ಉತ್ಖನನಗಳು ಪ್ರಾಚೀನ ಜೆರುಸಲೆಮ್‌ನ ಜೀವನಶೈಲಿ, ವಾಸ್ತುಶಿಲ್ಪ ಮತ್ತು ಧಾರ್ಮಿಕ ಆಚರಣೆಗಳ ಬಗ್ಗೆ ಅಮೂಲ್ಯ ಮಾಹಿತಿಯನ್ನು ಒದಗಿಸುತ್ತವೆ. ಇದು ಕೇವಲ ಕಲ್ಲಿನ ರಚನೆಗಳಲ್ಲ, ಬದಲಾಗಿ ಮಡಿಕೆಗಳು, ನಾಣ್ಯಗಳು, ಆಭರಣಗಳು ಮತ್ತು ಇತರೆ ಕಲಾಕೃತಿಗಳೂ ಸೇರಿವೆ. ಈ ವಸ್ತುಗಳು ಆ ಕಾಲದ ಜನರ ಜೀವನಕ್ಕೆ ಸಾಕ್ಷಿಯಾಗಿ ನಿಲ್ಲುತ್ತವೆ.
ಹೀಗಾಗಿ, ಜೆರುಸಲೆಮ್‌ನಲ್ಲಿ ಭೂಮಿಯನ್ನು ಅಗೆಯುವುದು ಕೇವಲ ಮಣ್ಣನ್ನು ಅಗೆಯುವುದಲ್ಲ, ಬದಲಾಗಿ ಸಾವಿರಾರು ವರ್ಷಗಳ ಇತಿಹಾಸದ ಪದರಗಳನ್ನು ಅನಾವರಣಗೊಳಿಸುವ ಒಂದು ಕ್ರಿಯೆಯಾಗಿದೆ. ಇದೇ ಕಾರಣಕ್ಕೆ, ಜೆರುಸಲೆಮ್ ಅನ್ನು ವಿಶ್ವದ ಅತ್ಯಂತ ಪ್ರಮುಖ ಪುರಾತತ್ವಶಾಸ್ತ್ರದ ತಾಣಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.
ಪ್ರಾಚೀನ ವಸ್ತುಗಳನ್ನು ರಕ್ಷಿಸುವ ಕಠಿಣ ಕಾನೂನುಗಳು ಮತ್ತು ಸ್ಥಳೀಯ ಪರಿಸರ ನಿಯಮಗಳಿಂದಾಗಿ, ಜೆರುಸಲೆಮ್‌ನಲ್ಲಿ, ವಿಶೇಷವಾಗಿ ಉತ್ಖನನ ಅಥವಾ ನಿರ್ಮಾಣಕ್ಕಾಗಿ ಅಗೆಯಲು ವಿಶೇಷ ಅನುಮತಿ ಬೇಕು. ಒಂದು ಅಡಿ ಅಗೆಯುವುದಿದ್ದರೂ ಅನುಮತಿ ಪಡೆಯುವುದು ಕಡ್ಡಾಯ. ಯಾವುದೇ ಘೋಷಿತ ಪ್ರಾಚೀನ ಸ್ಥಳದಲ್ಲಿ ಉತ್ಖನನ, ನಿರ್ಮಾಣ ಅಥವಾ ಭೂ ಪರಿವರ್ತನೆಗಳನ್ನು ನಿರ್ವಹಿಸಲು ಅನುಮೋದನೆ ಅಗತ್ಯ. ಹೆಚ್ಚುವರಿಯಾಗಿ, ಜೆರುಸಲೆಮ್ ಪುರಸಭೆಯ ಪರಿಸರ ಇಲಾಖೆಯು ಪರಿಸರ ತೊಂದರೆಗಳನ್ನು ತಡೆಗಟ್ಟಲು ಉತ್ಖನನ ಮತ್ತು ನಿರ್ಮಾಣ ಕಾರ್ಯವನ್ನು ಅನುಮೋದಿಸಬೇಕು. ಜೆರುಸಲೆಮ್ ಐತಿಹಾಸಿಕ ತಾಣಗಳಿಂದ ಸಮೃದ್ಧವಾಗಿದೆ ಮತ್ತು ಈ ಅಮೂಲ್ಯವಾದ ಪುರಾತತ್ತ್ವ ಶಾಸ್ತ್ರದ ಸಂಪನ್ಮೂಲಗಳನ್ನು ರಕ್ಷಿಸಲು ಪರವಾನಗಿಗಳು ಅವಶ್ಯಕ.
ಸಾಮಾನ್ಯವಾಗಿ ಇಂಥ ಮಹತ್ವದ ಶೋಧನೆಗಳು ನಡೆಯುವಾಗ ಅವು ವಿವಾದಗಳಿಂದ ಹೊರತಾಗಿರಲು ಸಾಧ್ಯವೇ ಇಲ್ಲ. 2014 ರಲ್ಲಿ, ಈ ಸ್ಥಳದಲ್ಲಿ ನಡೆಯುತ್ತಿದ್ದ ಉತ್ಖನನ ಕಾರ್ಯಕ್ಕೆ ಕೆಲವು ಪ್ರಸಿದ್ಧ ಇತಿಹಾಸಕಾರರು ಇಸ್ರೇಲಿ ಪುರಾತತ್ತ್ವ ಶಾಸ್ತ್ರವನ್ನು ಟೀಕಿಸಿದರು. ಟೆಲ್ ಅವಿವ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ರಫಿ ಗ್ರೀನ್‌ಬರ್ಗ್ ಅವರು ಈ ಸ್ಥಳದಲ್ಲಿ ಪುರಾತತ್ತ್ವ ಶಾಸ್ತ್ರದ ಅಭ್ಯಾಸವು 'ರಾಜಕೀಯ ಮತ್ತು ಕಾರ್ಪೊರೇಟ್ ಪ್ರೇರಣೆಗಳಿಗೆ ಸಂಪೂರ್ಣವಾಗಿ ಒಳಪಟ್ಟಿದೆ. ಆದರೂ ಇದನ್ನು ಅದರ 'ತಟಸ್ಥ' ವೃತ್ತಿಪರರು ಹೆಚ್ಚಾಗಿ ಒಪ್ಪಿಕೊಳ್ಳುವುದಿಲ್ಲ, ಇದು ಪ್ರಶ್ನಾರ್ಹ. ಕೆಲವು ಮಹತ್ವದ ಶೋಧಗಳು ತಿರುಚಿದ ವ್ಯಾಖ್ಯಾನಗಳಿಗೆ ಇಂಬು ನೀಡಿವೆ ಎಂದು ಹೇಳಿದ್ದು ವಿವಾದವನ್ನು ಹುಟ್ಟುಹಾಕಿತು.
2018 ರಲ್ಲಿ, ಯುರೋಪಿಯನ್ ಒಕ್ಕೂಟದಿಂದ ಸೋರಿಕೆಯಾದ ವರದಿಯಲ್ಲಿ ಈ ಪ್ರದೇಶವನ್ನು ಪ್ರವಾಸೋದ್ಯಮಕ್ಕಾಗಿ ಹಣ ಮಾಡುವ ಉದ್ದೇಶಕ್ಕಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಿರುವುದು ಸಹ ವಿವಾದಕ್ಕೆ ಕಾರಣವಾಯಿತು. ಇಸ್ರೇಲ್ ತನ್ನ ಇತಿಹಾಸವನ್ನು ಸಹ ಮಾರಾಟಕ್ಕೆ ಇಟ್ಟಿದೆ ಎಂಬ ಟೀಕೆಗಳು ಬಂದವು. ಇದು ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ ಕಾನೂನುಬಾಹಿರವೆಂದು ಆ ವರದಿಯಲ್ಲಿ ಹೇಳಿದ್ದು ದೊಡ್ಡ ಕೋಲಾಹಲವನ್ನೇ ಸೃಷ್ಟಿಸಿತು. ಪ್ಯಾಲಸ್ತೀನಿ ವಿಷಯಗಳ ಬಗೆಗಿನ ಕೆಲವು ಪುರಾತತ್ವ ಶಾಸ್ತ್ರಜ್ಞರು ಸಹ ಇದಕ್ಕೆ ದನಿಗೂಡಿಸಿದರು. ಆದರೆ ಈ ಉತ್ಖನನ ಕಾರ್ಯ ಮಾತ್ರ ನಿಲ್ಲಲಿಲ್ಲ.
'ಸಿಟಿ ಆಫ್ ಡೇವಿಡ್' ರಾಜಕೀಯ ಮತ್ತು ಧಾರ್ಮಿಕ ವಿವಾದಗಳಿಂದ ಸಹ ಹೊರತಾಗಿಲ್ಲ. ಈ ಸ್ಥಳವು ಪ್ಯಾಲಸ್ತೀನಿಯನ್ ವಸಾಹತುಗಳ ಮಧ್ಯದಲ್ಲಿದೆ. ಹೀಗಾಗಿ ಇಸ್ರೇಲಿ ಸರಕಾರ ಇಲ್ಲಿ ಉತ್ಖನನ ನಡೆಸಿರುತ್ತಿರುವುದು ಸರಿಯಲ್ಲ ಎಂಬ ಮಾತುಗಳೂ ಆಗಾಗ ಕೇಳಿಬರುತ್ತವೆ.